ದಾವಣಗೆರೆಯಲ್ಲಿ ಆನ್‌ಲೈನ್ ವಂಚಕರ ನಕಲಿ ಭರವಸೆ ನಂಬಿದ ಸರ್ಕಾರಿ ಕಾಲೇಜಿನ ಉಪನ್ಯಾಸಕರೊಬ್ಬರು, ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಕೈತುಂಬಾ ಲಾಭ ಸಿಗುತ್ತದೆ ಎಂಬ ಭರವಸೆಯಿಂದ ಬರೋಬ್ಬರಿ 13.92 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ.
ದಾವಣಗೆರೆ ನಗರದ ಭೂಮಿಕಾ ನಗರದ ನಿವಾಸಿಯಾಗಿರುವ ಉಪನ್ಯಾಸಕರು ಸೈಬರ್ ವಂಚನೆಗೆ ಬಲಿಯಾಗಿದ್ದು, ಮೊತ್ತಮೊದಲು ಅಪರಿಚಿತ ವಂಚಕರು ಉಪನ್ಯಾಸಕರ ಮೊಬೈಲ್ ಸಂಖ್ಯೆಯನ್ನು ಟೆಲಿಗ್ರಾಂ ಗ್ರೂಪ್‌ವೊಂದಕ್ಕೆ ಸೇರಿಸಿದ್ದರು. ಬಳಿಕ ಆ ಗ್ರೂಪ್‌ನಲ್ಲಿ ‘ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಅತಿ ಹೆಚ್ಚು ಲಾಭಾಂಶ ನಿಮ್ಮದಾಗುತ್ತದೆ’ ಎನ್ನುವ ಆಕರ್ಷಕ ಮೆಸೇಜ್‌ಗಳನ್ನು ನಿರಂತರವಾಗಿ ಹಾಕುತ್ತಾ, ಅವರಲ್ಲಿ ನಂಬಿಕೆ ಹುಟ್ಟಿಸಿದ್ದಾರೆ.
ಇವುಗಳನ್ನು ನಿಜವೆಂದು ನಂಬಿದ ಉಪನ್ಯಾಸಕರು, ವಂಚಕರು ಕಳುಹಿಸಿದ ಲಿಂಕ್‌ಗಳನ್ನು ಬಳಸಿ ಅವರು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 13.92 ಲಕ್ಷ ರೂ.ಗಳನ್ನು ವರ್ಗಾವಣೆ ಮಾಡಿದ್ದಾರೆ. ಲಕ್ಷಾಂತರ ಹಣ ಪಡೆದ ಬಳಿಕವೂ ವಂಚಕರು, ಮತ್ತೆ ಮತ್ತೆ ಹಣ ಹೂಡಿಕೆ ಮಾಡುವಂತೆ ಒತ್ತಾಯಿಸಿದ್ದಾರೆ. ಆದರೆ ತಾವು ಈವರೆಗೆ ಹೂಡಿಕೆ ಮಾಡಿದ ಹಣದಿಂದ ಬಿಡಿಗಾಸೂ ಲಾಭವಾಗಿ ವಾಪಸ್ ಬಾರದೇ ಇದ್ದಾಗ ಉಪನ್ಯಾಸಕರಿಗೆ ತಾವು ಮೋಸ ಹೋಗಿರುವುದು ಅರಿವಿಗೆ ಬಂದಿದೆ.
ಹಣ ಕಳೆದುಕೊಂಡ ಉಪನ್ಯಾಸಕರು ದಾವಣಗೆರೆಯ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ (ಸಿಇಎನ್) ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
This video cannot be played in your browser. Open the video directly
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಬಾಬುಜಗಜೀವನರಾಂ ಜಯಂತಿ ಆಚರಣೆಯಲ್ಲಿ ಲೋಪ: ದಸಂಸ ಪ್ರತಿಭಟನೆ
ಆನ್‌ಲೈನ್ ಮೂಲಕ ಅಪರಿಚಿತರು ಕಳುಹಿಸುವ ಲಿಂಕ್‌ಗಳನ್ನು ಕ್ಲಿಕ್ ಮಾಡದಂತೆ ಹಾಗೂ ಸುಲಭವಾಗಿ ಹಣ ಗಳಿಸುವ ಆಮಿಷಗಳಿಗೆ ಬಲಿಯಾಗದಂತೆ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.






