ಕೇಂದ್ರ ಸರ್ಕಾರದ ವಿದೇಶಾಂಗ ನೀತಿ ಹಾಗೂ ಗಡಿ ಭದ್ರತೆಯ ವಿಚಾರವಾಗಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನವು ಮಧ್ಯಸ್ಥಿಕೆ ವಹಿಸಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಮೂಕಪ್ರೇಕ್ಷಕರಂತೆ ನೋಡುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ.
ದೆಹಲಿಯಲ್ಲಿ ಗುರುವಾರ ನಡೆದ ರಚನಾತ್ಮಕ ಕಾಂಗ್ರೆಸ್ ರಾಷ್ಟ್ರೀಯ ಅಧಿವೇಶನದಲ್ಲಿ ಮಾತನಾಡಿದ ಅವರು, ಇರಾನ್, ಅಮೆರಿಕ ಹಾಗೂ ರಷ್ಯಾ ದೇಶಗಳು ಭಾರತದ ಹಳೆಯ ಮಿತ್ರರಾಷ್ಟ್ರಗಳಾಗಿವೆ. ನಮಗಿದ್ದ ಈ ರಾಜತಾಂತ್ರಿಕ ಬಲವನ್ನು ಬಳಸಿಕೊಂಡು ಭಾರತವು ಶಾಂತಿ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಬಹುದಿತ್ತು. ಇಂದಿರಾ ಗಾಂಧಿಯವರಂತಹ ಪ್ರಬಲ ನಾಯಕಿ ಇದ್ದಿದ್ದರೆ ಇದು ಭಾರತಕ್ಕೆ ಜಗತ್ತಿನಲ್ಲೇ ಅತಿದೊಡ್ಡ ಅವಕಾಶವಾಗುತ್ತಿತ್ತು. ಆದರೆ, ಭಾರತ ತನ್ನ ಅವಕಾಶವನ್ನು ಕೈಚೆಲ್ಲಿ ಪಾಕಿಸ್ತಾನಕ್ಕೆ ಆ ಸ್ಥಾನವನ್ನು ಬಿಟ್ಟುಕೊಟ್ಟಿದೆ ಎಂದು ರಾಹುಲ್ ಟೀಕಿಸಿದರು.
ಚೀನಾ ಗಡಿ ವಿವಾದದ ಕುರಿತೂ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಅರುಣಾಚಲ ಪ್ರದೇಶದ ಹಲವು ಭಾಗಗಳಲ್ಲಿ ಭಾರತೀಯ ಯೋಧರು ಗಸ್ತು ತಿರುಗದಂತೆ ಚೀನಾ ಸೇನೆ ತಡೆಯುತ್ತಿದೆ. ಆದರೆ, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ರಕ್ಷಣಾ ಸಚಿವರು ಮಾಧ್ಯಮಗಳ ಮೂಲಕ ಈ ಸತ್ಯವನ್ನು ಮುಚ್ಚಿಹಾಕುತ್ತಿದ್ದಾರೆ. ‘ನಾವು ಯಾವುದೇ ಭೂಮಿ ಕಳೆದುಕೊಂಡಿಲ್ಲ’ ಎಂಬ ಪ್ರಧಾನಿಯವರ ಹಿಂದಿನ ಹೇಳಿಕೆ ದೇಶದ ವಿದೇಶಾಂಗ ನೀತಿಗೆ ದೊಡ್ಡ ಪೆಟ್ಟು ನೀಡಿದೆ ಎಂದು ದೂರಿದರು.
ವಿಪಕ್ಷಗಳ ನಿರಂತರ ಹೋರಾಟದಿಂದಾಗಿ ಪ್ರಧಾನಿ ಮೋದಿಯವರಿಗೆ ರಾತ್ರಿ ನಿದ್ದೆಯಿಲ್ಲದಂತಾಗಿದೆ. ಇತ್ತ ‘ಚಾಣಕ್ಯ’ ಎಂದು ಕರೆಸಿಕೊಳ್ಳುವ ಅಮಿತ್ ಶಾ ಅವರು ಮಳೆಗಾಲದ ಅಧಿವೇಶನದಲ್ಲಿ 20 ದಿನಗಳ ಕಾಲ ಸಂಸತ್ತಿನಿಂದಲೇ ನಾಪತ್ತೆಯಾಗಿದ್ದರು. ಜನರ ಧ್ವನಿಗೆ ಬೆದರಿರುವ ಕೇಂದ್ರ ಸರ್ಕಾರ ಈಗ ಸಂಪೂರ್ಣವಾಗಿ ಹತಾಶವಾಗಿದೆ. ಜನಸಾಮಾನ್ಯರ ಪರವಾದ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದು ರಾಹುಲ್ ಗಾಂಧಿ ಎಚ್ಚರಿಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ಆರ್‌ಎಸ್ಎಸ್ ಈಗ ತನ್ನ ನೈಜ ಅಸ್ತಿತ್ವವನ್ನು ಕಳೆದುಕೊಂಡಿದ್ದು, ಸಂಪೂರ್ಣವಾಗಿ ಅದಾನಿ ಮತ್ತು ಅಂಬಾನಿಯಂತಹ ಬಂಡವಾಳಶಾಹಿಗಳ ಹಿಡಿತಕ್ಕೆ ಸಿಲುಕಿದೆ ಎಂದು ಗಂಭೀರ ಆರೋಪ ಮಾಡಿದರು. ನೋಟು ಅಮಾನ್ಯೀಕರಣ ಹಾಗೂ ಜಿಎಸ್‌ಟಿಯಂತಹ ತಪ್ಪು ನೀತಿಗಳಿಂದಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲ ಬೆಂಬಲಿಗರಾಗಿದ್ದ ಸಣ್ಣ ವ್ಯಾಪಾರಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.




