ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ಮದ್ಯ ಸೇವಿಸಿ ಮನೆಗೆ ಬಂದ ಪತಿ, ಪತ್ನಿ ಹೂವು ಕೇಳಿದಕ್ಕೆ ಜಗಳವಾಡಿ, ಪತ್ನಿಯ ಹೊಟ್ಟೆಯ ಕೆಳಭಾಗಕ್ಕೆ ಡಬ್ಬಣದಿಂದ ಚುಚ್ಚಿ ಗಾಯಗೊಳಿಸಿದ ಘಟನೆ ಅ. 26ರ ರಾತ್ರಿ ನಡೆದಿದೆ. ಶಿವಮ್ಮ (42) ಗಾಯಗೊಂಡ ಮಹಿಳೆ. ಅವರ ಪತಿ ಉಮೇಶ ದೇಸಾಯಿ ಮದ್ಯ ಸೇವಿಸಿ ಮನೆಗೆ ಬಂದಾಗ ಈ ಘಟನೆ ನಡೆದಿದೆ ಎಂದು ಶಿವಮ್ಮ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಅ. 26ರಂದು ರಾತ್ರಿ ಸುಮಾರು 9.30ರ ವೇಳೆಗೆ ಶಿವಮ್ಮ ಅವರು ಮಕ್ಕಳಾದ ಅಂಕಿತಾ, ಆದಿತ್ಯ ಹಾಗೂ ಅತ್ತೆ ಚನ್ನಮ್ಮ ಅವರೊಂದಿಗೆ ಮನೆಯಲ್ಲಿದ್ದರು. ಈ ವೇಳೆ ಮನೆಗೆ ಬಂದ ಉಮೇಶ, ದೇವರ ಪೂಜೆ ಮಾಡಲು ಎರಡು ಹೂವು ಕೊಡುವಂತೆ ಪತ್ನಿಯನ್ನು ಕೇಳಿದ್ದಾನೆ. ಆದರೆ, ಮದ್ಯ ಸೇವಿಸಿ ಬಂದಿದ್ದರಿಂದ ಸುಮ್ಮನಿರುವಂತೆ ಶಿವಮ್ಮ ಹೇಳಿದ್ದಾರೆ ಎನ್ನಲಾಗಿದೆ.
ಇದರಿಂದ ಸಿಟ್ಟಾದ ಉಮೇಶ, ಹೂವು ಕೇಳಿದರೆ ಕೊಡಲ್ವಾ ಎಂದು ಜಗಳವಾಡಿ, ಕೈಯಲ್ಲಿದ್ದ ಡಬ್ಬಣದಿಂದ ಪತ್ನಿಯ ಹೊಟ್ಟೆಯ ಕೆಳಭಾಗಕ್ಕೆ ಚುಚ್ಚಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಗಾಯಗೊಂಡ ಶಿವಮ್ಮ ಕಿರುಚಿಕೊಂಡಾಗ, ಪಕ್ಕದಲ್ಲಿದ್ದ ಅತ್ತೆ ಚನ್ನಮ್ಮ ಹಾಗೂ ಉಮೇಶನ ಅಣ್ಣ ಗೋಪಾಲ ಅವರು ಓಡಿ ಬಂದು ಮತ್ತಷ್ಟು ಹಲ್ಲೆಯಾಗದಂತೆ ತಡೆದಿದ್ದಾರೆ ಎನ್ನಲಾಗಿದೆ. ಬಳಿಕ ಉಮೇಶ, ಪತ್ನಿಗೆ ಜೀವ ಬೆದರಿಕೆ ಹಾಕಿ ಅಲ್ಲಿಂದ ಹೊರಗೆ ಹೋಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಗಾಯಗೊಂಡ ಶಿವಮ್ಮ ಅವರನ್ನು ಗೋಪಾಲ ಹಾಗೂ ಗ್ರಾಮದ ಶಿವಾಜಿ ಅವರು ಆಂಬ್ಯುಲೆನ್ಸ್ ಮೂಲಕ ಮುಂಡಗೋಡ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಚಿಕಿತ್ಸೆ ಪಡೆದ ಬಳಿಕ ಅವರು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಘಟನೆ ಕುರಿತು ಕುಟುಂಬದವರು ಚರ್ಚಿಸಿ ಬಳಿಕ ಪತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಶಿವಮ್ಮ ಅವರು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.





