ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರವಾರು ಮೀಸಲಾತಿ ಪ್ರಕಟವಾಗುತ್ತಿದ್ದಂತೆ, ಬೀದರ್ ಜಿಲ್ಲೆಯ ಗ್ರಾಮೀಣ ರಾಜಕೀಯ ವಲಯದಲ್ಲಿ ಚುನಾವಣಾ ಚಟುವಟಿಕೆಗಳು ಗರಿಗೆದರಿದ್ದು, ಟಿಕೆಟ್ ಆಕಾಂಕ್ಷಿಗಳ ದಂಡು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ಅಭ್ಯರ್ಥಿಗಳನ್ನಾಗಿ ಬಿಂಬಿಸಿಕೊಳ್ಳುತ್ತಿದ್ದಾರೆ.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಸಿಪಿಐ ಸೇರಿದಂತೆ ಇತರೆ ಪಕ್ಷಗಳ ಕಾರ್ಯಕರ್ತರು, ಮುಖಂಡರು ಈಗಾಗಲೇ ಫೇಸ್ಬುಕ್, ವಾಟ್ಸ್ಆಪ್, ಇನ್ಸ್ಟಾ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯ ಸಂದೇಶ, ಜನಸೇವೆಯ ಭರವಸೆ, ಕ್ಷೇತ್ರದ ಅಭಿವೃದ್ಧಿಯ ಕುರಿತಾದ ಎಐ ಬರಹಗಳ ಪೋಸ್ಟರ್ಗಳ ಮುಖಾಂತರ ಪ್ರಚಾರದ ಹವಾ ಜೋರಾಗಿದ್ದು, ಆಕಾಂಕ್ಷಿಗಳು ವಿವಿಧ ಸೋಶಿಯಲ್ ಮೀಡಿಯಾ ಪೇಜ್ಗಳ ಮುಖಾಂತರವೂ ಪ್ರಚಾರಕ್ಕಾಗಿ ʼಪ್ರಬಲʼ ಪೈಪೋಟಿ ನಡೆಸುತ್ತಿದ್ದಾರೆ.
ಕಳೆದ ಆರು ವರ್ಷಗಳಿಂದ ಚುನಾವಣೆ ನಡೆಯದೇ ನನೆಗುದಿಗೆ ಬಿದ್ದಿರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿಗೆ ರಾಜ್ಯ ಸರ್ಕಾರ ಇದೀಗ ಮೀಸಲು ಪ್ರಕಟಿಸುತ್ತಿದ್ದಂತೆ ವಿವಿಧ ಪಕ್ಷಗಳ ಕಾರ್ಯಕರ್ತರಲ್ಲಿ ಹುಮ್ಮಸ್ಸು ಇಮ್ಮಡಿಯಾಗಿದೆ. ತಮ್ಮ ರಾಜಕೀಯ ಭವಿಷ್ಯಕ್ಕೆ ಅನುಕೂಲವಾಗಿರುವ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಹಲವರು ತೆರೆಮರೆಯಲ್ಲೇ ಕಸರತ್ತು ನಡೆಸುತ್ತಿದ್ದಾರೆ.
ಜಿಪಂ, ತಾಪಂ ಚುನಾವಣೆಯ ಮೀಸಲಾತಿ ಪ್ರಕಟವಾದ ಬಳಿಕ ಕೆಲ ಆಕಾಂಕ್ಷಿಗಳ ಹೆಸರು ಪಕ್ಷದ ಚಿಹ್ನೆಯೊಂದಿಗೆ ತಾವು ಕ್ಷೇತ್ರದ ಪ್ರಬಲ ಆಕಾಂಕ್ಷಿ ಎಂದು ಹೇಳಿಕೊಳ್ಳುತ್ತಿದ್ದಾರೆ. ʼನಮ್ಕಡೆ ಈ ಸಲ ನಮ್ಮ ಕ್ಯಾಟಗೆರಿ ಬಂದಿದೆ, ಚಾನ್ಸ್ ಕೊಟ್ರೆ ಒಂದು ಕೈ ನೋಡೇ ಬಿಡೋಣʼ ಎಂಬ ಉತ್ಸಾಹದಲ್ಲಿ ಆಕಾಂಕ್ಷಿಗಳಿದ್ದರೆ, ಈ ಬಾರಿ ಹೊಸ ಮುಖಗಳಿಗೆ ಅವಕಾಶ ಸಿಗುವ ನಿರೀಕ್ಷೆಯೂ ಮೂಡಿದೆ.
ಜಿಲ್ಲಾ, ತಾಲ್ಲೂಕು ಪಂಚಾಯತ್ ಚುನಾವಣೆಗಾಗಿ ಬಕಪಕ್ಷಿಯಂತೆ ಕಾದು ಕುಳಿತ್ತಿದ್ದರು. ಹಲವು ವರ್ಷಗಳಿಂದ ಚುನಾವಣೆ ನಡೆಯದರಿಂದ ಭರವಸೆಯೂ ಕಳೆದುಕೊಂಡಿದ್ದರು. ಇದೀಗ ಮೀಸಲ ಪ್ರಕಟವಾದ ಬಳಿಕ ಸ್ಪರ್ಧಾ ಆಕಾಂಕ್ಷಿಗಳು ಮತ್ತೆ ಮತದಾರರತ್ತ ಚಿತ್ತ ನೆಟ್ಟು ಅವರ ಸಂಪರ್ಕಿಸಲು ಮುಂದಾಗಿದ್ದಾರೆ. ಮೀಸಲಾತಿ ಪ್ರಕಟ ಕುರಿತು ಆಕ್ಷೇಪಣೆ ಸಲ್ಲಿಸಲು ಇನ್ನೂ ಅವಕಾಶ ಕಲ್ಪಿಸಲಾಗಿದೆ. ಇನ್ನೂ ಅಂತಿಮ ಮೀಸಲು ಪ್ರಕಟವಾಗಬೇಕು. ಆದರೆ, ʼಕೂಸು ಹುಟ್ಟುವ ಮೊದಲೇ ಕುಲಾಯಿʼ ಎಂಬಂತೆ ಚುನಾವಣೆ ಘೋಷಣೆ ಮೊದಲೇ ಆಕಾಂಕ್ಷಿಗಳ ಪೈಪೋಟಿ ಇಳಿದಿದ್ದಾರೆ.
ಬೀದರ್ ಜಿಲ್ಲೆಯಲ್ಲಿ 34 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲು ಪ್ರಕಟವಾಗಿದ್ದು, ಆ ಕ್ಷೇತ್ರ ವ್ಯಾಪ್ತಿಯ ಕ್ಷೇತ್ರಗಳಿಗೆ ಮೀಸಲು ಹಂಚಿಕೆ ಮಾಡಲಾಗಿದೆ. ಇನ್ನು ಜಿಲ್ಲೆಯ ಎಂಟು ತಾಲೂಕು ಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು 123 ತಾಪಂ ಕ್ಷೇತ್ರಗಳ ಮೀಸಲಿಡಲಾಗಿದ್ದು, ಈ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳಲ್ಲಿ ಆಕಾಂಕ್ಷಿಗಳು ಸ್ಪರ್ಧೆಗೆ ತುದಿಗಾಲಲ್ಲಿ ನಿಂತಿದ್ದಾರೆ. ಪಕ್ಷದ ಜೊತೆ ಯಾವುದೇ ಪಕ್ಷಗಳ ಜೊತೆ ಗುರುತಿಸಕೊಳ್ಳದವರೂ ಈಗ ಚುನಾವಣೆಯಲ್ಲಿ ನನಗೊಂದು ಅವಕಾಶ ಕೊಡಿ ಎಂದು ಕೇಳುತ್ತಿದ್ದಾರೆ.
ಕೆಲವರು ತಮ್ಮ ಹಿಂದಿನ ಜನಸೇವಾ ಕಾರ್ಯಗಳನ್ನು ನೆನಪಿಸುತ್ತಿದ್ದಾರೆ. ಇನ್ನು ಕೆಲವರು ಕ್ಷೇತ್ರದ ಅಭಿವೃದ್ಧಿಗೆ ತಾವು ನೀಡಲಿರುವ ಕೊಡುಗೆಗಳ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಬೆಂಬಲಿಗರು ತಮ್ಮ ನೆಚ್ಚಿನ ನಾಯಕರ ಫೋಟೊದೊಂದಿಗೆ ಪೋಸ್ಟರ್ ರಚಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದು, ಈ ಬಾರಿ ಈ ಕ್ಷೇತ್ರಕ್ಕೆ ಟಿಕೆಟ್ ಯಾರಿಗೆ? ಬಿಜೆಪಿಯಿಂದ ಯಾರು? ಕಾಂಗ್ರೆಸ್ನಿಂದ ಯಾರಿಗೆ ಎಂಬಿತ್ಯಾದ ರಾಜಕೀಯ ಚರ್ಚೆಗಳು ದಿನದಿಂದ ದಿನಕ್ಕೆ ಕಾವೇರುತ್ತಿವೆ.
ಮೀಸಲಾತಿ ಆಧಾರದಲ್ಲಿ ಅವಕಾಶ ಸಿಕ್ಕರೆ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಸ್ಪರ್ಧಿಸಬೇಕೆಂಬ ನಿರೀಕ್ಷೆಯಲ್ಲಿರುವ ಕೆಲ ಆಕಾಂಕ್ಷಿಗಳಿಗೆ ಮೀಸಲು ಪ್ರಕಟ ಬಳಿಕ ನಿರಾಸೆ ಮೂಡಿದ್ದು ಕಟು ಸತ್ಯ. ಯಾವ ಕ್ಷೇತ್ರ ವ್ಯಾಪ್ತಿಯಲ್ಲಿ ಸ್ಪರ್ಧಿಸಿದರೆ ಯಶಸ್ಸು ಸಿಗಬಹುದು, ಯಾವ ಕ್ಷೇತ್ರದಲ್ಲಿ ಯಾವ ಸಮುದಾಯದ ಮತ ಬ್ಯಾಂಕ್ ಎಷ್ಟು ಎಂಬೆಲ್ಲ ರಾಜಕೀಯ ಲೆಕ್ಕಚಾರಗಳು ನಡೆಯುತ್ತಿರುವುದು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ. ಮೀಸಲಾತಿ ಪ್ರಕಟವಾದ ಬಳಿಕ ಹೊಸ ಮುಖಗಳಿಗೆ ಅವಕಾಶ ಸಿಗಬಹುದೆಂಬ ನಿರೀಕ್ಷೆ ಇಟ್ಟುಕೊಂಡು ಟಿಕೆಟ್ ಗಿಟ್ಟಿಸಿಕೊಳ್ಳಲು ತಮ್ಮ ಪಕ್ಷದ ನಾಯಕರನ್ನು ಭೇಟಿಯಾಗಿ ಚರ್ಚಿಸುವ ಕಾರ್ಯ ತೆರೆಮರೆಯಲ್ಲಿ ನಡೆಯುತ್ತಿದೆ ಎನ್ನಲಾಗಿದೆ.
ಬಿಜೆಪಿ ಜೆಡಿಎಸ್ ಮೈತ್ರಿ ಏನಾಗಲಿದೆ
ಕಳೆದ ಲೋಕಸಭೆ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟದೊಂದಿಗೆ ಕೈಜೋಡಿಸಿದ ಜೆಡಿಎಸ್ ಜಿಪಂ, ತಾಪಂ ಚುನಾವಣೆಯಲ್ಲಿಯೂ ಮೈತ್ರಿ ಧರ್ಮ ಪಾಲಿಸುತ್ತದೆಯೊ ಅಥವಾ ಸ್ಥಳೀಯ ಚುನಾವಣೆ ಎಂದು ಪ್ರತ್ಯೇಕವಾಗಿ ಸ್ಪರ್ಧಿಸುತ್ತದೆಯೋ ಎಂಬುದು ಇದೀಗ ಭಾರಿ ಕುತೂಹಲ ಮೂಡಿಸಿದೆ.
ಬೀದರ್ ಜಿಲ್ಲೆಯ ಕೆಲ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಜೊತೆಗೆ ಜೆಡಿಎಸ್ ಆಕಾಂಕ್ಷಿಗಳ ಮಧ್ಯೆ ಪೈಪೋಟಿ ಶುರುವಾಗಿದೆ. ಮೈತ್ರಿದಿಂದಾಗಿ ಬಿಜೆಪಿ-ಜೆಡಿಎಸ್ ಪಕ್ಷದ ಮುಖಂಡರಿಗೆ ಇದು ತಲೆನೋವಾಗಿ ಪರಿಣಮಿಸಿದರೆ, ಎರಡೂ ಪಕ್ಷಗಳ ಆಕಾಂಕ್ಷಿಗಳಿಗೆ, ಕಾರ್ಯಕರ್ತರಿಗೂ ಇದು ಮೈತ್ರಿಯೋ ಅಥವಾ ಪ್ರತ್ಯೇಕ ಸ್ಪರ್ಧೆಯೊ ಎಂಬ ಚರ್ಚೆಯಲ್ಲಿ ತೊಡಗಿದ್ದಾರೆ.
ಕರ್ನಾಟಕ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಶೇ 50ರಷ್ಟು ಇದ್ದೇ ಇದೆ. ಈಗಾಗಲೇ ಪ್ರಕಟವಾದ ಬೀದರ್ ಜಿಲ್ಲೆಯ ಎಲ್ಲಾ ಜಿಲ್ಲಾ ತಾಲ್ಲೂಕು ಪಂಚಾಯಿತಿ ಕ್ಷೇತ್ರದಲ್ಲಿ ಮಹಿಳೆಯರಿಗೆ ಅರ್ಧದಷ್ಟು ಮೀಸಲು ಕ್ಷೇತ್ರಗಳಿವೆ. ಕೆಲವು ಕಡೆ ಪಕ್ಷದ ಮುಂಚೂಣಿ ಮುಖಂಡರು ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಮಹಿಳಾ ಮೀಸಲಾತಿ ಇರುವ ಕ್ಷೇತ್ರಗಳಲ್ಲಿ ತಮ್ಮ ಪತ್ನಿ, ತಾಯಿ, ಮಗನಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಲು ಎದುರು ನೋಡುತ್ತಿದ್ದಾರೆ. ಕೆಲ ಪಕ್ಷದ ನಾಯಕರು ತಮ್ಮ ಕುಟುಂಬದ ಸದಸ್ಯರನ್ನೇ ಕಣಕ್ಕಿಳಿಸುವ ಲೆಕ್ಕಚಾರದಲ್ಲಿ ತೊಡಗಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.
ರಾಜಕಾರಣಕ್ಕೆ ಯುವಜನರ ಉತ್ಸಾಹ
ರಾಜಕೀಯ ಕ್ಷೇತ್ರದಲ್ಲಿ ಪ್ರವೇಶಿಸಲು ಹಿರಿಯರೊಂದಿಗೆ ಯುವ ಜನರು ಉತ್ಸಾಹದಲ್ಲಿದ್ದಾರೆ. ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಹೆಚ್ಚು ಆಸಕ್ತಿ ತೋರದ ಯುವ ಜನರು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸ್ಪರ್ಧಿಸಲು ಮುಂದಾಗುತ್ತಾರೆ. ಇದಕ್ಕೆ ಪೂರಕವೆಂಬಂತೆ ಇದೀಗ ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧೆಗೆ ಹೆಚ್ಚಿನ ಯುವಜನರು, ಅದರಲ್ಲೂ ಹೊಸಬರು ತಮ್ಮನ್ನು ಅಭ್ಯರ್ಥಿಗಳನ್ನಾಗಿ ಬಿಂಬಿಸಿಕೊಳ್ಳುತ್ತಿದ್ದಾರೆ. ಶೇ 50ರಷ್ಟು ಮೀಸಲು ಇರುವ ಕ್ಷೇತ್ರಗಳಲ್ಲಿ ರಾಜಕೀಯ ಆಸಕ್ತಿ ಹೊಂದಿರುವ ಯುವತಿಯರು ಸ್ಪರ್ಧೆಗೆ ಮುಂದಾಗಬೇಕು ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
ಜಿಲ್ಲಾ, ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಪ್ರಕಟವಾಗಿರುವುದು ಚುನಾವಣಾ ಸ್ಪರ್ಧೆಗೆ ಹೊಸ ಹುರುಪು ನೀಡಿದೆ. ಪಕ್ಷಕ್ಕಾಗಿ ಹಲವು ವರ್ಷಗಳಿಂದ ದುಡಿದಿರುವ ನಿಷ್ಠಾವಂತರಿಗೆ ಅವಕಾಶ ಸಿಗಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುವುದಕ್ಕಿಂತ ಜನರ ಸಮಸ್ಯೆಗಳಿಗೆ ಸ್ಪಂದಿಸಿದವರಿಗೆ ಪಕ್ಷಗಳು ಆದ್ಯತೆ ನೀಡಬೇಕು. ಚುನಾವಣೆ ಘೋಷಣೆ ಬಳಿಕ ಪಕ್ಷಗಳು ತಮ್ಮ ಅಧಿಕೃತ ಅಭ್ಯರ್ಥಿಗಳ ಆಯ್ಕೆ ಹಾಗೂ ಮತದಾರ ಯಾರಿಗೆ ಒಲಿಯುತ್ತಾನೆ ಎಂಬ ಕುತೂಹಲ ಹೆಚ್ಚಿದ್ದು, ಮುಂದಿನ ದಿನಗಳಲ್ಲಿ ರಾಜಕೀಯ ಚಟುವಟಿಕೆಗಳು ಮತ್ತಷ್ಟು ಚುರುಕುಗೊಳ್ಳುವ ನಿರೀಕ್ಷೆ ಪಕ್ಕಾ ಇದೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.



