ಹುಮನಾಬಾದ್ ತಾಲ್ಲೂಕಿನ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಗೆ ಸರ್ಕಾರದಿಂದ ಒದಗಿಸಿರುವ ಸರ್ಕಾರಿ ವಾಹನದ ಇಂಧನ ಹಾಗೂ ನಿರ್ವಹಣೆ ವೆಚ್ಚದಲ್ಲಿ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ಮೂರು ಸಲ ದೂರು ಸಲ್ಲಿಸಿದರೂ ಸಮರ್ಪಕ ತನಿಖೆ ನಡೆಸಿಲ್ಲ ಎಂದು ದೂರುದಾರ ಭೀಮರೆಡ್ಡಿ ಸಿಂಧನಕೇರಾ ಆರೋಪಿಸಿದ್ದಾರೆ.
ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಗೆ ಸೇರಿದ ಸರ್ಕಾರಿ ವಾಹನದ ಇಂಧನ ವೆಚ್ಚ, ನಿರ್ವಹಣಾ ವೆಚ್ಚ ಹಾಗೂ ಬಳಕೆಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದಾಗ ವಾಹನದ ಕಿಲೋಮೀಟರ್ ವಿವರಗಳಲ್ಲಿ ವ್ಯತ್ಯಾಸಗಳಿದ್ದು, ಕಿಲೋ ಮೀಟರ್ಗಳನ್ನು ಹೆಚ್ಚಿಸಿ ತೋರಿಸಿರುವ ಸಾಧ್ಯತೆ ಹಾಗೂ ವಾಹನದ ದುರ್ಬಳಕೆಯ ಕುರಿತು ಅನುಮಾನಗಳು ವ್ಯಕ್ತವಾಗಿವೆ ಎಂದು ಅವರು ದೂರಿದ್ದಾರೆ.

ಈ ಕುರಿತು ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಬಹಿರಂಗಪಡಿಸುವಂತೆ ಬೀದರ್ ಜಿಲ್ಲೆಯ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ 2026ರ ಮೇ 21, ಆಗಸ್ಟ್ 18 ಹಾಗೂ ಸೆಪ್ಟೆಂಬರ್ 15ರಂದು ಇಲಾಖೆಯ ಉಪನಿರ್ದೇಶಕರ ಕಚೇರಿಗೆ ಮೂರು ಬಾರಿ ದೂರು ಸಲ್ಲಿಸಿದರೂ ಈವರೆಗೆ ಸಮರ್ಪಕ ತನಿಖೆ ನಡೆದಿಲ್ಲ ಎಂದು ಆರೋಪಿಸಿದ್ದಾರೆ.
ಸರ್ಕಾರಿ ವಾಹನದ ಲಾಗ್ಬುಕ್ನಲ್ಲಿನ ಕಿಲೋಮೀಟರ್ ವಿವರಗಳು, ಇಂಧನ ಖರೀದಿ ಬಿಲ್ಗಳು, ವಾಹನದ ನಿರ್ವಹಣೆಗೆ ಮಾಡಿದ ವೆಚ್ಚ ಹಾಗೂ ಇತರ ಹಣಕಾಸಿನ ದಾಖಲೆಗಳನ್ನು ಪರಿಶೀಲಿಸಿದರೆ ಆರೋಪಗಳ ಸತ್ಯಾಸತ್ಯತೆ ತಿಳಿಯಲಿದೆ. ವಾಹನದ ಕಿಲೋಮೀಟರ್ಗಳನ್ನು ಹೆಚ್ಚಿಸಿ ತೋರಿಸಲಾಗಿದೆಯೇ, ಇಂಧನ ಮತ್ತು ನಿರ್ವಹಣೆ ವೆಚ್ಚದಲ್ಲಿ ಅಕ್ರಮ ನಡೆದಿದೆಯೇ ಅಥವಾ ಸರ್ಕಾರಿ ವಾಹನವನ್ನು ನಿಯಮಬಾಹಿರವಾಗಿ ದುರ್ಬಳಕೆ ಮಾಡಲಾಗಿದೆಯೇ ಎಂಬುದರ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಸಂಬಂಧ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಚಿವರು, ಸರ್ಕಾರದ ಕಾರ್ಯದರ್ಶಿಗಳು, ಸಂಬಂಧಪಟ್ಟ ಮೇಲಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮಧ್ಯಪ್ರವೇಶಿಸಬೇಕು. ಸರ್ಕಾರಿ ವಾಹನದ ಬಳಕೆ, ಇಂಧನ ಮತ್ತು ನಿರ್ವಹಣಾ ವೆಚ್ಚದ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿ, ಆರೋಪಗಳಲ್ಲಿ ಸತ್ಯಾಂಶ ಕಂಡುಬಂದಲ್ಲಿ ಹಾಗೂ ಕರ್ತವ್ಯಲೋಪ ಸಾಬೀತಾದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನುಬದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಭ್ರಷ್ಟಾಚಾರದಲ್ಲಿ ಮುಳುಗಿದ ಬಿಜೆಪಿ, ಕಾಂಗ್ರೆಸ್ : ಆಪ್ ಶಾಸಕ ಅನಿಲ್ ಝಾ




