ಮಾತಾ ರಮಾಬಾಯಿ ಅಂಬೇಡ್ಕರ್ ಮಹಿಳಾ ಟ್ರಸ್ಟ್ ಹಾಗೂ ಸರ್ವೋದಯ ಸಿದ್ಧಾರ್ಥ ಕ್ಲಬ್ ವತಿಯಿಂದ ಬಸವಕಲ್ಯಾಣ ನಗರದ ಸರ್ವೋದಯ ಕಾಲೋನಿಯಲ್ಲಿ ಬೌದ್ಧ ಧರ್ಮದ ಚಾರಿಕಾ ಕಾರ್ಯಕ್ರಮ ನಡೆಯಿತು.
ಸರ್ವೋದಯ ಕಾಲೋನಿಯ ಬೌದ್ಧ ಉಪಾಸಕರು ಸುಮಾರು 16 ಬೌದ್ಧ ಭಿಕ್ಕುಗಳನ್ನು ಭಕ್ತಿಪೂರ್ವಕವಾಗಿ ಬರಮಾಡಿಕೊಂಡರು. ತಮ್ಮ ಮನೆಗಳ ಮುಂದೆ ಹೂಗಳಿಂದ ಅಲಂಕಾರ ಮಾಡಿ, ಭಿಕ್ಕುಗಳ ಪಾದಗಳಿಗೆ ನೀರು ಹಾಗೂ ಹೂವುಗಳನ್ನು ಅರ್ಪಿಸುವ ಮೂಲಕ ಗೌರವಪೂರ್ವಕವಾಗಿ ಸ್ವಾಗತಿಸಿದರು. ತನು, ಮನ ಹಾಗೂ ಧನದಿಂದ ಧಮ್ಮದಾನ ಸಲ್ಲಿಸಿದರು.

ಸುಮಾರು 30ರಿಂದ 35 ಕುಟುಂಬಗಳು ಚಾರಿಕಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಹಾರ, ಹಣ್ಣು-ಹಂಪಲು ಹಾಗೂ ಧವಸ-ಧಾನ್ಯಗಳನ್ನು ದಾನವಾಗಿ ನೀಡಿದರು. ಕಾರ್ಯಕ್ರಮದ ನೇತೃತ್ವವನ್ನು ಬಸವಕಲ್ಯಾಣ ತಾಲ್ಲೂಕಿನ ಹತ್ಯಾಳದ ಬುದ್ಧ ಹಿಲ್ ಬುದ್ಧ ವಿಹಾರದ ಪೂಜ್ಯ ಭಂತೆ ಧಮ್ಮನಾಗ ವಹಿಸಿಕೊಂಡಿದ್ದರು.
ಭಂತೆ ಧಮ್ಮನಾಗ ಮಾತನಾಡಿ, “ಚಾರಿಕಾ ಎಂದರೆ ಧರ್ಮದ ಸಂದೇಶವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕೈಗೊಳ್ಳುವ ಧಮ್ಮಯಾತ್ರೆಯಾಗಿದ್ದು, ಚಾರಿಕಾ ಕಾರ್ಯಕ್ರಮವು ಸಮಾಜದಲ್ಲಿ ಸಮತೆ, ಕರುಣೆ ಹಾಗೂ ಬಂಧುತ್ವದ ಭಾವನೆಗಳನ್ನು ಬೆಳೆಸಲು ಸಹಕಾರಿಯಾಗಿದೆ” ಎಂದರು.
ಶ್ರೀಲಂಕಾ, ಕಾಂಬೋಡಿಯಾ ಹಾಗೂ ವಿಯೆಟ್ನಾಂ ದೇಶಗಳಲ್ಲಿ ಬೆಳಿಗ್ಗೆ 6 ಗಂಟೆಗೆ ಚಾರಿಕಾ ನಡೆಯುತ್ತದೆ. ಗೌತಮ ಬುದ್ಧರು ಜ್ಞಾನೋದಯದ ನಂತರ ತಮ್ಮ 60 ಅರ್ಹತ್ ಶಿಷ್ಯರಿಗೆ ಧಮ್ಮದ ಸಂದೇಶವನ್ನು ಜನರಿಗೆ ತಲುಪಿಸುವಂತೆ ನೀಡಿದ ಮೊದಲ ಆದೇಶವೇ ಚಾರಿಕೆಗೆ ಸಂಬಂಧಿಸಿದೆ. ಧರ್ಮಪ್ರಚಾರ, ಭಿಕ್ಷಾಟನೆ ಹಾಗೂ ಸಮಾಜಸೇವೆ ಇದರ ಪ್ರಮುಖ ಉದ್ದೇಶಗಳಾಗಿವೆ ಎಂದು ತಿಳಿಸಿದರು.

ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರು ಇದೇ ದಿನದಂದು ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧ ಧರ್ಮವನ್ನು ಸ್ವೀಕರಿಸಿದ ಐತಿಹಾಸಿಕ ಘಟನೆಯನ್ನು ಸ್ಮರಿಸಿದ ಅವರು, ಇಂತಹ ಚಾರಿಕಾ ಕಾರ್ಯಕ್ರಮವನ್ನು ಆಯೋಜಿಸಿರುವುದು ಜಿಲ್ಲೆಯಲ್ಲಿಯೇ ಮೊದಲ ಪ್ರಯತ್ನವಾಗಿದೆ ಎಂದು ಹೇಳಿದರು.
ಇದನ್ನೂ ಓದಿ : ಬೀದರ್ | ಜಿಪಂ, ತಾಪಂ ಚುನಾವಣೆ : ಸಾಮಾಜಿಕ ಜಾಲತಾಣದಲ್ಲಿ ಆಕಾಂಕ್ಷಿಗಳ ಪ್ರಚಾರ ಜೋರು!
ಕಾರ್ಯಕ್ರಮದಲ್ಲಿ ನಿವೃತ್ತಿ ಕಾಂಬಳೆ, ನ್ಯಾಯವಾದಿ ಅರ್ಜುನ್ ಸಾಗರ ಹಾಗೂ ಶ್ರೀಧರ ಹುಬ್ಬಾರೆ ಉಪಸ್ಥಿತರಿದ್ದರು. ಮನೋಹರ ಹೋಳ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಸಂಜೀವಕುಮಾರ ನಡುಕರ ನಿರೂಪಿಸಿದರು.




