ಭಾರತದ ಸ್ವಾತಂತ್ರ್ಯ ಸಂಗ್ರಾಮ ಅದು ಅಪ್ಪಟ ದೇಶಪ್ರೇಮಿಗಳ ಹೋರಾಟವಾಗಿತ್ತು. ಮತ್ತದು ಪುರುಷರ ಹೋರಾಟ ಅಥವಾ ಹಿಂದೂಗಳ ಹೋರಾಟವಾಗಿರಲಿಲ್ಲ. ಎಲ್ಲಾ ವರ್ಗಗಳ ಮಹಿಳೆಯರೂ ಸೇರಿದಂತೆ ಲಕ್ಷಾಂತರ ಸ್ವಾತಂತ್ರ್ಯ ಕಾರ್ಯಕರ್ತರಿದ್ದರು. ಭಾರತದ ಮುಸ್ಲಿಮರನ್ನು ದೇಶದ್ರೋಹಿಗಳು ಎಂದು ಬಿಂಬಿಸುವ ಹುನ್ನಾರ ನಡೆಯುತ್ತಿರುವ ಈ ಸಂದರ್ಭದಲ್ಲಿ ನಾಲ್ವರು ಪ್ರಮುಖ ಮುಸ್ಲಿಂ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಪರಿಚಯ ಇಲ್ಲಿದೆ.
ಭಾರತದ ಸ್ವಾತಂತ್ರ್ಯ ಚಳವಳಿಯ ಹೆಚ್ಚುಗಾರಿಕೆಯೆಂದರೆ, ಅದು ಭಾರತದ ಧಾರ್ಮಿಕ, ಸಾಮಾಜಿಕ ಸಂಪ್ರದಾಯ-ಕಟ್ಟುಪಾಡುಗಳ ಬಂಧನಗಳಿಂದ ಮಹಿಳೆಯರನ್ನು ಮುಕ್ತಗೊಳಿಸುವ ಮೊದಲ ಹೆಜ್ಜೆಯಾಯಿತು. ಹೆಣ್ಣುಮಕ್ಕಳು ಹೊರ ಜಗತ್ತಿಗೆ ಕಾಲಿಡುವುದೇ ಅಪರಾಧವಾಗಿದ್ದ ಮುಸ್ಲಿಂ ಸಮುದಾಯದ ನೂರಾರು ಮಹಿಳೆಯರು ಸ್ವಾತಂತ್ರ್ಯ ಚಳವಳಿಯಲ್ಲಿ ಧೈರ್ಯದಿಂದ ಭಾಗಿಯಾಗಿದ್ದರು. ಬ್ರಿಟಿಷರಿಗಿಂತಲೂ ಮೊದಲೇ ರಾಜಪ್ರಭುತ್ವದ ನೀತಿಗಳ ವಿರುದ್ಧ ಅನ್ಯಾಯದ ವಿರುದ್ಧ ಧ್ವನಿಯೆತ್ತಿದ ದಿಟ್ಟೆಯರಲ್ಲಿ ಮುಸ್ಲಿಂ ಮಹಿಳೆಯರು ಮುಂಚೂಣಿಯಲ್ಲಿದ್ದರು. ಆದರೆ, ಎಲೆಮರೆಯ ಕಾಯಿಯಂತೆ ಇತಿಹಾಸದ ಪುಟಗಳ ಮರೆಯಲ್ಲಿಯೇ ಅವರೆಲ್ಲ ಉಳಿದು ಹೋಗಿದ್ದಾರೆ.
ಬಾಪುವಿನ “ಅಮ್ಮಿಜಾನ್” ಅಬಾದಿ ಬಾನೋ ಬೇಗಂ
ಅಬಾದಿ ಬಾನೋ ಬೇಗಂ, ಇವರನ್ನು ಬೀ ಅಮ್ಮ ಎಂದೂ ಕರೆಯಲಾಗುತ್ತದೆ, ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು. 1850ರಲ್ಲಿ ಉತ್ತರ ಪ್ರದೇಶದ ಅಮ್ರೋಹದಲ್ಲಿ ಜನಿಸಿದ ಇವರು, 1924ರಲ್ಲಿ ನಿಧನರಾದರು. ರಾಜಕೀಯದಲ್ಲಿ ಸಕ್ರಿಯವಾಗಿ ಭಾಗವಹಿಸಿದ ಮೊದಲ ಮುಸ್ಲಿಂ ಮಹಿಳೆಯರಲ್ಲಿ ಒಬ್ಬರಾಗಿದ್ದ ಇವರು, ಪರ್ದಾ ಅನುಸರಿಸುತ್ತಿದ್ದರೂ ಸಾರ್ವಜನಿಕ ಸಭೆಗಳಲ್ಲಿ ಭಾಷಣ ಮಾಡುವ ಮೂಲಕ ಸಾಮಾಜಿಕವಾಗಿ ಹೇರಿದ್ದ ʼಮಿತಿʼಗಳನ್ನು ಮೀರಿದರು. ರಾಂಪುರದ ಹಿರಿಯ ಅಧಿಕಾರಿಯಾಗಿದ್ದ ಅಬ್ದುಲ್ ಅಲಿ ಖಾನ್‌ರನ್ನು ಮದುವೆಯಾದ ಇವರು, ಚಿಕ್ಕ ವಯಸ್ಸಿನಲ್ಲೇ ವಿಧವೆಯಾದರು. ಮಕ್ಕಳಾದ ಮೌಲಾನಾ ಮೊಹಮ್ಮದ್ ಅಲಿ ಜೌಹರ್ ಮತ್ತು ಮೌಲಾನಾ ಶೌಕತ್ ಅಲಿ ಸಹೋದರರು ಖಿಲಾಫತ್ ಮತ್ತು ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖ ನಾಯಕರಾಗಿ ಹೊರಹೊಮ್ಮಲು ಬೀ ಅಮ್ಮನವರ ಸ್ವಾತಂತ್ರ್ಯದ ತುಡಿತವೇ ಕಾರಣ.

ಔಪಚಾರಿಕ ಶಿಕ್ಷಣವಿಲ್ಲದಿದ್ದರೂ, ಬೀ ಅಮ್ಮ, ತಮ್ಮ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮದ ಶಿಕ್ಷಣವನ್ನು ನೀಡಿದರು, ಅದಕ್ಕಾಗಿ ತಮ್ಮ ಆಭರಣಗಳನ್ನು ಕೂಡ ಅಡವಿಟ್ಟರು. ಖಿಲಾಫತ್ ಚಳವಳಿ ಮತ್ತು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಇವರು ಮಹತ್ವದ ಪಾತ್ರ ವಹಿಸಿದರು. 1917ರಲ್ಲಿ ಆನಿ ಬೆಸೆಂಟ್ ಮತ್ತು ತಮ್ಮ ಮಕ್ಕಳನ್ನು ಜೈಲಿನಿಂದ ಬಿಡುಗಡೆ ಮಾಡಲು ಆಂದೋಲನದಲ್ಲಿ ಭಾಗವಹಿಸಿದರು. ಮಹಾತ್ಮ ಗಾಂಧೀಜಿಯವರು ಇವರನ್ನು “ಅಮ್ಮಿಜಾನ್” ಎಂದು ಕರೆದು, ಮಹಿಳೆಯರನ್ನು ಸಂಘಟಿಸಲು ಇವರ ಸಾಮರ್ಥ್ಯವನ್ನು ಗುರುತಿಸಿದರು. 1917ರ ಆಲ್ ಇಂಡಿಯಾ ಮುಸ್ಲಿಂ ಲೀಗ್ ಸಭೆಯಲ್ಲಿ ಇವರು ಮಾಡಿದ ಭಾಷಣ ಐತಿಹಾಸಿಕ.
“ದೇಶವಾಸಿಗಳೇ! ಈ ವಿದೇಶಿಯರ ಜೀವನ ಶೈಲಿಯನ್ನು ತೊರೆಯಿರಿ. ನಮ್ಮ ಸ್ವಂತ ಸಂಪ್ರದಾಯಗಳನ್ನು, ನಮ್ಮ ದೇಶದ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಿ. ಹಿಂದೂ-ಮುಸ್ಲಿಂ ಒಗ್ಗಟ್ಟಿನೊಂದಿಗೆ, ನಾವು ಒಟ್ಟಾಗಿ ನಮ್ಮ ದೇಶವನ್ನು ಬ್ರಿಟಿಷರ ಗುಲಾಮಗಿರಿಯಿಂದ ಮುಕ್ತಗೊಳಿಸಬೇಕು. ಭಯಪಡದೆ, ತ್ಯಾಗದ ಮನೋಭಾವದಿಂದ ಸ್ವಾತಂತ್ರ್ಯಕ್ಕಾಗಿ ಹೋರಾಡಿ!”ಎಂದು ಕರೆ ನೀಡಿದ್ದರು. ಈ ಸಂದೇಶವು ಜನರಲ್ಲಿ ಸ್ವದೇಶಿ ಚೈತನ್ಯವನ್ನು ಜಾಗೃತಗೊಳಿಸಿತು. ವಿಶೇಷವಾಗಿ ಮಹಿಳೆಯರನ್ನು ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರೇರೇಪಿಸಿತು.
ಭಾರತದಾದ್ಯಂತ ಪ್ರವಾಸ ಮಾಡಿ ಬೇಗಂ ಹಸ್ರತ್ ಮೊಹಾನಿ, ಸರೋಜಿನಿ ನಾಯ್ಡು ಮುಂತಾದವರೊಂದಿಗೆ ಮಹಿಳೆಯರಿಗೆ ಮೀಸಲಿದ್ದ ಸಭೆಗಳಲ್ಲಿ ಭಾಷಣ ಮಾಡಿದರು. ತಿಲಕರ ಸ್ವರಾಜ್ ಫಂಡ್‌ಗೆ ದೇಣಿಗೆ ನೀಡುವಂತೆ ಒತ್ತಾಯಿಸಿದರು. ತಮ್ಮ ಭಾಷಣಗಳಲ್ಲಿ ವಿದೇಶಿ ಜೀವನ ಶೈಲಿಯನ್ನು ತ್ಯಜಿಸಿ ಭಾರತೀಯ ಸಂಪ್ರದಾಯವನ್ನು ಅಳವಡಿಸಿಕೊಳ್ಳುವಂತೆ ಒತ್ತಿ ಹೇಳಿದರು. “ದೇಶವಾಸಿಗಳೇ! ಈ ವಿದೇಶಿಯರ ಜೀವನ ಶೈಲಿಯನ್ನು ತೊರೆಯಿರಿ” ಎಂದು ಘೋಷಿಸಿದರು. ಸ್ವಾತಂತ್ರ್ಯ ಚಳವಳಿಗೆ ಆರ್ಥಿಕ ನೆರವು ನೀಡಿದ ಇವರು, ಜೈಲಿನಲ್ಲಿದ್ದ ಮಕ್ಕಳಿಗೆ ಕ್ಷಮಾಪಣೆಗೆ ಒತ್ತಡ ಹೇರಿದ ಬ್ರಿಟಿಷರನ್ನು ನಿರಾಕರಿಸಿ, “ನನ್ನ ಮಕ್ಕಳು ಸಾಯಲಿ, ಆದರೆ ರಾಜಿಯಾಗಬಾರದು” ಎಂದು ದಿಟ್ಟ ಉತ್ತರ ನೀಡಿದ್ದರು.
ಇವರ ಪರಂಪರೆಯು ಮುಸ್ಲಿಂ ಮಹಿಳೆಯರನ್ನು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಲು ಪ್ರೇರೇಪಿಸಿತು ಮತ್ತು ಸಾಮುದಾಯಿಕ ಸೌಹಾರ್ದತೆಯನ್ನು ಉತ್ತೇಜಿಸಿತು. 1990ರಲ್ಲಿ ಪಾಕಿಸ್ತಾನವು ಇವರ ಹೆಸರಿನ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು ಮತ್ತು 2012ರಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾದಲ್ಲಿ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಇವರ ಹೆಸರನ್ನು ಇಡಲಾಯಿತು.
ಹಿಂದೂ ಮುಸ್ಲಿಂ ಏಕತೆಗಾಗಿ ಶ್ರಮಿಸಿದ್ದ ಬೀಬಿ ಅಮ್ತುಸಲ್ಮಾ
ಮಹಾತ್ಮ ಗಾಂಧೀಜಿಯವರ ಅನುಯಾಯಿಯಾಗಿದ್ದ ಇವರು 1907ರಲ್ಲಿ ಪಂಜಾಬ್‌ನ ಪಟಿಯಾಲದಲ್ಲಿ ಜನಿಸಿದರು. ಅಣ್ಣ, ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ ಮೊಹಮ್ಮದ್ ಅಬ್ದುರ್ ರಶೀದ್ ಖಾನ್‌ರಿಂದ ಪ್ರೇರಿತರಾದರು. ಗಾಂಧೀಜಿಯವರ ಅಹಿಂಸಾ ಸಿದ್ಧಾಂತಗಳಿಗೆ ಬದ್ಧರಾಗಿ, ಅವರು ಖಾದಿ ಚಳವಳಿಯಲ್ಲಿ ಸೇರಿದರು ಮತ್ತು 1931ರಲ್ಲಿ ಗಾಂಧೀಜಿಯವರ ಸೇವಾಗ್ರಾಮ ಆಶ್ರಮದ ಸದಸ್ಯರಾದರು, ಅಲ್ಲಿ ಬಡವರು ಮತ್ತು ಶೋಷಿತರ ಸೇವೆಗೆ ಮೀಸಲಾದ ಕಟ್ಟುನಿಟ್ಟಾದ ಜೀವನಶೈಲಿ ಅನುಸರಿಸಿದರು.

ಭಾರತದ ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ, ಬೀಬಿ ಅಮ್ತುಸಲ್ಮಾ ಅವರು 1932ರಲ್ಲಿ ಜೈಲುವಾಸ ಅನುಭವಿಸಿದರು. ಅವರು ಆಶ್ರಮದಲ್ಲಿ ಗಾಂಧೀಜಿಯವರ ವೈಯಕ್ತಿಕ ಸಹಾಯಕರಾಗಿ ಸೇವೆ ಸಲ್ಲಿಸಿದರು ಮತ್ತು ಗಲಭೆಗೀಡಾದ ನೌಖಾಲಿಗೆ ಅವರೊಂದಿಗೆ ತೆರಳಿ, ಸಾಮುದಾಯಿಕ ಸಾಮರಸ್ಯವನ್ನು ಮರುಸ್ಥಾಪಿಸಲು 20 ದಿನಗಳ ಸತ್ಯಾಗ್ರಹದಲ್ಲಿ ಭಾಗವಹಿಸಿದರು. ಅವರ ಜೀವನದ ಗುರಿಗಳು ರಾಷ್ಟ್ರೀಯ ಏಕತೆ, ಸಾಮುದಾಯಿಕ ಸಾಮರಸ್ಯ, ಹರಿಜನರ ಮತ್ತು ಮಹಿಳೆಯರ ಕಲ್ಯಾಣವನ್ನು ಒಳಗೊಂಡಿದ್ದವು. 1962ರ ಭಾರತ-ಚೀನಾ ಯುದ್ಧ ಮತ್ತು 1965ರ ಭಾರತ-ಪಾಕ್ ಯುದ್ಧದ ಸಮಯದಲ್ಲಿ ಭಾರತೀಯ ಸೈನಿಕರನ್ನು ಬೆಂಬಲಿಸಿದ ಅವರು, ತಮ್ಮ ದತ್ತು ಪುತ್ರ ಸುನೀಲ್ ಕುಮಾರ್‌ನೊಂದಿಗೆ ಯುದ್ಧ ವಲಯಗಳಿಗೆ ತೆರಳಿ ಗಾಯಗೊಂಡವರಿಗೆ ಸಹಾಯ ಮಾಡಿದರು. ಮದುವೆಯಾಗದೆ, ಗಾಂಧೀಜಿಯವರ ಆದರ್ಶಗಳಿಗೆ ಮತ್ತು ರಾಷ್ಟ್ರದ ಸೇವೆಗೆ ತಮ್ಮ ಜೀವನವನ್ನು ಮೀಸಲಿಟ್ಟ ಅವರು 1985ರ ಅಕ್ಟೋಬರ್ 29ರಂದು ನಿಧನರಾದರು.
ಬೀಬಿ ಅಮ್ತುಸಲ್ಮಾರ ಚಿಂತನೆಗಳು ಮಹಾತ್ಮ ಗಾಂಧೀಜಿಯವರ ಅಹಿಂಸೆ, ಸತ್ಯಾಗ್ರಹ ಮತ್ತು ಸಾಮಾಜಿಕ ನ್ಯಾಯದ ತತ್ವಗಳಿಂದ ಗಾಢವಾಗಿ ಪ್ರೇರಿತವಾಗಿದ್ದವು. ಅವರ ಆಲೋಚನೆಗಳು ರಾಷ್ಟ್ರೀಯ ಏಕತೆ, ಸಾಮುದಾಯಿಕ ಸಾಮರಸ್ಯ, ಹರಿಜನರ (ದಲಿತರ) ಏಳಿಗೆ ಮತ್ತು ಮಹಿಳೆಯರ ಕಲ್ಯಾಣದ ಸುತ್ತ ಕೇಂದ್ರೀಕೃತವಾಗಿದ್ದವು. ಅವರು ಖಾದಿ ಚಳವಳಿಯ ಮೂಲಕ ಸ್ವಾವಲಂಬನೆ ಮತ್ತು ಸ್ವದೇಶಿ ಆದರ್ಶಗಳನ್ನು ಉತ್ತೇಜಿಸಿದರು, ಇದು ಆರ್ಥಿಕ ಸ್ವಾತಂತ್ರ್ಯ ಮತ್ತು ಗ್ರಾಮೀಣ ಸಬಲೀಕರಣಕ್ಕೆ ಸಂಬಂಧಿಸಿತ್ತು. ಗಾಂಧೀಜಿಯವರ ಸೇವಾಗ್ರಾಮ ಆಶ್ರಮದಲ್ಲಿ, ಬಡವರು ಮತ್ತು ಶೋಷಿತರ ಸೇವೆಯೇ ಜೀವನದ ಉನ್ನತ ಗುರಿಯೆಂದು ಅವರು ಪ್ರತಿಪಾದಿಸಿದರು.
ಅಮ್ತುಸಲ್ಮಾ ಬಾಪುಗೆ ಎಷ್ಟು ಇಷ್ಟವಾಗಿದ್ದರು ಎಂದರೆ, ಅವರು ಒಮ್ಮೆ ಹರಿಜನ ಕಾಲೊನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಅಸ್ವಸ್ಥರಾಗುತ್ತಾರೆ. ಚಿಂತೆಗೊಳಗಾದ ಬಾಪು ಅವರಿಗೊಂದು ಪತ್ರ ಬರೆದು ವಾಪಸ್ ಆಶ್ರಮಕ್ಕೆ ಬರುವಂತೆ ಪರಿ ಪರಿಯಾಗಿ ಬೇಡಿಕೊಳ್ಳುತ್ತಾರೆ.
“ನನ್ನ ಮಾತು ಕೇಳು, ದಯವಿಟ್ಟು ನನ್ನ ಬಳಿ ಬಂದುಬಿಡು. ನಿನ್ನ ದುಃಖವೆಲ್ಲ ಮಾಯವಾಗಿ ಹೋಗುತ್ತದೆ. ನನ್ನ ಈ ಮಾತು ಕೇಳಿದರೆ ನನ್ನ ಮೇಲೆ ದಯೆ ತೋರಿದಂತೆ. ದಯವಿಟ್ಟು ನನ್ನ ಬಳಿ ಬಂದುಬಿಡು. ಇದು ನಿನ್ನಿಂದ ಸಾಧ್ಯವಾಗದಿದ್ದರೆ ದಯವಿಟ್ಟು ನನ್ನಿಂದ ದೂರ ಹೊರಟು ಹೋಗು…” ಎಂದು ಬರೆಯುತ್ತಾರೆ.
1940ರಂದು ಸಿಂಧ್ ಪ್ರಾಂತ್ಯದಲ್ಲಿ ಹಿಂದು ಮುಸ್ಲಿಂ ದಂಗೆಗಳಾದ ಗಾಂಧೀಜಿ ಅಮ್ತುಸಲ್ಮಾ ಅವರನ್ನು ಅಲ್ಲಿಗೆ ಕಳಿಸಿದ್ದರು. ಆಕೆಯ ಸಾಮರ್ಥ್ಯದ ಬಗ್ಗೆ ಗಾಂಧೀಜಿಗೆ ನಂಬಿಕೆ ಇತ್ತು. ನಂತರ ಈ ಬಗ್ಗೆ “ಸಿಂಧ್ ಪ್ರಾಂತ್ಯದಲ್ಲಾದ ಭಯಾನಕ ದಂಗೆಗಳನ್ನು ನಿಲ್ಲಿಸಲು ಅಮ್ತುಸಲ್ಮಾ ಪ್ರಾಣವನ್ನು ಪಣವಾಗಿಟ್ಟು ಅಲ್ಲಿಗೆ ಹೋಗುತ್ತಿದ್ದಾಳೆ. ಅಲ್ಲಿ ಕೆಲವೊಮ್ಮೆ ಮುಸ್ಲಿಂ ಮಿತ್ರರನ್ನು ಭೇಟಿ ಮಾಡಿ, ಹಾಜಿಪೀರ್ ಅಬ್ದುಲ್ ರ ಮನವೊಲಿಸಿ ಅವರೊಂದಿಗೆ ಕೆಲಸ ಮಾಡುತ್ತಾಳೆ. ನೀವು ನಿಮ್ಮ ಕೈಲಾದ ಸಹಾಯ ಮಾಡಬೇಕಾಗಿದೆ. ಕೀಕಿ ಸಹೋದರಿಯರಿಗೆ ಈಕೆಯನ್ನು ಭೇಟಿ ಮಾಡಿಸಿ ” ಎಂದು ಆನಂದ್ ಟಿ ಹಿಂಗೋರಾನಿಗೆ ಪತ್ರ ಬರೆಯುತ್ತಾರೆ.
ಒಂದು ಗಲಭೆಪೀಡಿತ ಪ್ರದೇಶಕ್ಕೆ ಅದನ್ನು ನಿಯಂತ್ರಿಸಲು ಒಬ್ಬ ಮಹಿಳೆಯನ್ನು ಅದರಲ್ಲೂ ಮುಸ್ಲಿಂ ಮಹಿಳೆಯನ್ನು ಕಳಿಸುವ ಗಾಂಧೀಜಿಯವರ ನಿರ್ಧಾರದ ಹಿಂದೆ ಅಮ್ತುಸಲ್ಮಾ ಅವರ ಕಾರ್ಯಗಳು ಹುಟ್ಟಿಸಿದ ನಂಬಿಕೆ, ಭರವಸೆ ಕಾರಣವಾಗಿತ್ತು. “ಆಕೆ ತುಂಬಾ ಧೈರ್ಯವಂತೆ, ಈ ಹಿಂಸೆಯನ್ನು ತಡೆಯಲು ತನ್ನ ಪ್ರಾಣವನ್ನೇ ಆಹುತಿಯಾಗಿ ಕೊಡಲು ಸಿದ್ಧಳಿದ್ದಾಳೆ. ಈಕೆ ಹಿಂದೂಗಳ ಪ್ರಾಣಕ್ಕಾಗಿ, ಮುಸ್ಲಿಮರ ಗೌರವಕ್ಕಾಗಿ ತನ್ನ ಪ್ರಾಣವನ್ನೇ ಬಲಿ ಕೊಡಲು ತಯಾರಿದ್ದಾಳೆ” ಎಂದು 1940 ನವೆಂಬರ್ 6ರಂದು ಸೇವಾಗ್ರಾಮದಿಂದ ಪೀರ್ ಅಬ್ದುಲ್ ಹಾರುನ್ ರಶೀದ್‌ಗೆ ಬರೆದ ಪತ್ರದಲ್ಲಿ ಗಾಂಧಿ ಉಲ್ಲೇಖಿಸಿದ್ದರು.
ಬೀಬಿ ಅಮ್ತುಸಲ್ಮಾ ಗಾಂಧೀಜಿಯವರ ಜೊತೆಗೆ ಹಲವು ಸಮ್ಮೇಳನಗಳಲ್ಲಿ ಭಾಗವಹಿಸಿದ್ದರು. ಕೊಲೆ, ಸುಲಿಗೆಯ ಭೀಕರ ಕೋಮುದಂಗೆಯಿಂದ ತತ್ತರಿಸಿದ್ದ ನೌಖಾಲಿಗೂ ಭೇಟಿ ನೀಡಿದ್ದರು. ಬಾಪುವಿನ ಹತ್ಯೆಯ ನಂತರ ಅಮ್ತುಸಲ್ಮಾ ಗಾಂಧೀಜಿಯವರ ಉದ್ದೇಶವನ್ನು ಸಾರ್ಥಕಗೊಳಿಸಲು ತನುಮನ ಧನವನ್ನು ಧಾರೆ ಎರೆದರು. ಅಮ್ಮನಂತಿದ್ದ ಕಸ್ತೂರಬಾ ಅವರ ಹೆಸರಿನಲ್ಲಿ ಪಂಜಾಬಿನ ರಾಜಪುರದಲ್ಲಿ ಕಸ್ತೂರಬಾ ಮಂದಿರ ತೆರೆದು ಅಲ್ಲಿ ಮಕ್ಕಳಿಗೆ ಶಾಲೆ ಆರಂಭಿಸುತ್ತಾರೆ. ಹರಿಜನ ಸೇವೆ ಮಾಡುತ್ತಾರೆ. ಸರ್ವೋದಯದ ಕೆಲಸಕ್ಕೆ ಜಪಾನಿಗೂ ಹೋಗಿ ಬರುತ್ತಾರೆ. ಹೊಲದಲ್ಲಿ ಉಳುಮೆಗೂ ಸೈ, ಖಾದಿ ನೇಯುವುದಕ್ಕೂ ಸೈ ಎನಿಸಿದ್ದರು. ಹಿಂದೂಸ್ಥಾನ ಎಂಬ ಉರ್ದು ಪತ್ರಿಕೆಯನ್ನೂ ಹೊರತಂದರು. ಉರ್ದು, ಪಂಜಾಬಿ, ಗುಜರಾತಿ, ತೆಲುಗು, ತಮಿಳು ಭಾಷೆಯನ್ನೂ ಕಲಿತಿದ್ದರು.
ಬೇಗಂ ಕುದ್ಸಿಯಾ ಐಜಾಜ್ ರಸೂಲ್
ಬೇಗಂ ಕುದ್ಸಿಯಾ ಐಜಾಜ್ ರಸೂಲ್ ಅವರು 1908ರಲ್ಲಿ ಪಂಜಾಬ್‌ನ ಮಲೇರ್‌ಕೋಟ್ಲಾ ರಾಜವಂಶದ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಸರ್ ಜುಲ್ಫಿಕಾರ್ ಅಲಿ ಖಾನ್ ಮತ್ತು ತಾಯಿ ಮಹಮೂದಾ ಸುಲ್ತಾನ್, ಲೊಹಾರುವಿನ ನವಾಬ್ ಅಲ್ಲಾವುದ್ದೀನ್ ಅಹ್ಮದ್ ಖಾನ್‌ರ ಮಗಳು. 1929 ರಲ್ಲಿ, ಇವರು ಒಡಿಶಾದ (ಈಗಿನ ಉತ್ತರ ಪ್ರದೇಶದ ಭಾಗ) ಹರ್ದೋಯಿ ಜಿಲ್ಲೆಯ ಸಂಡಿಲಾದ ತಾಲೂಕ್‌ದಾರ್ ನವಾಬ್ ಐಜಾಜ್ ರಸೂಲ್‌ರನ್ನು ವಿವಾಹವಾದರು.

1935ರ ಭಾರತ ಸರ್ಕಾರ ಕಾಯ್ದೆಯ ಜಾರಿಯೊಂದಿಗೆ, ಕುದ್ಸಿಯಾ ಮತ್ತು ಇವರ ಪತಿ ಮುಸ್ಲಿಂ ಲೀಗ್‌ಗೆ ಸೇರಿ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಿದರು. 1937ರ ಚುನಾವಣೆಯಲ್ಲಿ, ಕುದ್ಸಿಯಾ ಯುನೈಟೆಡ್ ಪ್ರಾವಿನ್ಸಸ್ (ಈಗಿನ ಉತ್ತರ ಪ್ರದೇಶ) ಶಾಸಕಾಂಗ ಸಭೆಗೆ ಮೀಸಲು ಸ್ಥಾನದಿಂದ ಆಯ್ಕೆಯಾದರು. ಇದು ಆ ಕಾಲದಲ್ಲಿ ಮಹಿಳೆಯರ ಪಾಲಿಗೆ ದೊಡ್ಡ ಸಾಧನೆಯಾಗಿತ್ತು. 1937 ರಿಂದ 1940 ರವರೆಗೆ ಇವರು ಶಾಸಕಾಂಗ ಸಭೆಯ ಉಪಾಧ್ಯಕ್ಷರಾಗಿ ಮತ್ತು 1950 ರಿಂದ 1952ರವರೆಗೆ ವಿರೋಧ ಪಕ್ಷದ ನಾಯಕಿಯಾಗಿ ಸೇವೆ ಸಲ್ಲಿಸಿದರು. ಈ ಸ್ಥಾನಕ್ಕೇರಿದ ಭಾರತದಲ್ಲಿ ಮೊದಲ ಮಹಿಳೆ ಮತ್ತು ವಿಶ್ವದ ಮೊದಲ ಮುಸ್ಲಿಂ ಮಹಿಳೆಯಾಗಿ ದಾಖಲೆ ಬರೆದಿದರು.
ಕುದ್ಸಿಯಾ ಅವರು ಮುಸ್ಲಿಂ ಲೀಗ್‌ನ ಸದಸ್ಯರಾಗಿದ್ದರೂ, ಭಾರತದ ವಿಭಜನೆಯನ್ನು ವಿರೋಧಿಸಿದರು ಮತ್ತು ಪ್ರತ್ಯೇಕ ಚುನಾವಣೆ ವ್ಯವಸ್ಥೆಯನ್ನು ತೀವ್ರವಾಗಿ ವಿರೋಧಿಸಿದರು. ಅದು “ಸಮುದಾಯಗಳನ್ನು ಶಾಶ್ವತವಾಗಿ ಒಡೆಯುವ ಸ್ವ-ವಿನಾಶಕಾರಿ ಶಸ್ತ್ರ” ಎಂದು ಕರೆದರು. 1946 ರಲ್ಲಿ, ಇವರು ಭಾರತದ ಸಂವಿಧಾನರಚನಾ ಸಭೆಗೆ ಆಯ್ಕೆಯಾದರು ಮತ್ತು 28 ಮುಸ್ಲಿಂ ಲೀಗ್ ಸದಸ್ಯರಲ್ಲಿ ಏಕೈಕ ಮಹಿಳೆಯಾಗಿದ್ದರು. ಇವರ ಭಾಷಣಗಳು ಮತ್ತು ಚರ್ಚೆಗಳು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಂ ಮಹಿಳೆಯರ ಪಾತ್ರವನ್ನು ರೂಪಿಸುವಲ್ಲಿ ಮಹತ್ವದ್ದಾಗಿದ್ದವು.
ಸಂವಿಧಾನ ರಚನಾ ಸಭೆಯಲ್ಲಿ, ಕುದ್ಸಿಯಾ ಅವರು ಅಲ್ಪಸಂಖ್ಯಾತರ ಹಕ್ಕುಗಳ ಕುರಿತಾದ ಉಪ-ಸಮಿತಿಯಲ್ಲಿ ಸದಸ್ಯರಾಗಿದ್ದರು. ಇವರು ಪ್ರತ್ಯೇಕ ಚುನಾವಣೆಯ ವಿರುದ್ಧ ಧ್ವನಿಯೆತ್ತಿದರು ಮತ್ತು 1949ರ ವೇಳೆಗೆ, ಈ ವ್ಯವಸ್ಥೆಯನ್ನು ಉಳಿಸಿಕೊಳ್ಳಬೇಕೆಂದು ಬಯಸಿದ ಮುಸ್ಲಿಂ ಸದಸ್ಯರನ್ನು ಒಪ್ಪಿಸುವಲ್ಲಿ ಯಶಸ್ವಿಯಾದರು. ಇವರು ಜಮೀನ್ದಾರಿ ವ್ಯವಸ್ಥೆಯ ರದ್ದತಿಯನ್ನು ಬಲವಾಗಿ ಬೆಂಬಲಿಸಿದರು. ಇದು ಇವರ ರಾಜವಂಶದ ಹಿನ್ನೆಲೆಗೆ ವಿರುದ್ಧವಾಗಿತ್ತು. ಭಾರತದ ಏಕತೆ ಮತ್ತು ಜಾತ್ಯತೀತತೆಗೆ ಬದ್ಧತೆಯನ್ನು ತೋರಿಸಿದ್ದರು.
1950ರಲ್ಲಿ ಮುಸ್ಲಿಂ ಲೀಗ್ ಭಾರತದಲ್ಲಿ ವಿಸರ್ಜನೆಗೊಂಡಾಗ, ಕುದ್ಸಿಯಾ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು. 1952ರಿಂದ 1954 ರವರೆಗೆ ರಾಜ್ಯಸಭೆಯ ಸದಸ್ಯರಾಗಿದ್ದರು ಮತ್ತು 1969 ರಿಂದ 1989 ರವರೆಗೆ ಉತ್ತರ ಪ್ರದೇಶದ ಶಾಸಕಾಂಗ ಸಭೆಯ ಸದಸ್ಯರಾಗಿದ್ದರು. 1969 ರಿಂದ 1971 ರವರೆಗೆ, ಇವರು ಸಾಮಾಜಿಕ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ವಿಷಯಗಳಿಗೆ ಸಂಬಂಧಿಸಿದ ಸಚಿವೆಯಾಗಿ ಸೇವೆ ಸಲ್ಲಿಸಿದರು.
ಇನ್ಕಿಲಾಬ್ ಜಿಂದಾಬಾದ್ ಘೋಷಣೆ ಕೊಟ್ಟ ಹಸ್ರತ್ ಪತ್ನಿ ನಿಶಾತುನ್ನೀಸಾ ಬೇಗಂ
ನಿಶಾತುನ್ನೀಸಾ ಬೇಗಂ (1884-1937), ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಒಬ್ಬ ಪ್ರಮುಖ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಉತ್ತರ ಪ್ರದೇಶದ ಅವಧ್‌ನಲ್ಲಿ 1884ರಲ್ಲಿ ಜನಿಸಿದ ಅವರು, ಖ್ಯಾತ ಸ್ವಾತಂತ್ರ್ಯ ಹೋರಾಟಗಾರ, “ಇನ್ಕಿಲಾಬ್ ಜಿಂದಾಬಾದ್” ಘೋಷಣೆಯ ರೂವಾರಿಯಾದ ಮೌಲಾನಾ ಹಸ್ರತ್ ಮೊಹಾನಿಯವರ ಪತ್ನಿ. ನಿಶಾತುನ್ನೀಸಾ ಬೇಗಂ ತಮ್ಮ ಪತಿಯೊಂದಿಗೆ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದರು ಮತ್ತು ಬ್ರಿಟಿಷ್ ಆಡಳಿತದ ವಿರುದ್ಧ ಧೈರ್ಯದಿಂದ ಹೋರಾಡಿದರು.

ನಿಶಾತುನ್ನೀಸಾ ಬೇಗಂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನೊಂದಿಗೆ ಸಂಪರ್ಕ ಹೊಂದಿದ್ದರು ಮತ್ತು ಬಾಲಗಂಗಾಧರ ತಿಲಕರಂತಹ ತೀವ್ರವಾದಿಗಳನ್ನು ಬೆಂಬಲಿಸಿದರು. 1906ರಲ್ಲಿ ತಿಲಕರನ್ನು ಬ್ರಿಟಿಷರು ಬಂಧಿಸಿದಾಗ, ತಮ್ಮ ಪತಿಯಾದ ಮೌಲಾನಾ ಹಸ್ರತ್ ಮೊಹಾನಿಗೆ ಬರೆದ ಪತ್ರದಲ್ಲಿ, “ನಿಮ್ಮ ಮೇಲೆ ಆಗಬಹುದಾದ ಅಪಾಯಗಳನ್ನು ಧೈರ್ಯದಿಂದ ಎದುರಿಸಿ. ನನ್ನ ಬಗ್ಗೆ ಯಾವುದೇ ಚಿಂತೆ ಮಾಡಬೇಡಿ. ಯಾವುದೇ ದೌರ್ಬಲ್ಯದ ಲಕ್ಷಣವನ್ನು ತೋರಬೇಡಿ,” ಎಂದು ಬರೆದು, ತಮ್ಮ ಪತಿಯನ್ನು ಪ್ರೋತ್ಸಾಹಿಸಿದರು. ಈ ಪತ್ರವು ಅವರ ದೇಶಭಕ್ತಿಯ ಛಾತಿಯನ್ನು ಮತ್ತು ಸ್ವಾತಂತ್ರ್ಯಕ್ಕಾಗಿ ತಮ್ಮ ಬದ್ಧತೆಯನ್ನು ತೋರಿಸುತ್ತದೆ.
ಪತಿ ಮೌಲಾನಾ ಹಸ್ರತ್ ಮೊಹಾನಿ ಸೆರೆವಾಸದಲ್ಲಿದ್ದಾಗ, ನಿಶಾತುನ್ನೀಸಾ ಬೇಗಂ ತಮ್ಮ ದಿನಪತ್ರಿಕೆಯಾದ ಉರ್ದು-ಎ-ಮುಅಲ್ಲಾ ಪತ್ರಿಕೆಯ ಪ್ರಕಾಶನದ ಜವಾಬ್ದಾರಿಯನ್ನು ವಹಿಸಿಕೊಂಡರು. ಈ ಪತ್ರಿಕೆಯ ಮೂಲಕ ಅವರು ಬ್ರಿಟಿಷ್ ವಿರೋಧಿ ಚಿಂತನೆಗಳನ್ನು ಮುಂದುವರೆಸಿದರು ಮತ್ತು ಸರ್ಕಾರದೊಂದಿಗೆ ಕಾನೂನು ತೊಡಕುಗಳನ್ನು ಎದುರಿಸಿದರು. ಅವರ ಈ ಕಾರ್ಯವು ಸ್ವಾತಂತ್ರ್ಯ ಚಳವಳಿಯನ್ನು ಜೀವಂತವಾಗಿಡಲು ನೆರವಾಯಿತು.
ನಿಶಾತುನ್ನೀಸಾ ಬೇಗಂ ಪೂರ್ಣ ಸ್ವಾತಂತ್ರ್ಯದ ಕಲ್ಪನೆಯನ್ನು ಬೆಂಬಲಿಸಿದರು. ನಂತರ ಮಹಾತ್ಮ ಗಾಂಧಿಯವರು ಇದೇ ಪರಿಕಲ್ಪನೆಯನ್ನು ಸ್ವೀಕರಿಸಿದರು. ಅವರ ಧೈರ್ಯ ಮತ್ತು ತ್ಯಾಗದ ಮನೋಭಾವವು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರ ಪಾತ್ರವನ್ನು ಒತ್ತಿಹೇಳುತ್ತದೆ. ತಮ್ಮ ಪತಿಯ ಬಂಧನದ ಸಮಯದಲ್ಲಿ, ಅವರು ಚಳವಳಿಯ ಉತ್ಸಾಹವನ್ನು ಕಾಪಾಡಿಕೊಂಡರು ಮತ್ತು ಜನರಲ್ಲಿ ದೇಶಭಕ್ತಿಯ ಜ್ವಾಲೆಯನ್ನು ಉರಿಯುವಂತೆ ಮಾಡಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಆರೆಸ್ಸೆಸ್‌ನವರು ಭಾಗಿಯಾಗಿಲ್ಲ ಎಂಬುದು ಎಷ್ಟು ನಿಜವೋ, ಲಕ್ಷಾಂತರ ಮುಸಲ್ಮಾನರು ಭಾಗಿಯಾಗಿ ಪ್ರಾಣಾರ್ಪಣೆ ಮಾಡಿದ್ದಾರೆ ಎಂಬುದು ಅಷ್ಟೇ ನಿಜ. ಅಷ್ಟೇ ಅಲ್ಲ ತಮ್ಮ ಸಮುದಾಯದ ಮಹಿಳೆಯರನ್ನೂ ಹೋರಾಟದ ಸಾಗರಕ್ಕೆ ಧುಮುಕುವಂತೆ ಪ್ರೇರಣೆ ನೀಡಿದ್ದರು ಎಂಬುದು ಗಮನಾರ್ಹ ಸಂಗತಿಯಾಗಿದೆ.




