ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್ ನಿಯಮಗಳು ಗಾರ್ಮೆಂಟ್ ಕಾರ್ಮಿಕರಿಗೆ ಯಾಕೆ ಮಾರಕ?

Date:

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ ನಿಯಮಗಳು ಕಂಟಕವಾಗಿದೆ. ಹೊಲಿಗೆ ಯಂತ್ರದ ಸಪ್ಪಳದ ಹಿಂದೆ ಕರಗುತ್ತಿರುವ ಬದುಕಿಗೆ ಕಷ್ಟಕಾಲಕ್ಕೆ ಆಸರೆಯಾಗಬೇಕಿದ್ದ ಭವಿಷ್ಯ ನಿಧಿಯೇ ಈಗ ಕೈಗೆಟುಕದಿರುವುದು ಈ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯ ಫಲ.

ದೇಶದಲ್ಲಿ ಜವಳಿ ಮತ್ತು ಸಿದ್ಧ ಉಡುಪು ಕ್ಷೇತ್ರವು ಕೃಷಿಯ ನಂತರ ಅತಿ ಹೆಚ್ಚು ಉದ್ಯೋಗ ನೀಡುವ ಎರಡನೇ ದೊಡ್ಡ ವಲಯ. ಕೇಂದ್ರ ಜವಳಿ ಸಚಿವಾಲಯದ ದತ್ತಾಂಶಗಳ ಪ್ರಕಾರ, ಈ ರಂಗದಲ್ಲಿ ಸುಮಾರು 4.5 ಕೋಟಿಗಿಂತಲೂ ಹೆಚ್ಚು ಜನರು ನೇರ ಉದ್ಯೋಗದಲ್ಲಿದ್ದಾರೆ. ಪರೋಕ್ಷವಾಗಿ (ಕಟಿಂಗ್, ಪ್ಯಾಕಿಂಗ್ ಸಹಾಯಕರು, ಇತರೆ) ಸುಮಾರು 10 ಕೋಟಿಗೂ ಹೆಚ್ಚು ಮಂದಿ ಗಾರ್ಮೆಂಟ್ ಜೀವನೋಪಾಯವಾಗಿದೆ. ಅದರಲ್ಲೂ ಕರ್ನಾಟಕದಲ್ಲಿ ಗಾರ್ಮೆಂಟ್ ವಲಯವು ಅತ್ಯಂತ ಪ್ರಮುಖ ಕೈಗಾರಿಕಾ ಕ್ಷೇತ್ರಗಳಲ್ಲಿ ಒಂದಾಗಿದೆ. ರಾಜ್ಯಾದ್ಯಂತ ಸುಮಾರು 800ಕ್ಕೂ ಹೆಚ್ಚು ಗಾರ್ಮೆಂಟ್ ಫ್ಯಾಕ್ಟರಿಗಳು ಸಕ್ರಿಯವಾಗಿದ್ದು, ಇದರಲ್ಲಿ ಕನಿಷ್ಠ ಐದು ಲಕ್ಷಕ್ಕೂ ಅಧಿಕ ಕಾರ್ಮಿಕರು ದಿನವಿಡೀ ದುಡಿಯುತ್ತಿದ್ದಾರೆ.

- Advertisement -

ಈ ಬೃಹತ್ ಶ್ರಮಿಕ ಪಡೆಯಲ್ಲಿ ಸಿಂಹಪಾಲು ಮಹಿಳೆಯರದೇ ಆಗಿದೆ. ಮುಂಜಾನೆಯಿಂದ ಸಂಜೆಯವರೆಗೆ ನಿರಂತರವಾಗಿ ಹೊಲಿಗೆ ಯಂತ್ರಗಳ ಮುಂದೆ ಕುಳಿತು, ದೇಶ-ವಿದೇಶಗಳಿಗೆ ಉಡುಪುಗಳನ್ನು ಸಿದ್ಧಪಡಿಸುವ ಈ ಬಡ ಕಾರ್ಮಿಕರಿಗೆ ದಿನನಿತ್ಯದ ಜೀವನ ನಿರ್ವಹಣೆಯೇ ಒಂದು ಸವಾಲು. ತಿಂಗಳ ಕೊನೆಯಲ್ಲಿ ಸಿಗುವ ಅಲ್ಪ ಮೊತ್ತದ ವೇತನದಲ್ಲಿ ಮನೆ ಬಾಡಿಗೆ, ಮಕ್ಕಳ ಶಿಕ್ಷಣ, ರೇಷನ್ ಮತ್ತು ಸಣ್ಣಪುಟ್ಟ ವೈದ್ಯಕೀಯ ವೆಚ್ಚಗಳನ್ನು ಸರಿದೂಗಿಸುವುದೇ ಅವರ ಜೀವನದ ನಿತ್ಯದ ಸರ್ಕಸ್. ಆದರೆ, ಇಂತಹ ಕಠಿಣ ಪರಿಸ್ಥಿತಿಯಲ್ಲೂ ಅವರ ಬದುಕಿಗೆ ಒಂದಿಷ್ಟು ಭರವಸೆಯಾಗಿ ನೆರವಾಗುತ್ತಿದ್ದುದು ಅವರ ಸಂಬಳದಿಂದ ಪ್ರತಿ ತಿಂಗಳು ಕಡಿತಗೊಳ್ಳುತ್ತಿದ್ದ ಭವಿಷ್ಯ ನಿಧಿ (ಪಿಎಫ್) ಹಣ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಾಗಲಕೋಟೆ | ನಿಲ್ದಾಣಗಳಿದ್ದರೂ ರಸ್ತೆಯಲ್ಲೇ ಬಸ್‌ ನಿಲುಗಡೆ; ಟ್ರಾಫಿಕ್...

ಬಾಗಲಕೋಟೆ ನಗರದಲ್ಲಿ ಸುಗಮ ಸಂಚಾರಕ್ಕಾಗಿ ಬಸ್‌ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಪ್ರಯಾಣಿಕರು ಬಿಸಿಲು, ಮಳೆಯಿಂದ ರಕ್ಷಣೆ ಪಡೆಯಲು ಆಸನ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಬಸ್‌ಗಳು ನಿಲುಗಡೆಗೊಳ್ಳಲು ಪ್ರತ್ಯೇಕ ಜಾಗವನ್ನೂ ಗುರುತಿಸಲಾಗಿದೆ. ಆದರೆ, ಬಸ್‌ಗಳು ಮಾತ್ರ ನಿಲ್ದಾಣಕ್ಕೆ...

ಅಂಬಾನಿ ರಕ್ಷಣೆಗೆ ನಿಂತಿತೇ ಮೋದಿ ಸರ್ಕಾರ; ಗೆಳೆಯನ ಹಿತ...

ಭಾರತದ ಡಿಜಿಟಲ್ ಆಕಾಶದಲ್ಲಿ ಈಗ ಜಾಗತಿಕ ದೈತ್ಯ ಎಲಾನ್ ಮಸ್ಕ್ ಮತ್ತು ದೇಶೀಯ ಕುಬೇರ ಮುಖೇಶ್ ಅಂಬಾನಿ ನಡುವೆ ಮಹಾಸಮರ ಶುರುವಾಗಿದೆ. ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಇಂಟರ್‌ನೆಟ್ ನೀಡಲು ಸಜ್ಜಾಗಿರುವ ಮಸ್ಕ್ ಅವರ...

ಪೊಲೀಸರು ಇಷ್ಟೊಂದು ಭೀಕರ ಮತ್ತು ಕ್ರೂರವಾಗಿ ವರ್ತಿಸುವುದೇಕೆ?

ಸ್ವತಂತ್ರ ದೇಶದಲ್ಲಿ ತಮ್ಮ ಹಕ್ಕುಗಳಿಗಾಗಿ, ಪ್ರಜಾಪ್ರಭುತ್ವದ ರಕ್ಷಣೆಗಾಗಿ ಶಾಂತಿಯುತವಾಗಿ ಬೀದಿಗಿಳಿದ ಯುವಕ-ಯುವತಿಯರು, ವಿದ್ಯಾರ್ಥಿಗಳು ಹಾಗೂ ವೃತ್ತಿಪರ ಪತ್ರಕರ್ತರ ಮೇಲೆ ಪೊಲೀಸರು ಕನಿಕರವಿಲ್ಲದೆ ಮೃಗಗಳಂತೆ ಎರಗಿಬೀಳುತ್ತಿದ್ದಾರೆ. ಎಸ್‌ಐಆರ್‌ ವಿರುದ್ಧದ ಹೋರಾಟದಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು...

ತುರ್ತು ಸಂದರ್ಭಗಳಲ್ಲಿ, ಅಸೌಖ್ಯ, ಮದುವೆ, ಮನೆ ಬಾಡಿಗೆ ಅಥವಾ ಉದ್ಯೋಗ ಕಳೆದುಕೊಂಡಾಗ ಈ ಪಿಎಫ್ ಮೊತ್ತವೇ ಅವರಿಗೆ ತುರ್ತು ಆಸರೆಯಾಗಿತ್ತು. ಆದರೆ ಈಗ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಜಾರಿಗೆ ತಂದಿರುವ ಪಿಎಫ್ ನಿಯಮಗಳ ಬದಲಾವಣೆಗಳು ಮತ್ತು ಕಠಿಣ ಷರತ್ತುಗಳು ಈ ಶ್ರಮಿಕ ವರ್ಗವನ್ನು ಸಂಪೂರ್ಣ ಅಸಹಾಯಕತೆಗೆ ತಳ್ಳಿವೆ. ತಮ್ಮದೇ ಕಷ್ಟಾರ್ಜಿತ ಉಳಿತಾಯದ ಹಣವನ್ನು ತಮ್ಮ ಕಷ್ಟದ ಸಮಯದಲ್ಲಿ ವಾಪಸು ಪಡೆಯಲಾಗದಂತಹ ದಯನೀಯ ಸ್ಥಿತಿಗೆ ಗಾರ್ಮೆಂಟ್ ನೌಕರರು ಸಿಲುಕಿದ್ದಾರೆ.

ಇದನ್ನೂ ಓದಿ: ಇಪಿಎಫ್‌ಒ ವೇತನ ಮಿತಿ 25,000 ರೂಪಾಯಿಗೆ ಏರಿಕೆ: ಕೇಂದ್ರ ಸಂಪುಟ ಒಪ್ಪಿಗೆ

ಕಠಿಣ ಷರತ್ತುಗಳ ಸರಮಾಲೆ: ಗಾರ್ಮೆಂಟ್ಸ್‌ ಕಾರ್ಮಿಕರಿಗೆ ಬಿದ್ದ ಏಟು

ಪಿಎಫ್ ಹಣ ಹಿಂಪಡೆಯುವ ಪ್ರಕ್ರಿಯೆಗೆ ವಿಧಿಸಲಾಗಿರುವ ನೂತನ ಕಾಯುವಿಕೆ ಅವಧಿ (Waiting Period) ಮತ್ತು ನಿಬಂಧನೆಗಳು ಗಾರ್ಮೆಂಟ್ಸ್ ನೌಕರರ ಪಾಲಿಗೆ ಶಾಪವಾಗಿ ಪರಿಣಮಿಸಿವೆ. ಹಳೆಯ ನಿಯಮಗಳ ಪ್ರಕಾರ, ಉದ್ಯೋಗ ಬಿಟ್ಟ ಕೆಲವೇ ತಿಂಗಳುಗಳಲ್ಲಿ (ಎರಡು ತಿಂಗಳಲ್ಲಿ) ಅಥವಾ ತುರ್ತು ಸಂದರ್ಭಗಳಲ್ಲಿ ಕಾರ್ಮಿಕರು ತಮಗೆ ಬೇಕಾದ ಪಿಎಫ್ ಮೊತ್ತವನ್ನು ಹಿಂಪಡೆದು ತಮ್ಮ ತಕ್ಷಣದ ಕಷ್ಟಗಳನ್ನು ಬಗೆಹರಿಸಿಕೊಳ್ಳುತ್ತಿದ್ದರು. ಆದರೆ, ಹೊಸ ನಿಯಮಗಳಲ್ಲಿ ಪಿಎಫ್ ಮತ್ತು ಪಿಂಚಣಿ ಭಾಗದ ಹಣವನ್ನು ಹಿಂಪಡೆಯಲು 12 ತಿಂಗಳುಗಳಿಂದ 36 ತಿಂಗಳುಗಳವರೆಗೆ ಕಾಯುವ ಕಠಿಣ ಷರತ್ತುಗಳನ್ನು ತರಲಾಗಿದೆ.

ಆದರೆ ಇದು ಮುಖ್ಯವಾಗಿ ಗಾರ್ಮೆಂಟ್ಸ್ ವಲಯದ ಕಾರ್ಮಿಕರಿಗೆ ಸಂಕಷ್ಟ ತಂದೊಡ್ಡಿದೆ. ಗಾರ್ಮೆಂಟ್ಸ್ ವಲಯದಲ್ಲಿ ಕೆಲಸ ಮಾಡುವ ನೌಕರರಿಗೆ ನಿರಂತರ ಕೆಲಸದ ಭದ್ರತೆ ಇರುವುದಿಲ್ಲ; ಆರೋಗ್ಯ ಸಮಸ್ಯೆ, ಕೌಟುಂಬಿಕ ಒತ್ತಡ ಅಥವಾ ಕಂಪನಿಗಳ ಮುಚ್ಚುವಿಕೆಯಿಂದಾಗಿ ಅವರು ಆಗಾಗ್ಗೆ ಕೆಲಸ ಬದಲಾಯಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ 1-3 ವರ್ಷಗಳ ಕಾಲ ಕಾಯಬೇಕು ಎನ್ನುವ ನಿಯಮ ಅವರ ತಕ್ಷಣದ ಜೀವನೋಪಾಯಕ್ಕೆ ಕಂಠಕವಾಗಿದೆ.

ಅಷ್ಟೇ ಅಲ್ಲದೆ, ಗಾರ್ಮೆಂಟ್ಸ್ ಕೆಲಸಗಾರರಿಗೆ ಬರುವ ಸಂಬಳ ತೀರ ಕಡಿಮೆ ಇರುವುದರಿಂದ, ಅವರಲ್ಲಿ ಬಹುತೇಕರಿಗೆ ಬ್ಯಾಂಕಿಂಗ್ ಡಿಜಿಟಲ್ ಸಾಕ್ಷರತೆ ಕಡಿಮೆ ಇರುತ್ತದೆ. ಪಿಎಫ್ ವಾಪಸಾತಿಗಾಗಿ ಆಧಾರ್ ಲಿಂಕಿಂಗ್, ಹೆಸರು-ಜನ್ಮದಿನಾಂಕದ ತಿದ್ದುಪಡಿಗಳು, ಕೆವೈಸಿ ಅಪ್‌ಡೇಟ್, ಆನ್‌ಲೈನ್ ಅರ್ಜಿ ಸಲ್ಲಿಕೆಯಂತಹ ಪ್ರಕ್ರಿಯೆಗಳು ಅತ್ಯಂತ ಸಂಕೀರ್ಣವಾಗಿವೆ. ಸಣ್ಣಪುಟ್ಟ ತಾಂತ್ರಿಕ ವ್ಯತ್ಯಾಸಗಳಿದ್ದರೂ ಪಿಎಫ್ ಕ್ಲೇಮ್‌ಗಳು ತಿರಸ್ಕೃತಗೊಳ್ಳುತ್ತಿದ್ದು, ಪಿಎಫ್ ಕಚೇರಿಗಳು ಮತ್ತು ಸೈಬರ್ ಕೆಫೆಗಳ ಸುತ್ತ ಅಲೆಯುವುದೇ ಅವರಿಗೆ ದೊಡ್ಡ ಕಿರಿಕಿರಿಯಾಗಿದೆ. ಅನಾರೋಗ್ಯದ ಸಂದರ್ಭದಲ್ಲಿ ಅಥವಾ ಕುಟುಂಬದ ತುರ್ತು ವೆಚ್ಚಗಳಿಗೆ ತಮ್ಮದೇ ಖಾತೆಯಲ್ಲಿರುವ ಹಣವನ್ನು ಬಳಸಿಕೊಳ್ಳಲು ಸಾಧ್ಯವಾಗದೆ, ಅವರು ಮತ್ತೆ ಹೊರಗಡೆ ಹೆಚ್ಚಿನ ಬಡ್ಡಿಗೆ ಸಾಲ ಮಾಡುವಂತಾಗಿದೆ.

ಈ ಬಗ್ಗೆ ಈದಿನ ಡಾಟ್‌ ಕಾಮ್‌ಗೆ ಪ್ರತಿಕ್ರಿಯಿಸಿರುವ ಕರ್ನಾಟಕದ ಪ್ರಮುಖ ಗಾರ್ಮೆಂಟ್ ಸಂಘಟನೆಯಾದ ಗಾರ್ಮೆಂಟ್ಸ್ ಮತ್ತು ಜವಳಿ ಕಾರ್ಮಿಕರ ಸಂಘದ (GATWU) ಅಧ್ಯಕ್ಷೆ ಆರ್. ಪ್ರತಿಭಾ ಮಾತನಾಡಿ, “ಹತ್ತು ವರ್ಷಗಳ ಹಿಂದೆ 2026ರಲ್ಲೂ ಕೇಂದ್ರ ಸರ್ಕಾರ ಇದೇ ರೀತಿ ಕಾರ್ಮಿಕ ವಿರೋಧಿ ನಿರ್ಧಾರ ತೆಗೆದುಕೊಂಡಿದ್ದರು. ಆ ಸಂದರ್ಭದಿಂದಲೂ ನಾವು ಇದನ್ನು ವಿರೋಧಿಸುತ್ತಿದ್ದೇವೆ. ಕಾರ್ಮಿಕರ ಪಿಂಚಣಿ ದುಡ್ಡನ್ನು ಕಾರ್ಮಿಕರ ಕೊಡಲಿಲ್ಲ. ಪಿಎಫ್‌ನಲ್ಲಿ ಪಿಂಚಣಿ ನಿಧಿಯನ್ನು 60 ವರ್ಷ ಕಳೆಯುವವರೆಗೂ ತೆಗೆಯಲು ಅವಕಾಶವಿಲ್ಲ. ಆದರೆ ಇದು ಕಾರ್ಮಿಕದ ದುಡ್ಡು, ಇಲ್ಲಿ ಕೇಂದ್ರ ಸರ್ಕಾರದ ಯಾವ ಪಾತ್ರವೂ ಇರಬಾರದು. ಕಾರ್ಮಿಕರು ತಮಗೆ ಬೇಕಾದಂತೆ ಪಿಎಫ್ ಹಣವನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವಿರಬೇಕು” ಎಂದು ಹೇಳಿದರು.

“ಅದರಲ್ಲೂ ಗಾರ್ಮೆಂಟ್ ಕಾರ್ಮಿಕರಿಗೆ ಅತಿ ಕಡಿಮೆ ಸಂಬಳ, ಬಹುತೇಕರು ಹೆಣ್ಣು ಮಕ್ಕಳು ಆಗಿರುವ ಕಾರಣ ಪಿಎಫ್ ಮೊತ್ತವೂ ಅವರಿಗೆ ಅಗತ್ಯವಾಗಿರುತ್ತದೆ. ಈ ಹೆಣ್ಣುಮಕ್ಕಳು ಮನೆಯ ಜವಾಬ್ದಾರಿ, ಎಲ್ಲವನ್ನೂ ತೂಗಿಸಿಕೊಂಡು ಹೋಗಬೇಕಾಗುತ್ತದೆ. ಬರುವ ಸಂಬಳದಲ್ಲಿ ಉಳಿತಾಯ ಮಾಡಲಾಗದು. ಯಾವ ಆಸ್ತಿಯೂ ಇರುವುದಿಲ್ಲ. ಬೆಳಿಗ್ಗೆಯಿಂದ ಸಂಜೆವರೆಗೂ ಇದೊಂದೆ ಕೆಲಸ ಮಾಡಿ, ಜೀವನ ನಡೆಸುವವರು ಇದ್ದಾರೆ. ಆದರೆ ಈ ವರ್ತಮಾನದ ಬದುಕು ಬದುಕಲು ಅವರ ಪಿಎಫ್ ಹಣವನ್ನೂ ಬಳಸಿಕೊಳ್ಳುತ್ತಾರೆ. ಅದೇ ಅವರಿಗೆ ಇರುವಂತಹ ಆದಾಯ ಮೂಲ” ಎಂದು ತಿಳಿಸಿದರು.

pratiba
ಗಾರ್ಮೆಂಟ್ಸ್ ಮತ್ತು ಜವಳಿ ಕಾರ್ಮಿಕರ ಸಂಘದ (GATWU) ಅಧ್ಯಕ್ಷೆ ಆರ್. ಪ್ರತಿಭಾ

“2016ರಲ್ಲಿ ಕೇಂದ್ರದ ನಿಯಮಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು. ಆದರೆ ಈಗ ಕೇಂದ್ರ ಸರ್ಕಾರ ಹಿಂಬಾಗಿಲಿನಿಂದ ನಿಯಮ ಜಾರಿ ಮಾಡಿದೆ. ಎಲ್ಲ ಸಿದ್ಧತೆ ನಡೆಸಿ ಜಾರಿಗೆ ತಂದ ಬಳಿಕ ಪಿಎಫ್ ಅಧಿಕಾರಿಗಳು ಕಾರ್ಮಿಕ ಸಂಘಟನೆಗಳ ಕಚೇರಿಗೆ ಬಂದಿದ್ದಾರೆ. ಕಾರ್ಮಿಕರ ಮನವೊಲಿಸುವಂತೆ ಒತ್ತಾಯಿಸಿದ್ದಾರೆ. ನಾವು ಇದನ್ನು ಖಡಾಖಂಡಿತವಾಗಿ ನಿರಾಕರಿಸಿದ್ದೇವೆ. ಅನ್ಯಾಯವಾಗುವಾಗ ಕಾರ್ಮಿಕರ ಮನವೊಲಿಸಲಾಗದು. ಕಾರ್ಮಿಕರ ದೊಡ್ಡ ಬಂಡವಾಳವನ್ನು ಇಟ್ಟುಕೊಂಡು ಆ ದುಡ್ಡಿನಲ್ಲಿ ನೀವು ಮಾಡುವುದೇನು? ಕಾರ್ಮಿಕರಿಗೆ ಇಂದಿನ ಜೀವನ ಮುಖ್ಯ. ಕಾರ್ಮಿಕರು ತಮ್ಮ ಇಚ್ಛೆಯಿಂದ ಭವಿಷ್ಯಕ್ಕೆ ಉಳಿಸಿಕೊಳ್ಳುವುದಾದರೆ ಉಳಿಸಿಕೊಳ್ಳಲಿ. ಆದರೆ ಅವರ ಇಷ್ಟಕ್ಕೆ ವಿರುದ್ಧವಾಗಿ ಮಾಡಬಾರದು ಎಂದಿದ್ದೇವೆ. ಈ ಬಗ್ಗೆ ಮನವಿ ನೀಡಿದ್ದೇವೆ. ಈ ಬಗ್ಗೆ ಅಕ್ಟೋಬರ್ 9ರಂದು ಸಭೆ ನಡೆಸಿದ್ದಾರೆ. ಆದರೆ ಅದಾದ ಬಳಿಕ ಏನು ನಡೆದಿದೆ ಎಂಬ ಒಂದು ಮಾಹಿತಿಯನ್ನೂ ಅಧಿಕಾರಿಗಳು ನೀಡಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಪಿಎಫ್‌ನಲ್ಲಿ ಕೋಟ್ಯಾಂತರ ಜನರಿದ್ದಾರೆ. ಆದರೆ ಗಾರ್ಮೆಂಟ್ ಕೆಲಸಗಾರರು ಮಾತ್ರ ಈ ನಿಯಮವನ್ನು ವಿರೋಧಿಸುವುದು ಏಕೆ? ಈ ಬಗ್ಗೆ ಸರ್ಕಾರ ಯೋಚಿಸಬೇಕು ಅಲ್ಲವೇ? ಎಲ್ಲರನ್ನೂ ಒಂದೇ ಬುಟ್ಟಿಯಲ್ಲಿ ತೂಗಲು ಆಗುವುದೇ? ಕೇಂದ್ರಕ್ಕೆ ಲಿಂಗತ್ವದ ಆಯಾಮವೇ ತಿಳಿದಿಲ್ಲ. ಗಾರ್ಮೆಂಟ್‌ನಲ್ಲಿ ಹೆಣ್ಣುಮಕ್ಕಳೇ ಹೆಚ್ಚಾಗಿ ದುಡಿಯುತ್ತಾರೆ ಎಂಬ ವಿಚಾರವೂ ಕೇಂದ್ರಕ್ಕೆ ತಿಳಿದಂತಿಲ್ಲ. ಎಲ್ಲರೂ ಸಂಘಟಿತ ವಲಯದಲ್ಲಿ 70-90 ಸಾವಿರ ಸಂಬಳ ಪಡೆಯುವ ಗಂಡಸರು ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಭಾವಿಸಿದಂತಿದೆ. ಹಾಗಾಗಿ ಪಿಎಫ್‌ಗೆ ಏನೇನೋ ನಿಯಮಗಳನ್ನು ತರುತ್ತಾರೆ” ಎಂದು ದೂರಿದರು.

“ಅತಿ ಕಡಿಮೆ ಸಂಬಳ ಪಡೆಯುವ, ಹೆಣ್ಣುಮಕ್ಕಳೇ ಅಧಿಕವಾಗಿರುವ ಗಾರ್ಮೆಂಟ್ ಕೆಲಸಗಾರರು, ಗುತ್ತಿಗೆ ಕಾರ್ಮಿಕರು, ಸೆಕ್ಯೂರಿಟಿ ಗಾರ್ಡ್ ಕಾರ್ಮಿಕರಿಗೆ ಬರುವುದೇ 15 ಸಾವಿರ ರೂಪಾಯಿ ಸಂಬಳ. ಅವರು ಒಂದು ಐದು ವರ್ಷ ಆಗುತ್ತಿದ್ದಂತೆ ಕೆಲಸ ಬಿಡುತ್ತಾರೆ. ಒಂಚೂದು ಉಳಿತಾಯದ ದುಡ್ಡನ್ನು ಜೀವನಕ್ಕೆ ಬಳಸಿಕೊಳ್ಳುತ್ತಾರೆ. ಮತ್ತೆ ಇವರಾರಿಗೂ ನಾವು 60 ವರ್ಷ ಆದ ಮೇಲೂ ಬದುಕಿರುತ್ತೇವೆ ಎಂಬ ನಂಬಿಕೆಯಿಲ್ಲ. ಕೇಂದ್ರ, ರಾಜ್ಯ ಸರ್ಕಾರದಿಂದಾಗಿ ಇಂದಿನ ಸ್ಥಿತಿ ಅಷ್ಟೊಂದು ಕೆಟ್ಟದಾಗಿದೆ” ಎಂದರು.

“ಸದ್ಯ ಎಲ್ಲವೂ ಬೆಲೆ ಏರಿಕೆಯಾಗಿದೆ. ಹಾಲು, ಎಣ್ಣೆ, ಅಕ್ಕಿ ಬೆಲೆ ಎಲ್ಲವೂ ಹೆಚ್ಚಾಗಿದೆ. ಮನೆ ಬಾಡಿಗೆಯೂ ಕನಿಷ್ಠ 10 ಸಾವಿರ ಇರುತ್ತದೆ. ಹೀಗಿರುವಾಗ ಕಾರ್ಮಿಕರು ಬದುಕುವುದು ಹೇಗೆ? ನಾವು ಏನು ಮಾಡುವುದು ಎಂದು ಕೇಳುತ್ತಾರೆ ಕಾರ್ಮಿಕರು. ಕಾರ್ಮಿಕರಿಗೆ ಇಂದಿನ ಜೀವನ ಮುಖ್ಯ. 60 ವರ್ಷಕ್ಕೆ ನೆಮ್ಮದಿಯಾಗಿರಬಹುದು ಎಂದು ಇಂದಿನ ದುಡ್ಡನ್ನು ನೀವು ಯಾಕೆ ಕಿತ್ತುಕೊಳ್ಳುತ್ತಿದ್ದೀರಾ ಎಂದು ಕಾರ್ಮಿಕರು ಪ್ರಶ್ನಿಸುತ್ತಾರೆ” ಎಂದು ಹೇಳಿದರು.

“ನೀವು ಸತ್ತ ಮೇಲೆ ನಿಮ್ಮ ಮಕ್ಕಳಿಗೆ, ಗಂಡನಿಗೆ ಈ ಹಣ ಬರುತ್ತದೆ ಎಂದು ಸರ್ಕಾರ ಹೇಳುತ್ತದೆ. ಆದರೆ ಇಲ್ಲಿ ಹಲವು ಗೊಂದಲ, ಪ್ರಶ್ನೆಗಳಿವೆ. ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಈ ಹಣವನ್ನು ಕೊಡುತ್ತದೆ ಎಂಬುದು ಯಾವ ಗ್ಯಾರಂಟಿ? ಅಂದು ಇನ್ನೆನೋ ನಿಯಮ ಬದಲಾವಣೆ ಮಾಡಬಹುದು. ಈ ಮಹಿಳೆ 60ಕ್ಕೂ ಮೊದಲೇ ತೀರಿಕೊಂಡರೆ ಆ ಹಣವನ್ನು ಗಂಡನಿಗೆ ನೀಡುತ್ತಾರೆ. ಗಂಡ ಇಲ್ಲದಿದ್ದರೆ ಮಕ್ಕಳಿಗೆ 24 ವರ್ಷ ಆಗುವವರೆಗೂ ಪಿಂಚಣಿ ನೀಡಲಾಗುತ್ತದೆ ಎಂದು ಸರ್ಕಾರ ಹೇಳುತ್ತದೆ” ಎನ್ನುತ್ತಾ ಇದರಲ್ಲಿರುವ ಲೋಪವನ್ನು ಉದಾಹರಣೆ ಸಹಿತ ವಿವರಿಸಿದರು.

ಇದನ್ನೂ ಓದಿ: ಅಡಚಣೆಗಳ ನಡುವೆ ಉದ್ಯೋಗ ಸೃಷ್ಟಿಯೋ, ದಾಖಲೆಯ ನಿರುದ್ಯೋಗವೋ: ಮೋದಿ ಹೇಳಿಕೆಯ ಹಿಂದಿನ ನಿಜಾಂಶವೇನು?

“ಒಬ್ಬ ಮಹಿಳೆಗೆ 40 ವರ್ಷವಾಗಿರುತ್ತದೆ. ಆಕೆಗೆ 20 ವರ್ಷದ ಮಗನಿರುತ್ತಾನೆ. ಗಂಡ ಇರುವುದಿಲ್ಲ. ಈ ಮಹಿಳೆ 45 ವರ್ಷ ಕಳೆದ ಸತ್ತು ಹೋದಳು ಎಂದುಕೊಳ್ಳಿ. ಆದರೆ ಆ ಸಮಯಕ್ಕೆ ಮಗನಿಗೆ 20 ವರ್ಷಕ್ಕೂ ಮೇಲೆ ವಯಸ್ಸಾಗಿರುತ್ತದೆ. ಗಂಡನೂ ಇಲ್ಲ. ಹಾಗಿದ್ದಾಗ ನೀವು ಏನು ಮಾಡುತ್ತೀರಾ? ಈ ಪ್ರಶ್ನೆಗೆ ಪಿಎಫ್ ಅಧಿಕಾರಿಗಳಿಂದ ಯಾವ ಉತ್ತರವೂ ಇಲ್ಲ. ಯಾವ ಸೂಕ್ಷ್ಮತೆಯೂ ಇಲ್ಲದೆ ಕಾನೂನು ಬದಲಾಯಿಸಿರುವುದಕ್ಕೆ ಇದು ಸ್ಪಷ್ಟ ಉದಾಹರಣೆ. ಈ ನಿಯಮ ಬದಲಾಯಿಸಿರುವುದರ ಹಿಂದೆ ಕೇಂದ್ರದ ಹುನ್ನಾರವಿದೆ. ಒಬ್ಬರಿಂದಲೇ ಸಾವಿರ ಕೋಟಿ ರೂಪಾಯಿ ಪಡೆಯುವ ಬದಲು ಸಾವಿರ ಜನರಿಂದ ಒಂದೊಂದು ಸಾವಿರ ಪಡೆದರೂ ದೊಡ್ಡ ಮೊತ್ತವಾಗುತ್ತದೆ ಅಲ್ಲವೇ? ಅದನ್ನು ಎಲ್ಲೋ ಹೂಡಿಕೆ ಮಾಡುತ್ತಾರೆ. ಕಾರ್ಮಿಕರಿಗೆ ಬಡ್ಡಿ ಕೊಡುತ್ತೇವೆ ಎಂದು ಹೇಳುತ್ತಾರೆ. ಆದರೆ ಕಾರ್ಮಿಕರ ದುಡ್ಡನ್ನು ಹೂಡಿಕೆ ಮಾಡಿ ಲಾಭ ಮಾಡುತ್ತೀರಲ್ಲವಾ ಅದರಿಂದ ಕಾರ್ಮಿಕರಿಗೆ ಏನಾದ್ರು ಕೊಡುತ್ತೀರಾ” ಎಂದು ಪ್ರಶ್ನಿಸಿದರು.

ಆರ್ಥಿಕ ಅಭಾವದ ಸುಳಿಯಲ್ಲಿ ಕಾರ್ಮಿಕರು

ಗಾರ್ಮೆಂಟ್ಸ್ ಕ್ಷೇತ್ರದಲ್ಲಿ ಕೆಲಸ ಮಾಡುವ ಹೆಚ್ಚಿನ ನೌಕರರು ಕುಟುಂಬದ ಏಕೈಕ ಆದಾಯದ ಮೂಲವಾಗಿರುತ್ತಾರೆ. ಆದರೆ ನಿಯಮಗಳ ಬಿಗಿಗೊಳಿಸುವಿಕೆಯಿಂದಾಗಿ, ತಮ್ಮ ಖಾತೆಯಲ್ಲಿ ಲಕ್ಷಾಂತರ ರೂಪಾಯಿ ಹಣವಿದ್ದರೂ ಅದನ್ನು ಕಷ್ಟದ ಸಮಯದಲ್ಲಿ ಬಳಸಿಕೊಳ್ಳಲಾಗದ ವಿಚಿತ್ರ ಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ, ಕಾರ್ಮಿಕರು ಖಾಸಗಿ ಲೇವಾದೇವಿದಾರರ ಬಳಿ ಹೆಚ್ಚಿನ ಬಡ್ಡಿಗೆ ಸಾಲ ಪಡೆದು ಸಾಲದ ಸುಳಿಗೆ ಸಿಲುಕುವಂತಾಗಿದೆ.

ಉದ್ಯೋಗದಾತರು (ಫ್ಯಾಕ್ಟರಿ ಮಾಲೀಕರು) ಮತ್ತು ನೌಕರರ ನಡುವಿನ ಒಪ್ಪಂದಗಳ ಕೊರತೆ, ಕಾರ್ಮಿಕ ಇಲಾಖೆಯ ಸರಿಯಾದ ಮಾರ್ಗದರ್ಶನದ ಅಭಾವವೂ ಈ ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಅಷ್ಟಕ್ಕೂ ಸರ್ಕಾರವು ಇಂತಹ ಕಠಿಣ ನಿಯಮಗಳನ್ನು ಜಾರಿಗೆ ತರುವ ಮೊದಲು ಗಾರ್ಮೆಂಟ್ಸ್‌ನಂತಹ ಅಸಂಘಟಿತ ಅಥವಾ ಕಡಿಮೆ ವೇತನ ಪಡೆಯುವ ಶ್ರಮಿಕರ ಸ್ಥಿತಿಗತಿಯನ್ನು ಪರಿಗಣಿಸಬೇಕಿತ್ತು. ಕಾರ್ಮಿಕ ಸಂಘಟನೆಗಳು ನಿಯಮಗಳ ತಿದ್ದುಪಡಿಗೆ ಒತ್ತಾಯಿಸಿ ಪ್ರತಿಭಟನೆಗಳನ್ನು ನಡೆಸುತ್ತಿದ್ದರೂ, ಸರ್ಕಾರ ಅತ್ತ ಗಮನ ಹರಿಸದಿರುವುದು ಖಂಡನಾರ್ಹ. ಇವೆಲ್ಲವುದರ ಹಿಂದಿರುವುದು ಕಾರ್ಮಿಕರ ಹಣವನ್ನು ಲೂಟಿ ಮಾಡಿ ಮುಕ್ತ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಲಾಭ ಪಡೆಯುವ ಮೋದಿ ಸರ್ಕಾರದ ಹುನ್ನಾರ ಎಂಬುದು ಸ್ಪಷ್ಟ. ಆದರೆ ಮಾರುಕಟ್ಟೆಯಲ್ಲಿ ಈ ಹೂಡಿಕೆ ಮುಳುಗಿ ಹೋದರೆ ಏನು ಗತಿ?

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿ ಮಾತು | ಸಂಪ್ರದಾಯ, ಮಾನವ ಸಾಗಾಣಿಕೆಯಲ್ಲಿ ಬಿಕರಿಯಾಗುವ ದೇಹಗಳು

ಬೇಟಿ ಪಢಾವೋ, ಬೇಟಿ ಬಚಾವೋ’ ಕೇವಲ ಕಾಗದದ ಮೇಲಿನ ಘೋಷಣೆಯಾಗಿಯೇ ಉಳಿದಿರುವ ಹೊತ್ತಿನಲ್ಲಿ ದೈನಿಕ...

ವಿಜಯಪುರ | ಬಿ.ಎಲ್.ಡಿ.ಇ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ನೇಮಕಾತಿ

ತಾಂತ್ರಿಕ ಶಿಕ್ಷಣದೊಂದಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ವಿಜಯಪುರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ...