ಎಸ್ಐಆರ್ ಮುಗಿದಿದೆ, ಅಂತಿಮ ಮತದಾರರ ಪಟ್ಟಿಯೂ ಪ್ರಕಟವಾಗಿದೆ. ಆದರೆ ಉತ್ತರ ಸಿಗದ ಪ್ರಶ್ನೆಗಳಿನ್ನೂ ಬಾಕಿ ಇವೆ. ಲಕ್ಷಾಂತರ ಬಾಂಗ್ಲಾದೇಶಿ ನುಸುಳುಕೋರರಿದ್ದಾರೆಂದ ಆರೋಪಗಳಿಗೆ ಪುರಾವೆಗಳೆಲ್ಲಿ? ಫಾರ್ಮ್-7 ಅರ್ಜಿಗಳ ದುರ್ಬಳಕೆಯ ಕತೆ ಎಲ್ಲಿಗೆ ಬಂತು? ಎಸ್ಐಆರ್ ಹೆಸರಿನಲ್ಲಿ ಅರ್ಹರ ಹಕ್ಕು ಕಸಿಯುವ ಪ್ರಯತ್ನ ನಡೆದಿದ್ದರೆ ಅದಕ್ಕೆ ಹೊಣೆ ಯಾರು? ಪಾರದರ್ಶಕ ಲೆಕ್ಕ, ಆಧಾರರಹಿತ ಆರೋಪಗಳಿಗೆ ಉತ್ತರ ಮತ್ತು ಅಕ್ರಮ ಸಾಬೀತಾದರೆ ಕಠಿಣ ಕ್ರಮ, ಇವುಗಳಿಲ್ಲದೆ ಈ ಪ್ರಕ್ರಿಯೆ ಮುಗಿಯುವುದಿಲ್ಲ.
ಕರ್ನಾಟಕದಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಮುಗಿದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಿದೆ. ಮತದಾರರ ಪಟ್ಟಿ ಶುದ್ಧೀಕರಿಸುವುದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಅಗತ್ಯವೇ. ಸತ್ತವರ ಹೆಸರುಗಳು, ಒಂದಕ್ಕಿಂತ ಹೆಚ್ಚು ಕಡೆ ನೋಂದಣಿಯಾಗಿರುವ ಹೆಸರುಗಳು, ಸ್ಥಳಾಂತರಗೊಂಡವರ ವಿವರಗಳನ್ನು ಪರಿಶೀಲಿಸಿ ಪಟ್ಟಿಯನ್ನು ನವೀಕರಿಸುವುದರಲ್ಲಿ ಯಾರಿಗೂ ಆಕ್ಷೇಪವಿರಬೇಕಿಲ್ಲ. ಆದರೆ, ಈ ಪ್ರಕ್ರಿಯೆಯ ಹೆಸರಿನಲ್ಲಿ ನಡೆದಿರುವ ರಾಜಕೀಯ ದೊಂಬರಾಟಗಳು, ಅರ್ಜಿಗಳ ದುರ್ಬಳಕೆಯ ವಿವಾದ ಮತ್ತು ಮತದಾರರ ಹಕ್ಕಿನ ಕುರಿತ ಆತಂಕಗಳಿಗೆ ಸಮರ್ಪಕ ಉತ್ತರ ಸಿಗದೆ ಹೋದರೆ, ಅಂತಿಮ ಪಟ್ಟಿ ಪ್ರಕಟವಾಗಿದೆ ಎಂಬ ಕಾರಣಕ್ಕೆ ಎಲ್ಲವೂ ಮುಗಿದುಹೋದಂತಾಗುವುದಿಲ್ಲ.
ಜೂನ್ 16ರಂದು ಕರ್ನಾಟಕದ ಮತದಾರರ ಪಟ್ಟಿಯಲ್ಲಿ 5,54,32,314 ಮತದಾರರಿದ್ದರು. ಅಕ್ಟೋಬರ್ 27ರಂದು ಪ್ರಕಟವಾದ ಅಂತಿಮ ಪಟ್ಟಿಯಲ್ಲಿ ಈ ಸಂಖ್ಯೆ 4,55,00,011ಕ್ಕೆ ಇಳಿದಿದೆ. ಅಂದರೆ, ಹಿಂದಿನ ಪಟ್ಟಿಗೆ ಹೋಲಿಸಿದರೆ 99,32,303 ಮತದಾರರ ಹೆಸರನ್ನು ಕೈಬಿಡಲಾಗಿದೆ. ಈ ವ್ಯತ್ಯಾಸ ಸಾಮಾನ್ಯ ಸಂಗತಿಯಲ್ಲ. ಇಷ್ಟು ದೊಡ್ಡ ಪ್ರಮಾಣದ ಬದಲಾವಣೆಗೆ ಕಾರಣಗಳೇನು ಎಂಬುದನ್ನು ಜನರಿಗೆ ಸ್ಪಷ್ಟವಾಗಿ ತಿಳಿಸುವ ಹೊಣೆಗಾರಿಕೆ ಚುನಾವಣಾ ಆಯೋಗಕ್ಕಿದೆ.
ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಸತ್ತವರು, ಸ್ಥಳಾಂತರಗೊಂಡವರು, ಪತ್ತೆಯಾಗದವರು, ಒಂದಕ್ಕಿಂತ ಹೆಚ್ಚು ಕಡೆ ನೋಂದಣಿಯಾಗಿರುವವರು ಹಾಗೂ ಇತರ ಕಾರಣಗಳಿಂದ ಪರಿಶೀಲನೆಗೆ ಒಳಪಟ್ಟವರ ಹೆಸರುಗಳನ್ನು ಪ್ರತ್ಯೇಕವಾಗಿ ಗುರುತಿಸಲಾಗಿದೆ. ಕರಡು ಪಟ್ಟಿಯ ಸಿದ್ಧತೆಯ ಸಂದರ್ಭದಲ್ಲಿ ಸುಮಾರು 16.40 ಲಕ್ಷ ಮತದಾರರು ಮೃತಪಟ್ಟಿರುವುದಾಗಿ, 65.46 ಲಕ್ಷ ಮಂದಿ ಸ್ಥಳಾಂತರಗೊಂಡಿರುವುದಾಗಿ, 19.01 ಲಕ್ಷ ಮಂದಿ ತಮ್ಮ ನೋಂದಾಯಿತ ವಿಳಾಸದಲ್ಲಿ ಪತ್ತೆಯಾಗದಿರುವುದಾಗಿ ಮತ್ತು ಸುಮಾರು 7.10 ಲಕ್ಷ ನಕಲಿ ಅಥವಾ ಡಬಲ್ ನೋಂದಣಿಗಳಿರುವುದಾಗಿ ದಾಖಲಾಗಿತ್ತು. ಬಳಿಕ ಕರಡು ಪಟ್ಟಿಯ ಹಂತದಲ್ಲಿ ಕೈಬಿಡಲಾದ ಹೆಸರುಗಳ ಪೈಕಿ ಕೆಲವು ಅಂತಿಮ ಪಟ್ಟಿಯಲ್ಲಿ ಮರಳಿ ಸೇರ್ಪಡೆಯಾಗಿವೆ. ಹಕ್ಕು ಮತ್ತು ಆಕ್ಷೇಪಣೆಗಳ ಅವಧಿಯಲ್ಲಿ 10.08 ಲಕ್ಷಕ್ಕೂ ಅಧಿಕ ಮತದಾರರನ್ನು ಸೇರಿಸಲಾಗಿದ್ದು, 1.88 ಲಕ್ಷ ಹೆಸರುಗಳನ್ನು ಮತ್ತೆ ತೆಗೆದುಹಾಕಲಾಗಿದೆ.
ಹಾಗಾದರೆ, ನಿಜವಾಗಿಯೂ ಮೃತಪಟ್ಟ ನಾಗರಿಕರೆಷ್ಟು? ಸ್ವಂತ ಊರು ತೊರೆದು ಬೇರೆಡೆಗೆ ವಲಸೆ ಹೋದ ನೈಜ ಮತದಾರರೆಷ್ಟು? ನಕಲಿ ಹಾಗೂ ಡಬಲ್ ನೋಂದಣಿಗಳು ಎಷ್ಟೆಂಬುದನ್ನು ದೃಢಪಡಿಸಲಾಗಿದೆಯೇ? ಕೇವಲ ವಿಳಾಸದಲ್ಲಿ ಪತ್ತೆಯಾಗಲಿಲ್ಲ ಎಂಬ ನೆಪಕ್ಕೆ, ಆತುರಾತುರವಾಗಿ ಪರಿಶೀಲನೆಗೆ ಒಳಪಡಿಸಿ ಕತ್ತರಿ ಹಾಕಲಾದ ಮತಗಳ ಸಂಖ್ಯೆ ಎಷ್ಟು? ಇಷ್ಟು ದೊಡ್ಡ ಪ್ರಮಾಣದ ಡಿಲೀಷನ್ನಲ್ಲಿ, ಬಲಿಪಶುಗಳಾಗಿ ಪಟ್ಟಿಯಿಂದ ಶಾಶ್ವತವಾಗಿ ಅಳಿಸಿಹೋದವರ ಸಂಖ್ಯೆ ಎಷ್ಟು? ಈ ಪ್ರತಿಯೊಂದು ಅಂಕಿಅಂಶದ ಜಿಲ್ಲಾವಾರು ಹಾಗೂ ವಿಧಾನಸಭಾ ಕ್ಷೇತ್ರವಾರು ಸಮಗ್ರ ‘ವೈಟ್ ಪೇಪರ್’ ಲೆಕ್ಕವನ್ನು ಸಾರ್ವಜನಿಕರ ಮುಂದಿಡಬೇಕು.
ವೇದಿಕೆಗಳಲ್ಲಿ ನಿಂತು “ಲಕ್ಷಾಂತರ ಬಾಂಗ್ಲಾದೇಶಿ ನುಸುಳುಕೋರರು ಕರ್ನಾಟಕದೊಳಗೆ ನುಗ್ಗಿದ್ದಾರೆ, ರಾಜ್ಯದ ಭದ್ರತೆಗೆ ಕಂಠಕವಾಗಿದ್ದಾರೆ” ಎಂದು ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಕಂಠಶೋಷಣೆ ಮಾಡಿಕೊಂಡ ಬಿಜೆಪಿ ನಾಯಕರ ಆ ಆರೋಪಗಳಿಗೂ, ಅಂತಿಮ ಪರಿಶೀಲನೆಯಲ್ಲಿ ಸಿಕ್ಕ ಅಧಿಕೃತ ಸಾಕ್ಷ್ಯಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ಇಡೀ ರಾಜ್ಯದ 5.54 ಕೋಟಿ ಮತದಾರರನ್ನು ಸಾಲಿಡ್ ಆಗಿ ತಪಾಸಣೆ ನಡೆಸಿದ ಆಯೋಗಕ್ಕೆ ಸಿಕ್ಕಿದ ವಿದೇಶಿ ಪ್ರಜೆಗಳ ಸಂಖ್ಯೆ ಸಾವಿರಕ್ಕಿಂತಲೂ ಕಡಿಮೆ. ಅದರಲ್ಲಿ ಸಿಂಹಪಾಲು ನೆರೆಯ ನೇಪಾಳದ ಪ್ರಜೆಗಳಾಗಿದ್ದರೆ, ಅಮೆರಿಕ, ಕೆನಡಾ, ಯುಕೆ ನಾಗರಿಕರೂ ಇದ್ದಾರೆ. ಹಾಗಾದರೆ, ಕೋಮು ಧ್ರುವೀಕರಣದ ವಿಷ ಬೀಜ ಬಿತ್ತಲು ಅಬ್ಬರಿಸಿದ್ದ ಆ ‘ಲಕ್ಷಾಂತರ ಬಾಂಗ್ಲಾದೇಶಿ’ಗಳ ಕಥೆ ಎಲ್ಲಿಗೆ ಹೋಯಿತು ಎಂಬುದಾದರೂ ಸ್ಪಷ್ಟವಾಗಬೇಕು. ಅಥವಾ ಆ ಹುಸಿ ಆರೋಪ ಮಾಡಿದವರ ವಿರುದ್ಧ ಕಾನೂನಾತ್ಮಕ ಕ್ರಮವಂತೂ ಆಗಲೇಬೇಕು.
ವಿದೇಶಿ ಅಕ್ರಮ ವಲಸಿಗರು ಮತದಾರರ ಪಟ್ಟಿಯಲ್ಲಿದ್ದರೆ ಅವರನ್ನು ಕಾನೂನುಬದ್ಧವಾಗಿ ತೆಗೆದುಹಾಕುವುದರಲ್ಲಿ ಯಾರದ್ದೂ ಎರಡು ಮಾತಿಲ್ಲ. ಆದರೆ, ಯಾವುದೇ ದಾಖಲೆಗಳೇ ಇಲ್ಲದೆ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಮಾಡಿ, ಆಧಾರರಹಿತ ಸುಳ್ಳುಗಳನ್ನು ಹಬ್ಬಿಸಿ ಜನರಲ್ಲಿ ಸಾರ್ವಜನಿಕ ಭೀತಿ ಹುಟ್ಟಿಸಿದ ರಾಜಕಾರಣಿಗಳನ್ನೇಕೆ ಸುಮ್ಮನೆ ಬಿಡಬೇಕು? ಲಾಬಿಗಾಗಿ ಸಹೋದರರಂತೆ ಇರುವವರ ನಡುವೆ ಅನುಮಾನದ ಗೋಡೆ ಕಟ್ಟಿದವರು, ಈಗ ಮತದಾರರ ಮುಂದೆ ಬಂದು ತಮ್ಮ ನಕಲಿ ಆರೋಪಗಳಿಗೆ ಪುರಾವೆ ನೀಡುವ ನೈತಿಕ ಹೊಣೆಗಾರಿಕೆಯನ್ನು ತೋರ್ಪಡಿಸಬೇಕಿದೆ. ಆಧಾರವಿಲ್ಲದ ಸುಳ್ಳು ಪ್ರಚಾರಕ್ಕೆ ಸೂಕ್ತ ಸಮಜಾಯಿಷಿ ನೀಡಬೇಕು.
ಈ ಇಡೀ SIR ಪ್ರಕ್ರಿಯೆಯಲ್ಲಿ ಆಘಾತವೆನಿದ ಅಂಶವೆಂದರೆ, ಅದು ‘ಫಾರ್ಮ್-7’ ಅರ್ಜಿಗಳ ಸಂಘಟಿತ ದುರ್ಬಳಕೆ. ನಿಯಮದ ಪ್ರಕಾರ, ಮತದಾರರ ಪಟ್ಟಿಯಲ್ಲಿ ಅನರ್ಹರ ಹೆಸರುಗಳಿದ್ದರೆ, ಸತ್ತವರ ಹೆಸರಿದ್ದರೆ ಅಥವಾ ಸ್ಥಳಾಂತರಗೊಂಡವರಿದ್ದರೆ ಮಾತ್ರ ನಾಗರಿಕರು ಆಕ್ಷೇಪಣೆ ಸಲ್ಲಿಸಲು ಫಾರ್ಮ್-7 ಬಳಸಬೇಕು. ಆದರೆ ಕರ್ನಾಟಕದಲ್ಲಿ ನಡೆದಿದ್ದೇ ಬೇರೆ! ಲಕ್ಷಾಂತರ ಮತದಾರರ ಹೆಸರುಗಳನ್ನು ಏಕಾಏಕಿ ಕಳಚಿಹಾಕಲು, ಅನಾಮಧೇಯ ಮೂಲಗಳಿಂದ ಸಗಟು ಪ್ರಮಾಣದಲ್ಲಿ ಮುದ್ರಿಸಲ್ಪಟ್ಟ ನಕಲಿ ಫಾರ್ಮ್-7 ಅರ್ಜಿಗಳನ್ನು ಸಿದ್ಧಪಡಿಸಿ ವ್ಯವಸ್ಥಿತವಾಗಿ ಹಂಚಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಆಡಳಿತ ಪಕ್ಷದ ನಾಯಕರು ಇದರ ವಿರುದ್ಧ ದನಿ ಎತ್ತಿ, “ಇದು ನಮ್ಮ ಹಕ್ಕನ್ನು ಕಿತ್ತುಕೊಳ್ಳುವ ಸಂಚು” ಎಂದು ಆಕ್ರೋಶ ಹೊರಹಾಕಿದರೆ, ಬಿಜೆಪಿ ನಾಯಕರು ಮಾತ್ರ ತಮ್ಮದೇ ಕೃತ್ಯವನ್ನು ಮುಚ್ಚಿಕೊಳ್ಳಲು “ಕಾನೂನಿನ ಪ್ರಕಾರ ಫಾರ್ಮ್-7 ಹಾಕುವ ಹಕ್ಕಿದೆ” ಎಂದು ಹಸಿಬಿಸಿ ಸಮರ್ಥನೆಗಳನ್ನು ನೀಡುತ್ತಾ ಹೋದರು.
ಪ್ರಜಾಪ್ರಭುತ್ವದ ಪವಿತ್ರ ಮತದಾನದ ಹಕ್ಕನ್ನೇ ಕಸಿಯಲು ಈ ರೀತಿ ನಕಲಿ ಅರ್ಜಿಗಳನ್ನು ಹಾಕಿಸುವುದು ಅಕ್ಷರಶಃ ‘ಕ್ರಿಮಿನಲ್ ಅಪರಾಧ’! ಅಧಿಕಾರದ ಲಾಲಸೆಗೆ ಬಿದ್ದು ಜನರ ಹಕ್ಕಿನ ಮೇಲೆ ಕೈಹಾಕಿದ ಈ ಕರಾಳ ಜಾಲದ ಸೂತ್ರದಾರರನ್ನು ಹೆಡೆಮುರಿ ಕಟ್ಟಿ, ಕಾನೂನಿನ ಬೋನಿಗೆ ಇಳಿಸದ ಹೊರತು ಈ ‘ಶುದ್ಧೀಕರಣದ’ ವೇಳೆ ಅಂಟಿಕೊಂಡ ಕಲೆ ಎಂದಿಗೂ ಮಾಸುವುದಿಲ್ಲ!
ಇದನ್ನೂ ಓದಿ: ಈ ದಿನ ಸಂಪಾದಕೀಯ | ‘ಕೊಂದು ಉಳಿಸಿಕೊಳ್ಳಬೇಕಾದ ಧರ್ಮ ಯಾವುದಾದರೂ ಇದ್ಯಾ ಈ ಪ್ರಪಂಚದಲ್ಲಿ?’
ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರು “ಯಾವುದೇ ಕಾರಣಕ್ಕೂ ಅರ್ಹ ಮತದಾರರನ್ನು ಹೊರಗಿಡುವುದಿಲ್ಲ ಎಂದಿರುವುದು ಸ್ವಾಗತಾರ್ಹ. ಅದೇ ರೀತಿ ಮತದಾರರ ಪಟ್ಟಿಯ ನವೀಕರಣ ಅಥವಾ ಶುದ್ಧೀಕರಣ ಎಂದರೆ ಕೇವಲ ಲಕ್ಷಾಂತರ ಹೆಸರುಗಳನ್ನು ಕತ್ತರಿಸಿ ಬಗೆಹರಿಸಿಕೊಳ್ಳುವ ಲೆಕ್ಕವಲ್ಲ. ಪ್ರತಿಯೊಬ್ಬ ಅರ್ಹ ನಾಗರಿಕನಿಗೂ ಆತನ ಸಂವಿಧಾನಾತ್ಮಕ ಮತದಾನದ ಹಕ್ಕನ್ನು ಕಡ್ಡಾಯವಾಗಿ ಖಾತ್ರಿಪಡಿಸುವುದೇ ಈ ಪ್ರಕ್ರಿಯೆಯ ಪರಮೋಚ್ಛ ಮತ್ತು ನೈಜ ಉದ್ದೇಶ. ಮೃತಪಟ್ಟವರು, ದ್ವಂದ್ವ ನೋಂದಣಿ ಹೊಂದಿದವರು ಮತ್ತು ಅನರ್ಹರನ್ನು ಪಟ್ಟಿಯಿಂದ ಹೊರಹಾಕುವುದು ಎಷ್ಟು ಮುಖ್ಯವೋ, ದುರುದ್ದೇಶಪೂರ್ವಕವಾಗಿ ಓರ್ವ ಅರ್ಹ ಮತದಾರನ ಹೆಸರೂ ಪಟ್ಟಿಯಿಂದ ಕೈಬಿಟ್ಟು ಹೋಗದಂತೆ ಕಾಯುವುದು ಅಷ್ಟೇ ಮುಖ್ಯ.
ವಿದೇಶಿ ನುಸುಳುಕೋರರ ಕುರಿತ ಆರೋಪಗಳಿಗೆ ಪುರಾವೆ ಒದಗಿಸುವುದು ಹಾಗೂ ಫಾರ್ಮ್-7 ದುರ್ಬಳಕೆಯ ಆರೋಪಗಳನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸುವುದು ಚುನಾವಣಾ ಆಯೋಗದ ಸದ್ಯದ ಆದ್ಯತೆಯಾಗಬೇಕು. ತಪ್ಪಿತಸ್ಥರು ಯಾರೇ ಆಗಿರಲಿ, ಆರೋಪ ಸಾಬೀತಾದರೆ ಕಾನೂನು ಕ್ರಮ ಜರುಗಬೇಕು. ಅದೇ ವೇಳೆ, ಅರ್ಹ ಮತದಾರರೊಬ್ಬರೂ ಅನ್ಯಾಯವಾಗಿ ತಮ್ಮ ಹಕ್ಕು ಕಳೆದುಕೊಳ್ಳದಂತೆ ಎಚ್ಚರ ವಹಿಸಬೇಕು. ಪಟ್ಟಿ ಶುದ್ಧೀಕರಣದ ಯಶಸ್ಸು ಎಷ್ಟು ಅರ್ಹ ಮತದಾರರ ಹಕ್ಕನ್ನು ಸುರಕ್ಷಿತವಾಗಿ ಉಳಿಸಲಾಗಿದೆ ಎಂಬುದರಲ್ಲಿದೆ. ಎಸ್ಐಆರ್ ಮುಗಿದಿರಬಹುದು. ಆದರೆ ಉತ್ತರದಾಯಿತ್ವ ಮತ್ತು ಪ್ರಜಾಪ್ರಭುತ್ವದ ಹಕ್ಕುಗಳ ರಕ್ಷಣೆಯ ಪರೀಕ್ಷೆ ಇನ್ನೂ ಮುಗಿದಿಲ್ಲ.





