ಭಾರತದ ಆರೋಗ್ಯ ಕ್ಷೇತ್ರ ಅನಾರೋಗ್ಯಪೀಡಿತವಾಗಿ ದಶಕಗಳೇ ಸಂದಿವೆ. ಅತಿ ಹೆಚ್ಚು ಜನಸಂಖ್ಯೆ ಇರುವ ಈ ದೇಶ ವಿದೇಶಿ ಮೆಡಿಕಲ್ ಮಾಫಿಯಾಗಳ ದೊಡ್ಡ ಮಾರುಕಟ್ಟೆ. ಒಂದು ಕಡೆ ಔಷಧಿ ಮಾಫಿಯಾ, ಮತ್ತೊಂದು ಕಡೆ ನಕಲಿ ವೈದ್ಯರು, ಸಾಲದೆಂಬಂತೆ ನಕಲಿ ಔಷಧಿ ದಂಧೆ. ಈ ಮಧ್ಯೆ ಜನರ ಆರೋಗ್ಯದ ಮೇಲೆ ಕಾಳಜಿ ಯಾರಿಗೂ ಇಲ್ಲ.
ಬಿಡದಿಯಲ್ಲಿ ನಕಲಿ ಔಷಧಿಗಳಿಗೆ ಬಹುರಾಷ್ಟ್ರೀಯ ಕಂಪನಿಗಳ ಲೇಬಲ್ ಬಳಸಿ ಮರುಪ್ಯಾಕ್ ಮಾಡುತ್ತಿದ್ದ ಅಡ್ಡೆಯ ಮೇಲೆ ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿ, ₹4.91 ಕೋಟಿ ಮೌಲ್ಯದ ಔಷಧಿಗಳು, ಬಾಟಲಿಗಳು, ಲೇಬಲ್‌ಗಳು, ಪ್ಯಾಕೇಜಿಂಗ್ ಸಾಮಗ್ರಿ ಮತ್ತು ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ. ಇದು ನಿಜಕ್ಕೂ ಆಘಾತಕಾರಿ ಸುದ್ದಿ. ನಕಲಿ ಔಷಧಿ ತಯಾರಿಕೆಯೇ ಅಪಾಯಕಾರಿ; ಅದಕ್ಕೆ ಬಹುರಾಷ್ಟ್ರೀಯ ಕಂಪನಿಯ ಲೇಬಲ್ ಅಂಟಿಸಿ ಜನರನ್ನು ಯಾಮಾರಿಸಿ ಹಣ, ಆರೋಗ್ಯ ಎರಡನ್ನೂ ದೋಚುವ ನೀಚರ ವಿರುದ್ಧ ಕಠಿಣ ಕ್ರಮ ಜರುಗಿಸುವ ಕೆಲಸ ತುರ್ತಾಗಿ ಆಗಬೇಕಿದೆ. ಯಥಾ ಪ್ರಕಾರ ಜಾಮೀನು, ಮೇಲ್ಮನವಿ, ಖುಲಾಸೆಯಂತಹ ಅವಕಾಶಗಳು ಈ ದುಷ್ಟರಿಗೆ ಸಿಗದಂತೆ ಮಾಡುವುದು ಸರ್ಕಾರದ ಆದ್ಯತೆಯಾಗಬೇಕು. ಪಾತಕಿಗಳ ಪಾಲಿಗೆ ಕಾನೂನಿನ ಕೈಗಳು ಬಹು ಉದ್ದ ಎಂಬ ಮಾತನ್ನು ನಡೆಸಿಕೊಡಬೇಕು.
ಆರೋಪಿ ಬಿಡದಿಯ ಸಿ.ಕೆ.ತಾಂಡ್ಯ ಸಮೀಪದ ಫಾರ್ಮ್‌ಹೌಸ್ ಲೀಸಿಗೆ ಪಡೆದು ಕಡಿಮೆ ಬೆಲೆಯುಳ್ಳ ಔಷಧಿಗಳನ್ನು ತೆಲಂಗಾಣ ಮತ್ತು ಹಿಮಾಚಲ ಪ್ರದೇಶದಿಂದ ಆಮದು ಮಾಡಿಕೊಂಡು ಅದಕ್ಕೆ ಬೇರೆ ಲೇಬಲ್ ಅಂಟಿಸುತ್ತಿದ್ದ. Pfizer ಮತ್ತು Xavitas ಸೇರಿದಂತೆ ಹಲವು ಕಂಪನಿಗಳ ಲೇಬಲ್ ಬಳಸಿ ಕಳೆದ ಒಂದು ವರ್ಷದಿಂದ ಈ ದಂಧೆ ನಡೆಸುತ್ತಿದ್ದನಂತೆ! ಇದುವರೆಗೆ ಅದೆಷ್ಟು ಜನ ಈ ನಕಲಿ ಔಷಧಿ ಪಡೆದು ಆರೋಗ್ಯ, ಹಣ ಎರಡನ್ನೂ ಕಳೆದುಕೊಂಡಿದ್ದಾರೆ ಎಂಬ ಲೆಕ್ಕವಿದೆಯೇ? ಆರೋಗ್ಯ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳ ಕರ್ತವ್ಯಲೋಪ ಎದ್ದು ಕಾಣುತ್ತಿದೆ. ಹಣದ ವ್ಯಾಮೋಹ, ಧನದಾಹ ನೀಗಿಸಲು ಅಮಾಯಕರ ಜೀವ ಬಲಿ ಪಡೆಯುವ ಇಂತಹ ನೀಚರಿಗೆ ಕಠಿಣ ಶಿಕ್ಷೆಯಾಗಬೇಕು.
ಭಾರತದ ಆರೋಗ್ಯ ಕ್ಷೇತ್ರವನ್ನು ಅನಾರೋಗ್ಯ ಬಾಧಿಸಿ ದಶಕಗಳೇ ಸಂದಿವೆ. ಜಗತ್ತಿನಲ್ಲೇ ಅತಿ ಹೆಚ್ಚು ಜನಸಂಖ್ಯೆ ಇರುವ ಈ ದೇಶ ವಿದೇಶಿ ಮೆಡಿಕಲ್ ಮಾಫಿಯಾಗಳ ದೊಡ್ಡ ಮಾರುಕಟ್ಟೆ. ಒಂದು ಕಡೆ ಔಷಧಿ ಮಾಫಿಯಾ, ಮತ್ತೊಂದು ಕಡೆ ನಕಲಿ ವೈದ್ಯರು, ಸಾಲದು ಎಂಬಂತೆ ನಕಲಿ ಔಷಧಿ ದಂಧೆ; ಈ ಮಧ್ಯೆ ಜನರ ಆರೋಗ್ಯದ ಮೇಲೆ ಕಾಳಜಿ ಯಾರಿಗೂ ಇಲ್ಲ. ಲಸಿಕೆ ಪಡೆದು ನವಜಾತ ಶಿಶುಗಳು ಮರಣ ಹೊಂದಿರುವುದು, ಹೆರಿಗೆಯ ನಂತರ ನೀಡುವ ಔಷಧಿಯ ಅಡ್ಡಪರಿಣಾಮವಾಗಿ ಬಾಣಂತಿಯರ ಸಾವು ಆಗಾಗ ಸದ್ದು ಸುದ್ದಿಯಾಗುತ್ತಿರುವುದನ್ನು ಗಮನಿಸಿದ್ದೇವೆ. ಇವೆಲ್ಲ ಮೆಡಿಕಲ್ ಮಾಫಿಯಾದತ್ತಲೇ ಬೆರಳು ತೋರುತ್ತಿವೆ. ಆದರೆ, ಇಂತಹ ಮಾಫಿಯಾಗಳು ಅಧಿಕಾರಸ್ಥರು, ರಾಜಕಾರಣಿಗಳ ಬೆಂಬಲವಿಲ್ಲದೇ ನಡೆಯಲು ಸಾಧ್ಯವೇ ಇಲ್ಲ. ಒಂದು ಸರ್ಕಾರ ಕಪ್ಪುಪಟ್ಟಿಗೆ ಹಾಕಿದ ಕಂಪನಿಗೆ ಮತ್ತೊಂದು ಸರ್ಕಾರ ಕಂಪನಿ ರತ್ನಗಂಬಳಿ ಹಾಸಿ ಗುತ್ತಿಗೆ ನೀಡಿರುವ ಪ್ರಕರಣಗಳ ಉದಾಹರಣೆ ನಮ್ಮ ಮುಂದಿದೆ. ಅಂಗನವಾಡಿ ಮಕ್ಕಳಿಗೆ ಪೂರೈಕೆ ಮಾಡುವ ಆಹಾರ, ಬಿಸಿಯೂಟ, ಅನ್ನಭಾಗ್ಯದಲ್ಲಿ ನೀಡುವ ಅಕ್ಕಿ ಬೇಳೆ ಹೀಗೆ ಮನುಷ್ಯನ ಆರೋಗ್ಯಕ್ಕೆ ಬೇಕಿರುವ ಎಲ್ಲವೂ ಕಲಬೆರಕೆ ಅಥವಾ ಕಳಪೆ. ಇದು ಇಂದಿನ ಸಮಸ್ಯೆ ಅಲ್ಲ, ಮತ್ತು ಮುಗಿಯುವ ಸಮಸ್ಯೆಯೂ ಅಲ್ಲ. ಎಲ್ಲವೂ ಸರ್ಕಾರ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ. ರಾಜಕಾರಣಿಗಳ ಸ್ವಜನ ಪಕ್ಷಪಾತ, ಸ್ವಂತ ಲಾಭಕ್ಕಾಗಿ ಬೇನಾಮಿ ಹೆಸರಿನಲ್ಲಿ ಕಂಪನಿಗಳನ್ನು ಸ್ಥಾಪಿಸಿ ಸರ್ಕಾರದ ಗುತ್ತಿಗೆಗಳನ್ನು ಪಡೆಯುತ್ತಿರುವುದು…. ಇವೆಲ್ಲದರ ಪರಿಣಾಮವಾಗಿ ಇಡೀ ಸಮಾಜದ ಸ್ವಾಸ್ಥ್ಯ ಅಪಾಯದಲ್ಲಿದೆ.
ಖಾಸಗಿ ಆಸ್ಪತ್ರೆಗಳು ಜನರ ರಕ್ತ ಹೀರುವ, ಹಣ ಸುಲಿಗೆಯ ಕೇಂದ್ರಗಳಾಗಿವೆ. ಸರ್ಕಾರಿ ಆಸ್ಪತ್ರೆಗಳಲ್ಲೂ ಬಡ ಮತ್ತು ಮಧ್ಯಮ ವರ್ಗದ ಜನರ ಜೀವ ಹಿಂಡುವ ಕಮಿಷನ್, ಲಂಚ ತಾಂಡವವಾಡುತ್ತಿದೆ. ಸಾಮಾನ್ಯ ಕುಟುಂಬಗಳಲ್ಲಿ ಒಬ್ಬ ವ್ಯಕ್ತಿಗೆ ಗಂಭೀರ ಆರೋಗ್ಯ ಸಮಸ್ಯೆ ಉಂಟಾದರೆ ಇಡೀ ಕುಟುಂಬ ಆರ್ಥಿಕ ಸಮಸ್ಯೆಗೆ ಸಿಲುಕುತ್ತದೆ. ಸರ್ಕಾರದ ಎಲ್ಲಾ ಉಚಿತ ಚಿಕಿತ್ಸೆ, ಸೌಲಭ್ಯಗಳಾಚೆಗೂ ಖಾಸಗಿ ಆಸ್ಪತ್ರೆಗಳ ಮೊರೆ ಹೋಗುವ ಸಂದರ್ಭ ಬಂದರೆ ಮುಗಿದೇ ಹೋಯ್ತು. ನಾವು ಉಣ್ಣುವ ಪ್ರತಿಯೊಂದು ಆಹಾರವೂ ಕಲಬೆರಕೆ, ವಿಷಯುಕ್ತವಾಗುತ್ತಿದೆ. ನಾವು ಸೇವಿಸುವ ಕಲಬೆರಕೆ ಆಹಾರಗಳೇ ಆರೋಗ್ಯ ಸಮಸ್ಯೆಯ ಮೂಲವಾಗುತ್ತಿದೆ. ಬೊಜ್ಜು, ಖಿನ್ನತೆ, ಮಧುಮೇಹ, ರಕ್ತದೊತ್ತಡದಂತಹ ಸಮಸ್ಯೆಗಳು ಯುವಜನರನ್ನೂ ಬಾಧಿಸುತ್ತಿವೆ. ಊಟ, ವಸತಿ, ಶಿಕ್ಷಣದ ಜೊತೆಗೆ ಆಸ್ಪತ್ರೆ ಖರ್ಚಿಗೆಂದು ಹಣ ಕೂಡಿಡುವ ಅನಿವಾರ್ಯತೆ ಬಂದೊದಗಿದೆ. ಕೂಲಿ ಕಾರ್ಮಿಕ ಕುಟುಂಬಗಳು ಆರೋಗ್ಯ ವಿಮೆ ಮಾಡುವುದು ಅಸಾಧ್ಯ. ಜನರಿಂದ ಆಯ್ಕೆಯಾಗುವ ಸರ್ಕಾರಗಳು, ಜನಪ್ರತಿನಿಧಿಗಳು ಜನರ ಆರೋಗ್ಯದ ಬಗ್ಗೆ ಯೋಚಿಸದಿರುವುದು ದುರಂತ.
ಯು ಟಿ ಖಾದರ್ ಅವರು ನೂತನ ಆರೋಗ್ಯ ಸಚಿವರಾದ ನಂತರ ಬೆಂಗಳೂರಿನ ಹೋಟೆಲು, ಕ್ಯಾಂಟಿನ್, ರೈಲ್ವೆ ಆಹಾರ ಕೇಂದ್ರಗಳ ಮೇಲೆ ದಾಳಿ ನಡೆಸಿ ಕಳಪೆ ಮತ್ತು ಅವಧಿ ಮೀರಿದ ಸಂಸ್ಕರಿತ ಆಹಾರ ಪತ್ತೆ ಹಚ್ಚಿ ಸುದ್ದಿಯಾಗಿದ್ದಾರೆ. ಇದು ನಿರಂತರವಾಗಿ ನಡೆಯಬೇಕಿರುವ ಕಾರ್ಯಾಚರಣೆ. ಮತ್ತೆ ರಾಜ್ಯದ ಎಲ್ಲ ಜಿಲ್ಲೆ, ತಾಲ್ಲೂಕು ಕೇಂದ್ರಗಳಲ್ಲೂ ಸ್ಥಳೀಯ ಫುಡ್ ಇನ್‌ಸ್ಪೆಕ್ಟರ್‌ಗಳು ಮಾಡಬೇಕಿರುವ ಕರ್ತವ್ಯ. ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಿದರೆ, ನಿಸ್ವಾರ್ಥವಾಗಿ ಕೆಲಸ ಮಾಡಿದರೆ ಇಂತಹ ಅಧ್ವಾನಗಳು ನಡೆಯಲು ಸಾಧ್ಯವೇ ಇಲ್ಲ. ಬಹುತೇಕ ಪ್ರಕರಣಗಳಲ್ಲಿ ಕೇಸು ದಾಖಲಾದ ನಂತರ ಏನಾಯ್ತು ಎಂಬುದು ಗೊತ್ತೇ ಆಗುವುದಿಲ್ಲ. ಹಣ ಪಡೆದು ಅಧಿಕಾರಿಗಳು ದುರುಳರ ಜೊತೆಗೆ ಶಾಮೀಲಾಗಿ ಮುಚ್ಚಿ ಹಾಕುತ್ತಾರೆ ಎಂಬುದು ಕೇವಲ ಆರೋಪವಲ್ಲ. ಬಹುತೇಕ ಕಣ್ಣ ಮುಂದೆಯೇ ನಡೆಯುತ್ತಿರುವ ಸತ್ಯ. ಸಮಸ್ಯೆಯ ಮೂಲಕ್ಕೆ ಮದ್ದು ಅರೆಯುವ ಕೆಲಸವಾಗದೇ ಔಷಧ ಮಾಫಿಯಾಕ್ಕೆ ಕಡಿವಾಣ ಹಾಕುವುದು ಅಸಾಧ್ಯ. ಇದು ರಾಜ್ಯವೊಂದರ ಸಮಸ್ಯೆಯಲ್ಲ, ಇಡೀ ದೇಶವನ್ನು ಮಾಫಿಯಾಗಳೇ ನಡೆಸುತ್ತಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇದನ್ನು ಗಂಭೀರ ಸಮಸ್ಯೆಯಾಗಿ ಪರಿಗಣಿಸಬೇಕಿದೆ.
ದಾಳಿಯ ವಿವರಗಳನ್ನು ನೀಡಿದ ಪ್ರಕಾರವೇ, ತಪ್ಪು ಮಾಡಿರುವವರನ್ನು ಕಾನೂನಿನ ಕುಣಿಕೆಗೆ ಸಿಕ್ಕಿಸಿ ಶಿಕ್ಷೆಗೆ ಗುರಿಪಡಿಸಿದ ಲೆಕ್ಕವನ್ನೂ ಸಚಿವರು ಮುಂದೊಮ್ಮೆ ಸಾರ್ವಜನಿಕರಿಗೆ ನೀಡುವಂತಾಗಲಿ.




