50ನೇ ವರ್ಷಕ್ಕೆ ದಾಪುಗಾಲು | ಜನಮಾನಸ ಗೆದ್ದ ‘ಜನತಾ ಮಾಧ್ಯಮ’

Date:

ಹಾಸನದ ಸಮಾನಾಸಕ್ತ ಗೆಳೆಯರು 1977ರಲ್ಲಿ ಹುಟ್ಟುಹಾಕಿದ ಜನತಾ ಮಾಧ್ಯಮ ಪತ್ರಿಕೆ, ತನ್ನ ನಿಲುವಿನಲ್ಲಿ ಎಂದೂ ರಾಜಿ ಮಾಡಿಕೊಳ್ಳದೆ, ಜನಪರ ಧೋರಣೆಯನ್ನು ಉಳಿಸಿಕೊಂಡು ಬಂದಿದೆ. ಸಾರ್ಥಕ 49 ವರ್ಷಗಳನ್ನು ಪೂರೈಸಿ, ಈಗ 50ನೇ ವರ್ಷಕ್ಕೆ ದಾಪುಗಾಲು ಹಾಕುತ್ತಿದೆ. ಆ ಅರ್ಧ ಶತಮಾನದತ್ತ ಒಂದು ಹೊರಳುನೋಟ...

ತನ್ನ ನಿಘಂಟಿನಿಂದ ತೆಗೆದುಹಾಕಿದ ‘ಭಯ-ಭೀತಿ’ ಎಂಬ ಪದಗಳು! ಜನಪರ ಒಲವು-ನಿಲುವುಗಳಲ್ಲೇ ನಲಿವು. ಹಾಸನದ ಜನಮಾನಸದ ಅವಿಭಾಜ್ಯ ಅಂಗ. ನವೆಂಬರ್ 6, 1977ರಂದು ಜನಿಸಿದ ಹಾಸನದ ಹೆಮ್ಮೆ; ಪತ್ರಿಕಾರಂಗದಲ್ಲಿ ಅರ್ಧ ಶತ’ಮಾನ’, ‘ಅಚ್ಚರಿ’ ಎಂಬ ಪದಕ್ಕೆ ಇನ್ನೊಂದು ಪರ್ಯಾಯ ಪದ! ಇಂಥದೊಂದು ದಿನಪತ್ರಿಕೆ ನಡೆದು ಬಂದ ಹಾದಿಯನ್ನು ವರ್ಣಿಸಲು ಸಾಲವು ಸಾವಿರಸಾವಿರ ಪದ. ‘

- Advertisement -

ಹಾಸನ ಜಿಲ್ಲೆಯ ಇತಿಹಾಸ ದಾಖಲಿಸಲು ಬೇಕೇಬೇಕು ಜನತಾ ಮಾಧ್ಯಮ. 1975ರ ತುರ್ತು ಪರಿಸ್ಥಿತಿ ಜನತಾ ಮಾಧ್ಯಮದ ಹುಟ್ಟಿಗೆ ಕಾರಣವಾದರೆ, ಹಾಸನದ ಜನಮಾನಸದಲ್ಲಿ ಜನತಾ ಮಾಧ್ಯಮ ಅಚ್ಚಳಿಯದೆ ಉಳಿದಿರುವುದು ಅದು ಪಟ್ಟು ಹಿಡಿದು ಸಾಧಿಸಿದ ನಿಷ್ಠೂರ-ನಿಷ್ಪಕ್ಷಪಾತ ಪತ್ರಿಕಾಧರ್ಮದ ಕಾರಣದಿಂದ; ಜನಪರ ಕಾಳಜಿ, ವೈಚಾರಿಕತೆ-ಪ್ರಾಮಾಣಿಕತೆಗಳಿಗೆ ನೀಡಿದ ಒತ್ತು, ಶೋಷಿತ ವರ್ಗಗಳ ಪರವಾಗಿ ಅಕ್ಷರ ಮುಖೇನ ಮಾತ್ರವಲ್ಲದೆ ಬೀದಿಗೂ ಇಳಿದು ಮಾಡಿದ ಹೋರಾಟಗಳಿಂದ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ರಾಜ್ಯಾದ್ಯಂತ ಏಕರೂಪ ಬೆಲೆಗೆ...

ಕರುನಾಡಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ರೈತರ ಬಹು ದೊಡ್ಡ ಹೋರಾಟ ಇದಾಗಿದೆ,ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಧಾರವಾಡ, ಹುಬ್ಬಳ್ಳಿ, ಮಂಡ್ಯ, ಮೈಸೂರು ಸೇರಿದಂತೆ 10 ರಿಂದ 15 ಜಿಲ್ಲೆಗಳಲ್ಲಿ...

ಗಡ್ಕರಿ-ಮೋಶಾ ಆಡಳಿತದಲ್ಲಿ ‘ವೋಟ್‌ ಚೋರಿ’ ಬೆನ್ನಲ್ಲೇ ‘ಪೆಟ್ರೋಲ್ ಚೋರಿ’:...

ದೇಶಾದ್ಯಂತ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿರುವ 'ವೋಟ್‌ ಚೋರಿ' ವಿರುದ್ಧ ಬೃಹತ್ ಪ್ರತಿಭಟನೆಗಳು ನಡೆಯುತ್ತಿವೆ. ಬಿಜೆಪಿಗಾಗಿ ನಡೆದ ಮತದಾರರ ಹಕ್ಕು ಹರಣ, ಮತಗಳತನದ ಎಸ್‌ಐಆರ್‌ ರದ್ದಾಗಬೇಕು, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ರಾಜೀನಾಮೆ...

ಬಾಗಲಕೋಟೆ | ಉತ್ಪಾದನೆ ಕುಸಿತ, ಭರ್ಜರಿ ಬೇಡಿಕೆ: ದಾಖಲೆ...

ಮುಂಗಾರು ಮಳೆಯ ಕೊರತೆ, ಭೀಕರ ಬರದ ಪರಿಣಾಮ ಹೊಲಗಳಲ್ಲಿ ಮೆಕ್ಕೆಜೋಳದ ಇಳುವರಿ ಕುಸಿದಿದೆ. ಆದರೆ, ಮಾರುಕಟ್ಟೆಯಲ್ಲಿ ಮಾತ್ರ ಮೆಕ್ಕೆಜೋಳಕ್ಕೆ ಚಿನ್ನದ ಬೆಲೆ ಬಂದಿದೆ! ಕಡಿಮೆ ಬೆಲೆಯಿಂದ ವರ್ಷಗಟ್ಟಲೆ ನಷ್ಟ ಅನುಭವಿಸಿದ್ದ ಬೆಳೆಗಾರರಿಗೆ ಈ...

ಪತ್ರಿಕೆಗಳು ಸಾಮಾನ್ಯವಾಗಿ ತನ್ನ ಉದ್ಯೋಗಿಗಳಿಗೆ ಮತ್ತು ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಾಗ ಮಾತ್ರ ಪ್ರತಿಭಟಿಸುವುದು ಸಾಮಾನ್ಯ. ಆದರೆ, ಐದು ದಶಕಗಳಲ್ಲಿ ಜನತಾ ಮಾಧ್ಯಮ ತನ್ನ ಜವಾಬ್ದಾರಿಯನ್ನು ಇಂದಿಗೂ ಅಕ್ಷರದ ಚೌಕಟ್ಟಿಗೇ ಸೀಮಿತಗೊಳಿಸಿಕೊಂಡಿಲ್ಲ. ಜನಪರ ಚಳವಳಿಗಳನ್ನು ತನ್ನ ಬಾಡಿಗೆ ಕಟ್ಟಡಗಳಲ್ಲೇ ಸ್ವತಃ ಹುಟ್ಟಿ ಹಾಕುವುದರ ಜೊತೆಜೊತೆಗೆ ಸಮಾಜದಲ್ಲಿ ಜರುಗುವ ಎಲ್ಲಾ ಅನ್ಯಾಯ, ಶೋಷಣೆ, ದಬ್ಬಾಳಿಕೆಗಳ ವಿರುದ್ಧ ಜನರನ್ನು ಸಂಘಟಿಸಿ, ಹೋರಾಟಗಳನ್ನು ಹಮ್ಮಿಕೊಂಡು ನಿಜಾರ್ಥದಲ್ಲಿ ಜನರ, ಜನರಿಂದ, ಜನರಿಗಾಗೇ ಸಮರ್ಪಿಸಿಕೊಂಡ ಪತ್ರಿಕೆಯೇ ಆಗಿದೆ. ಅದೆಂದಿಗೂ ಮನೆಯ ಬಾಗಿಲಲ್ಲಿ ಅನಾಥವಾಗಿ ಬಿದ್ದ ಪತ್ರಿಕೆಯಾಗಲಿಲ್ಲ; ಓದುಗರ ಮನದ ಬಾಗಿಲನ್ನು ತಟ್ಟಿದ ಪತ್ರಿಕೆಯಾಗಿ ಕಾರ್ಯ ನಿರ್ವಹಿಸುತ್ತಿದೆ.

ಉಚ್ವಾಸ-ನಿಶ್ವಾಸಗಳಲ್ಲೂ ರಾಜಕೀಯವನ್ನೆ ಉಸುರುವ, ರಾಜಕೀಯವನ್ನೇ ಉಂಡು, ತಿಂದು, ಕುಡಿದು ಬೆವರುವ, ರಾಜಕೀಯವನ್ನೇ ಹಾಸಿ-ಹೊದ್ದುಕೊಂಡು ಮಲಗುವ, ರಾಜಕೀಯವನ್ನೇ ಮಲ-ಮೂತ್ರಗಳಲ್ಲಿ ವಿಸರ್ಜಿಸುವ ಹಾಸನದಂತ ಆಕ್ರಮಣಕಾರಿ ಜಿಲ್ಲೆಯಲ್ಲಿ ರೈತ, ದಲಿತ, ವಿಚಾರವಾದಿ, ಸಮಾಜವಾದಿ, ಕನ್ನಡ ಭಾಷಾ, ಜೆ.ಪಿ, ಸರಳ ಮದುವೆ, ಸಾಂಸ್ಕೃತಿಕ ಮತ್ತಾವುದೇ ಜನಪರ ಚಳವಳಿಗಳು ಬೆಳೆಯುವುದು ಮತ್ತು ಉಳಿಯುವುದು ಅಷ್ಟು ಸುಲಭದ ಮಾತಲ್ಲ. ಜನತಾ ಮಾಧ್ಯಮ ಕಚೇರಿಯು ಅಕ್ಷರಶಃ ಆ ಎಲ್ಲಾ ಪ್ರಗತಿಪರ ಚಳವಳಿಗಳ ಹೆರಿಗೆ ಆಸ್ಪತ್ರೆಯಂತೆ ಕಾರ್ಯ ನಿರ್ವಹಿಸಿದ್ದರಿಂದ ಪ್ರಧಾನಿ, ಮುಖ್ಯಮಂತ್ರಿ, ಮಂತ್ರಿಗಳಂಥ ರಾಜಕಾರಣಿಗಳನ್ನು ಕೊಟ್ಟಿರುವ ಜಿಲ್ಲೆಯಲ್ಲಿ ಅವರೆಲ್ಲರ ಪಕ್ಷಾತೀತ ಕೆಂಗಣ್ಣಿಗೆ ಕಾಲಕಾಲಕ್ಕೆ ಬಿದ್ದಿದ್ದರೂ ಪತ್ರಿಕೆ ಬೆದರಿಲ್ಲ. ರಾಜಿ ಮಾಡಿಕೊಂಡಿಲ್ಲ. ಇದಕ್ಕೆ ಒಂದು ಸೂಕ್ಷ್ಮ ಪುರಾವೆಯೆಂದರೆ ವಯಸ್ಸು ಐವತ್ತಾದರೂ ಜನತಾ ಮಾಧ್ಯಮಕ್ಕಿನ್ನೂ ತನ್ನದೇ ಆದ ಸ್ವಂತ ಕಟ್ಟಡವಿಲ್ಲದಿರುವುದು!

ಈಗಲೂ ಬೇರೆ ಬೇರೆ ಸ್ತರಗಳಲ್ಲಿ, ಸ್ಥಳಗಳಲ್ಲಿ, ರೂಪಗಳಲ್ಲಿ, ಹಂತಗಳಲ್ಲಿ ಜನತಾ ಮಾಧ್ಯಮ ಕಟ್ಟಿ ಬೆಳೆಸಿದ ಆ ಚಳವಳಿಗಳು ಜೀವಂತವಾಗಿವೆ. ಜಿಲ್ಲೆಯ ಬಹುತೇಕ ಪ್ರಗತಿಪರ ಚಳವಳಿಗಳು ಜನತಾ ಮಾಧ್ಯಮದ ಬಳುವಳಿಗಳು ಎನ್ನಬಹುದೇನೋ?

ರಕ್ಷಿಸಬೇಕಾದವರೆಲ್ಲರೂ ರಾಕ್ಷಸರಾದಾಗ, ಆಸರೆಗಾಗಿ ಜಿಲ್ಲೆಯ ಶೋಷಿತರಿಗೆ ಹೊಳೆಯುವುದೇ ಜನತಾ ಮಾಧ್ಯಮ ಪತ್ರಿಕೆ. ಶೋಷಿತ ಸಮುದಾಯಕ್ಕೆ ಸಂವಿಧಾನದತ್ತವಾಗಿ ಬಂದಿರುವ ಪ್ರಶ್ನಿಸುವ ಹಕ್ಕಿನ ನೆನಪು ಮಾಡಿಕೊಡುವುದರಲ್ಲಿ ಜನತಾ ಮಾಧ್ಯಮದ ಪ್ರತ್ಯಕ್ಷ ಮತ್ತು ಪರೋಕ್ಷ ಕಾಣಿಕೆಯನ್ನು ಅಳೆಯಲಾಗದು. ತನ್ನಲ್ಲಿಗೆ ನ್ಯಾಯ ಕೊಡಿಸಿ ಎಂದು ಬಂದವರನ್ನೆಂದಿಗೂ ನಿರಾಸೆ ಮಾಡದ ಜನತಾ ಮಾಧ್ಯಮ ತನ್ನ ಸಮಯ ಮತ್ತು ಸಂಘಟನಾ ಶಕ್ತಿಗಳನ್ನು, ಕೆಲವೊಮ್ಮೆ ತನ್ನದೇ ಆದಾಯವನ್ನು ಬಳಸಿಕೊಂಡು ಹೋರಾಡುವ ‘ತನ್ನತನ’ವನ್ನು ದಶಕಗಳ ಕಾಲ ಕಾಪಾಡಿಕೊಂಡುಬಂದಿದೆ. ಈ ತನ್ನತನವನ್ನು ಕೆಲವರು ‘ಮೂರ್ಖತನ’ವೆಂದೂ ಕರೆದದ್ದುಂಟು. ಇಂಥ ಹೋರಾಟಗಳಲ್ಲಿ ಪತ್ರಿಕೆಯ ಸಂಸ್ಥಾಪಕರು ಮತ್ತು ಸಂಪಾದಕರು ಲಾಟಿ ಏಟುಗಳು, ಕೋರ್ಟ್ ಕೇಸುಗಳು, ಜೈಲುವಾಸಗಳನ್ನೂ ಬಹುಮಾನವಾಗಿ ಪಡೆದದ್ದು ಜನತಾ ಮಾಧ್ಯಮದ ಇತಿಹಾಸ ಬಲ್ಲವರಿಗೆ ಹಸಿಹಸಿ ನೆನಪುಗಳಾಗಿ ಕನಿಷ್ಠ ಇನ್ನೊಂದು ದಶಕವಾದರೂ ಕಾಡಲಿವೆ.

ಇದನ್ನು ಓದಿದ್ದೀರಾ?: ಮೀಸಲಾತಿ ಬಗ್ಗೆ ಮಾತನಾಡುವ ಮೊದಲು ತಮ್ಮ ಕುಟುಂಬದ ರಾಜಕೀಯ ಇತಿಹಾಸವನ್ನೊಮ್ಮೆ ನೋಡಿಕೊಳ್ಳಲಿ

ಹಾಸನ ಜಿಲ್ಲೆಯ ಜನತೆಗೆ ಯಾವುದೇ ಸುಣ್ಣಬಣ್ಣ ಬಳಿಯದ ನಿಷ್ಠೂರಸತ್ಯವನ್ನು ಹೊತ್ತು ‘ಕಪ್ಪು-ಬಿಳುಪಿ’ನಲ್ಲೆ ಇನ್ನೂ ತಲುಪುತ್ತಿರುವ ಅಚ್ಚರಿಯೇ ಜನತಾ ಮಾಧ್ಯಮ. ಅಚ್ಚರಿ ಏಕೆಂದರೆ, ರಾಜಿ ಪತ್ರಿಕೋದ್ಯಮ, ಓಲೈಕೆ ಪತ್ರಿಕೋದ್ಯಮ, ಅತಿರಂಜಿತ ಪತ್ರಿಕೋದ್ಯಮ, ರೋಚಕ ಪತ್ರಿಕೋದ್ಯಮ, ಎಂಜಲು ಪತ್ರಿಕೋದ್ಯಮ, ಪೀತ ಪತ್ರಿಕೋದ್ಯಮಗಳೆಂಬ ಪ್ರಚಲಿತ ಆಮಿಷಗಳಿಂದ ದೂರ ಉಳಿದಿರುವುದು. ಈ ಅಚ್ಚರಿಗೆ ಮತ್ತೊಂದು ಕಾರಣ ಜನತಾ ಮಾಧ್ಯಮದ ಧೋರಣೆಗಳನ್ನು ಐವತ್ತು ವರ್ಷದಿಂದ ಅಪಾರವಾಗಿ ಪ್ರೀತಿಸುತ್ತಿರುವ, ಗೌರವಿಸುತ್ತಿರುವ ಮತ್ತು ಬೆಂಬಲಿಸುತ್ತಿರುವ ಹಾಸನ ಜಿಲ್ಲೆಯ ಜನತೆ.

ಯಾವುದೇ ಪಕ್ಷದ, ಯಾವುದೇ ಕಂಪೆನಿಯ ‘ಮಡಿಲಮಾಧ್ಯಮ’ವೋ, ಲೌಡ್ ಸ್ಪೀಕರ್ರೋ ಆಗದಂತೆ ಜನಪರನಿಷ್ಠೆಯನ್ನು ಜತನವಾಗಿ ಕಾಪಾಡಿಕೊಂಡು ಬಂದಿರುವ ಜನತಾ ಮಾಧ್ಯಮಕ್ಕೂ ಹಾಸನದ ಜನತೆಗೂ ಇರುವ ಅವಿನಾಭಾವ ಸಂಬಂಧ ಬಹುಮುಖಿ. ವೈಚಾರಿಕವೂ ಹೌದು; ಬೌದ್ಧಿಕ- ಭಾವನಾತ್ಮಕವೂ ಹೌದು. ಶ್ರೀಮಂತರ, ಕಾರ್ಪೊರೇಟ್ ಉದ್ಯಮಿಗಳ, ರಾಜಕಾರಣಿಗಳ ಬೆಂಬಲವಿರುವ ರಾಜ್ಯ-ರಾಷ್ಟ್ರೀಯ ಪತ್ರಿಕೆಗಳೂ ದಶಕಗಳ ಕಾಲ ಶತಪ್ರಯತ್ನ ಪಟ್ಟರೂ ಜನತಾ ಮಾಧ್ಯಮ ಪಾಲಿಸಿರುವಂಥ ಪತ್ರಿಕಾಧರ್ಮವನ್ನು ಪಾಲಿಸಲು ಹಿಂದೆಂದಿಗಿಂತಲೂ ಇಂದು ಸೋತಿವೆ. ನಿಜ ಹೇಳಬೇಕೆಂದರೆ ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಅಭ್ಯಸಿಸುತ್ತಿದ್ದಾಗ ನಾನು ಕನಸಿದಂತ ಆದರ್ಶ ಪತ್ರಿಕೆ ಈ ಜನತಾ ಮಾಧ್ಯಮದಂತೇ ಇತ್ತು!

Janatha madhyama1

ಜಿಲ್ಲಾ ಮಟ್ಟದ ಪತ್ರಿಕೆಯಾದರೂ ಅಪ್ರಜ್ಞಾಪೂರ್ವಕವಾಗಿ ಒಂದು ಪತ್ರಿಕೋದ್ಯಮ ವಿಶ್ವವಿದ್ಯಾಲಯದಂತೆಯೇ ಕಾರ್ಯ ನಿರ್ವಹಿಸುತ್ತಿರುವ ಜನತಾ ಮಾಧ್ಯಮದಲ್ಲಿ ಕಲಿತವರು ಎತ್ತರಕ್ಕೆ ಏರಿದ್ದಾರೆ; ತಾವೇ ಸ್ವತಂತ್ರ ಪತ್ರಿಕೆಗಳನ್ನು ಸ್ಥಾಪಿಸಿ ಯಶಸ್ವಿಯೂ ಆಗಿದ್ದಾರೆ. ಕಿರಿಯ ಬರಹಗಾರರ ಆಡುಂಬೋಲದಂತೆ ಜನತಾ ಮಾಧ್ಯಮ ನೀಡಿದ ಪ್ರೋತ್ಸಾಹದಿಂದ ಹಲವರು ಈಗ ನಾಡಿನ ಪ್ರಸಿದ್ಧ ಬರಹಗಾರರಾಗಿ, ಪತ್ರಕರ್ತರಾಗಿ, ಸಾಹಿತಿಗಳಾಗಿ ರೂಪುಗೊಂಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಮಿಂಚಿದ್ದಾರೆ. ಸ್ವತಃ ನಾನೇ ಜನತಾ ಮಾಧ್ಯಮಕ್ಕೆ ಬರೆದಿದ್ದೇನೆ; ಹಲವು ಉತ್ತಮ ಲೇಖನಗಳನ್ನು ಅನುವಾದ ಕೂಡ ಮಾಡಿದ್ದೇನೆ. ಈ ಉತ್ತೇಜನದಿಂದ ಅಪರೂಪಕ್ಕೊಮ್ಮೆ ಬರೆಯುವ ನನ್ನ ಲೇಖನಗಳ ಶೈಲಿಯೂ ಗುಣಾತ್ಮಕ ಬದಲಾವಣೆಯನ್ನು ಕಂಡಿದೆ.

ಇಡೀ ಪ್ರಪಂಚವನ್ನೇ ನಡುಗಿಸಿದ, ನಲುಗಿಸಿದ ಕೊರೋನಾ ಪಿಡುಗಿನಿಂದುಂಟಾದ ಆರ್ಥಿಕ ಮತ್ತಿತರ ಸಂಕಷ್ಟದ ಸಮಯದಲ್ಲೂ ಜನತಾ ಮಾಧ್ಯಮ ತನ್ನ ಓದುಗರ ಮೇಲಿನ ಬದ್ಧತೆಯಿಂದಾಗಿ ಪ್ರಕಟಣೆಯನ್ನು ನಿಲ್ಲಿಸಲಿಲ್ಲ! ದಿನನಿತ್ಯದ ಸಾವು-ನೋವು-ಲಾಕ್‌ ಡೌನ್‌ಗಳ ಮಧ್ಯೆ ಪತ್ರಿಕೆಯನ್ನು ಉಳಿಸಿಕೊಳ್ಳಲು ಸಂಪಾದಕರು ಮತ್ತು ಸಂಸ್ಥಾಪಕರ ತ್ರಿವಿಕ್ರಮ ಸಾಹಸದ ಅರಿವು ನನ್ನ ಗಮನಕ್ಕೆ ಬಂದಿತ್ತು. ಅವರು ಕೋರೋನಾ ಸಮಯದ ಹಲವು ತಿಂಗಳುಗಳ ತಮ್ಮ ಮಾಸಿಕ ವೇತನವನ್ನೇ ಸಿಬ್ಬಂದಿಯ ಸಂಬಳ ನೀಡಲು ಬಳಸಿದ ಘಟನೆ ನನ್ನ ಮೆಚ್ಚುಗೆಗೂ ಪಾತ್ರವಾಗಿತ್ತು.

ಜನತಾ ಮಾಧ್ಯಮವನ್ನು ಮುಗಿಸಲು ಜಿಲ್ಲೆಯ ಎಲ್ಲಾ ಪಕ್ಷಗಳ ಹತ್ತುಹಲವು ಘಟಾನುಘಟಿ ರಾಜಕಾರಣಿಗಳು ಪ್ರಯತ್ನಿಸಿದ್ದರೂ ಅದು ‘ಬೆಳೆಯುತ್ತಲೇ ಉಳಿಯುತ್ತಿದೆ; ಅಥವಾ ಉಳಿಯುತ್ತಲೇ ಬೆಳೆಯುತ್ತಿದೆ’. ದಶಕಗಳ ಕಾಲ ಅದರಲ್ಲೂ ಚುನಾವಣೆಯಲ್ಲಿ ಸೋತಾಗ, ಹಗಲಿರುಳೆನ್ನದೆ ಜನತಾ ಮಾಧ್ಯಮ ಕಚೇರಿಯ ಕುರ್ಚಿಯಲ್ಲಿ ಕಾಲಕ್ಷೇಪ ಮಾಡುತ್ತಲೇ ತಮ್ಮ ರಾಜಕೀಯ ಬೆಳವಣಿಗೆಯನ್ನು ಮಾಡಿಕೊಂಡಿದ್ದ ವೃತ್ತಿಪರ ರಾಜಕಾರಣಿಯೊಬ್ಬರು ತಮ್ಮ ಬೆಂಬಲಿಗರು ಪತ್ರಿಕೆಯ ಕಚೇರಿಯಲ್ಲಿ ದಾಂಧಲೆ ಎಬ್ಬಿಸಲು ಪ್ರಯತ್ನಿಸಿದಾಗಲೂ ಅದನ್ನು ಮನಃಪೂರ್ವಕವಾಗಿ ಖಂಡಿಸದಿರುವುದು ಜನತಾ ಮಾಧ್ಯಮಕ್ಕೆ ಬರೀ ನೆನಪು. ಆದರೆ ಅವರಿಗೆ ಕಪ್ಪು ಚುಕ್ಕೆ.

ಜನತಾ ಮಾಧ್ಯಮದಿಂದ ಹಲವರು ಬೆಳೆದಿದ್ದಾರೆ; ಅದರ ಅಭೂತಪೂರ್ವ ಯಶಸ್ಸಿಗಾಗಿ ಶ್ರಮಿಸಿದ್ದಾರೆ, ಬೆಳೆದ ಕೆಲವರು ಅದನ್ನು ಮರೆತಿದ್ದಾರೆ; ಜನತಾ ಮಾಧ್ಯಮವೂ ಆ ಮರೆತವರನ್ನು ಮರೆತು 50ನೇ ವರ್ಷಕ್ಕೆ ಕಾಲಿಡುತ್ತಿದೆ.

ಹಾಸನದಲ್ಲಿ ಪ್ರಜಾವಾಣಿ ವರದಿಗಾರರಾಗಿದ್ದು ತದನಂತರ, ಮುಂಗಾರು, ಸುದ್ದಿ ಸಂಗಾತಿ ಪತ್ರಿಕೆಗಳಲ್ಲಿ ದುಡಿದು, ತಮ್ಮ ‘ಸಿನಿಮಾಯಾನ’ ಕೃತಿಗೆ ‘ಸ್ವರ್ಣ ಕಮಲ’ ಪ್ರಶಸ್ತಿ ಪಡೆದ ಡಾ. ಕೆ. ಪುಟ್ಟಸ್ವಾಮಿಯವರು 2015ರಲ್ಲಿ ಶ್ರವಣಬೆಳಗೊಳದಲ್ಲಿ ಜರುಗಿದ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾದ ಸಂದರ್ಭ ಗ್ರಂಥ ‘ಬೆಟ್ಟದ ಮೇಲಿನ ಬೆಳಕು’ವಿನಲ್ಲಿ ಜನತಾ ಮಾಧ್ಯಮದ ಬಗ್ಗೆ ಈ ರೀತಿ ದಾಖಲಿಸಿದ್ದಾರೆ:

”…ಆ ಕಾಲಕ್ಕೆ (1977) ಸಮಾಜವಾದಿ ಸಿದ್ಧಾಂತದಲ್ಲಿ ನಂಬಿಕೆಯಿಟ್ಟ ಗೆಳೆಯರು-ಹಿರಿಯರು ಕೂಡಿ ಆರಂಭಿಸಿದ ಪತ್ರಿಕೆಯು ಮಾಮೂಲಿ ಪತ್ರಿಕೆಯಾಗಿರಲಿಲ್ಲ. ಎಪ್ಪತ್ತರ ದಶಕದಲ್ಲಿ ನವ ನಿರ್ಮಾಣ ಸಮಿತಿ, ಬರಹಗಾರರ ಒಕ್ಕೂಟ, ದಲಿತ ಸಂಘರ್ಷ ಸಮಿತಿ ಮುಂತಾದ ವೈಚಾರಿಕ ಆಂದೋಲನಗಳು ಹುಟ್ಟುಹಾಕಿದ ಸಂಚಲನಗಳಿಗೆ ಮುಖವಾಣಿಯಂತೆ ಪತ್ರಿಕೆ ರೂಪುಗೊಂಡಿತ್ತು. ತುರ್ತು ಪರಿಸ್ಥಿತಿಯ ಕಾಲದಲ್ಲಿ ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಿ ಹುಟ್ಟಿಕೊಂಡ ಪತ್ರಿಕೆಗಳಲ್ಲಿ ಈಗ ಉಳಿದಿರುವವು ಕೆಲವು ಮಾತ್ರ. ಅದರಲ್ಲಿ ಜನತಾ ಮಾಧ್ಯಮವೂ ಒಂದು. ತನ್ನ ನಿಲುವಿನಲ್ಲಿ ಎಂದೂ ರಾಜಿ ಮಾಡಿಕೊಳ್ಳದೆ, ಜನಪರ ಧೋರಣೆಯನ್ನು ಉಳಿಸಿಕೊಂಡು ಬಂದಿರುವ ಈ ಪತ್ರಿಕೆ ನಮಗೆ ಪರಿಚಯವಾಗುವ ವೇಳೆಗೆ ಅಲ್ಲಿ ಪೆರಿಯಾರ್ ವಿಚಾರಧಾರೆಗಳು, ಶೂದ್ರಶಕ್ತಿಯ ಪುನಶ್ಚೇತನ, ಪುರೋಹಿತಶಾಹಿ ವಿರೋಧಿ ನೆಲೆಯ ಚರ್ಚೆಗಳು ಪ್ರಕಟವಾಗುತ್ತಿದ್ದವು. ಇಂಥದೇ ದಿಕ್ಕಿನಲ್ಲಿ ಚಲಿಸುತ್ತಿದ್ದ ನಮ್ಮಂಥವರಿಗೆ ಜನತಾ ಮಾಧ್ಯಮ ಆಪ್ಯಾಯಮಾನವಾಯಿತು. ಆ ಬಗ್ಗೆ ವಿಚಾರಿಸಿದಾಗ ತಿಳಿದದ್ದು ಇಷ್ಟು. ಹಾಸನದಲ್ಲಿ ಸಮಾನಾಸಕ್ತ ಗೆಳೆಯರು ಹುಟ್ಟುಹಾಕಿದ ಪತ್ರಿಕೆ. ಜೆ.ಪಿ, ಲೋಹಿಯಾ ವಿಚಾರಧಾರೆಗಳ ನಿಲುವಿಗೆ ಅಂಟಿಕೊಂಡಿದ್ದ ಪತ್ರಿಕೆ ಸಮಾಜದ ಕೆಳವರ್ಗಗಳ ಆಶೋತ್ತರಗಳಿಗೆ ಮಿಡಿಯುವ ಬದ್ಧತೆಯನ್ನು ಸ್ವೀಕರಿಸಿತ್ತು…”

ಇದು ಪತ್ರಿಕೋದ್ಯಮದ ಗಂಭೀರ ವಿದ್ಯಾರ್ಥಿಯಾದ ನನ್ನ ಅಭಿಪ್ರಾಯವೂ ಕೂಡ.

ಇದನ್ನು ಓದಿದ್ದೀರಾ?: ಕರ್ನಾಟಕ SIR | ಒಬ್ಬರಿಗೇ ಹಲವು ‘ವೋಟರ್ ಐಡಿ’ಗಳ ಸೃಷ್ಟಿ: ಲೋಪ ಒಪ್ಪಿಕೊಂಡ ಚುನಾವಣಾ ಕಚೇರಿ!

ಜಾಹೀರಾತುಗಳಿಗಿಂತ ಚಂದಾದಾರರ ಬೆಂಬಲದಿಂದ ಬೆಳೆಯುತ್ತಿರುವ ಜನತಾ ಮಾಧ್ಯಮದಂತೆಯೇ ಇತರೆ ಪತ್ರಿಕೆಗಳೂ ಮೌಲ್ಯಯುತ ಪತ್ರಿಕಾಧರ್ಮ ಆಚರಿಸುವುದರ ಮೂಲಕ ಯಶ ಗಳಿಸಬೇಕು ಎಂಬುದು ನನ್ನ ಆಶಯ. ಹಾಸನ ಜಿಲ್ಲೆಯ ಎಲ್ಲಾ ಪತ್ರಿಕೆಗಳ ಆತ್ಮವೇ ಜನತಾ ಮಾಧ್ಯಮ. ಆ ಆತ್ಮ ಸದಾ ಜೀವನೋತ್ಸಾಹದಿಂದ ಮಾನವೀಯ ಮೌಲ್ಯಗಳಿಗಾಗಿ, ನ್ಯಾಯಕ್ಕಾಗಿ ತುಡಿಯಲಿ. ‘ದಾರಿ ತಪ್ಪಿರುವ’ ಕೆಲ ರಾಷ್ಟ್ರೀಯ ಪತ್ರಿಕೆಗಳು ಮತ್ತು ವಿದ್ಯುನ್ಮಾನ ಮಾಧ್ಯಮಗಳ ಸದ್ಯದ ನಡವಳಿಕೆಗಳನ್ನು ನೋಡಿದರೆ ಜನತಾ ಮಾಧ್ಯಮದಂತ ಸಣ್ಣ ಪತ್ರಿಕೆಯ ನೈತಿಕತೆ ಅವರಿಗೆ ಮಾದರಿಯಾಗಬೇಕಾದ ಅವಶ್ಯಕತೆಯಿದೆ.

ಐವತ್ತರ ಹೊಸ್ತಿಲಲ್ಲಿಯೂ ಪತ್ರಿಕೋದ್ಯಮದಲ್ಲಿ ಇಂಥ ನೈತಿಕತೆಯನ್ನು ಕಾಪಾಡಿಕೊಂಡು ಬಂದಿರುವ ಜನತಾ ಮಾಧ್ಯಮಕ್ಕೆ ತನ್ನ ಬಗ್ಗೆ ತಾನೇ ಬರೆದುಕೊಳ್ಳಲೂ ಹಿಂಜರಿಕೆ ಏಕೆ? ಈ ಅಪರೂಪದ ಮೈಲಿಗಲ್ಲನ್ನು ವರ್ಷ ಪೂರ್ತಿ ವೈವಿಧ್ಯಮಯವಾಗಿ ಸಂಭ್ರಮಿಸಲು ಜನತಾ ಮಾಧ್ಯಮ ಬಳಗವನ್ನು ನಿಷ್ಠ ಓದುಗನಾಗಿ ಆಗ್ರಹಿಸುತ್ತೇನೆ.

ಪ್ರತಿದಿನ ಮುಂಜಾವಿನ ಮಬ್ಬಿನಲ್ಲಿ ಸತ್ಯದ ಕಿಡಿಯನ್ನು ಹೊತ್ತಿಸಿ ಮನೆ-ಮನ ತಲುಪಿಸುವ ಕೆಲಸ ಮಾಡುತ್ತಿರುವ ಜನತಾ ಮಾಧ್ಯಮದ ಸಂಪಾದಕ ವರ್ಗ ಮತ್ತು ಅದರ ಸಿಬ್ಬಂದಿಯ ಶ್ರಮ ಮತ್ತು ಪ್ರಾಮಾಣಿಕತೆ ಅನನ್ಯ. ಅವರೆಲ್ಲರಿಗೂ ಶುಭಾಶಯಗಳು.

ನಿಷ್ಠ ಓದುಗರ ಗರಿಷ್ಠ ಬೆಂಬಲ ನಿರಂತರವಾಗಿದ್ದರೆ ಪತ್ರಿಕೋದ್ಯಮದ ಹೊಸ ಹೊಸ ಸವಾಲುಗಳನ್ನು ಸ್ವೀಕರಿಸುತ್ತಾ, ಹೊಸ ಹೊಸ ಮಜಲುಗಳನ್ನು ದಾಟುತ್ತಾ ಶತ’ಮಾನ’ದ ಸಂಭ್ರಮವೂ ಜನತಾ ಮಾಧ್ಯಮಕ್ಕೆ ಲಭಿಸಬಲ್ಲುದು. ಅಲ್ಲಿಯವರೆಗೂ ಹಾಸನ ಜಿಲ್ಲೆಯ ಓದುಗರು ಅದರ ಕೈಹಿಡಿಯುತ್ತಾರೆಂಬ ಗಟ್ಟಿ ನಂಬಿಕೆ ನನ್ನದು.

ಎಸ್. ಎನ್. ಲಕ್ಷ್ಮೀನಾರಾಯಣ
ಮೊಬೈಲ್: +೯೧ ೯೪೪೯೮೩೦೬೩೬
ಪದಸಂಖ್ಯೆ: ೯೧೭

ಎಸ್.ಎನ್.‌ ಲಕ್ಷ್ಮೀನಾರಾಯಣ
ಎಸ್.ಎನ್. ಲಕ್ಷ್ಮೀನಾರಾಯಣ
+ posts

ಲೇಖಕ, ಪತ್ರಕರ್ತ. ಕೃಷಿ, ಕ್ರೀಡೆ, ವಿಜ್ಞಾನ ಮತ್ತು ವೈಚಾರಿಕ ಬರವಣಿಗೆಗಳತ್ತ ಒಲವು. ನಿವೃತ್ತ ಕೃಷಿ ಅಧಿಕಾರಿ. ಅಗ್ರಿ ಪ್ಲೇಸ್‌ಮೆಂಟ್ ಕನ್ಸಲ್ಟೆನ್ಸಿ ‌ಸಂಸ್ಥೆ ಸ್ಥಾಪಕರು. ರೈತ ಚಳವಳಿಯಲ್ಲಿ ಭಾಗಿ. ಲೇಖನಗಳ ಸಂಗ್ರಹ ʼಕೀಟಲೆಯ ದಿನಗಳುʼ ಕೃತಿ ಪ್ರಕಟ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಎಸ್.ಎನ್. ಲಕ್ಷ್ಮೀನಾರಾಯಣ
ಎಸ್.ಎನ್. ಲಕ್ಷ್ಮೀನಾರಾಯಣ
ಲೇಖಕ, ಪತ್ರಕರ್ತ. ಕೃಷಿ, ಕ್ರೀಡೆ, ವಿಜ್ಞಾನ ಮತ್ತು ವೈಚಾರಿಕ ಬರವಣಿಗೆಗಳತ್ತ ಒಲವು. ನಿವೃತ್ತ ಕೃಷಿ ಅಧಿಕಾರಿ. ಅಗ್ರಿ ಪ್ಲೇಸ್‌ಮೆಂಟ್ ಕನ್ಸಲ್ಟೆನ್ಸಿ ‌ಸಂಸ್ಥೆ ಸ್ಥಾಪಕರು. ರೈತ ಚಳವಳಿಯಲ್ಲಿ ಭಾಗಿ. ಲೇಖನಗಳ ಸಂಗ್ರಹ ʼಕೀಟಲೆಯ ದಿನಗಳುʼ ಕೃತಿ ಪ್ರಕಟ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕರ್ನಾಟಕ SIR | ಒಬ್ಬರಿಗೇ ಹಲವು ‘ವೋಟರ್ ಐಡಿ’ಗಳ ಸೃಷ್ಟಿ: ಲೋಪ ಒಪ್ಪಿಕೊಂಡ ಚುನಾವಣಾ ಕಚೇರಿ!

ಮಹದೇವಪುರ ಕ್ಷೇತ್ರದಲ್ಲಿ ಕೇವಲ 397 ಮಂದಿಯ ಹೆಸರಿನಲ್ಲಿ 803 ಮತದಾರರ ಗುರುತಿನ...

ಆ್ಯಂಬುಲೆನ್ಸ್ ನೀಡದೆ 5 ಗಂಟೆ ವಿಳಂಬ: ಆಸ್ಪತ್ರೆಯ ಹೊಣೆಗೇಡಿತನಕ್ಕೆ 15 ಲಕ್ಷ ರೂ. ಪರಿಹಾರ ಆದೇಶ

ಆಸ್ಪತ್ರೆಯ ನಿರ್ಲಕ್ಷ್ಯ, ತುರ್ತು ಸೇವೆಯ ಕೊರತೆ ಮತ್ತು ಸಕಾಲದಲ್ಲಿ ಆ್ಯಂಬುಲೆನ್ಸ್ ಒದಗಿಸದೆ...

‘ರಾಮಾಯಣ’ ಬಜೆಟ್‌ನ ಕೇವಲ ಶೇ. 9ರಷ್ಟು ವೆಚ್ಚದಲ್ಲಿ ನಿರ್ಮಾಣ: ಅಮೆರಿಕದಲ್ಲಿ ‘ಯಶ್‌’ ಚಿತ್ರವನ್ನೇ ಹಿಂದಿಕ್ಕಿದ ‘ಗಾಡ್ಜಿಲ್ಲಾ’

ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಎರಡು ಚಿತ್ರಗಳ ನಡುವೆ ಕುತೂಹಲಕಾರಿ ಪೈಪೋಟಿ ಏರ್ಪಟ್ಟಿದ್ದು,...

ಭಾಲ್ಕಿ | ಕನ್ನಡ ಸೇವೆಗೆ ಸಂದ ಗೌರವ ಸಂತಸ ತಂದಿದೆ

ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯೋತ್ಸವ ಕನ್ನಡ ಸೇವಾ ಪ್ರಶಸ್ತಿಗೆ ಭಾಜನರಾದ ನಮ್ಮ...