ಮಹಿಳೆಯ ದೇಹವನ್ನು “ಸಾರ್ವಜನಿಕ ಉಪಯೋಗದ ವಸ್ತು” ಎಂದು ನೋಡುವ ಮನಸ್ಥಿತಿಯೇ ಪೋಸ್ಟರ್ ನೆಕ್ಕುವ ಮಟ್ಟಿಗೆ ಇಳಿಯುತ್ತದೆ. ಇಂದು ಪೋಸ್ಟರ್ ನೆಕ್ಕಿದ ವ್ಯಕ್ತಿ, ನಾಳೆ ನಡು ರಸ್ತೆಯಲ್ಲಿಯೇ ಮಹಿಳೆಯನ್ನು ಬಲಾತ್ಕರಿಸಬಹುದು, ಹಿಂಸಿಸಬಹುದು. ಇಂತಹ ವಿಕೃತಿಗಳ ಕುರಿತು ಸಾರ್ವಜನಿಕ ಮೌನ ವಹಿಸಿದಷ್ಟೂ ಈ ಸಮಾಜ ಸಾಯುತ್ತದೆ, ಅಳಿದುಹೋಗುತ್ತದೆ.
ಪೋಸ್ಟರ್‌ನಲ್ಲೂ ಮಹಿಳೆ ಸುರಕ್ಷಿತಳಲ್ಲ…. ಈ ತಲೆಬರೆಹದ ವೀಡಿಯೋ ನೀವೆಲ್ಲ ನೋಡಿರಬಹುದು. ನನಗೆ ಬರೆಯಲೂ ಕಷ್ಟವಾಗುತ್ತಿದೆ. ಒಡಲಲ್ಲಿ ಬೆಂಕಿ, ರಕ್ತ ಕುದಿವಷ್ಟು ರೋಷ. ಆದರೂ ಬರೆಯದೇ ಬಿಡುಗಡೆಯಿಲ್ಲ. ಇನ್ಸ್ಟಾಗ್ರಾಂನಲ್ಲಿನ ಈ ವೀಡಿಯೋವನ್ನು ಹಂಚಿಕೊಂಡು ಜನ ಕ್ಯಾಕರಿಸಿ ಉಗಿದರು, ಬಿಹಾರದ್ದು ಎನ್ನಲಾದ ಈ ವಿಡಿಯೊ ಜತೆ ಇನ್ನೊಂದು ಸ್ವಿಮ್ಮಿಂಗ ಪೂಲ್‍ನ ಗೋಡೆಯ ಮೇಲಿರುವ ಚಿತ್ರದಲ್ಲಿನ ಮಹಿಳೆಯ ಮೊಲೆಗಳನ್ನು ಪುಂಡರು ಸರತಿಯಂತೆ ಸವರುತ್ತಲೋ, ಮರ್ದಿಸುತ್ತಲೋ ವಿಕೃತಿಯನ್ನು ಮೆರೆಯುತ್ತಿರುವ ವೀಡಿಯೋ. ಈ ಎರಡೂ ವೈರಲ್ ಆದ ವಿಡಿಯೋಗಳ ಬಗ್ಗೆ ಸಾಕಷ್ಟು ಜನರು ವೈಯಕ್ತಿಕವಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಮಹಿಳಾ ಸಂಘಟನೆಗಳಿಂದಾಗಲಿ, ಪ್ರಗತಿಪರ ಪುರುಷರಿಂದಲೇ ಇರಲಿ ಸಾಮಾಜಿಕ ಜಾಲತಾಣದಲ್ಲಿ ಯಾವ ಪ್ರತಿಭಟನೆಯ ಸಣ್ಣ ಸೊಲ್ಲೂ ಕೇಳಲಿಲ್ಲ ಈವರೆಗೂ. (ನನ್ನ ಗಮನಕ್ಕೆ ಬಂದಿರದಿದ್ದರೆ ಗಮನಕ್ಕೆ ತರಬಹುದು)

ಇದಕ್ಕೂ ಮೊದಲು ಜನವರಿಯಲ್ಲಿ ಲಕ್ನೋದಲ್ಲಿ ಇದೇ ತರಹದ ಘಟನೆ ನಡೆದಿದೆ. ನಗರದ ಗೋಡೆ ಮೇಲೆ ಅಂಟಿಸಿದ ಯೋಗ ಮಾಡುತ್ತಿರುವ ಮಹಿಳೆಯರ ಪೋಸ್ಟರಿನಲ್ಲಿ ಕೇಡಿಗಳು ಮಹಿಳೆಯ ಗುಪ್ತಾಂಗದ ಭಾಗವನ್ನು ಛಿದ್ರಗೊಳಿಸಿ ವಿಕಾರ ಮೆರೆದಿದ್ದು ಸಾಕಷ್ಟು ಚರ್ಚೆಯಾಗಿತ್ತು. ಅದನ್ನು ವಿರೋಧಿಸಿ ಮಾತನಾಡಿದ ವಿಡಿಯೋಗಳು ಹರಿದಾಡಿವೆ. ಪೋಸ್ಟರಿನಲ್ಲಿನ ಮಹಿಳೆಯೊಬ್ಬಳ ಚಿತ್ರವನ್ನೂ ಬಿಡದೇ ಹರಿದು ಮುಕ್ಕುತ್ತಿದ್ದಾರಲ್ಲಾ ಇವರೇನು ನಾಗರಿಕ ಸಮಾಜದ ಮನುಷ್ಯರೋ! ಇಲ್ಲಾ ಮೃಗಗಳೋ? ಪೋಸ್ಟರನ್ನೇ ಕಾಮದ ವಸ್ತುವಾಗಿ ನೋಡುತ್ತಾ ಮುದುಕನೊಬ್ಬ ನೆಕ್ಕುತ್ತಿರುವ ದೃಶ್ಯ ಇನ್ನೂ ಅಸಹ್ಯವಾದದ್ದು. ಮನುಷ್ಯನ ವಿಕೃತಿ , ವಿಕೃತ ಮನಸ್ಥಿತಿಯ ಪರಾಕಾಷ್ಠೆ ಇದು. ಆದರೆ ಇದು ಒಬ್ಬ ವ್ಯಕ್ತಿಯ ಅಸಭ್ಯತನ ಮಾತ್ರವಲ್ಲ. ಇದು ಸಮಾಜದ ಒಳಗುಳಿದಿರುವ ಮಹಿಳೆಯನ್ನು ಕೇವಲ ಮಾಂಸದ ಮುದ್ದೆಯನ್ನಾಗಿ, ಭೋಗದ ಸರಕನ್ನಾಗಿ ನೋಡುವ ವಿಕೃತಿ- ದ್ವೇಷದ ನಗ್ನ ಮುಖ. ಮಹಿಳೆಯ ಅಸ್ತಿತ್ವವನ್ನು ಗೌರವಿಸದ ಸಮಾಜದ ಮನೋಭಾವಕ್ಕೆ ಹಿಡಿದ ಕನ್ನಡಿ. ಮಹಿಳೆಯ ಚಿತ್ರವನ್ನೇ ನೆಕ್ಕುವ ಸಮಾಜ ಚಂದ್ರಯಾನ ಮಾಡಿದರೂ ನಾಗರಿಕ ಎನಿಸುವುದಿಲ್ಲ.
ಮಹಿಳೆ ಇಂದು ರಸ್ತೆಯಲ್ಲಿ ನಡೆಯಲು ಹೆದರುತ್ತಾಳೆ. ರೈಲಿನಲ್ಲಿ, ಬಸ್ಸಿನಲ್ಲಿ, ಕಚೇರಿಯಲ್ಲಿ, ಕಾಲೇಜಿನಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ಅವಳ ದೇಹದ ಮೇಲೆ ಕಣ್ಣಾಡಿಸುವ ಸಮಾಜ ಅವಳನ್ನು ಮನುಷ್ಯಳಾಗಿ ನೋಡುವುದೇ ಕಡಿಮೆ. ಹೆಣ್ಣೆಂದರೆ ಮಾಂಸದಿಂದ ಉಬ್ಬಿನಿಂತಿರುವ ಎರಡು ಮೊಲೆಗಳು, ಸಣ್ಣ ನಡು, ಒಂದು ವಜೈನಾ”ಇಷ್ಟೇ ! ಜೊಲ್ಲು ಸುರಿಸಿಕೊಂಡು ಕಣ್ಣಲ್ಲೇ ಭೋಗಿಸಿಬಿಡುವಂತಹ ಕಾಮುಕರು ಎಲ್ಲೆಡೆಯೂ ಇದ್ದಾರೆ. ನಮ್ಮ ಪಕ್ಕದ ಸೀಟಿನಲ್ಲಿಯೇ ಕುಳಿತಿದ್ದರೂ ಇರಬಹುದು. “ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ: – ಎಲ್ಲಿ ಮಹಿಳೆಯರು ಗೌರವಿಸಿ ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳೂ ಸಂತೋಷದಿಂದಿರುತ್ತಾರೆ” ಎಂದು ನಂಬಿದ ನಾಗರಿಕತೆ ನಮ್ಮದು. “ತಾಯಿ”, “ದೇವಿ” ಎಂದು ಹೊಗಳುವ ಇದೇ ಸಮಾಜ, ಮಹಿಳೆಯ ದೇಹವನ್ನು ಮನರಂಜನೆಯ ವಸ್ತುವಾಗಿ ಬಳಸುವಾಗ ತನ್ನ ನಿಜ ಸ್ವರೂಪ ತೋರಿಸುತ್ತದೆ. ಕ್ರೂರಿಯಾಗುತ್ತದೆ. ಮೌನವಾಗುತ್ತದೆ. ಮೊನ್ನೆಯಷ್ಟೇ ದೆಹಲಿಯ ಬೀದಿಯಲ್ಲಿಯೇ ಮತ್ತೊಬ್ಬ ನಿರ್ಭಯಾಳನ್ನು ಬಸ್ಸಿನಲ್ಲಿ ಬಲಾತ್ಕರಿಸಿದರು. ಆಕೆ ಮನೆಯಲ್ಲಿ ಕಾಯುತ್ತಿರುವ ಮಕ್ಕಳಿದ್ದಾರೆಂದು ಚಿಕಿತ್ಸೆಯನ್ನು ನಿರಾಕರಿಸಿ, ತಾನು ಮನೆಗೆ ಹೋಗಬೇಕೆಂದು ಹಂಬಲಿಸಿದಳು. ಇವಳ ಬಗ್ಗೆ ದಿಲ್ಲಿ ಜನರಿಗೆ ಏನೂ ಅನಿಸಲಿಲ್ಲವೇ? ನಮ್ಮ ದಿಲ್ಲಿ ಮುಖ್ಯಮಂತ್ರಿಗೆ ಆಕೆಯನ್ನು ಭೇಟಿಯಾಗುವಷ್ಟೂ ಪುರಸೊತ್ತು ಇದ್ದಿಲ್ಲವೇ? ಒಂದು ಸುದ್ದಿಯಾಗಿ ತಣ್ಣಗಾಯಿತು ಅಷ್ಟೇ ! ಯಾವ ಅತ್ಯಾಚಾರಗಳೂ ಈಗ ಮೈ ನಡುಗಿಸುತ್ತಿಲ್ಲ, ಅವು ನಿತ್ಯವೂ ನಡೆಯುವ ಸಾಮಾನ್ಯ ಘಟನೆಗಳಾಗಿ ಹೋಗಿವೆ. ಹೀಗೇ ಕಳವಳ-ತಳಮಳಗಳ ಸಂಗತಿಯೊಂದು ಸಾಮಾನ್ಯೀಕರಣಗೊಳ್ಳುತ್ತಿರುವುದೇ ಸಮಾಜ ಕೊಳೆಯುತ್ತಿದೆ ಎಂಬುದರ ಸೂಚನೆ.
ಪೋಸ್ಟರನ್ನು ನೆಕ್ಕುವ ಚಿತ್ರ ಮೈಮೇಲೆ ಮುಳ್ಳೇಳಿಸುವಂತಹುದು. ಸುತ್ತಲೂ ಮಕ್ಕಳು ನಿಂತು ನೋಡುತ್ತಿದ್ದಾರೆ ಆತ ಮಾಡುತ್ತಿರುವ ಕೃತ್ಯವನ್ನು. ಇದರಿಂದ ಸಮಾಜಕ್ಕೆ, ಆ ಮಕ್ಕಳಿಗೆ ಕಲಿಸುತ್ತಿರುವುದೇನನ್ನು? ಅಲ್ಲಿ ಸುತ್ತಲಿದ್ದ ಜನ ಆ ಮುದಿಯನನ್ನು ಥಳಿಸಲಿಲ್ಲವೇಕೆ? ಪೋಲೀಸರಿಗೆ ಹಿಡಿದು ಕೊಡಲಿಲ್ಲವೇಕೆ? ಸ್ವಿಮ್ಮಿಂಗ್ ಪೂಲ್‌ನಲ್ಲಿ ಗೋಡೆಯ ಮೇಲಿನ ಪೋಸ್ಟರಿನೊಂದಿಗೆ ವಿಕೃತಿ ಮೆರೆಯುತ್ತಿದ್ದ ಯುವಕರ ವಿಡಿಯೋ ಬೇರೆ ಮಾಡಿ ಹಂಚಿಕೊಂಡಿದ್ದಾರೆ. ಎತ್ತ ಸಾಗುತ್ತಿದೆ ನಮ್ಮ ಸಮಾಜ? ಈ ಕಾಮುಕರಿಗೆ ಯಾವತ್ತಾದರೂ ತಮ್ಮ ಮನೆಯೊಳಗೂ ಒಬ್ಬ ಮಹಿಳೆಯಿದ್ದಾಳೆಂಬ ಖಬರಾದರೂ ಇರುತ್ತದೆಯಾ ? ತಮ್ಮ ಕುಟುಂಬದ ಭಯವೂ ಇಲ್ಲ, ಸಮಾಜದ ಭಯವೂ ಇಲ್ಲ, ಕಾನೂನಿನ ಭಯವಂತೂ ಮೊದಲೇ ಇಲ್ಲವಾಗಿದೆ.
“ಗೋಡೆಯ ಮೇಲಿನ ಪೋಸ್ಟರ್‌ಗೂ ಗೌರವ ಕೊಡಲಾರದವರು ಮಹಿಳೆಯ ಸ್ವಾತಂತ್ರ್ಯ, ಸಮ್ಮತಿ, ಗೌರವವನ್ನು ಹೇಗೆ ಅರ್ಥಮಾಡಿಕೊಳ್ಳುತ್ತಾರೆ? National Commission for Women ಸೇರಿದಂತೆ ಮಹಿಳಾ ಹಕ್ಕು ಸಂಘಟನೆಗಳು ಹಲವು ಬಾರಿ ಹೇಳಿರುವುದು ಏನೆಂದರೆ , ಮಹಿಳೆಯ ಮೇಲಿನ ಸಾಮಾನ್ಯೀಕೃತ ಅವಮಾನಗಳನ್ನೇ ಸಮಾಜ ತಡೆಯದಿದ್ದರೆ, ದೊಡ್ಡ ಹಿಂಸಾಚಾರಗಳಿಗೆ ದಾರಿ ಸುಗಮವಾಗುತ್ತದೆ. ಈಗ ಆಗುತ್ತಿರುವುದೇ ಅದು.
ಕವಿ ವಿದ್ರೋಹಿ ಬರೆದ ಸಾಲುಗಳು ನೆನಪಾಗುತ್ತವೆ..
“औरत की लाश धरती माता की तरह होती है
जो खुले में फैल जाती है
थानों से लेकर अदालतों तक।”
ಹೆಣ್ಣಿನ ದೇಹದ ಮೇಲಿನ ದೌರ್ಜನ್ಯ ಇಲ್ಲಿ ಘಟನೆ ಅಲ್ಲ; ಅದುವೇ ವ್ಯವಸ್ಥೆ. ಪೊಲೀಸ್ ಠಾಣೆಯಿಂದ ನ್ಯಾಯಾಲಯದವರೆಗೂ ಮಹಿಳೆಯನ್ನೇ ಪ್ರಶ್ನಿಸುವ ದೇಶದಲ್ಲಿ, ಗೋಡೆಯ ಪೋಸ್ಟರ್ ಕೂಡ ಪುರುಷನ ವಿಕೃತ ಕಾಮದ ಕಣ್ಣುಗಳಿಂದ ತಪ್ಪಿಸಿಕೊಳ್ಳುವುದಿಲ್ಲ.
ಪೋಸ್ಟರ್ ನೆಕ್ಕುವ ಆ ಮುದಿಯೊಬ್ಬನೇ ಸಮಸ್ಯೆಯಲ್ಲ. ಅವನನ್ನು ನೋಡಿ ನಗುವವರು, ವಿಡಿಯೋ ಮಾಡಿ ವೈರಲ್ ಮಾಡುವವರು, “ಹುಚ್ಚನಿರಬೇಕು- ಪಾಗಲ್ ಹೈ, ಅಯ್ಯೋ ಬಿಡಿ ವಯಸ್ಸಾಗಿದೆ ಪಾಪ”, ಸುಮ್ಮನೇ ಜೋಕ್ ಇದು ಎಂದು ತಳ್ಳಿಹಾಕುವವರು, ಇವರ ಮೌನವೂ ಈ ವಿಕೃತಿಗೆ ಬೆಂಬಲವೇ. ಮಹಿಳೆಯ ಮೇಲಿನ ಅವಮಾನವನ್ನು ಹಾಸ್ಯವನ್ನಾಗಿ ಮಾಡುವ ಸಮಾಜದಲ್ಲಿ ಸುರಕ್ಷತೆ ಎಂಬುದು ಕೇವಲ ಭಾಷಣದ ಪದ. ಮಹಿಳೆಯರ ಪೋಸ್ಟರ್‌ಗಳನ್ನು ಅಸಭ್ಯವಾಗಿ ಮುಟ್ಟುವುದು, ನೆಕ್ಕುವುದು, ಲೈಂಗಿಕ ಅರ್ಥ ಬರುವ ರೀತಿಯಲ್ಲಿ ಸಾರ್ವಜನಿಕವಾಗಿ ವರ್ತಿಸುವುದು “ಸಣ್ಣ ಹುಚ್ಚಾಟ” ಅಲ್ಲ. ಅದು ಮಹಿಳೆಯ ಗೌರವವನ್ನು ಅವಮಾನಿಸುವ ವರ್ತನೆ. ಇಂಥ ಕೃತ್ಯಗಳಿಗೆ ಸಾಮಾಜಿಕ ಖಂಡನೆ ಮಾತ್ರವಲ್ಲ, ಕಾನೂನು ಕ್ರಮವೂ ಅಗತ್ಯ.
ಎಷ್ಟೇ ಧೈರ್ಯವಿದೆ ಎಂದರೂ ನಾನೇ ರಾತ್ರಿ ಒಬ್ಬಳೇ ಕ್ಯಾಬ್ ನಲ್ಲಿ ಹೋಗಲೂ ಭಯಪಡುತ್ತೇನೆ. ಮೊದಲೆಲ್ಲ ಇಂಡಿಯಾ ಹ್ಯಾಬಿಟೇಟ್ ಸೆಂಟರ್, ದೆಹಲಿ ಕರ್ನಾಟಕ ಸಂಘದ ಕಾರ್ಯಕ್ರಮಗಳಿಗೆಂದು ಹೋಗುತ್ತಿದ್ದೆ. ಈಗ ಎಲ್ಲಿಯೂ ಇಳಿರಾತ್ರಿಯವರೆಗೆ ಉಳಿಯುವಂತಹ ಕಡೆ ಹೋಗುವುದಿಲ್ಲ.
ಕವಿ ಪಾಶ ಹೇಳುತ್ತಾರೆ :
“सबसे खतरनाक होता है
हमारे सपनों का मर जाना।”
ಮಹಿಳೆ ಭಯವಿಲ್ಲದೆ ಬದುಕುವ ಕನಸು ಸತ್ತರೆ, ಅದು ಕೇವಲ ಮಹಿಳೆಯ ಸೋಲು ಅಲ್ಲ, ಸಮಾಜದ ನೈತಿಕ ದಿವಾಳಿತನ.
ಹಾಗಾದರೆ, ಮಹಿಳೆ ಎಲ್ಲಿಗೆ ಹೋಗಬೇಕು? ಮನೆಯೊಳಗೂ ದೌರ್ಜನ್ಯ, ವರದಕ್ಷಿಣೆ ಕಿರುಕುಳದಲ್ಲಿ ಯುವತಿಯರು ಸಾಯುತ್ತಿದ್ದಾರೆ. ಮನೆಯ ಹೊರಗೆ ಕಿರುಕುಳ, ಆನ್‌ಲೈನ್‌ನಲ್ಲಿ ಅವಮಾನ. ಬಾಲಕಿಯಿಂದ ವೃದ್ಧೆಯವರೆಗೂ ನಿಮಿಷಕ್ಕೊಂದು ಅತ್ಯಾಚಾರಗಳಾಗುತ್ತಿವೆ. ಸತ್ತ ದೇಹವನ್ನೂ ಬಿಡದ ಕಾಮುಕರಿದ್ದಾರೆ. ಆಕೆಗೆ ಸುರಕ್ಷಿತ ಜಾಗವೆಂಬುದು ಎಲ್ಲಿಯಾದರೂ ಉಳಿದಿದೆಯೇ? ದೇಹವನ್ನು ಮಾತ್ರ ನೋಡುವ ದೃಷ್ಟಿ ಬದಲಾಗದವರೆಗೆ ಕಾನೂನುಗಳೂ ಅಪೂರ್ಣ.
ಮಹಿಳೆಯರಿಗೆ “ಜಾಗ್ರತೆ ಇರಿ” ಎನ್ನುವ ಮೊದಲು, ಪುರುಷಾಧಿಪತ್ಯದ ಈ ಅಸಭ್ಯ ಮನೋಭಾವಕ್ಕೆ ಸಮಾಜವೇ ಕನ್ನಡಿಯನ್ನು ರಾಚಿ ಹಿಡಿಯಬೇಕು. ಮಹಿಳೆಯ ಗೌರವವನ್ನು ಕಾಪಾಡದ ಸಂಸ್ಕೃತಿ ಎಷ್ಟೇ ಅಭಿವೃದ್ಧಿ ವಿಕಾಸ ಎಂದು ಹೊಗಳಿಕೊಂಡರೂ ಅದು ಅರಣ್ಯ ರೋದನವಷ್ಟೇ. ಪೋಸ್ಟರ್ ನೆಕ್ಕುವುದು ವೈರಲ್ ಆಗಿದೆ. ಆದರೆ ನಿಜವಾಗಿ ನಾಚಿಕೆಪಡಬೇಕಿರುವುದು ಅವನು ಮಾತ್ರವಲ್ಲ , ಅವನನ್ನು ಹುಟ್ಟಿಸಿ ಬೆಳೆಸಿದ, ಇಂಥ ವರ್ತನೆಯನ್ನು ಸರ್ವೇಸಾಮಾನ್ಯ ಎಂದು ನೋಡುವ ಸಮಾಜ !
ಈಗಲೂ ಭಾರತೀಯ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಮಹಿಳೆಯ ಪಾತ್ರವನ್ನು ಕೇವಲ ಅಡುಗೆ ಮನೆಗೆ ಸೀಮಿತಗೊಳಿಸಿ ನೋಡುವ ಪಿತೃಸತ್ತಾತ್ಮಕ ಗಂಡಸರಿಗೇನೂ ಕೊರತೆಯಿಲ್ಲ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ , ರಾಷ್ಟ್ರಿಯ ಸರಸಂಚಾಲಕ ಮೋಹನ ಭಾಗವತರಂತಹವರು ಮಹಿಳೆ ಮನೆಯಲ್ಲಿರಬೇಕು, ಮನೆವಾಳ್ತೆಯನ್ನು ನೋಡಿಕೊಂಡಿರಬೇಕು, ಹತ್ತಾರು ಮಕ್ಕಳನ್ನು ಹೆರಬೇಕು”ಎನ್ನುವ ಮನೋಭಾವವುಳ್ಳವರು. ಮಹಿಳೆಯ ಸ್ವಾತಂತ್ರ್ಯವನ್ನು ಅಪಾಯ ಎಂದು ನೋಡುವವರು. ಇಂತಹ ಮನಸ್ಥಿತಿಯವರಿಗೆ ಪೋಸ್ಟರನ್ನು ಹರಿದು ಮುಕ್ಕಿದರೂ ಅದೇನು ಬಿಡಿ ಪೋಸ್ಟರ್ ತಾನೇ? ಎನ್ನಬಲ್ಲ ಭಂಡತನವಿರುತ್ತದೆ.
ಹಿಂದೊಮ್ಮೆ ಅತ್ಯಾಚಾರದಂತಹ ವಿಷಯಕ್ಕೆ ದಿವಂಗತ ಮುಲಾಯಮ್ ಸಿಂಗ್ ಅವರು- ಲಡಕೇ ಹೈ, ಗಲತಿ ಹೋ ಜಾತೀ ಹೈ, – ಹುಡುಗರಲ್ಲವೇ ತಪ್ಪುಗಳಾಗುತ್ತವೆ” ಹೋಗಲಿಬಿಡಿ” ಎನ್ನುವಂತೆ ಹಗುರವಾಗಿ ಮಾತಾಡಿದ್ದರು. ಕೆಲವು ಖಾಪ್ ಪಂಚಾಯತ್ ಗಳು- “ಮೊಬೈಲಿನಿಂದ ಮಹಿಳೆಯರು ಹಾಳಾಗುತ್ತಾರೆ” ಮೊಬೈಲ್ ಏಕೆ ಎಂದವು. ಇನ್ನು ಕೆಲವು ತಲೆಗಳು –ಜೀನ್ಸ್ ತೊಟ್ಟುಕೊಳ್ಳುವುದರಿಂದ ಗರ್ಭಾಶಯ ಹಾಳಾಗುತ್ತದೆ”ಎಂದು ಮಹಿಳೆಯ ಉಡುಪನ್ನೂ ಹಿಂಜಿ ಹಿಂಜಿ ಶರಾ ಬರೆದರು. ಹೀಗೆ ಮಹಿಳೆಯ ಅಡಿಯಿಂದ ಮುಡಿಯವರೆಗೂ ಟಿಪ್ಪಣಿ ಬರೆಯುವ , ಕಟ್ಟುಪಾಡುಗಳ ಬೇಲಿಯನ್ನು ಹಾಕುವವರಿಗೆ ಕಾಮುಕರ ಯಾವ ಕೃತ್ಯಗಳೂ ಅಸಹ್ಯ ಹುಟ್ಟಿಸುವುದಿಲ್ಲ. ಆದರೆ ಈ ನಿಷ್ಕ್ರಿಯ ಸಹಿಷ್ಣುತೆಯೇ ಪಿತೃಸತ್ತೆಗೆ ಇನ್ನಷ್ಟು ಮತ್ತಷ್ಟು ಶಕ್ತಿ ತುಂಬುತ್ತದೆ.
ಮಹಿಳೆಯ ದೇಹವನ್ನು “ಸಾರ್ವಜನಿಕ ಉಪಯೋಗದ ವಸ್ತು” ಎಂದು ನೋಡುವ ಮನಸ್ಥಿತಿಯೇ ಪೋಸ್ಟರ್ ನೆಕ್ಕುವ ಪತನಕ್ಕೆ ಇಳಿಸುತ್ತದೆ. ಇಂದು ಪೋಸ್ಟರ್, ನಾಳೆ ರಸ್ತೆಯಲ್ಲಿ ನಡುವೆಯೇ ಮಹಿಳೆಯನ್ನು ಬಲಾತ್ಕರಿಸಬಹುದು, ಹಿಂಸಿಸಬಹುದು. ಈ ಸಮಾಜ ಮೌನವಾಗಿರುವಷ್ಟೂ ಸಾಯುತ್ತದೆ, ಅಳಿದುಹೋಗುತ್ತದೆ. ಆದ್ದರಿಂದ ಇಂತಹ ವಿಕೃತಿಗಳಿಗೆ ಸೂಕ್ತ ಕಾನೂನು ಕ್ರಮ ಬೇಕು, ಸಾರ್ವಜನಿಕ ಖಂಡನೆ ಬೇಕು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಬಾಲ್ಯದಿಂದಲೇ ಮಹಿಳೆಯನ್ನು ಮನುಷ್ಯಳಾಗಿ ನೋಡುವ ಶಿಕ್ಷಣವನ್ನು ನಮ್ಮ ಗಂಡು ಸಂತಾನಕ್ಕೆ ಅಗತ್ಯವಾಗಿ ನೀಡಬೇಕು. ಆಗಲೇ ಈ ಸಮಾಜ ಸ್ವಸ್ಥವಾಗಿ ಉಳಿಯುತ್ತದೆ.

ರೇಣುಕಾ ನಿಡಗುಂದಿ
ಲೇಖಕಿ, ದೆಹಲಿ ನಿವಾಸಿ



