ಕರ್ನಾಟಕದ ರಾಜಕೀಯ ವಲಯದಲ್ಲಿ ಮತ್ತೊಮ್ಮೆ ಭ್ರಷ್ಟಾಚಾರದ ಗಂಭೀರ ಆರೋಪಗಳು ಮುನ್ನೆಲೆಗೆ ಬಂದಿವೆ. ಹಾಸನ ಜಿಲ್ಲಾಡಳಿತದಲ್ಲಿ ನಡೆದಿವೆ ಎನ್ನಲಾದ ಹಣಕಾಸು ಅವ್ಯವಹಾರಗಳು ಮತ್ತು ಲಂಚದ ಆರೋಪಗಳಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು 15 ಪುಟಗಳ ವಾಟ್ಸ್ಆ್ಯಪ್ ಸಂಭಾಷಣೆಗಳ ಪ್ರತಿಗಳನ್ನು ಬಹಿರಂಗಗೊಳಿಸಿದ್ದಾರೆ. ಇದು ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಭಾನುವಾರ, ಹಾಸನಕ್ಕೆ ಭೇಟಿ ನೀಡಿದ್ದ ಕುಮಾರಸ್ವಾಮಿ ಅವರು, ಹಾಸನ ಜಿಲ್ಲಾಧಿಕಾರಿ ಕೆ.ಎಸ್ ಲತಾ ಕುಮಾರಿ ಅವರ ಆಪ್ತ ಸಹಾಯಕ ಶಶಿಕಿರಣ್ ಮತ್ತು ಮಧ್ಯವರ್ತಿಗಳ ನಡುವೆ ನಡೆದಿದೆ ಎನ್ನಲಾದ ಸಂಭಾಷಣೆ ವಿವರವನ್ನು ಬಹಿರಂಗಗೊಳಿಸಿದ್ದಾರೆ. ಈ ಚಾಟ್ಗಳು ಕಡತಗಳ ವಿಲೇವಾರಿ ಮತ್ತು ಹುದ್ದೆ ಉಳಿಸಿಕೊಳ್ಳುವಿಕೆಗಾಗಿ ಲಕ್ಷಾಂತರ ರೂಪಾಯಿಗಳ ದೊಡ್ಡ ಮಟ್ಟದ ಲಂಚದ ಬೇಡಿಕೆಗೆ ಸಂಬಂಧಿಸಿವೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ಈ ಇಡೀ ಪ್ರಕರಣದಲ್ಲಿ ಅತ್ಯಂತ ಕುತೂಹಲಕಾರಿ ಮತ್ತು ರಹಸ್ಯಮಯ ಸಂಗತಿಯೆಂದರೆ, ಆಡಳಿತ ವ್ಯವಸ್ಥೆಯ ಅತ್ಯಂತ ಗೋಪ್ಯವಾಗಿರಬೇಕಾದ ಖಾಸಗಿ ವಾಟ್ಸ್ಆ್ಯಪ್ ಸಂಭಾಷಣೆಗಳ ಪ್ರತಿಗಳು ಕುಮಾರಸ್ವಾಮಿ ಅವರ ಕೈಗೆ ತಲುಪಿದ್ದು ಹೇಗೆ ಎಂಬುದು. ನವೆಂಬರ್ 8 ರಂದು ಹಾಸನಾಂಬೆ ದರ್ಶನದ ಬಳಿಕ ಸುದ್ದಿಗೋಷ್ಠಿ ನಡೆಸಿ ದಾಖಲೆಗಳನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಿದ ಕುಮಾರಸ್ವಾಮಿ, “ಸರ್ಕಾರಿ ಅಧಿಕಾರಿಯೊಬ್ಬರು ತನ್ನ ಗುರುತು ಬಹಿರಂಗಗೊಳ್ಳದಂತೆ ಮುಖವನ್ನು ಟವೆಲ್ನಿಂದ ಮುಚ್ಚಿಕೊಂಡು ಬಂದು ನನಗೆ ಈ ದಾಖಲೆಗಳನ್ನು ನೀಡಿದ್ದಾರೆ” ಎಂದು ವಿವರಿಸಿದ್ದಾರೆ. ಆದರೆ, ದಾಖಲೆಗಳನ್ನು ನೀಡಿದ ವ್ಯಕ್ತಿಯ ನಿಜವಾದ ಹಿನ್ನೆಲೆ, ಅವುಗಳ ಮೂಲ ಹಾಗೂ ವಾಟ್ಸ್ಆ್ಯಪ್ ಚಾಟ್ಗಳಲ್ಲಿ ಯಾವುದೇ ತಿದ್ದುಪಡಿ ಮಾಡಲಾಗಿದೆಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.
ಅದೇನೇ ಇರಲಿ, ಕುಮಾರಸ್ವಾಮಿ ಅವರು ಬಹಿರಂಗಪಡಿಸಿರುವ ದಾಖಲೆಗಳ ಪ್ರಕಾರ, “ಹಾಸನ ಜಿಲ್ಲೆಯಲ್ಲಿ ಮೂರು ಕಲ್ಲು ಕ್ರಷರ್ಗಳಿಗೆ ಸಂಬಂಧಿಸಿದ ಕಡತಗಳನ್ನು ವಿಲೇವಾರಿ ಮಾಡಲು ಬಲಾಢ್ಯರಿಂದ ಬರೋಬ್ಬರಿ 60 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಡಲಾಗಿತ್ತು. ಈ ಮೊತ್ತದಲ್ಲಿ 50 ಲಕ್ಷ ರೂಪಾಯಿ ಹಿರಿಯ ಅಧಿಕಾರಿಗೆ ಮತ್ತು ಉಳಿದ 10 ಲಕ್ಷ ರೂಪಾಯಿ ಕಚೇರಿಯ ವಿವಿಧ ಸಿಬ್ಬಂದಿಗೆ ಹಂಚಿಕೆಯಾಗಬೇಕಿತ್ತು ಎಂಬ ಅಂಶ ಸಂಭಾಷಣೆಯಲ್ಲಿದೆ” ಎಂದು ಆರೋಪಿಸಲಾಗಿದೆ.
“ಕಚೇರಿಯ ಚಾಲಕ, ಗನ್ಮ್ಯಾನ್ ಹಾಗೂ ಇತರೆ ಆಪ್ತ ಸಿಬ್ಬಂದಿಗೂ ಈ ಹಣದಲ್ಲಿ ಪಾಲು ನೀಡಲಾಗುತ್ತದೆ ಎಂಬ ವಿಚಾರ ಪ್ರಸ್ತಾಪವಾಗಿರುವುದು ಆಡಳಿತ ಯಂತ್ರದಲ್ಲಿ ಎಷ್ಟು ಆಳವಾಗಿ ಲಂಚಕೋರತನ ಬೇರೂರಿದೆ ಎಂಬುದಕ್ಕೆ ಸಾಕ್ಷಿಯಾಗಿದೆ” ಎಂದು ಕುಮಾರಸ್ವಾಮಿ ದೂರಿದ್ದಾರೆ. ಕ್ರಷರ್ ವಿಚಾರ ಮಾತ್ರವಲ್ಲದೆ, ಸಕಲೇಶಪುರದ ಭೂಪರಿವರ್ತನೆ ಪ್ರಕರಣಗಳಲ್ಲೂ ಭಾರೀ ಪ್ರಮಾಣದ ಹಣಕಾಸಿನ ವಹಿವಾಟು ನಡೆಸಿರುವ ಬಗ್ಗೆ ಚಾಟ್ನಲ್ಲಿ ಉಲ್ಲೇಖಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಗಮನಾರ್ಹವಾಗಿ, ಕ್ರಷರ್ ಕಡತಗಳ ವಿಲೇವಾರಿ ಆರೋಪಕ್ಕಿಂತಲೂ ಹೆಚ್ಚು ರಾಜಕೀಯ ಸಂಚಲನ ಮೂಡಿಸಿರುವುದು ಜಿಲ್ಲಾಧಿಕಾರಿ ಹುದ್ದೆಯಲ್ಲಿ ಮುಂದುವರಿಯಲು ನೀಡಲಾದ ಲಂಚದ ವಹಿವಾಟಿನ ಪ್ರಸ್ತಾಪ. “ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ ಶಿವಲಿಂಗೇಗೌಡ ಅವರು ಅಧಿಕಾರ ವಹಿಸಿಕೊಂಡ ಬಳಿಕ ಜಿಲ್ಲಾಧಿಕಾರಿ ಲತಾ ಕುಮಾರಿ ಅವರನ್ನು ವರ್ಗಾವಣೆ ಮಾಡಲು ಬಯಸಿದ್ದರು ಎನ್ನಲಾಗಿತ್ತು. ಆದರೆ, ಆ ಹುದ್ದೆಯಲ್ಲಿ ಮುಂದುವರಿಯಲು ಲತಾ ಅವರು ಮಧ್ಯವರ್ತಿಗಳ ಮೂಲಕ ಬರೋಬ್ಬರಿ 75 ಲಕ್ಷ ರೂಪಾಯಿ ಲಂಚ ನೀಡಿದ್ದಾರೆ” ಎಂಬ ಗಂಭೀರ ಅರೋಪವನ್ನೂ ಕುಮಾರಸ್ವಾಮಿ ಮಾಡಿದ್ದಾರೆ.
“ಈ ಪ್ರಕ್ರಿಯೆಯಲ್ಲಿ ಅರಸೀಕೆರೆ ತಹಶೀಲ್ದಾರ್ ಸಂತೋಷ್ ಅವರ ಹೆಸರೂ ಕೂಡ ಪ್ರಸ್ತಾಪವಾಗಿದೆ. ಇದು ಆಡಳಿತ ವ್ಯವಸ್ಥೆಯಲ್ಲಿ ವರ್ಗಾವಣೆ ದಂಧೆ ಯಾವ ಮಟ್ಟದಲ್ಲಿದೆ ಎಂಬುದನ್ನು ಎತ್ತಿ ತೋರಿಸುತ್ತದೆ. ಲಂಚದ ಈ ಹಣವನ್ನು ಸಿಸಿಟಿವಿ ಕ್ಯಾಮೆರಾಗಳ ಕಣ್ಣಿಗೆ ಬೀಳದಂತೆ ಜಿಲ್ಲಾಧಿಕಾರಿಯ ಅಧಿಕೃತ ನಿವಾಸದ ಪ್ರವೇಶದ್ವಾರದ ಬಳಿ ಇರುವ ಪೊಲೀಸ್ ಕೋಠಡಿಯಲ್ಲೇ ಸುರಕ್ಷಿತವಾಗಿ ಇಡಲಾಗಿತ್ತು” ಎಂದೂ ಕುಮಾರಸ್ವಾಮಿ ದೂರಿದ್ದಾರೆ.
ಆದರೆ, ಈ ಎಲ್ಲ ಗಂಭೀರ ಆರೋಪಗಳನ್ನು ಹಾಸನ ಜಿಲ್ಲಾಧಿಕಾರಿ ಕೆ.ಎಸ್ ಲತಾ ಕುಮಾರಿ ಅವರು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. “ನಮ್ಮ ಹೆಸರನ್ನು ಬಳಸಿಕೊಂಡು ನಮ್ಮ ಆಡಳಿತಾತ್ಮಕ ವರ್ಚಸ್ಸಿಗೆ ಕಳಂಕ ತರುವ ಉದ್ದೇಶದಿಂದ ಕೆಲವರು ನಕಲಿ ವಾಟ್ಸ್ಆ್ಯಪ್ ಸಂದೇಶಗಳನ್ನು ಸೃಷ್ಟಿಸಿ ಹರಡುತ್ತಿದ್ದಾರೆ. ಇಂತಹ ಆಧಾರರಹಿತ ಆರೋಪಗಳು ತಮಗೆ ತೀವ್ರ ನೋವುಂಟುಮಾಡಿವೆ. ಒಂದು ವೇಳೆ, ಆ ದಾಖಲೆಗಳು ನಿಜವೆಂಬುದೇ ಆಗಿದ್ದರೆ, ಅವುಗಳನ್ನು ನೇರವಾಗಿ ಮಾಧ್ಯಮಗಳ ಮುಂದೆ ಬಿಡುಗಡೆ ಮಾಡುವ ಬದಲು, ಕಾನೂನುಬದ್ಧವಾಗಿ ಪೊಲೀಸ್ ಠಾಣೆಗೆ ಅಥವಾ ಸರ್ಕಾರದ ಮುಖ್ಯ ಕಾರ್ಯದರ್ಶಿಯ ಗಮನಕ್ಕೆ ತರಬೇಕಿತ್ತು” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು, ಜಿಲ್ಲಾಧಿಕಾರಿಯ ಆಪ್ತ ಸಹಾಯಕ ಶಶಿಕಿರಣ್ ಅವರು ಭಾನುವಾರ ಹಾಸನ ನಗರ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದು, “ಯಾರೋ ದುಷ್ಕರ್ಮಿಗಳು ತಮ್ಮ ಮೊಬೈಲ್ ಸಂಖ್ಯೆಯನ್ನು ದುರ್ಬಳಕೆ ಮಾಡಿಕೊಂಡು ನಕಲಿ ವಾಟ್ಸ್ಆ್ಯಪ್ ಚಾಟ್ಗಳನ್ನು ಸೃಷ್ಟಿಸಿ ವ್ಯವಸ್ಥಿತವಾಗಿ ಹರಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ. ಈ ಸಂಬಂಧ ಪೊಲೀಸರು ಬಿಎನ್ಎಸ್ನ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಈ ಸಂಪೂರ್ಣ ಹಗರಣವು ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಇಕ್ಕಟ್ಟು ಸೃಷ್ಟಿಸಿದೆ. ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಮುಗಿಬಿದ್ದಿದ್ದು, “ಮುಖ್ಯಮಂತ್ರಿ ಮತ್ತು ಸಚಿವರು ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮದ ಮಾತನಾಡುತ್ತಲೇ ಇಲಾಖೆಗಳಲ್ಲಿ ನಡೆಯುತ್ತಿರುವ ಇಂತಹ ಹಗರಣಗಳನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ” ಎಂದು ಟೀಕಿಸಿವೆ.
ಈ ಲೇಖನ ಓದಿದ್ದೀರಾ?: ಟ್ರಂಪ್ ತಿರಸ್ಕರಿಸಿದ ಯುವಜನರು; 2029ರಲ್ಲಿ ಭಾರತದ ಯುವ ಮತದಾರರ ರಾಜಕೀಯ ನಿಲುವು ಯಾವ ದಿಕ್ಕಿಗೆ?
ಆದಾಗ್ಯೂ ವಿಪಕ್ಷಗಳ ಟೀಕೆ-ಆರೋಪಗಳನ್ನು ಅಲ್ಲಗಳೆದಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ವಿರೋಧ ಪಕ್ಷದವರು ಹೇಳಿದಂತೆ ಅಧಿಕಾರಿಗಳು ಕೇಳುತ್ತಿಲ್ಲ ಎಂಬ ಕಾರಣಕ್ಕೆ ಇಂತಹ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ” ಎಂದು ತಿರುಗೇಟು ನೀಡಿದ್ದಾರೆ.
ಸದ್ಯಕ್ಕೆ, ಐಎಎಸ್ ಅಧಿಕಾರಿಗಳ ಮಟ್ಟದಲ್ಲಿಯೇ ಹುದ್ದೆ/ವರ್ಗಾವಣೆಗಾಗಿ ಲಂಚ ನೀಡಲಾಗಿದೆ ಎಂಬ ಆರೋಪಗಳು ಗಂಭೀರವಾದ ಸಂಗತಿಯಾಗಿದ್ದು, ಪ್ರಕರಣದ ಸತ್ಯಾಸತ್ಯತೆ ಹೊರಬರಲು ಸೈಬರ್ ಅಪರಾಧ ವಿಭಾಗದ ಮೂಲಕ ನಿಷ್ಪಕ್ಷಪಾತ ತನಿಖೆ ನಡೆಸುವುದು ಅನಿವಾರ್ಯವಾಗಿದೆ. ವಾಟ್ಸ್ಆ್ಯಪ್ ಚಾಟ್ಗಳು ಯಾವ ಮೊಬೈಲ್ನಿಂದ ಸೃಷ್ಟಿಯಾಗಿವೆ, ಅವುಗಳನ್ನು ಸೃಷ್ಟಿಸಿದವರು ಯಾರು, ಸಂಭಾಷಣೆಯಲ್ಲಿ ಉಲ್ಲೇಖವಾಗಿರುವ ನೌಕರರು ಮತ್ತು ಮಧ್ಯವರ್ತಿಗಳ ಪಾತ್ರವೇನು ಹಾಗೂ ಹಣ ನಿಜವಾಗಿಯೂ ಕೈ ಬದಲಾಗಿದೆಯೇ ಎಂಬುದು ವೈಜ್ಞಾನಿಕ ತನಿಖೆಯಿಂದ ಮಾತ್ರ ಸಾಬೀತಾಗಲು ಸಾಧ್ಯ.
ಕುಮಾರಸ್ವಾಮಿ ಬಿಡುಗಡೆ ಮಾಡಿರುವ ದಾಖಲೆಗಳು ನಿಜವೆಂದು ಸಾಬೀತಾದರೆ ಅದು ಕಾಂಗ್ರೆಸ್ ಸರ್ಕಾರದ ಆಡಳಿತದ ಅಡಿಪಾಯವನ್ನೇ ಅಲುಗಾಡಿಸಲಿದೆ. ಒಂದು ವೇಳೆ ಆ ದಾಖಲೆಗಳು ನಕಲಿಯಾಗಿದ್ದು, ರಾಜಕೀಯ ಪ್ರೇರಿತವಾಗಿ ಸೃಷ್ಟಿಸಲ್ಪಟ್ಟಿದ್ದರೆ, ಅದರ ಹಿಂದಿರುವ ಸಂಚುಕೋರರನ್ನು ಕಾನೂನು ಕ್ರಮಕ್ಕೆ ಒಳಪಡಿಸಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ.



