ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂವಿಧಾನದ 371(ಜೆ) ವಿಶೇಷ ಸ್ಥಾನಮಾನ ಶ್ರೀರಕ್ಷೆಯಾಗಿದ್ದು, ಈ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ವಿಶೇಷ ಮೀಸಲಾತಿ ದೊರೆಯುವ ಮೂಲಕ ಉತ್ತಮ ಅವಕಾಶಗಳು ಲಭಿಸಿವೆ ಎಂದು ಸಚಿವ ಶರಣಪ್ರಕಾಶ ಪಾಟೀಲ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ‘371(ಜೆ) ವಿಶೇಷ ಸ್ಥಾನಮಾನದ ಪರಿಣಾಮವಾಗಿ ಈ ಭಾಗದ ಒಂದು ಲಕ್ಷಕ್ಕೂ ಅಧಿಕ ಜನರು ಸರ್ಕಾರಿ ಉದ್ಯೋಗ ಪಡೆಯಲು ಅವಕಾಶವಾಗಿದೆ. ವೈದ್ಯಕೀಯ ಸೀಟುಗಳ ಹೆಚ್ಚಳದಿಂದ ಬಡವರು ಹಾಗೂ ಕೂಲಿ ಕಾರ್ಮಿಕರ ಮಕ್ಕಳೂ ವೈದ್ಯರಾಗುವ ಕನಸು ನನಸಾಗಿಸಿಕೊಳ್ಳಲು ಸಾಧ್ಯವಾಗಿದೆ’ ಎಂದು ಹೇಳಿದರು.
‘371(ಜೆ) ವಿಶೇಷ ಸ್ಥಾನಮಾನ ದೊರಕಿಸುವಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪರಿಶ್ರಮ ಮಹತ್ವದ್ದಾಗಿದೆ. ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರವು ಈ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡುವ ಮಹತ್ವದ ನಿರ್ಧಾರ ಕೈಗೊಂಡಿತು’ ಎಂದು ಸಚಿವರು ಹೇಳಿದರು.
‘371(ಜೆ) ವಿಶೇಷ ಸ್ಥಾನಮಾನದ ಮಹತ್ವ ಮತ್ತು ಅದರ ಮೂಲಕ ಕಲ್ಯಾಣ ಕರ್ನಾಟಕಕ್ಕೆ ದೊರೆಯುತ್ತಿರುವ ಸೌಲಭ್ಯಗಳ ಕುರಿತು ಇಂದಿನ ಮಕ್ಕಳಿಗೆ ಅರಿವು ಮೂಡಿಸಬೇಕು. ರಾಜ್ಯ ಸರ್ಕಾರದಿಂದ ವಾರ್ಷಿಕ ₹5,000 ಕೋಟಿ ಅನುದಾನ ನೀಡಲಾಗುತ್ತಿದ್ದು, ಶಿಕ್ಷಣ, ಆರೋಗ್ಯ ಹಾಗೂ ಆವಿಷ್ಕಾರ ಕ್ಷೇತ್ರಗಳಿಗೆ ವಿಶೇಷ ಒತ್ತು ನೀಡಲಾಗುತ್ತಿದೆ’ ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಸಚಿವರು ತೆರೆದ ವಾಹನದಲ್ಲಿ ಕವಾಯತು ತಂಡಗಳ ಪರಿವೀಕ್ಷಣೆ ನಡೆಸಿದರು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಕಲ್ಯಾಣ ಕರ್ನಾಟಕದ ವಿಮೋಚನಾ ಹೋರಾಟ ಹಾಗೂ ಅದರ ಇತಿಹಾಸವನ್ನು ಬಿಂಬಿಸಿದವು.
ಇದನ್ನು ಓದಿದ್ದೀರಾ? ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಹತ್ತು ಹೊಸ ಯೋಜನೆಗಳ ಘೋಷಣೆ
ಕಾರ್ಯಕ್ರಮದಲ್ಲಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು, ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.




