ತಮ್ಮ ವಿರುದ್ಧ ಸಾಲು ಸಾಲು ಆರೋಪಗಳು, ವಿವಾದಾತ್ಮಕ ನಿರ್ಧಾರಗಳು ಹಾಗೂ ಗಂಭೀರ ರಾಜಕೀಯ ಆಪಾದನೆಗಳ ನಡುವೆಯೂ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ರಾಜಕೀಯ ದುಂಡಾವರ್ತನೆಯನ್ನು ಮತ್ತೊಮ್ಮೆ ಜಗತ್ತಿನ ಮುಂದೆ ಪ್ರದರ್ಶಿಸಿದ್ದಾರೆ. ಸಿಬಿಎಸ್ ನೆಟ್‌ವರ್ಕ್‌ನ ಪ್ರಸಿದ್ಧ ‘60 ಮಿನಿಟ್ಸ್’ ಕಾರ್ಯಕ್ರಮದಲ್ಲಿ ಪತ್ರಕರ್ತ ರೋಸ್ ಡೌಥಾಟ್ ನಡೆಸಿದ ಸಂದರ್ಶನದಲ್ಲಿ, “ತಮ್ಮ ರಾಜಕೀಯ ವಿರೋಧಿಗಳನ್ನು ಸತ್ತ ಮೇಲಾದರೂ ಕ್ಷಮಿಸುತ್ತೀರಾ” ಎಂಬ ಪ್ರಶ್ನೆಗೆ ಟ್ರಂಪ್ ನೀಡಿದ ಉತ್ತರ ‘”‘ಇಲ್ಲ, ನಾನು ಕ್ಷಮಿಸುವುದಿಲ್ಲ’ ಎಂಬ ಹೇಳಿಕೆ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇನ್ನು, ಸಾವು ಮತ್ತು ಮರಣೋತ್ತರ ಜೀವನದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಟ್ರಂಪ್, “ಜನರು ನನ್ನನ್ನು ನೆನಪಿಸಿಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ. ನಾನು ಧಾರ್ಮಿಕ ವ್ಯಕ್ತಿ, ನಿಯಮಗಳ ಪ್ರಕಾರ ನರಕಕ್ಕೆ ಹೋಗದೆ ಸ್ವರ್ಗ ಸೇರುತ್ತೇನೆಂಬ ಭರವಸೆಯಿದೆ” ಎಂದಿದ್ದಾರೆ. “ಸ್ವರ್ಗ ಪ್ರವೇಶಿಸಲು ನ್ಯಾನ್ಸಿ ಪೆಲೋಸಿ ಅಥವಾ ಜೇಮ್ಸ್ ಕೊಮೆಯಂತಹ ನಿಮ್ಮ ರಾಜಕೀಯ ವೈರಿಗಳನ್ನು ಕ್ಷಮಿಸಲು ಸಾಧ್ಯವೇ?” ಎಂಬ ನೇರ ಪ್ರಶ್ನೆಗೆ, “ಖಂಡಿತ ಇಲ್ಲ. ನಾನು ಸತ್ಯ ಹೇಳುತ್ತೇನೆ – ನನ್ನ ವೈರಿಗಳನ್ನು ನಾನು ದ್ವೇಷಿಸುತ್ತೇನೆ, ಎಂದಿಗೂ ಅವರನ್ನು ಕ್ಷಮಿಸಲು ಸಾಧ್ಯವಿಲ್ಲ” ಎಂದು ಬಹಿರಂಗವಾಗಿ ಹೇಳಿದರು.
ಈ ಹೇಳಿಕೆಯು ಟ್ರಂಪ್ ಅವರ ಧಾರ್ಮಿಕ ಮತ್ತು ನೈತಿಕ ನಿಲುವಿನ ಮೇಲಷ್ಟೇ ಅಲ್ಲದೆ, ಅವರ ರಾಜಕೀಯ ಶೈಲಿಯ ಮೇಲೆಯೂ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯನ್ನು ನೆಟ್ಟಿದೆ.
ಟ್ರಂಪ್ ರಾಜಕೀಯ ಜೀವನ ಕೇವಲ ವೈಯಕ್ತಿಕ ಹೇಳಿಕೆಗಳಿಗೆ ಸೀಮಿತವಾಗಿಲ್ಲ. ವಿದೇಶಾಂಗ ನೀತಿಯಲ್ಲಿ ಅವರು ಕೈಗೊಂಡ ನಿರ್ಧಾರಗಳು, ವಿಶೇಷವಾಗಿ ಮಧ್ಯಪ್ರಾಚ್ಯದಲ್ಲಿ ಭಾರಿ ರಕ್ತಪಾತಕ್ಕೆ ಕಾರಣವಾಗಿವೆ ಎಂಬ ಗಂಭೀರ ಆರೋಪಗಳಿವೆ.
ಗಾಜಾ ಮೇಲಿನ ಇಸ್ರೇಲ್ ದಾಳಿಯನ್ನು ಬಹಿರಂಗವಾಗಿ ಎತ್ತಿಕಟ್ಟಿದ ಹಾಗೂ ಮಿಲಿಟರಿ ನೆರವನ್ನು ಹೆಚ್ಚಿಸಿದ ಕುಖ್ಯಾತಿ ಟ್ರಂಪ್ ಆಡಳಿತಕ್ಕೆ ಸಲ್ಲುತ್ತದೆ. ಇಸ್ರೇಲ್ ಪಡೆಗಳು ಗಾಜಾದಲ್ಲಿ ನಡೆಸಿದ ಸತತ ದಾಳಿಗೆ ಸಾವಿರಾರು ಅಮಾಯಕ ನಾಗರಿಕರು, ಮಕ್ಕಳು ಬಲಿಯಾಗಿದ್ದು, ಇಡೀ ಪ್ರದೇಶ ಸರ್ವನಾಶವಾಗಿದೆ. ಈ ಮಾನವೀಯ ಬಿಕ್ಕಟ್ಟಿಗೆ ಟ್ರಂಪ್ ಅವರ ಏಕಪಕ್ಷೀಯ ಇಸ್ರೇಲ್ ಪರ ನೀತಿಯೇ ಮೂಲ ಕಾರಣ ಎಂದು ವಿಶ್ವಸಂಸ್ಥೆ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಹಕ್ಕುಗಳ ಸಂಘಟನೆಗಳು ಆರೋಪಿಸಿವೆ. ಚುನಾವಣಾ ಫಲಿತಾಂಶವನ್ನು ಅಸಿಂಧುಗೊಳಿಸಲು ಬೆಂಬಲಿಗರನ್ನು ಪ್ರಚೋದಿಸಿದ ಆರೋಪ ಟ್ರಂಪ್ ಮೇಲಿದೆ.
=ತಮ್ಮ ಅಧಿಕಾರಾವಧಿಯಲ್ಲಿ ರಾಜಕೀಯ ವೈರಿಗಳ ವಿರುದ್ಧ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡಿದ್ದು ಮತ್ತು ಎರಡು ಬಾರಿ ಮಹಾಭಿಯೋಗ ಎದುರಿಸಿದ್ದರು. ಅಮೆರಿಕವನ್ನು ಜನಾಂಗೀಯ ಹಾಗೂ ರಾಜಕೀಯವಾಗಿ ಇಬ್ಬಾಗ ಮಾಡಿ, ದ್ವೇಷ ಭಾಷಣಗಳನ್ನು ಉತ್ತೇಜಿಸಿದ ಆರೋಪವೂ ಟ್ರಂಪ್ ಮೇಲಿದೆ.
ಒಬ್ಬ ದೇಶದ ಅತ್ಯುನ್ನತ ನಾಯಕ ಸತ್ತ ಮೇಲೆಯೂ ತಾನು ಯಾರನ್ನೂ ಕ್ಷಮಿಸುವುದಿಲ್ಲ ಎಂದು ಬಹಿರಂಗವಾಗಿ ಹೇಳುವುದು, ಅವರ ಆಡಳಿತ ಶೈಲಿಯ ಪ್ರತಿಬಿಂಬವಾಗಿದೆ. ಗಾಜಾದಲ್ಲಿನ ರಕ್ತಪಾತದಿಂದ ಹಿಡಿದು ಅಮೆರಿಕದ ಒಳಗಿನ ರಾಜಕೀಯ ಸಂಘರ್ಷಗಳವರೆಗೆ, ಟ್ರಂಪ್ ಅವರ ‘ಕ್ಷಮೆಯಿಲ್ಲದ’ ಧೋರಣೆಯೇ ಅವರ ಆಡಳಿತದ ಮುಖ್ಯ ಗುರಿಯಾಗಿದೆ ಎಂಬುದನ್ನು ಈ ಸಂದರ್ಶನ ಸಾಬೀತುಪಡಿಸಿದೆ.




