ಒಂದು ಪುಸ್ತಕದ ಪ್ರತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಅಥವಾ ಗ್ರಂಥಾಲಯದ ಪಟ್ಟಿಯಿಂದ ಕೈಬಿಡುವುದು ಸಂಪೂರ್ಣ ನಿಷೇಧವಲ್ಲ; ಕಾನೂನಿನ ಚೌಕಟ್ಟಿನಲ್ಲಿ ಆರೋಪ ಮತ್ತು ಸತ್ಯಾಸತ್ಯತೆಗಳ ವಿಚಾರಣೆ ನಡೆದ ನಂತರವೇ ಅಂತಿಮ ತೀರ್ಮಾನವಾಗುತ್ತದೆ. ಯಾವುದೇ ಕೃತಿಯನ್ನು ನಿಷೇಧಿಸುವ ಬದಲು, ಅದರಲ್ಲಿನ ತಪ್ಪುಗಳನ್ನು ಬೌದ್ಧಿಕ ಮತ್ತು ವೈಚಾರಿಕ ನೆಲೆಯಲ್ಲಿ ವಿಮರ್ಶಿಸುವ ಆರೋಗ್ಯಕರ ವಾತಾವರಣ ಸಮಾಜದಲ್ಲಿ ನಿರ್ಮಾಣವಾಗಬೇಕಿದೆ.
ಸಾಹಿತ್ಯ ಕೃತಿಗಳು ಸಮಾಜದ ಕೈಗನ್ನಡಿಯಿದ್ದಂತೆ. ಆದರೆ, ಕಳೆದ ಕೆಲವು ದಿನಗಳಿಂದ ಕರ್ನಾಟಕ ಹಾಗೂ ರಾಷ್ಟ್ರ ಮಟ್ಟದಲ್ಲಿ ಎರಡು ಪ್ರಮುಖ ಕೃತಿಗಳು ಏಕಕಾಲದಲ್ಲಿ ತೀವ್ರ ವಿವಾದ ಮತ್ತು ಚರ್ಚೆಯ ಕೇಂದ್ರಬಿಂದುವಾಗಿವೆ.
ಕರ್ನಾಟಕದಲ್ಲಿ ರವಿ ಹಂಜ್ ಅವರ ‘ಬಸವ ಮಂಟಪ’ ಕೃತಿಯು ವೀರಶೈವ-ಲಿಂಗಾಯತ ಸಮುದಾಯದ ಆಕ್ರೋಶಕ್ಕೆ ಗುರಿಯಾಗಿ ಸರ್ಕಾರದಿಂದ ಮುಟ್ಟುಗೋಲಿಗೆ ಒಳಗಾಗಿದ್ದರೆ, ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಕಥೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ (Belonging) ರಾಜಕೀಯ ಮತ್ತು ಐತಿಹಾಸಿಕ ವಾಗ್ವಾದಕ್ಕೆ ನಾಂದಿ ಹಾಡಿದೆ.
ಈ ಎರಡೂ ಕೃತಿಗಳು ಒಂದೇ ಸಮಯದಲ್ಲಿ ಮುನ್ನೆಲೆಗೆ ಬಂದಿರುವುದು ಕೇವಲ ಕಾಕತಾಳೀಯವೆನಿಸಿದರು, ಸಮಕಾಲೀನ ಸಮಾಜದ ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ಸೂಕ್ಷ್ಮತೆಗಳ ಪ್ರತಿಬಿಂಬವಾಗಿದೆ.
ನವೆಂಬರ್ ತಿಂಗಳಿನಲ್ಲಿ ಬಿಡುಗಡೆಯಾದ ಈ ಎರಡೂ ಕೃತಿಗಳು ವಿಭಿನ್ನ ಕ್ಷೇತ್ರಗಳಿಗೆ ಸೇರಿದ್ದರೂ, ವಿವಾದದ ಸ್ವರೂಪ ಒಂದೇ ಆಗಿದೆ—ಅದು ‘ಇತಿಹಾಸ ಮತ್ತು ನಂಬಿಕೆಗಳ, ವ್ಯಾಖ್ಯಾನ’.
ಒಂದೆಡೆ, ರವಿ ಹಂಜ್ ಅವರ ‘ಬಸವ ಮಂಟಪ’ ಕೃತಿಯಲ್ಲಿ 12ನೇ ಶತಮಾನದ ಕ್ರಾಂತಿಕಾರಿ ಸಮಾಜ ಸುಧಾರಕ ಬಸವಣ್ಣನವರ ಕುರಿತು ಮಾಡಿರುವ ಉಲ್ಲೇಖಗಳು ಅವರ ವಿಚಾರಧಾರೆಗೆ ಧಕ್ಕೆ ತಂದಿವೆ ಎಂಬ ಆರೋಪ ಕೇಳಿಬಂದಿದೆ. ಇದರ ಪರಿಣಾಮವಾಗಿ ನವೆಂಬರ್ 19ರಂದು ರಾಜ್ಯ ಸಚಿವ ಸಂಪುಟವು ಪುಸ್ತಕದ ಪ್ರತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ನಿರ್ಧರಿಸಿದ್ದು, ಲೇಖಕ ಮತ್ತು ಪ್ರಕಾಶಕರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮತ್ತೊಂದೆಡೆ, ನವೆಂಬರ್ 10ರಂದು ಬಿಡುಗಡೆಯಾದ ಸೋನಿಯಾ ಗಾಂಧಿ ಅವರ ‘ಬಿಲಾಂಗಿಂಗ್’ ಆತ್ಮಕಥೆಯು ಭಾರತದ ರಾಜಕೀಯ ಇತಿಹಾಸದ ಸೂಕ್ಷ್ಮ ಘಟನೆಗಳನ್ನು ಕೆದಕಿದೆ. 1984ರ ಸಿಖ್ ವಿರೋಧಿ ಗಲಭೆ, ತುರ್ತು ಪರಿಸ್ಥಿತಿ, ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರ ಬಗೆಗಿನ ಮೌನ, ಹಾಗೂ ಸಾವರ್ಕರ್ ಮತ್ತು ಆರ್ಎಸ್ಎಸ್ ಕುರಿತ ಉಲ್ಲೇಖಗಳು ವಿರೋಧ ಪಕ್ಷಗಳ ತೀವ್ರ ಟೀಕೆಗೆ ಗುರಿಯಾಗಿವೆ. ಅಲ್ಲದೆ, ಕೃತಿಯಲ್ಲಿನ ಕೆಲವು ಐತಿಹಾಸಿಕ ಮತ್ತು ತಾಂತ್ರಿಕ ದೋಷಗಳನ್ನೂ ವಿಮರ್ಶಕರು ಎತ್ತಿ ತೋರಿಸಿದ್ದಾರೆ.
ಈ ಎರಡೂ ಘಟನೆಗಳು ಏಕಕಾಲದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಲು ಪ್ರಮುಖ ಕಾರಣವೆಂದರೆ—ಇಂದಿನ ಸಾಮಾಜಿಕ ಜಾಲತಾಣಗಳ ವೇಗ ಮತ್ತು ಸೈದ್ಧಾಂತಿಕ ಧ್ರುವೀಕರಣ. ಇಂದು ಯಾವುದೇ ಒಂದು ಕೃತಿಯಲ್ಲಿನ ವಿವಾದಾತ್ಮಕ ಸಾಲುಗಳು ಕ್ಷಣಾರ್ಧದಲ್ಲಿ ಸಾರ್ವಜನಿಕ ವಲಯಕ್ಕೆ ತಲುಪಿ, ಪರ-ವಿರೋಧದ ಚರ್ಚೆಗಿಂತ ಹೆಚ್ಚಾಗಿ ಭಾವನಾತ್ಮಕ ಮತ್ತು ರಾಜಕೀಯ ಸಂಘರ್ಷವಾಗಿ ಬದಲಾಗುತ್ತಿವೆ.
ಕರ್ನಾಟಕ ಮತ್ತು ಭಾರತದಲ್ಲಿ ನಿಷೇಧ ಹಾಗೂ ವಿವಾದಗಳ ಇತಿಹಾಸ
ಪುಸ್ತಕಗಳ ಮೇಲಿನ ವಿವಾದ ಮತ್ತು ನಿಷೇಧ ಭಾರತಕ್ಕೆ ಹೊಸದಲ್ಲ. ಕರ್ನಾಟಕದ ಸಾಹಿತ್ಯ ಇತಿಹಾಸವನ್ನು ಗಮನಿಸಿದರೆ, ಬಸವಣ್ಣ ಮತ್ತು ಶರಣರ ಚಳವಳಿಯ ಕುರಿತ ಬರಹಗಳು ಹಲವು ಬಾರಿ ತೀವ್ರ ಪ್ರತಿಭಟನೆಗೆ ಸಾಕ್ಷಿಯಾಗಿವೆ. 1998ರಲ್ಲಿ ವಚನಗಳ ಅಂಕಿತನಾಮ ಬದಲಾಯಿಸಿದ ಕಾರಣಕ್ಕೆ ಮಾತೆ ಮಹಾದೇವಿ ಅವರ ‘ಬಸವ ವಚನ ದೀಪ್ತಿ’ ಕೃತಿಯನ್ನು ಸರ್ಕಾರ ನಿಷೇಧಿಸಿತು; ಈ ನಿಷೇಧವನ್ನು ಸುಪ್ರೀಂ ಕೋರ್ಟ್ ಸಹ ಎತ್ತಿ ಹಿಡಿಯಿತು.
1996ರಲ್ಲಿ ಪಿ.ವಿ. ನಾರಾಯಣ ಅವರ ‘ಧರ್ಮಕಾರಣ’ ಕಾದಂಬರಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿತ್ತು (ನಂತರ 2007ರಲ್ಲಿ ಸುಪ್ರೀಂ ಕೋರ್ಟ್ ನಿಷೇಧ ರದ್ದುಗೊಳಿಸಿತು). ಹಾಗೆಯೇ 2007ರಲ್ಲಿ ಬಂಜಗೆರೆ ಜಯಪ್ರಕಾಶ್ ಅವರ ‘ಆನುದೇವಾ ಹೊರಗಣವನು’ ಕೃತಿಯನ್ನು ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು.
ಇದಲ್ಲದೆ, ಯೋಗೇಶ್ ಮಾಸ್ಟರ್ ಅವರ ‘ಢುಂಢಿ’ (2013) ನ್ಯಾಯಾಲಯದ ತಡೆಯಾಜ್ಞೆಗೆ ಒಳಗಾದರೆ, ಎಚ್.ಎಸ್. ಶಿವಪ್ರಕಾಶ್ ಅವರ ‘ಮಹಾಚೈತ್ರ’, ಯು.ಆರ್. ಅನಂತಮೂರ್ತಿ ಅವರ ‘ಸಂಸ್ಕಾರ’ ಹಾಗೂ ಕೆ.ಎಸ್. ಭಗವಾನ್ ಅವರ ‘ರಾಮ ಮಂದಿರ ಏಕೆ ಬೇಡ?’ ಕೃತಿಗಳು ತೀವ್ರ ಸೈದ್ಧಾಂತಿಕ ಸಂಘರ್ಷಕ್ಕೆ ಕಾರಣವಾಗಿದ್ದವು.
ರಾಷ್ಟ್ರ ಮಟ್ಟದಲ್ಲೂ ಇಂತಹ ನೂರಾರು ನಿದರ್ಶನಗಳಿವೆ. ಬ್ರಿಟಿಷ್ ಆಳ್ವಿಕೆಯಲ್ಲಿ ಮಹಾತ್ಮ ಗಾಂಧಿ ಅವರ ‘ಹಿಂದ್ ಸ್ವರಾಜ್’ (1910) ದೇಶದ್ರೋಹದ ಆರೋಪದಡಿ ನಿಷೇಧಕ್ಕೊಳಗಾದರೆ, 1924ರ ‘ರಂಗೀಲಾ ರಸೂಲ್’ ಪ್ರಕರಣವು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದನ್ನು ತಡೆಯುವ ‘ಸೆಕ್ಷನ್ 295A’ ಕಾನೂನು ಜಾರಿಗೆ ಬರಲು ಕಾರಣವಾಯಿತು.
ಸ್ವತಂತ್ರ ಭಾರತದಲ್ಲಿ ಆಬ್ರೆ ಮೆನೆನ್ ಅವರ ‘ರಾಮ ರಿಟೋಲ್ಡ್’ (1955), ವಿ.ಎಸ್. ನೈಪಾಲ್ ಅವರ ‘ಆನ್ ಏರಿಯಾ ಆಫ್ ಡಾರ್ಕ್ನೆಸ್’ (1964), ಹಾಗೂ ಸಲ್ಮಾನ್ ರಶ್ದಿ ಅವರ ‘ದಿ ಸಟಾನಿಕ್ ವರ್ಸಸ್’ (1988) ಕೃತಿಗಳ ಆಮದನ್ನು ಸರ್ಕಾರ ನಿರ್ಬಂಧಿಸಿತ್ತು. ಜೇಮ್ಸ್ ಲೇನ್ ಅವರ ‘ಶಿವಾಜಿ’ (2004) ಕೃತಿಯ ಮೇಲಿನ ನಿಷೇಧವನ್ನು ನಂತರ ಸುಪ್ರೀಂ ಕೋರ್ಟ್ ತೆರವುಗೊಳಿಸಿತು.
ಇತ್ತೀಚಿನ ವರ್ಷಗಳಲ್ಲಿ ವೆಂಡಿ ಡೋನಿಗರ್ ಅವರ ‘ದಿ ಹಿಂದೂಸ್’ ಹಿಂಪಡೆಯಲ್ಪಟ್ಟರೆ, ಪೆರುಮಾಳ್ ಮುರುಗನ್ ಅವರ ‘ಮಧುರೋಭಾಗನ್’ ತೀವ್ರ ವಿರೋಧ ಎದುರಿಸಿತ್ತು. 2025ರಲ್ಲಿ ಜಮ್ಮು-ಕಾಶ್ಮೀರ ಆಡಳಿತವು ಅರುಂಧತಿ ರಾಯ್ ಅವರ ‘ಆಜಾದಿ’ ಸೇರಿದಂತೆ 25 ಕೃತಿಗಳನ್ನು ಪ್ರತ್ಯೇಕತಾವಾದದ ಆರೋಪದಡಿ ನಿರ್ಬಂಧಿಸಿತ್ತು.
ಕಾನೂನು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಸೂಕ್ಷ್ಮ ಗೆರೆ
ಭಾರತೀಯ ಸಂವಿಧಾನದ 19(1)(a) ವಿಧಿಯು ಪ್ರತಿಯೊಬ್ಬ ಪ್ರಜೆಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದೆ. ಆದರೆ, 19(2)ನೇ ವಿಧಿಯ ಅಡಿಯಲ್ಲಿ ಸಾರ್ವಜನಿಕ ಶಾಂತಿ, ಸುವ್ಯವಸ್ಥೆ ಮತ್ತು ನೈತಿಕತೆಯ ಹಿತದೃಷ್ಟಿಯಿಂದ ಸರ್ಕಾರಗಳು ಸಮಂಜಸ ನಿರ್ಬಂಧಗಳನ್ನು ವಿಧಿಸಬಹುದು.
ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಒಂದು ಪುಸ್ತಕದ ಪ್ರತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಅಥವಾ ಗ್ರಂಥಾಲಯದ ಪಟ್ಟಿಯಿಂದ ಕೈಬಿಡುವುದು ಸಂಪೂರ್ಣ ನಿಷೇಧವಲ್ಲ; ಕಾನೂನಿನ ಚೌಕಟ್ಟಿನಲ್ಲಿ ಆರೋಪ ಮತ್ತು ಸತ್ಯಾಸತ್ಯತೆಗಳ ವಿಚಾರಣೆ ನಡೆದ ನಂತರವೇ ಅಂತಿಮ ತೀರ್ಮಾನವಾಗುತ್ತದೆ. ಯಾವುದೇ ಕೃತಿಯನ್ನು ನಿಷೇಧಿಸುವ ಬದಲು, ಅದರಲ್ಲಿನ ತಪ್ಪುಗಳನ್ನು ಬೌದ್ಧಿಕ ಮತ್ತು ವೈಚಾರಿಕ ನೆಲೆಯಲ್ಲಿ ವಿಮರ್ಶಿಸುವ ಆರೋಗ್ಯಕರ ವಾತಾವರಣ ಸಮಾಜದಲ್ಲಿ ನಿರ್ಮಾಣವಾಗಬೇಕಿದೆ.
ಲೇಖಕರು ಐತಿಹಾಸಿಕ ಮತ್ತು ಧಾರ್ಮಿಕ ಸಂಗತಿಗಳನ್ನು ಬರೆಯುವಾಗ ಸಾಮಾಜಿಕ ಸಂವೇದನೆ ಮತ್ತು ನಿಖರತೆಯನ್ನು ಕಾಯ್ದುಕೊಳ್ಳುವುದು ಎಷ್ಟು ಮುಖ್ಯವೋ, ಓದುಗರು ಮತ್ತು ಸಂಘಟನೆಗಳು ಸಹನೆಯಿಂದ ವಿಮರ್ಶಿಸುವುದು ಅಷ್ಟೇ ಮುಖ್ಯ. ಆಗ ಮಾತ್ರ ಸಾಹಿತ್ಯ ಮತ್ತು ಪ್ರಜಾಪ್ರಭುತ್ವ ಎರಡೂ ಶ್ರೀಮಂತವಾಗಲು ಸಾಧ್ಯ.

ಕೆ.ಎ. ಮೇಘರಾಜ
ಪ್ರಥಮ ಎಂಎ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಕುವೆಂಪು ವಿವಿ, ಶಂಕರಘಟ್ಟ


