ಹೂಡಿಕೆ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿ ವಂಚನೆ ಆರೋಪ ಎದುರಿಸುತ್ತಿರುವ ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ್ ವಿರುದ್ಧ ಸಿಐಡಿ ತನಿಖೆ ಮತ್ತಷ್ಟು ತೀವ್ರಗೊಂಡಿದೆ. ಪ್ರಕರಣ ಸಂಬಂಧ ಶಿವಾನಂದ ನೀಲಣ್ಣವರ್ ಬಳಸುತ್ತಿದ್ದ ಐಷಾರಾಮಿ ಕಾರುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಸಿಐಡಿ ಕಸ್ಟಡಿಯಲ್ಲಿರುವ ಶಿವಾನಂದ ನೀಲಣ್ಣವರ್ ಅವರನ್ನು ಅಧಿಕಾರಿಗಳು ಶಿವಬಸವ ನಗರದ ನಿವಾಸಕ್ಕೆ ಕರೆದುಕೊಂಡು ಹೋಗಿ ಮಹಜರು ನಡೆಸಿದರು. ಈ ವೇಳೆ ಲ್ಯಾಂಡ್ ರೋವರ್ ಡಿಫೆಂಡರ್, ಟೊಯೋಟಾ ವೆಲ್‌ಫೈರ್, ಮರ್ಸಿಡಿಸ್ ಎಎಂಜಿ ಸೇರಿದಂತೆ ಸುಮಾರು ಐದು ಕೋಟಿ ರೂಪಾಯಿ ಮೌಲ್ಯದ ನಾಲ್ಕು ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.
ಇದಲ್ಲದೆ, ಶಿವಾನಂದ ನೀಲಣ್ಣವರ್ ಪತ್ನಿ ಬಳಸುತ್ತಿದ್ದ ಹ್ಯುಂಡೈ ವರ್ನಾ ಕಾರನ್ನೂ ಪೊಲೀಸರು ಸೀಜ್ ಮಾಡಿದ್ದಾರೆ. ಮನೆ ಪರಿಶೀಲನೆ ವೇಳೆ ಹಲವು ದಾಖಲೆಗಳನ್ನು ಪರಿಶೀಲಿಸಿದ ಅಧಿಕಾರಿಗಳು ಕೆಲ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಾನಂದ ನೀಲಣ್ಣವರ್ ಜೊತೆ ವ್ಯವಹಾರ ನಡೆಸಿದ್ದ ಹಾಗೂ ಸಂಪರ್ಕದಲ್ಲಿದ್ದ ಕೆಲವರಿಗೆ ಸಿಐಡಿ ನೋಟಿಸ್ ಜಾರಿಗೊಳಿಸಿದೆ. ಇದೇ ವೇಳೆ ಕರವೇ ಜಿಲ್ಲಾಧ್ಯಕ್ಷ ಅಭಿಲಾಷ್ ಅವರಿಗೆ ನೀಡಲಾಗಿದ್ದ ಕಾರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜಪ್ತಿ ಮಾಡಿದ ಎಲ್ಲಾ ವಾಹನಗಳನ್ನು ಬಳಿಕ ಮಾಳಮಾರುತಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.



