ಕೆಲವು ತಿಂಗಳ ಹಿಂದಷ್ಟೇ ಭಾರಿ ಬಹುಮತದೊಂದಿಗೆ ಆಯ್ಕೆಯಾದ ಮೇಯರ್ ಬಾಲೇಂದ್ರ (ಬಾಲೇನ್) ಶಾ ನೇತೃತ್ವದ ನೇಪಾಳದ ಕಠ್ಮಂಡು ಮೆಟ್ರೋಪಾಲಿಟನ್ ಆಡಳಿತದ ವಿರುದ್ಧ ಅಲ್ಲಿನ ಯುವಜನತೆ, ಪ್ರಮುಖವಾಗಿ ‘ಜೆನ್-ಝೀ’ (Gen Z) ಯುವಕರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. 25 ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆಯು ಸರ್ಕಾರ ಮತ್ತು ಸ್ಥಳೀಯ ಆಡಳಿತದ ವಿರುದ್ಧದ ಸಾರ್ವಜನಿಕ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ.
ಏನಿದು ಘಟನೆ?
ಪುನರ್ವಸತಿ ಕಲ್ಪಿಸದೆ ಬಡವರನ್ನು ತೆರವುಗೊಳಿಸುತ್ತಿರುವ ಬಾಲೇನ್ ಶಾ ಸರ್ಕಾರದ ಕ್ರಮದ ವಿರುದ್ಧ ಭಾನುವಾರ ಸಾವಿರಾರು ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಇದು ಕಳೆದ ವರ್ಷ ಕೆ.ಪಿ. ಶರ್ಮಾ ಓಲಿ ಸರ್ಕಾರ ಪತನಕ್ಕೆ ಕಾರಣವಾದ ಯುವಕರ ಪ್ರತಿಭಟನೆಯನ್ನು ಬೆಂಬಲಿಸಿದ್ದ ಮೇಯರ್ ಬಾಲೆನ್ ಶಾ ಅವರ ಆಡಳಿತಕ್ಕೆ ಎದುರಾಗಿರುವ ಮೊದಲ ದೊಡ್ಡ ರಾಜಕೀಯ ಸವಾಲಾಗಿದೆ.
ಕಠ್ಮಂಡು ಮೆಟ್ರೋಪಾಲಿಟನ್ ಪೊಲೀಸರು ಕಳೆದ ಏಪ್ರಿಲ್ನಿಂದ ನಗರದ ವಿವಿಧ ಕಡೆಗಳಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಸುಮಾರು 2,600ಕ್ಕೂ ಹೆಚ್ಚು ಕುಟುಂಬಗಳ (15,000ಕ್ಕೂ ಹೆಚ್ಚು ಜನರು) ಮನೆಗಳನ್ನು ನೆಲಸಮಗೊಳಿಸಲಾಗಿದೆ. ತೆರವುಗೊಳಿಸಿದವರ ಪೈಕಿ ಸುಮಾರು 325 ಕುಟುಂಬಗಳು ಅತಂತ್ರವಾಗಿದ್ದು, ತಾತ್ಕಾಲಿಕ ವಸತಿ ಕೇಂದ್ರಗಳಲ್ಲಿ ಬದುಕುತ್ತಿವೆ.

ಇಂತಹ ಸಂತ್ರಸ್ತ ಕುಟುಂಬಗಳಿಗೆ ಯಾವುದೇ ಸೂಕ್ತ ಪುನರ್ವಸತಿ ಕಲ್ಪಿಸದೆ, ಜುಲೈ 6ರೊಳಗೆ ವಸತಿ ಕೇಂದ್ರಗಳನ್ನು ಖಾಲಿ ಮಾಡುವಂತೆ ಸರ್ಕಾರ ಜುಲೈ 2ರಂದು ಆದೇಶಿಸಿತ್ತು. ಆದರೆ, ಹೋಗಲು ಬೇರೆ ಜಾಗವಿಲ್ಲದ ಕಾರಣ ಕನಿಷ್ಠ 60 ಕುಟುಂಬಗಳು ಅಲ್ಲಿಂದ ತೆರಳಲು ನಿರಾಕರಿಸಿವೆ. ಈ ಅಮಾನವೀಯ ತೆರವು ಕಾರ್ಯಾಚರಣೆಯ ವಿರುದ್ಧ Gen-Z ಸಿಡಿದೆದ್ದಿದೆ.
ನೇಪಾಳದ ಕಠ್ಮಂಡು ಬೀದಿಯಲ್ಲಿ ಗ್ರಾಹಕರಿಗಾಗಿ ಕಾಯುತ್ತಿದ್ದ ಗಣೇಶ್ ನೇಪಾಳಿ ಎಂಬ ರೈಡ್-ಶೇರಿಂಗ್ ಚಾಲಕನ ಬೈಕಿಗೆ ಕಠ್ಮಂಡು ನಗರ ಪಾಲಿಕೆಯ ಪೊಲೀಸರು ಏಕಾಏಕಿ ವೀಲ್-ಲಾಕ್ (ಚಕ್ರಕ್ಕೆ ಬೀಗ) ಹಾಕಿದರು. ಈ ಅನಿರೀಕ್ಷಿತ ಕ್ರಮದಿಂದ ನೊಂದ ಗಣೇಶ್, ಪ್ರತಿಭಟನೆಯ ಸಂಕೇತವಾಗಿ ತನ್ನ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡರು. ತೀವ್ರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಈ ದುರಂತವು ಜನಸಾಮಾನ್ಯರು ರೊಚ್ಚಿಗೇಳುವಂತೆ ಮಾಡಿದೆ.
ಕಳೆದ ಭಾನುವಾರ (ಜು.12) ಕಠ್ಮಂಡುವಿನ ಸಿಂಗ್ದರ್ಬಾರ್ ಸಚಿವಾಲಯದ ಹೊರಗೆ ನೂರಾರು ಜನರು ಜಮಾಯಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಡವರ ಮೇಲಿನ ದೌರ್ಜನ್ಯ ನಿಲ್ಲಿಸಿ, ಮಾನವ ಹಕ್ಕುಗಳನ್ನು ಗೌರವಿಸಿ ಎಂಬ ಫಲಕಗಳನ್ನು ಹಿಡಿದು ಯುವಕರು ಪ್ರತಿಭಟಿಸಿದ್ದಾರೆ. ಅಕ್ರಮ ಬಂಧನಗಳನ್ನು ತಡೆಯಬೇಕು ಮತ್ತು ಅತಿಕ್ರಮಣ ತೆರವು ಹೆಸರಿನಲ್ಲಿ ಬೀದಿಪಾಲಾಗುತ್ತಿರುವ ಬಡವರಿಗೆ ಆಶ್ರಯ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
ಕಳೆದ ಶುಕ್ರವಾರ ಕಠ್ಮಂಡುವಿನ ವಸತಿ ಪ್ರದೇಶಕ್ಕೆ ನೀರು ನುಗ್ಗಿದ ಪರಿಣಾಮ 150 ಮಂದಿಯನ್ನು ಸ್ಥಳಾಂತರಿಸಲಾಗಿತ್ತು. ಮರುದಿನ ಬಹು ಸಂಖ್ಯೆಯ Gen-Z ಕಾರ್ಯಕರ್ತರು ಅಲ್ಲಿಗೆ ತೆರಳಿದಾಗ, ಜನರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಈ ವೇಲೆ ಗಾಯಗೊಂಡಿದ್ದ ಒಬ್ಬ ಕಾರ್ಯಕರ್ತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಲ್ಲಿಂದ 206 ಕಿಮೀ ದೂರದ ಕೋಶಿ ಪ್ರಾಂತ್ಯದಲ್ಲಿ ಬಂಧಿತ Gen-Z ಕಾರ್ಯಕರ್ತರಿಗೆ ಬೆಂಬಲ ಸೂಚಿಸಿ ಪ್ರತಿಭಟನೆ ನಡೆಸಿದ ಪರಿಣಾಮ 26 ಮಂದಿಯನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ.
ನೇಪಾಳಿ ಕಾಂಗ್ರೆಸ್ ಅಧ್ಯಕ್ಷ ಗಗನ್ ಕುಮಾರ್ ಥಾಪಾ, ಪ್ರತಿಭಟನಾಕಾರರನ್ನು ಬಂಧಿಸಿರುವ ಕ್ರಮವನ್ನು ಖಂಡಿಸಿ, ಅವರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.
2022ರಲ್ಲಿ ಬಾಲೇಂದ್ರ ಶಾ ಮೇಯರ್ ಆಗಿ ಆಯ್ಕೆಯಾದ ನಂತರ, ಕಠ್ಮಂಡು ಮೆಟ್ರೋಪಾಲಿಟನ್ ಪೊಲೀಸರ ವರ್ತನೆ ಅತ್ಯಂತ ಆಕ್ರಮಣಕಾರಿಯಾಗಿದೆ ಎಂದು ವರದಿಯಾಗಿದೆ. ಪಾದಾಚಾರಿ ಮಾರ್ಗಗಳು ಮತ್ತು ಅಸಂಘಟಿತ ಬೀದಿ ಬದಿ ವ್ಯಾಪಾರಗಳನ್ನು ತೆರವುಗೊಳಿಸುವ ನೆಪದಲ್ಲಿ ಪಾಲಿಕೆ ಕೈಗೊಂಡ ಕ್ರಮಗಳು ಸಾರ್ವಜನಿಕರಲ್ಲಿ ಭೀತಿ ಹುಟ್ಟುಹಾಕಿವೆ. ನದಿ ತೀರದ ಬಡವರ ವಸತಿಗಳನ್ನು ತೆರವುಗೊಳಿಸುವ ಪಾಲಿಕೆಯ ಕ್ರಮಗಳು ಕೂಡ ಹಲವು ಬಾರಿ ಹಿಂಸಾತ್ಮಕ ತಿರುವು ಪಡೆದಿವೆ ಎಂದು ಮೇಲಿಂದ ಮೇಲೆ ವರದಿಗಳು ಬಿತ್ತರವಾಗಿವೆ.
ಪಾಲಿಕೆ ಪೊಲೀಸರ ಈ ಕ್ರಮಗಳು ಸಾಂವಿಧಾನಿಕವಾಗಿ ಕಾನೂನು ಬಾಹಿರ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. “ನಗರ ಪಾಲಿಕೆಯ ಪೊಲೀಸರು ದೈಹಿಕ ಬಲಪ್ರಯೋಗ ಅಥವಾ ಗಲಭೆ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ಅಧಿಕಾರ ಹೊಂದಿಲ್ಲ. ಅವರು ಕೇವಲ ಆಡಳಿತಾತ್ಮಕ ಕಾರ್ಯಗಳಿಗೆ ನೆರವಾಗುವ ಒಂದು ಸೌಲಭ್ಯ ಒದಗಿಸುವ ಸಂಸ್ಥೆಯಷ್ಟೇ” ಎಂದು ಹಿರಿಯ ವಕೀಲ ರಾಜು ಚಪಗೈನ್ ಹೇಳಿದ್ದಾರೆ.

ನೇಪಾಳದ ಸಂವಿಧಾನ ಮತ್ತು ‘ಕಠ್ಮಂಡು ಮೆಟ್ರೋಪಾಲಿಟನ್ ಸಿಟಿ ಮುನ್ಸಿಪಲ್ ಪೊಲೀಸ್ ಆಕ್ಟ್ 2023’ ಪ್ರಕಾರ, ಪಾಲಿಕೆ ಪೊಲೀಸರಿಗೆ ಲಾಠಿ ಚಾರ್ಜ್ ಮಾಡುವ ಅಥವಾ ಸಾರ್ವಜನಿಕರನ್ನು ಬಂಧಿಸುವ ಅಧಿಕಾರವಿಲ್ಲ. ಅವರು ಪಾಲಿಕೆಯ ಆಸ್ತಿ ರಕ್ಷಣೆ, ಉದ್ಯಾನವನಗಳ ರಕ್ಷಣೆ ಮತ್ತು ನೈರ್ಮಲ್ಯ ನಿರ್ವಹಣೆಗೆ ಮಾತ್ರ ಸೀಮಿತರಾಗಿರಬೇಕು. ಯಾವುದೇ ಪರಿಸ್ಥಿತಿ ನಿಯಂತ್ರಣ ಮೀರಿ ಹೋದರೆ, ಸ್ಥಳೀಯ ಆಡಳಿತವು ನೇಪಾಳದ ಫೆಡರಲ್ ಪೊಲೀಸರ ಸಹಾಯ ಪಡೆಯಬೇಕೇ ಹೊರತು, ಸ್ವಂತವಾಗಿ ಬಲಪ್ರಯೋಗಿಸುವಂತಿಲ್ಲ” ಎಂದು ನಿವೃತ್ತ ಡಿಐಜಿ ಪೂರ್ಣಚಂದ್ರ ಜೋಷಿ ಸ್ಪಷ್ಟಪಡಿಸಿದ್ದಾರೆ.
ಒಂದು ಕಾಲದಲ್ಲಿ ಶಾ ಅವರು ಸಾಮಾಜಿಕ ಜಾಲತಾಣಗಳನ್ನು ಬಳಸಿ ಜನರ ಬೆಂಬಲ ಗಳಿಸಿದ್ದರು. ಈಗ ಅದೇ ಡಿಜಿಟಲ್ ಪೀಳಿಗೆ (Gen Z), ಅವರ ಅಕ್ರಮಗಳ ವಿಡಿಯೋಗಳನ್ನು ವೈರಲ್ ಮಾಡಿ, ಡಿಜಿಟಲ್ ವೇದಿಕೆಯನ್ನು ಅವರ ವಿರುದ್ಧವೇ ಶಸ್ತ್ರವನ್ನಾಗಿಸಿಕೊಂಡಿದೆ. ‘ಹ್ಯಾಶ್ಟ್ಯಾಗ್’ ಮೂಲಕ ಗೆದ್ದವರು ಈಗ ಅದೇ ‘ಹ್ಯಾಶ್ಟ್ಯಾಗ್’ನಡಿ ಟ್ರೋಲ್ ಆಗುತ್ತಿದ್ದಾರೆ.
ಮೇಯರ್ ಶಾ ಅವರದ್ದು ‘ಹಾರ್ಡ್ವೇರ್’ ಅಭಿವೃದ್ಧಿ (ರಸ್ತೆ, ಅತಿಕ್ರಮಣ ತೆರವು). ಆದರೆ ಜನರಿಗೆ ಬೇಕಾಗಿದ್ದು ‘ಸಾಫ್ಟ್ವೇರ್’ (ಮಾನವೀಯತೆ ಮತ್ತು ಆಡಳಿತದಲ್ಲಿ ಸಂವೇದನೆ). ಕೇವಲ ಕಟ್ಟಡಗಳನ್ನು ಅಥವಾ ಬೀದಿಗಳನ್ನು ಅಂದಗೊಳಿಸಿದರೆ ಸಾಲದು, ಅಲ್ಲಿ ಬದುಕುವ ಜನರ ಬದುಕನ್ನೂ ಅಂದಗೊಳಿಸಬೇಕು ಎಂಬುದನ್ನು ಶಾ ಮರೆತಂತಿದೆ ಜನರ ಅಭಿಪ್ರಾಯ.
ಇದನ್ನೂ ಓದಿ: ಮೋದಿಜೀ.. ಈ ವಿಷಯಗಳಲ್ಲಿ ನಿಮಗೆ ನೀವೇ ಸಾಟಿ!
ನಗರದ ಪಾಲಿಕೆ ದೃಷ್ಟಿಯಲ್ಲಿ ಬಡವರ ಅಸ್ತಿತ್ವವೇ ಒಂದು ‘ಅತಿಕ್ರಮಣ’ (Encroachment) ಎನ್ನುವಂತಾಗಿದೆ. ಗದ್ದುಗೆ ಏರಿದ ತಕ್ಷಣ, ಆಡಳಿತಗಾರರು ಜನರ ಸಮಸ್ಯೆಗಳನ್ನು ‘ಕಸ’ ಎಂದು ಪರಿಗಣಿಸಲು ಶುರು ಮಾಡುತ್ತಾರೆ ಎಂಬುದಕ್ಕೆ ಇದು ಉತ್ತಮ ನಿದರ್ಶನ ಎನ್ನುತ್ತಿದ್ದಾರೆ ಯುವಕರು. ಬಾಲೇನ್ ಶಾ ಅವರು ಅಧಿಕಾರಕ್ಕೆ ಬರುವಾಗ “ನಾನು ಸಿಸ್ಟಮ್ ಬದಲಾಯಿಸಲು ಬಂದಿದ್ದೇನೆ” ಎಂದಿದ್ದರು. ಾದರೆ, “ನೀವು ಕೂಡ ಸಿಸ್ಟಮ್ ಆಗಿಬಿಟ್ಟಿದ್ದೀರಿ, ಅದೂ ಕೂಡ ವ್ಯವಸ್ಥೆಯ ಭಾಗವೇ ಆಗಿರುವ ಅಮಾನವೀಯ ಸಿಸ್ಟಮ್!” ಎಂದು ಹರಿಹಾಯುತ್ತಿದ್ದಾರೆ.
ಯುವ ನಾಯಕರಾಗಿ ಬಂದ ಶಾ, ‘ಮೇಯರ್’ ಎನ್ನುವುದಕ್ಕಿಂತ ‘ಮುನ್ಸಿಪಲ್ ಪೋಲಿಸ್ ಕಮಾಂಡರ್’ನಂತೆ ಗುರುತಿಸಿಕೊಳ್ಳುತ್ತಿದ್ದಾರೆ. ಇವರಂತಹ ‘ಯೂತ್ ಐಕಾನ್’ ಒಬ್ಬರು, ತಮ್ಮಂತ ಯುವಕರ ಬೆಂಬಲದ ಮೇಲೆ ಅಧಿಕಾರ ಹಿಡಿದು, ಈಗ ಆ ಅಧಿಕಾರದ ಸುರುಳಿಯಡಿ ಸಿಲುಕಿ ನಲುಗುತ್ತಿರುವುದು ವಿಪರ್ಯಾಸ..




