ಹಳಿ ದಾಟುತ್ತಿದ್ದ ಶಾಲಾ ಬಸ್‌ಗೆ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದಿದ್ದು, ಇಬ್ಬರು ಶಾಲಾ ಮಕ್ಕಳು ಸೇರಿದಂತೆ 4 ಮಂದಿ ಸಾವನ್ನಪ್ಪಿರುವ ದುರಂತ ಘಟನೆ ಬೆಲ್ಜಿಯಂನಲ್ಲಿ ಮಂಗಳವಾರ ನಡೆದಿದೆ.
ಬೆಲ್ಜಿಯಂನ ಉತ್ತರ ಭಾಗದಲ್ಲಿರುವ ಫ್ಲಾಂಡರ್ಸ್ ಪ್ರದೇಶದ ‘ಬುಗ್ಗೆನ್‌ಹೌಟ್’ ಪಟ್ಟಣದಲ್ಲಿ ಭೀಕರ ಘಟನೆ ನಡೆದಿದೆ. ರೈಲ್ವೆ ನೆಟ್‌ವರ್ಕ್ ಆಪರೇಟರ್ ‘ಇನ್‌ಫ್ರಾಬೆಲ್’ ವಕ್ತಾರ ಫ್ರೆಡೆರಿಕ್ ಸ್ಯಾಕ್ರೆ ಪ್ರಕಾರ, ಅಪಘಾತದ ತೀವ್ರತೆ ಅತ್ಯಂತ ಭೀಕರವಾಗಿತ್ತು. ಬಸ್ ಸಂಪೂರ್ಣವಾಗಿ ಜಖಂಗೊಂಡು ರಸ್ತೆಯ ಪಕ್ಕಕ್ಕೆ ಉರುಳಿಬಿದ್ದಿದೆ.
ವರದಿಗಳ ಪ್ರಕಾರ, ಅಪಘಾತದ ಸಮಯದಲ್ಲಿ ಶಾಲಾ ಬಸ್‌ನಲ್ಲಿ 7 ಶಾಲಾ ಮಕ್ಕಳು, ಒಬ್ಬ ಚಾಲಕ ಹಾಗೂ ಒಬ್ಬ ಸಹಾಯಕಸೇರಿದಂತೆ ಒಟ್ಟು 9 ಮಂದಿ ಇದ್ದರು. ಈ ಪೈಕಿ, ಇಬ್ಬರು ಮಕ್ಕಳು, ಚಾಲಕ ಮತ್ತು ಸಹಾಯಕ ಸಾವನ್ನಪ್ಪಿದ್ದಾರೆ. ಐದು ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ರೈಲಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ.
ಅಪಘಾತದ ಸಮಯದಲ್ಲಿ ರೈಲ್ವೆ ಕ್ರಾಸಿಂಗ್‌ನ ಗೇಟ್ ಬ್ಯಾರಿಯರ್‌ಗಳನ್ನು ಮುಚ್ಚಲಾಗಿತ್ತು. ಆದರೆ, ಮುಚ್ಚಿದ ಬ್ಯಾರಿಯರ್ ಇದ್ದಾಗಲೂ ಬಸ್ ಚಾಲಕ ಹೇಗಾದರೂ ಮಾಡಿ ಹಳಿ ದಾಟಲು ಪ್ರಯತ್ನಿಸಿದ್ದನೇ ಅಥವಾ ತಾಂತ್ರಿಕ ದೋಷದಿಂದಾಗಿ ಬಸ್ ಹಳಿಯ ಮಧ್ಯದಲ್ಲಿ ಸಿಲುಕಿಕೊಂಡಿತ್ತೇ ಎಂಬ ಬಗ್ಗೆ ನ್ಯಾಯ ವಿಜ್ಞಾನ ಪ್ರಯೋಗಾಲಯದ ತಜ್ಞರು ಮತ್ತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಈ ಲೇಖನ ಓದಿದ್ದೀರಾ?: ಕನ್ನಡಿಗರೇ ಗಮನಿಸಿ: ನಿಮ್ಮ ಗ್ಯಾರಂಟಿ ಯೋಜನೆ, ಸರ್ಕಾರಿ ಸೌಲಭ್ಯಗಳನ್ನೂ ಕಸಿದುಕೊಳ್ಳುತ್ತದೆ ‘ಎಸ್‌ಐಆರ್’
ಘಟನೆಯು ಇಡೀ ಬೆಲ್ಜಿಯಂ ದೇಶವನ್ನು ಆಘಾತಕ್ಕೀಡು ಮಾಡಿದೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಬೆಲ್ಜಿಯಂ ನ್ಯಾಯಾಂಗ ಸಚಿವ ಅನೆಲೀಸ್ ವರ್ಲಿಂಡೆನ್, “ಬುಗ್ಗೆನ್‌ಹೌಟ್‌ನಲ್ಲಿ ನಡೆದ ಅಪಘಾತದ ಬಗ್ಗೆ ಮಾತನಾಡಲು ಪದಗಳೇ ಸಿಗುತ್ತಿಲ್ಲ. ಶಾಲಾ ಮಕ್ಕಳಿದ್ದ ಬಸ್‌ಗೆ ಈ ರೀತಿ ಆಗಿರುವುದು ಅತ್ಯಂತ ಆಘಾತಕಾರಿ,” ಎಂದು ಟ್ವೀಟ್ ಮಾಡಿದ್ದಾರೆ.
ಅಲ್ಲಿನ ಶಿಕ್ಷಣ ಸಚಿವ ಜುಹಾಲ್ ಡೆಮಿರ್ ಕೂಡ ಟ್ವೀಟ್ ಮಾಡಿದ್ದು, “ಇದು ಅತ್ಯಂತ ಹೃದಯವಿದ್ರಾವಕ ಸುದ್ದಿ. ಮೃತರು ಮತ್ತು ಅವರ ಕುಟುಂಬಗಳೊಂದಿಗೆ ನಾವಿದ್ದೇವೆ” ಎಂದು ಸಂತಾಪ ಸೂಚಿಸಿದ್ದಾರೆ.
ಭೀಕರ ಅಪಘಾತದ ಹಿನ್ನೆಲೆಯಲ್ಲಿ, ಆ ಮಾರ್ಗದ ರೈಲು ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಹಳಿಗಳ ದುರಸ್ತಿ ಮತ್ತು ಬಸ್‌ನ್ನು ತೆರವುಗೊಳಿಸುವ ಕಾರ್ಯಾಚರಣೆ ಮುಂದುವರಿದಿದೆ. ಬೆಲ್ಜಿಯಂ ರೈಲ್ವೆ ಇಲಾಖೆಯು ಮುಂಬರುವ ದಿನಗಳಲ್ಲಿ ಇಂತಹ ಮಾನವ ಚಾಲಿತ ಕ್ರಾಸಿಂಗ್‌ಗಳಲ್ಲಿ ಸುರಕ್ಷತೆಯನ್ನು ಇನ್ನಷ್ಟು ಬಿಗಿಗೊಳಿಸಲು ಮತ್ತು ಇಂತಹ ದುರಂತಗಳು ಮರುಕಳಿಸದಂತೆ ಕಠಿಣ ನಿಯಮಗಳನ್ನು ಜಾರಿಗೆ ತರಲು ತೀರ್ಮಾನಿಸಿದೆ.



