ತಮ್ಮ ಶೈಕ್ಷಣಿಕ ಅರ್ಹತೆ ಮತ್ತು ಶಿಕ್ಷಣಕ್ಕಾಗಿನ ಹಣದ ಮೂಲ ಕುರಿತು ಪ್ರಶ್ನೆ ಎತ್ತುತ್ತಿರುವ ಬಿಜೆಪಿ ನಾಯಕರಿಗೆ ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ತಿರುಗೇಟು ನೀಡಿದ್ದಾರೆ. “ನನ್ನ ಪದವಿ, ವಿದ್ಯಾರ್ಥಿವೇತನ ಹಾಗೂ ಶಿಕ್ಷಣ ಸಾಲದ ದಾಖಲೆಗಳನ್ನು ಬಹಿರಂಗಪಡಿಸಲು ನಾನು ಸಿದ್ಧ. ಆದರೆ, ಚಕ್ರವರ್ತಿ ತಮ್ಮ ಪದವಿ ಪ್ರಮಾಣಪತ್ರವನ್ನು ತೋರಿಸುತ್ತಾರೆಯೇ” ಎಂದು ದೀಪ್ಕೆ ಪ್ರಶ್ನಿಸಿದ್ದಾರೆ. ಮೋದಿ ಅವರ ಪದವಿ ಕುರಿತು ಪರೋಕ್ಷವಾಗಿ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದಾರೆ.
ದೀಪ್ಕೆ ಅವರ ಶೈಕ್ಷಣಿಕ ಅರ್ಹತೆ ಮತ್ತು ಅವರ ತಂದೆಯ ಹಣಕಾಸಿನ ಮೂಲಗಳನ್ನು ತಿಳಿಯಲು ಬಿಜೆಪಿ ಕಾರ್ಯಕರ್ತರೊಬ್ಬರು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ದೀಪ್ಕೆ, ‘ಎಕ್ಸ್’ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ; “ನಾನು ಯಾವ ರೀತಿ ಶಿಕ್ಷಣ ಪೂರ್ಣಗೊಳಿಸಿದೆ ಎಂದು ತಿಳಿಯಲು ಬಿಜೆಪಿ ಕಾರ್ಯಕರ್ತ ಆರ್‌ಟಿಐ ಹಾಕಿದ್ದಾರೆ. ನನ್ನ ವಿದ್ಯಾರ್ಥಿವೇತನ ಪತ್ರ, ಶಿಕ್ಷಣ ಸಾಲದ ದಾಖಲೆ ಹಾಗೂ ಪದವಿ ಪ್ರಮಾಣಪತ್ರವನ್ನು ತೋರಿಸಲು ನಾನು ಸಿದ್ಧನಿದ್ದೇನೆ. ಆದರೆ, ನಿಮ್ಮ ನಾಯಕರು ತಮ್ಮ ನಿಜವಾದ ಪದವಿಯನ್ನು ತೋರಿಸುತ್ತಾರೆಯೇ” ಎಂದು ದೀಪ್ಕೆ ಪ್ರಶ್ನಿಸಿದ್ದಾರೆ.
I am ready to reveal my scholarship letter & education loan letter.
— Abhijeet Dipke (@abhijeet_dipke) August 3, 2026
Will the emperor show his degree? pic.twitter.com/cVUqbz3O9n
ಸುದ್ದಿಗಾರರೊಂದಿಗೆ ಮಾತನಾಡಿದ ದೀಪ್ಕೆ, ತಮ್ಮ ವಿರುದ್ಧ ಸರ್ಕಾರ ಯಾವುದೇ ತನಿಖೆ ನಡೆಸಿದರೂ ಎದುರಿಸಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ. “ಈ ಸರ್ಕಾರದ ವಿರುದ್ಧ ಯಾರೇ ಧ್ವನಿ ಎತ್ತಿದರೂ ಅವರ ಮೇಲೆ ಇಡಿ, ಸಿಬಿಐ ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳನ್ನು ಬಳಸಲಾಗುತ್ತದೆ. ಪ್ರಧಾನಿ ನನ್ನ ವಿರುದ್ಧ ಇಡಿಯನ್ನು ಕಳುಹಿಸುವುದಾದರೆ, ಅವರು ತಮ್ಮ ಪದವಿ ಪ್ರಮಾಣಪತ್ರದ ಪ್ರತಿಯನ್ನೂ ಜೊತೆಗೆ ಕಳುಹಿಸಲಿ. ಆಗ ನಾನು ನನ್ನ ಶಿಕ್ಷಣ ಸಾಲ, ವಿದ್ಯಾರ್ಥಿವೇತನ ಹಾಗೂ ಪದವಿ ದಾಖಲೆಗಳನ್ನು ಸಾರ್ವಜನಿಕಗೊಳಿಸುತ್ತೇನೆ” ಎಂದಿದ್ದಾರೆ.
ಹೊಸ ರಾಜಕೀಯ ಪಕ್ಷ ಸ್ಥಾಪಿಸುವ ಉದ್ದೇಶವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ದೀಪ್ಕೆ, “ರಾಜಕೀಯ ಪಕ್ಷ ಕಟ್ಟುವ ಬಗ್ಗೆ ಮಾಧ್ಯಮಗಳಿಗೆ ಹೆಚ್ಚು ಆಸಕ್ತಿ ಇದೆ. ದೇಶದಲ್ಲಿ ಈಗಾಗಲೇ ಸಾಕಷ್ಟು ರಾಜಕೀಯ ಪಕ್ಷಗಳಿವೆ. ಮತ್ತೊಂದು ಪಕ್ಷ ಆರಂಭಿಸುವುದರಿಂದ ಏನು ಪ್ರಯೋಜನ? ನಾವು ಇದನ್ನು ಸಾಮಾಜಿಕ ಚಳವಳಿಯಾಗಿಯೇ ಮುಂದುವರಿಸಲು ಬಯಸುತ್ತೇವೆ” ಎಂದು ಹೇಳಿದ್ದಾರೆ.
“ಜನರ ರಾಜಕೀಯದ ಮೇಲಿನ ನಂಬಿಕೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಬೆಳಗ್ಗೆ ಒಂದು ಪಕ್ಷಕ್ಕೆ ಮತ ಹಾಕಿದರೆ, ಸಂಜೆ ಮತ್ತೊಂದು ಪಕ್ಷದ ಸರ್ಕಾರ ರಚನೆಯಾಗುತ್ತದೆ. ಬೆಳಗ್ಗೆ ಶಾಸಕರಾಗಿದ್ದವರು, ಸಂಜೆ ಬೇರೆ ಪಕ್ಷಕ್ಕೆ ಸೇರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಜನರು ರಾಜಕೀಯದ ಮೇಲಿನ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.



