ಒಡಿಶಾದ ಕಂಧಮಾಲ್ ಜಿಲ್ಲೆಯಲ್ಲಿ ಅತ್ಯಂತ ಅಪರೂಪದ ವೈದ್ಯಕೀಯ ವಿಸ್ಮಯ ನಡೆದಿದೆ. ಮಹಿಳೆಯೊಬ್ಬರು ಎರಡು ತಲೆಗಳನ್ನು ಹೊಂದಿರುವ ವಿಶಿಷ್ಟ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಅಕ್ಟೋಬರ್ 10, ಕಂಧಮಾಲ್ ಮೂಲದ ಮಹಿಳೆಯೊಬ್ಬರಿಗೆ ಸಿಸೇರಿಯನ್ ಶಸ್ತ್ರಚಿಕಿತ್ಸೆ ನಡೆಸಿ, ಈ ಮಗುವನ್ನು ಹೊರತೆಗೆಯಲಾಗಿದೆ. ಮಗುವಿನ ಆರೋಗ್ಯ ಪರಿಸ್ಥಿತಿ ಸಂಕೀರ್ಣವಾಗಿದ್ದರಿಂದ, ತಕ್ಷಣವೇ ಬ್ರಹ್ಮಪುರದ ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವಿಶೇಷ ನವಜಾತ ಶಿಶು ಆರೈಕೆ ಘಟಕಕ್ಕೆ ದಾಖಲಿಸಿ ತೀವ್ರ ನಿಗಾದಲ್ಲಿ ಇರಿಸಲಾಗಿದೆ.
ವೈದ್ಯಕೀಯ ವಿಜ್ಞಾನದಲ್ಲಿ ಈ ಅಪರೂಪದ ಜನ್ಮಜಾತ ಸ್ಥಿತಿಯನ್ನು ‘ಡೈಸೆಫಾಲಿಸ್ ಪ್ಯಾರಾಪಾಗಸ್’ (Dicephalis parapagus) ಎಂದು ಕರೆಯಲಾಗುತ್ತದೆ. ಈ ಸ್ಥಿತಿಯಲ್ಲಿ ಮಗುವಿಗೆ ಒಂದೇ ದೇಹ ಮತ್ತು ಒಂದೇ ಜತೆ ಕೈ-ಕಾಲುಗಳಿದ್ದು, ಎರಡು ಪ್ರತ್ಯೇಕ ತಲೆಗಳು ಮತ್ತು ಕುತ್ತಿಗೆಗಳು ಬೆಸೆದುಕೊಂಡಿರುತ್ತವೆ. ಮಗುವಿನ ಆಂತರಿಕ ಅಂಗಾಂಗಗಳ ರಚನೆ ಮತ್ತು ಆರೋಗ್ಯ ಸ್ಥಿತಿಯ ಸವಾಲುಗಳ ಕುರಿತು ವೈದ್ಯಕೀಯ ತಂಡವು ಕೂಲಂಕಷವಾಗಿ ತಪಾಸಣೆ ನಡೆಸುತ್ತಿದೆ.
ದಿನಗೂಲಿ ಕಾರ್ಮಿಕರಾಗಿರುವ ದಂಪತಿಗೆ ಇದು ಮೊದಲ ಮಗುವಾಗಿದ್ದು, ಗರ್ಭಧಾರಣೆಯ 32ನೇ ವಾರದಲ್ಲೇ ಮಗು ಜನಿಸಿದೆ. ಪ್ರಸ್ತುತ ಎಂಕೆಸಿಜಿ ಆಸ್ಪತ್ರೆಯ ವಿಶೇಷ ವೈದ್ಯರ ತಂಡವು ಮಗುವಿನ ಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಮುಂದಿನ ಕೆಲವು ದಿನಗಳು ಮಗುವಿನ ಜೀವ ರಕ್ಷಣೆಯ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.
ವೈದ್ಯಕೀಯ ಸಂಶೋಧನೆಗಳ ಪ್ರಕಾರ, ಇಂತಹ ಬೆಸೆದುಕೊಂಡ ತಲೆಗಳಿರುವ ಶಿಶು ಜನಿಸುವುದು ಅತ್ಯಂತ ಅಪರೂಪ. ಮೂರು ಲಕ್ಷ ಶಿಶುಗಳ ಜನನದಲ್ಲಿ ಒಂದು ಮಾತ್ರ ಇಂತಹ ಪ್ರಕರಣ ಕಂಡುಬರುತ್ತದೆ. ಈ ಹಿಂದೆ ಒಡಿಶಾದಲ್ಲಿ ಇದೇ ರೀತಿ ಬೆಸೆದುಕೊಂಡ ಜಗಾ ಮತ್ತು ಕಾಲಿಯಾ ಎಂಬ ಅವಳಿ ಸಹೋದರರು ಜನಿಸಿದ್ದರು.




