ರಾಮಾಯಣ ಮತ್ತು ಮಹಾಭಾರತ ನಮ್ಮ ಬದುಕಿನ ಅವಿಭಾಜ್ಯ ಅಂಗಗಳಾಗಿದ್ದು, ವ್ಯಕ್ತಿಯ ಜೀವನ ರೂಪಿಸುವುದರ ಜತೆಗೆ ರಾಜಕೀಯ ಹಾಗೂ ಜನಸಾಮಾನ್ಯರ ಬದುಕಿನ ಮೇಲೂ ಆಳವಾದ ಪ್ರಭಾವ ಬೀರಿವೆ. ರಾಮಾಯಣವು ಭಾರತಕ್ಕೆ ಮಾತ್ರ ಸೀಮಿತವಾಗದೆ ದಕ್ಷಿಣ ಏಷ್ಯಾದ ಹಲವು ದೇಶಗಳಲ್ಲಿಯೂ ತನ್ನ ಪ್ರಭಾವವನ್ನು ವಿಸ್ತರಿಸಿದೆ ಎಂದು ಚಿಂತಕ ಡಾ. ಸಿ.ಜಿ. ಲಕ್ಷ್ಮೀಪತಿ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಗಿರಿಜನ ಉಪಯೋಜನೆ ಘಟಕದ ವತಿಯಿಂದ ಬುಧವಾರ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ‘ವಾಲ್ಮೀಕಿ ದಾರ್ಶನಿಕತೆ: ನವಸಮಾಜದ ಅಭ್ಯುದಯದ ತಾತ್ವಿಕ ಮೌಲ್ಯಗಳು’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಮಾಯಣ ಮತ್ತು ಮಹಾಭಾರತ ಕೇವಲ ಮಹಾಕಾವ್ಯಗಳಲ್ಲ. ಭಾರತೀಯ ಸಮಾಜದ ಚಿಂತನೆ, ಜೀವನಕ್ರಮ, ನೈತಿಕ ಮೌಲ್ಯಗಳು ಹಾಗೂ ಸಾಮಾಜಿಕ ವ್ಯವಸ್ಥೆಯ ಮೇಲೆ ಪ್ರಭಾವ ಬೀರಿರುವ ಮಹತ್ವದ ಕೃತಿಗಳಾಗಿವೆ. ಹಲವು ತಲೆಮಾರುಗಳ ಬದುಕಿನಲ್ಲಿ ಈ ಮಹಾಕಾವ್ಯಗಳು ಪ್ರಮುಖ ಪಾತ್ರ ವಹಿಸಿದ್ದು, ರಾಜಕೀಯದಿಂದ ಹಿಡಿದು ಜನಸಾಮಾನ್ಯರ ಜೀವನದವರೆಗೂ ಅವುಗಳ ಪ್ರಭಾವ ವ್ಯಾಪಿಸಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಎಚ್.ಎಸ್. ಮೋಹನ ವಹಿಸಿದ್ದರು. ಕಲಾ ಕಾಲೇಜಿನ ಪ್ರಾಂಶುಪಾಲೆ ಡಾ. ಜಿ. ದಾಕ್ಷಾಯಣಿ ಉಪಸ್ಥಿತರಿದ್ದರು.
ಗಿರಿಜನ ಉಪಯೋಜನೆ ಘಟಕದ ಸಂಯೋಜಕ ಡಾ. ಕುಮಾರ ಬಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಡಾ. ಸುಲೋಚನಾ ಜಿ.ಎಸ್. ಕಾರ್ಯಕ್ರಮ ನಿರೂಪಿಸಿದರು.






