ಕೇಂದ್ರ ಸರ್ಕಾರವನ್ನು ಟೀಕಿಸುವ ಭರದಲ್ಲಿ ಈ ಹಿಂದೆ ಇಳಕಲ್ ಪಟ್ಟಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಅವರು ‘ಹೊಲಸು–ಹೊಲಗೇರಿ’ ಎಂಬ ಪದ ಬಳಸಿದ್ದಾರೆನ್ನಲಾಗಿದ್ದು, ಇದು ದಲಿತ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ವಿವಿಧ ದಲಿತ ಸಂಘಟನೆಗಳ ಮುಖಂಡರು ಕೊಪ್ಪಳದಲ್ಲಿ ಕ್ರಮಕ್ಕೆ ಆಗ್ರಹಿಸಿದರು.
ಕೊಪ್ಪಳ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೋರ್ ಸೇನಾ ಸಂಘಟನೆಯ ರಾಜ್ಯ ಕಾರ್ಯದರ್ಶಿ ಸುರೇಶ್ ಬಳೂಟಗಿ, “ಸಚಿವರು ಬಳಸಿದ್ದಾರೆನ್ನಲಾದ ಪದವನ್ನು ಹಿಂಪಡೆದು ದಲಿತ ಸಮುದಾಯದ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ರಾಜ್ಯವ್ಯಾಪಿ ಹೋರಾಟ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಸಚಿವರ ಕಾರ್ಯವೈಖರಿ ಕುರಿತು ಮಾತನಾಡಿದ ಅವರು, “ಪತ್ರಕರ್ತರಿಗೆ ಬೆದರಿಕೆ ಹಾಕಿರುವುದು, ಪೊಲೀಸ್ ಅಧಿಕಾರಿಗಳ ಮೇಲೆ ದರ್ಪ ತೋರಿರುವುದು ಹಾಗೂ ಮಠಾಧೀಶರ ಕುರಿತು ಅವಹೇಳನಕಾರಿ ರೀತಿಯಲ್ಲಿ ಮಾತನಾಡಿರುವುದು ಖಂಡನೀಯ. ಕಾಶಪ್ಪನವರ್ ‘ರೌಡಿʼ, ಹೀನ ಮನಸ್ಥಿತಿಯ ಸಚಿವ” ಎಂದು, ಇಂತಹ ಆರೋಪಗಳಿರುವ ವ್ಯಕ್ತಿಗೆ ಸಚಿವ ಸ್ಥಾನ ನೀಡಿರುವುದು ವಿಷಾದನೀಯ ಎಂದರು.
ಪ್ರಕಾಶ ಹಿರೇಮನಿ ಮಾತನಾಡಿ, “ಸಚಿವರ ಹೇಳಿಕೆ ಖಂಡಿಸಿ ಪಕ್ಷಾತೀತವಾಗಿ ಪ್ರತಿಭಟನೆ ನಡೆಸಲಾಗುವುದು. ಎಲ್ಲ ವರ್ಗ ಹಾಗೂ ಸಮುದಾಯಗಳ ಜನರು ಪಕ್ಷಭೇದ ಮರೆತು ಪ್ರತಿಭಟನೆಯಲ್ಲಿ ಭಾಗವಹಿಸಬೇಕು” ಎಂದು ಮನವಿ ಮಾಡಿದರು.
ಯಲಬುರ್ಗಾ ಹಾಗೂ ಕುಕನೂರು ತಾಲ್ಲೂಕಿನ ವಿವಿಧ ದಲಿತ ಸಂಘಟನೆಗಳ ಮುಖಂಡರು, ಯುವಕರು, ಮಹಿಳೆಯರು ಹಾಗೂ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸದಿದ್ದರೆ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು ಎಂದು ಮುಖಂಡರು ಎಚ್ಚರಿಸಿದರು.
ದಲಿತ ಮುಖಂಡ ಲಕ್ಣ್ಮಣ ಕಾಳಿ ಮಾತನಾಡಿ, “ವಿಜಯಾನಂದ ಕಾಶಪ್ಪನವರ್ ಅವರು ‘ಹೊಲಗೇರಿ’ ಪದ ಬಳಸಿರುವುದು ದಲಿತ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿದೆ. ಇದನ್ನು ಖಂಡಿಸಿ ಕುಕನೂರಿನಲ್ಲಿ ಆ.17ರಂದು ಬೆಳಿಗ್ಗೆ 10.30ಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಶಿರೂರು ವೀರಭದ್ರಪ್ಪ ವೃತ್ತದವರೆಗೆ ಮೆರವಣಿಗೆ ನಡೆಸಲಾಗುವುದು. ಬಳಿಕ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿ, ಸಚಿವರು ಕ್ಷಮೆಯಾಚಿಸಬೇಕು ಹಾಗೂ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು” ಎಂದು ಆಗ್ರಹಿಸಿದರು
ಈ ವೇಳೆ ಶಶಿಕುಮಾರ್ ಭಜಂತ್ರಿ, ಭೀಮಣ್ಣ ಭಂಡಾರಿ, ವಿಜಯಕುಮಾರ್ ಚವಾಣ್, ರಾಘವೇಂದ್ರ ಬಳಿಗೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.




