ತಮಿಳುನಾಡು ರಾಜಕೀಯದಲ್ಲಿ ಹೊಸ ಅಲೆ: ಟಿವಿಕೆ ಗೆಲುವಿನ ರೂವಾರಿಗಳಿವರು

Date:

ಎಐಡಿಎಂಕೆಯಲ್ಲಿ ಶಾಸಕರಾಗಿ, 9 ಬಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದ ಕೆ.ಎ. ಸೆಂಗೊಟ್ಟಿಯ್ಯನ್ 2025 ರಲ್ಲಿ ಟಿವಿಕೆ ಪ್ರವೇಶಿಸಿದಾಗ ಅವರ ಅನುಭವ ಹಾಗೂ ತಂತ್ರಗಾರಿಕೆ ಹೊಸ ರಾಜಕೀಯ ಪಕ್ಷಕ್ಕೆ ದೊಡ್ಡ ಶಕ್ತಿಯಾಗುತ್ತದೆ ಎಂಬ ಮಾತುಗಳು ಕೇಳಿಬಂದಿತ್ತು. ಅಂತೆಯೇ 77 ವರ್ಷದ ರಾಜಕೀಯ ಅನುಭವಿಯ ಆಗಮನ ಟಿವಿಕೆ ಪಕ್ಷಕ್ಕೆ ವರವಾಗಿ ಪರಿಣಮಿಸಿದೆ.

- Advertisement -


ಜೋಸೆಫ್ ವಿಜಯ್‌ ನೇತೃತ್ವದ ಟಿವಿಕೆ ಪಕ್ಷ ಯಾರೂ ಊಹಿಸಲಾರದ ಗೆಲುವನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಮೊನ್ನೆ ಮೊನ್ನೆಯಷ್ಟೇ ಹುಟ್ಟಿದ, ಅಂಬೆಗಾಲಿಡುವ ಮಗು ಓಟದ ಸ್ಪರ್ಧೆಯಲ್ಲಿ ಗೆದ್ದರೆ ಅಚ್ಚರಿಯಾಗುವುದು ಸಹಜ. ಟಿವಿಕೆಯ ಈ ಜಯಭೇರಿಯು ಇಂತಹದ್ದೇ ಕೌತುಕಕ್ಕೆ ಕಾರಣವಾಗಿದೆ. ಆದರೆ, ಸಿನಿ ತಾರೆಯೊಬ್ಬ ರಾಜಕೀಯ ಪಕ್ಷ ಸ್ಥಾಪಿಸಿದ ಎರಡು ವರ್ಷಗಳಲ್ಲಿ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾದರೂ ಹೇಗೆ ಎಂಬ ಪ್ರಶ್ನೆ ಕಾಡದಿರದು.

ತಮಿಳು ಸಿನಿಲೋಕದಲ್ಲಿ ತನ್ನದೇ ವಿಶಿಷ್ಟ ಛಾಪು ಮೂಡಿಸಿದ್ದ ದಳಪತಿ ವಿಜಯ್‌ ಫೆಬ್ರವರಿ 2, 2024ರಂದು ʼತಮಿಳಗ ವೆಟ್ರಿ ಕಳಗಂʼ ಹೆಸರಿನ ರಾಜಕೀಯ ಪಕ್ಷ ಸ್ಥಾಪಿಸಿದರು. ಸಮತೆ, ಜಾತ್ಯತೀತತೆ, ಸಾಮಾಜಿಕ ನ್ಯಾಯವನ್ನು ಪಕ್ಷ ತನ್ನ ಮೂಲ ಸಿದ್ದಾಂತವಾಗಿ ಘೋಷಿಸಿಕೊಂಡಿತು. 2026ರ ಚುನಾವಣೆಯಲ್ಲಿ 107 ಸ್ಥಾನಗಳನ್ನು ಪಡೆದು ಡಿಎಂಕೆ ಹಾಗೂ ಎಐಡಿಎಂಕೆ ಪಕ್ಷಗಳು ಕಟ್ಟಿಕೊಂಡಿದ್ದ ಪ್ರಬಲ ಕೋಟೆಯನ್ನು ವಿಜಯ್‌ ನಾಯಕತ್ವದ ಟಿವಿಕೆ ಛಿದ್ರಗೊಳಿಸಿದೆ.

ಮೇಲ್ನೋಟಕ್ಕೆ ಇದು ವಿಜಯ್‌ ಸಿನಿ ಹಿನ್ನೆಲೆಯಿಂದ ಸಾಧ್ಯವಾದ ಗೆಲುವೆಂದು ಅನಿಸಿದರೂ, ಟಿವಿಕೆ ಪಕ್ಷದ ಒಳಹೊರಗು ಗಮನಿಸಿದಾಗ ಕೆ.ಎ. ಸೆಂಗೊಟ್ಟಿಯ್ಯನ್, ಜೆಸಿಡಿ ಪ್ರಭಾಕರ್‌, ಎನ್‌ ಆನಂದ್‌, ಸಿ.ಟಿ.ಆರ್‌ ನಿರ್ಮಲ್‌ ಕುಮಾರ್‌ ಮೊದಲಾದ ಅನುಭವಿ ರಾಜಕಾರಣಿಗಳ ಹೆಸರು ಮುನ್ನೆಲೆಗೆ ಬರುತ್ತದೆ.
 
ಕೆ.ಎ. ಸೆಂಗೊಟ್ಟಯ್ಯನ್ : ಎಐಡಿಎಂಕೆಯಲ್ಲಿ ತಮ್ಮ ರಾಜಕೀಯ ಬದುಕಿನ ಅರ್ಧ ಶತಮಾನವನ್ನು ಸವೆಸಿದ ನಂತರ ಪಕ್ಷ ವಿರೋಧಿ ಚಟುವಟಿಕೆಯ ಚೀಟಿ ಕೈಗಿಟ್ಟು 2025ರಲ್ಲಿ ಇವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಎಐಡಿಎಂಕೆಯಲ್ಲಿ ಶಾಸಕರಾಗಿ, 9 ಬಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದ ಕೆಎಎಸ್‌ 2025 ರಲ್ಲಿ ಟಿವಿಕೆ ಪ್ರವೇಶಿಸಿದಾಗ ಅವರ ಅನುಭವ ಹಾಗೂ ತಂತ್ರಗಾರಿಕೆ ಹೊಸ ರಾಜಕೀಯ ಪಕ್ಷಕ್ಕೆ ದೊಡ್ಡ ಶಕ್ತಿಯಾಗುತ್ತದೆ ಎಂಬ ಮಾತುಗಳು ಕೇಳಿಬಂದಿತ್ತು. ಅಂತೆಯೇ 77 ವರ್ಷದ ಅವರ ರಾಜಕೀಯ ಅನುಭವ, ಸುದೀರ್ಘ ರಾಜಕೀಯ ಏರಿಳಿತಗಳನ್ನು ಕಂಡ ಈ ಅನುಭವಿಯ ಆಗಮನ ಟಿವಿಕೆ ಪಕ್ಷಕ್ಕೆ ವರವಾಗಿ ಪರಿಣಮಿಸಿದೆ. ಗೋಬಿಚೆಟ್ಟಿಪಾಳ್ಯಮ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೆಎಎಸ್‌ 82,612 ಮತಗಳನ್ನು ಪಡೆದು ಡಿಎಂಕೆ ಸ್ಪರ್ಧಿ ಎನ್‌ ನಲ್ಲಸ್ವಾಮಿ ವಿರುದ್ಧ 16,620 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ. ಮತದಾರರಿಗೆ ಇವರಲ್ಲಿದ್ದ ವಿಶ್ವಾಸ ದ್ರಾವಿಡ ಪಕ್ಷಗಳ ಪ್ರಾಬಲ್ಯವಿದ್ದ ಕ್ಷೇತ್ರದಲ್ಲಿ ಟಿವಿಕೆ ಗೆಲುವನ್ನು ಸುಲಭವಾಗಿಸಿತು.

ಜೆ.ಸಿ.ಡಿ. ಪ್ರಭಾಕರ್‌ : ಅಣ್ಣ-ಡಿಎಂಕೆ ಪಕ್ಷದಲ್ಲಿ ರಾಜಕೀಯ ಜೀವನ ಆರಂಭಿಸಿದ ಜೆಸಿಡಿ ಎಂಜಿಆರ್‌ ಆಪ್ತ ಸಹಾಯಕರಾಗಿ ಗುರುತಿಸಿಕೊಂಡವರು. 1972ರಲ್ಲಿ ಎಐಡಿಎಂಕೆ ರಚನೆಯಾದ ಸಂದರ್ಭದಲ್ಲಿ ಪಕ್ಷಕ್ಕಾಗಿ ತಳಮಟ್ಟದಲ್ಲಿ ದುಡಿದ ಕೆಲವರಲ್ಲಿ ಇವರು ಪ್ರಮುಖರು. 1980ರಲ್ಲಿ ವಿಲ್ಲಿವಕ್ಕಂ ಕ್ಷೇತ್ರದಲ್ಲಿ ಸ್ಪರ್ಧಿಸಿ ಸಾಧಿಸಿದ ಗೆಲುವು ಇವರ ರಾಜಕೀಯ ಬದುಕಿನ ಅತಿದೊಡ್ಡ ಮೈಲಿಗಲ್ಲು. ಪಕ್ಷಕ್ಕಾಗಿ ದೀರ್ಘಕಾಲ ಶ್ರಮಿಸಿದ ಪ್ರಭಾಕರ್‌ 2022ರಲ್ಲಿ ಪಕ್ಷದಿಂದ ಉಚ್ಚಾಟನೆಗೊಂಡರು. ಎಡಪ್ಪಾಡಿ ಕೆ. ಪಳನಿಸ್ವಾಮಿ (ಇಪಿಎಸ್) ಮತ್ತು ಒಪಿಎಸ್ ನಡುವಿನ ನಾಯಕತ್ವದ ಜಗಳದ ಸಮಯದಲ್ಲಿ ಪಕ್ಷ ವಿರೋಧಿ ಚಟುವಟಿಕೆಯ ಆರೋಪದ ಮೇಲೆ ಅವರನ್ನು ಒ. ಪನ್ನೀರ್‌ಸೆಲ್ವಂ (ಒಪಿಎಸ್), ಆರ್. ವೈತಿಲಿಂಗಂ ಮತ್ತು ಪಿಎಚ್ ಮನೋಜ್ ಪಾಂಡಿಯನ್ ಅವರೊಂದಿಗೆ ಅಣ್ಣ-ಡಿಎಂಕೆ ಪಕ್ಷ ಕೈಬಿಟ್ಟಿತು. ಜನವರಿ 2026ರಂದು ಟಿವಿಕೆ ಪಕ್ಷ ಸೇರಿದ ಜೆಸಿಡಿ ಈ ಬಾರಿಯ ಚುನಾವಣೆಯಲ್ಲಿ 58,965 ಮತಗಳನ್ನು ಗಳಿಸುವ ಮೂಲಕ ಪಕ್ಷಕ್ಕೆ ದಾಖಲೆಯ ಗೆಲುವು ತಂದುಕೊಟ್ಟಿದ್ದಾರೆ.

ಎನ್‌ ಆನಂದ್‌: ಬಸ್ಸಿ ಆನಂದ್‌ ಎಂದು ಗುರುತಿಸಿಕೊಳ್ಳುವ ಎನ್‌ ಆನಂದ್‌ 2006 ರಲ್ಲಿ ಪುದುಚೆರಿ ಮುನ್ನೇತ್ರ ಕಾಂಗ್ರೆಸ್‌ ಪಕ್ಷದಿಂದ ರಾಜಕೀಯ ಜೀವನಕ್ಕೆ ಕಾಲಿಡುತ್ತಾರೆ. ಬಸ್ಸಿ ಕ್ಷೇತ್ರದಿಂದ ಸ್ಪರ್ಧಿಸಿ ಪುದುಚೆರಿ ವಿಧಾನಸಭೆಗೆ ಆಯ್ಕೆಯಾಗುತ್ತಾರೆ. ಕ್ಷೇತ್ರ ವಿಂಗಡಣೆಯ ತರುವಾಯ ಬಸ್ಸಿ ಕ್ಷೇತ್ರವನ್ನು ರದ್ದುಪಡಿಸಿದಾಗ 2011ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಔಪಲಂ ಕ್ಷೇತ್ರದಿಂದ ಸ್ಪರ್ಧಿಸಿ ಸೋತ ನಂತರ 2016ರಲ್ಲಿ ಎಐಎನ್‌ಆರ್‌ಸಿ ಪಕ್ಷದಿಂದ ಮತ್ತೊಮ್ಮೆ ಅದೇ ಕ್ಷೇತ್ರಕ್ಕೆ ಸ್ಪರ್ಧೆ ನಡೆಸಿ ಸೋಲಿನ ಕಹಿ ಉಂಡರು. 2024ರಂದು ತಮಿಳಗ ವೆಟ್ರಿ ಕಳಗಂ ಪಕ್ಷ ಸೇರಿದ ಆನಂದ್‌ ಪಕ್ಷದ ಕಟ್ಟುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಎನ್‌ ಆನಂದ್‌ ʼವಿಜಯ್‌ ಮಕ್ಕಳ್‌ ಇಯಕ್ಕಂʼ ಸಂಘಟನೆಯ ರೂವಾರಿಯಾಗಿ ನಟ ವಿಜಯ್‌ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದು, ತಮಿಳಗ ವೆಟ್ರಿ ಕಳಗಂ ಸಂಘಟಿಸುವಲ್ಲಿ ಇವರ ಪಾತ್ರ ಮಹತ್ವದ್ದು. ಸದ್ಯ ತಿಯಾನಗರದಲ್ಲಿ ಟಿವಿಕೆ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅಣ್ಣ-ಡಿಎಂಕೆ ಪಕ್ಷದ ಸತ್ಯನಾರಾಯಣ್‌ ವಿರುದ್ಧ 13,027 ಮತಗಳ ಅಂತರದ ಗೆಲುವಿನ ನಗೆ ಬೀರಿದ್ದಾರೆ.

ಸಿ.ಟಿ.ಆರ್‌ ನಿರ್ಮಲ್‌ ಕುಮಾರ್‌: ಬಿಜೆಪಿಯ ಐಟಿ ಸೆಲ್‌ ಹಾಗೂ ಸಾಮಾಜಿಕ ಜಾಲತಾಣದ ಮುಖ್ಯಸ್ಥನ ಪಾತ್ರವಹಿಸಿದ್ದ ನಿರ್ಮಲ್‌ ಕುಮಾರ್‌ 2023ರಲ್ಲಿ ಬಿಜೆಪಿ ತೊರೆದು ಅಣ್ಣಾ ಡಿಎಂಕೆ ಸೇರುತ್ತಾರೆ. ಅಲ್ಲಿಯೂ ಸಲ್ಲದ ನಿರ್ಮಲ್‌ ಕುಮಾರ್ʼಗೆ 2025ರಲ್ಲಿ ವಿಜಯ್‌ ತಮ್ಮ ಪಕ್ಷದ ಕದ ತೆರೆಯುತ್ತಾರೆ. ಬಿಜೆಪಿಯ ಐಟಿ ವಿಂಗ್‌ ಮತ್ತು ಸಾಮಾಜಿಕ ಜಾಲತಾಣ ನಿರ್ವಹಿಸಿದ ಅನುಭವಿ. ಎಐಎಡಿಎಂಕೆಯಲ್ಲಿ ಐಟಿ ವಿಭಾಗದ ಜಂಟಿ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸಿದ್ದ ಸಿಟಿಆರ್‌ ಆಗಮನ ವರವಾಗಿ ಪರಿಣಮಿಸಿರುವುದರಲ್ಲಿ ಅಚ್ಚರಿಯಿಲ್ಲ.

ವರ್ಷದ ಹಿಂದೆ ಹುಟ್ಟಿಕೊಂಡ ರಾಜಕೀಯ ಪಕ್ಷ ಊಹಿಸಲಾರದ ಗೆಲುವು ಕಾಣಲು ನಟನ ʼಹೀರೋಯಿಸಂʼ ಮಾತ್ರ ಕಾರಣವಲ್ಲ, ಅನುಭವಿ ನಾಯಕರ ದಂಡು ಇದೆ. ಅದರಲ್ಲೂ ತಮಿಳುನಾಡನ್ನು ದಶಕಗಳ ಕಾಲ ಆಳಿದ ದ್ರಾವಿಡ ಪಕ್ಷಗಳ ನಾಡಿಮಿಡಿತ ಅರಿತ ಹಿರಿತಲೆಗಳು ವಿಜಯ್‌ ಜತೆಗೆ ಕೈಜೋಡಿಸಿದ್ದು ಟಿವಿಕೆಯ ಅಭೂತಪೂರ್ವ ಗೆಲುವಿಗೆ ನೆರವಾಗಿದೆ ಎಂಬ ಅಭಿಪ್ರಾಯವನ್ನು ತಳ್ಳಿಹಾಕಲಾಗದು.



WhatsApp Image 2026 03 09 at 18.17.26
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುದ್ದೇಬಿಹಾಳ | ದಾಸೋಹಿ ರೈತ ಉತ್ಪಾದಕ ಸಹಕಾರಿ ಸಂಘದ ಆರ್ಥಿಕ ಚಟುವಟಿಕೆ: ಗವಿಸಿದ್ದೇಶ್ವರ ಶ್ರೀಗಳಿಂದ ಚಾಲನೆ

ರೈತರೇ ಮಾಲೀಕರಾಗಿ, ರೈತರ ಆರ್ಥಿಕ ಸಬಲೀಕರಣವನ್ನೇ ಕೇಂದ್ರವಾಗಿಟ್ಟುಕೊಂಡು ಅಸ್ತಿತ್ವಕ್ಕೆ ಬಂದಿರುವ ದಾಸೋಹಿ...

ಸಮುದ್ರದಲ್ಲಿ ಅಲೆಗಳು ಭೋರ್ಗರೆಯುತ್ತಿರುವಾಗ ಈಜುವುದು ನನಗಿಷ್ಟ: ವೈರಲ್ ಆಯ್ತು ರಾಹುಲ್ ಗಾಂಧಿ ‘X’ ಪೋಸ್ಟ್

ಸಮುದ್ರದಲ್ಲಿ ಅಲೆಗಳು ಭೋರ್ಗರೆಯುತ್ತಿರುವಾಗ ಈಜುವುದು ನನಗಿಷ್ಟ ಎಂದು ಕಾಂಗ್ರೆಸ್ ನಾಯಕ ಹಾಗೂ...

ಗವಿಸಿದ್ದೇಶ್ವರ ಸ್ವಾಮೀಜಿ ದಸರಾ ಉದ್ಘಾಟನೆ ಆಹ್ವಾನ ತಿರಸ್ಕರಿಸಿದ್ದಾರೆಂಬ ಸುಳ್ಳುಸುದ್ದಿ: ತಪ್ಪಿತಸ್ಥನ ವಿರುದ್ಧ FIR

ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆ ಆಹ್ವಾನವನ್ನು...