ಲಂಚ ಕೊಡುವ ಸಾಮಾನ್ಯ ನಾಗರಿಕನನ್ನು ಮಾತ್ರ ಅಪರಾಧಿ ಎಂದು ನೋಡುವುದಕ್ಕಿಂತ, ಭ್ರಷ್ಟ ವ್ಯವಸ್ಥೆಯನ್ನು ರೂಪಿಸುವ, ಪೋಷಿಸುವ ಮತ್ತು ಪೊರೆಯುವ ಅಧಿಕಾರದ ಕೇಂದ್ರಗಳನ್ನು ಪ್ರಶ್ನಿಸುವ ಧೈರ್ಯ ಮಾಡಬೇಕಿದೆ. ಕೊಳಕರನ್ನು, ಭ್ರಷ್ಟರನ್ನು ಜಾತಿ-ಧರ್ಮದ ಕಾರಣಕ್ಕೆ ಬೆಂಬಲಿಸುವುದನ್ನು ಬಿಡಬೇಕಿದೆ. ಇಲ್ಲದಿದ್ದರೆ, ಬಡವರು ಬದುಕುವುದು ಕಷ್ಟವಿದೆ.
ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ) ಸದ್ಯಕ್ಕೆ ಎರಡು ರೀತಿಯಲ್ಲಿ ಸುದ್ದಿಯಲ್ಲಿದೆ. ಒಂದು, 2026-27ನೇ ಸಾಲಿನ 319 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗಾಗಿ ನಡೆದ ಪರೀಕ್ಷೆಗೆ ಸುಮಾರು 1.47 ಲಕ್ಷ ಅಭ್ಯರ್ಥಿಗಳು ಹಾಜರಾಗಿ, ಯಾವ ತೊಂದರೆಯೂ ಇಲ್ಲದೆ ಪರೀಕ್ಷೆ ಸುಸೂತ್ರವಾಗಿ ನಡೆದಿದೆ.
ಮತ್ತೊಂದು, 400 ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದ ಕೋಟ್ಯಂತರ ರೂಪಾಯಿಗಳ ಕೈಬದಲಾವಣೆಯನ್ನು ತನಿಖೆಗೆತ್ತಿಕೊಂಡ ಜಾರಿ ನಿರ್ದೇಶನಾಲಯ(ಇಡಿ) ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಬಿ.ವಿ. ಗೀತಾ, ಮಾಜಿ ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಮತ್ತು ಮಧ್ಯವರ್ತಿ ಬಸವರಾಜ ಕನ್ನಾಳೆ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಒಂದು ಸರ್ಕಾರಿ ಸೇವೆಗೆ ಸೇರುವ ಉದ್ಯೋಗಾಕಾಂಕ್ಷಿಗಳಿಗೆ ಸ್ವಲ್ಪ ಸಮಾಧಾನಕರ ಸಂಗತಿಯಾದರೆ, ಮತ್ತೊಂದು ಉದ್ಯೋಗಸೌಧವೆಂಬ ಸಂಸ್ಥೆಯ ಭ್ರಷ್ಟ ವ್ಯವಸ್ಥೆಯನ್ನು ಬಯಲು ಮಾಡಿ ಬೆಚ್ಚಿ ಬೀಳಿಸುತ್ತದೆ. ಕುತೂಹಲಕರ ಸಂಗತಿ ಎಂದರೆ, ಇವೆರಡರಲ್ಲೂ ಸರ್ಕಾರಗಳ ಪಾತ್ರವಿದೆ. ಆ ಸರ್ಕಾರಗಳನ್ನು ಆಯ್ಕೆ ಮಾಡುವ ಪ್ರಜೆಗಳೇ ಪಾತಕಿಗಳ ಪರವೂ ಇದ್ದಾರೆ, ವಿರುದ್ಧವೂ ಇದ್ದಾರೆ.
ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಸರ್ಕಾರಗಳು ಜನರ ಆಶಯಗಳನ್ನು ಪ್ರತಿನಿಧಿಸಬೇಕು. ಅಧಿಕಾರಿವರ್ಗ ಕಾನೂನು ಮತ್ತು ಆಡಳಿತವನ್ನು ಜನಪರವಾಗಿ ಅನುಷ್ಠಾನಗೊಳಿಸಬೇಕು. ಆದರೆ, ಈ ಎರಡೂ ವ್ಯವಸ್ಥೆಗಳು ಪರಸ್ಪರ ಕೈಜೋಡಿಸಿ ಸಾರ್ವಜನಿಕ ಹಿತಾಸಕ್ತಿಗಿಂತ ವೈಯಕ್ತಿಕ ಲಾಭಕ್ಕೆ ಆದ್ಯತೆ ನೀಡತೊಡಗಿದಾಗ ಭ್ರಷ್ಟಾಚಾರ ವ್ಯವಸ್ಥೆಯ ಭಾಗವಾಗುತ್ತದೆ. ಆಗ ಲಂಚ ಎನ್ನುವುದು ಕೇವಲ ಹಣದ ವಹಿವಾಟಾಗಿ ಉಳಿಯುವುದಿಲ್ಲ, ಅದು ಆಡಳಿತದ ಭಾಗವಾಗುತ್ತದೆ.
ಇದನ್ನು ಓದಿದ್ದೀರಾ?: ಆಶಾ ಕಾರ್ಯಕರ್ತೆಯರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಲಿ
ಕೆಪಿಎಸ್‌ಸಿಯಲ್ಲಿ ಆದದ್ದು ಅದೇ. ಆ ಸ್ವಾಯತ್ತ ಸಂಸ್ಥೆ ಈ ಹಂತಕ್ಕೆ ತಲುಪಲು ಎಲ್ಲ ಪಕ್ಷಗಳ ರಾಜಕೀಯ ನಾಯಕರ ಪಾತ್ರವೂ ಇದೆ. ಅಧಿಕಾರಸ್ಥ ರಾಜಕಾರಣಿಗಳು ಬಹಳ ಹಿಂದಿನಿಂದಲೂ ಹಣದಾಸೆಗೆ, ಜಾತಿಪ್ರೀತಿಗೆ, ಪುಢಾರಿಗಳ ಪುನರ್ವಸತಿಗೆ ಅನರ್ಹರನ್ನು-ಅಯೋಗ್ಯರನ್ನು ಆಯೋಗದ ಅಧ್ಯಕ್ಷ ಮತ್ತು ಸದಸ್ಯರನ್ನಾಗಿ ಆಯ್ಕೆ ಮಾಡಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರಿಂದ ಡಾ. ಕೃಷ್ಣ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಶ್ಯಾಂಭಟ್ಟ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಂದ ಶಿವಶಂಕರಪ್ಪ ಸಾಹುಕಾರ್ ಅಧ್ಯಕ್ಷರಾಗಿ ನೇಮಕವಾದರು. ಇವರ ಅವಧಿಯಲ್ಲಾದ ಪರೀಕ್ಷಾ ಅಕ್ರಮಗಳು, ನೇಮಕಾತಿ ಅಧ್ವಾನಗಳಿಂದ ರಾಜ್ಯದ ಆಡಳಿತಯಂತ್ರ ಭ್ರಷ್ಟಗೊಂಡಿದೆ. ಲೋಕಾಯುಕ್ತ ದಾಳಿಗಳು ನಾಡಿನ ಜನರನ್ನು ದಿನನಿತ್ಯ ಬೆಚ್ಚಿಬೀಳಿಸುತ್ತಿವೆ. ಸರ್ಕಾರಿ ಕಚೇರಿಗಳತ್ತ ಸಾಮಾನ್ಯರು ಕಾಲಿಡದಂತಾಗಿದೆ.
ಅಷ್ಟಕ್ಕೂ ಈ ದೇವೇಗೌಡ, ಸಿದ್ದರಾಮಯ್ಯ, ಯಡಿಯೂರಪ್ಪ ಹಾಗೂ ಡಾ. ಕೃಷ್ಣ, ಶಾಂಭಟ್ಟ, ಶಿವಶಂಕರಪ್ಪ, ಗೀತಾ, ಗಂಗ್ವಾರ್, ಕನ್ನಾಳೆ- ಇವರೆಲ್ಲ ಯಾರು? ನಮ್ಮವರೇ. ನಾವು ಅವರ ಪರವೂ ಇದ್ದೇವೆ, ವಿರುದ್ಧವೂ ಮಾತನಾಡುತ್ತೇವೆ.
ಸಾಮಾನ್ಯವಾಗಿ ಭ್ರಷ್ಟಾಚಾರ ಎಂದಾಕ್ಷಣ ಸರ್ಕಾರಿ ಕಚೇರಿಗಳು ನೆನಪಾಗುತ್ತವೆ. ಅಲ್ಲಿ ಲಂಚ ಪಡೆಯುವ ಗುಮಾಸ್ತರು, ಅಧಿಕಾರಿಗಳು, ಪೊಲೀಸರು, ಕಂದಾಯ ಇಲಾಖೆಯ ಸಿಬ್ಬಂದಿ ಕಣ್ಣಮುಂದೆ ಬರುತ್ತಾರೆ. ಆದರೆ ಭ್ರಷ್ಟಾಚಾರದ ಬೇರುಗಳು ಅದಕ್ಕಿಂತ ಆಳವಾಗಿವೆ. ಗುತ್ತಿಗೆ ನೀಡುವ ಪ್ರಕ್ರಿಯೆ, ಭೂ ಪರಿವರ್ತನೆ, ಕಟ್ಟಡ ನಿರ್ಮಾಣದ ಅನುಮತಿ, ಗಣಿಗಾರಿಕೆ, ವರ್ಗಾವಣೆ, ನೇಮಕಾತಿ, ಟೆಂಡರ್ ಮತ್ತು ಸಾರ್ವಜನಿಕ ಯೋಜನೆಗಳ ಅನುಷ್ಠಾನದಲ್ಲಿ ನಡೆಯುವ ಅಕ್ರಮಗಳನ್ನು ಗಮನಿಸಿದರೆ, ಲಂಚದ ಜಾಲವು ಕೆಳಹಂತದ ಕಚೇರಿಗಳಿಗಷ್ಟೇ ಅಲ್ಲ, ಉನ್ನತ ಹುದ್ದೆಯವರೆಗೂ ವ್ಯಾಪಿಸಿರುವುದು ಸ್ಪಷ್ಟವಾಗುತ್ತದೆ.
ರಾಜಕಾರಣಿಗಳಿಗೆ ಹಣ, ಅಧಿಕಾರ ಮತ್ತು ಚುನಾವಣಾ ವೆಚ್ಚದ ಲೆಕ್ಕಾಚಾರ ಮುಖ್ಯವಾದರೆ; ಅಧಿಕಾರಿವರ್ಗಕ್ಕೆ ಹುದ್ದೆ, ವರ್ಗಾವಣೆ, ಬಡ್ತಿ ಮತ್ತು ಅಕ್ರಮ ಸಂಪಾದನೆಯ ಅವಕಾಶಗಳು ಆಸೆ ಹುಟ್ಟಿಸುತ್ತವೆ. ಈ ಎರಡೂ ಹಿತಾಸಕ್ತಿಗಳು ಒಂದಾದರೆ, ರಾಜ್ಯದ ಅಭಿವೃದ್ಧಿ ಹಳ್ಳ ಹಿಡಿಯುತ್ತದೆ. ಅದು ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳ ಮೇಲೆ ಪರಿಣಾಮ ಬೀರುತ್ತದೆ.
ಜನ ಸಾಮಾನ್ಯವಾಗಿ ಎಡತಾಕುವ ಸರ್ಕಾರಿ ಕಚೇರಿಗಳಲ್ಲಿ ಒಂದು ಕಡತ ಮುಂದಕ್ಕೆ ಸಾಗಬೇಕಾದರೆ ಹಣ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗುವುದು ಆಡಳಿತದ ವೈಫಲ್ಯ. ಅರ್ಹ ವ್ಯಕ್ತಿಗೆ ಸಿಗಬೇಕಾದ ಸೇವೆ ಹಣವಿರುವವರಿಗೆ ಮಾತ್ರ ಸಿಗುವಂತಾದರೆ ಅದು ಸಾಮಾಜಿಕ ನ್ಯಾಯದ ಉಲ್ಲಂಘನೆ. ಹೀಗಾಗಿ ಭ್ರಷ್ಟಾಚಾರ ಎನ್ನುವುದು ಕೇವಲ ಸರ್ಕಾರದ ಬೊಕ್ಕಸಕ್ಕೆ ಆಗುವ ನಷ್ಟವಲ್ಲ, ಅದು ಜನರ ಹಕ್ಕುಗಳ ದಮನ.
ವಿಪರ್ಯಾಸಕರ ಸಂಗತಿ ಎಂದರೆ, ಭ್ರಷ್ಟಾಚಾರ ಇಂದು ವ್ಯವಸ್ಥೆಯ ಭಾಗವಾಗಿದೆ. ಭ್ರಷ್ಟರ ಬಗೆಗಿನ ಸಮಾಜದ ಮನಸ್ಥಿತಿ ಬದಲಾಗಿದೆ. ಸಡನ್ ಶ್ರೀಮಂತರಾಗುವತ್ತ ಜನರ ಒಲವು ಹೆಚ್ಚಾಗಿದೆ. ಅದಕ್ಕಾಗಿ ಯಾವ ದಾರಿ ತುಳಿದರೂ ತಪ್ಪಿಲ್ಲ ಎಂಬ ಭಾವನೆ ಬೇರೂರಿದೆ. ಹಣವಂತರು-ಅಧಿಕಾರಸ್ಥರೊಂದಿಗೆ ಗುರುತಿಸಿಕೊಳ್ಳುವುದು ಗೌರವದ ಸಂಕೇತವಾಗಿದೆ. ಭ್ರಷ್ಟರ ರಕ್ಷಣೆಗೆ ಜಾತಿಗಳು, ಮಠಗಳು, ಸ್ವಾಮೀಜಿಗಳು, ಸಂಘಸಂಸ್ಥೆಗಳು, ಮಾಧ್ಯಮಗಳು ನಿಲ್ಲುವ ಸಂದರ್ಭ ಸೃಷ್ಟಿಯಾಗಿದೆ. ಬಾರ್ಟರ್ ಸಿಸ್ಟಮ್- ನೀ ನನಗಿದ್ದರೆ, ನಾ ನಿನಗೆ- ಚಾಲ್ತಿಯಲ್ಲಿದೆ.
ಅದರಲ್ಲೂ ರಾಜ್ಯ ಭೀಕರ ಬರಕ್ಕೆ ತುತ್ತಾಗಿರುವ ಈ ದುರ್ಬರ ಕಾಲದಲ್ಲಿ, ಗೃಹ ಬಳಕೆಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇರುವ ಈ ದುರ್ದಿನಗಳಲ್ಲಿ, ಭ್ರಷ್ಟಾಚಾರವೂ ಏರಿದರೆ, ಬಡವರು ಬದುಕುವುದಾದರೂ ಹೇಗೆ?
ರಸ್ತೆ ನಿರ್ಮಾಣಕ್ಕೆ ಬಿಡುಗಡೆಯಾದ ಹಣದಲ್ಲಿ ಸೋರಿಕೆಯಾದರೆ ಕಳಪೆ ರಸ್ತೆ ನಿರ್ಮಾಣವಾಗುತ್ತದೆ. ಆಸ್ಪತ್ರೆಯ ಔಷಧ ಖರೀದಿಯಲ್ಲಿ ಅಕ್ರಮ ನಡೆದರೆ ರೋಗಿಗಳಿಗೆ ತೊಂದರೆಯಾಗುತ್ತದೆ. ಶಾಲೆಗಳ ಅನುದಾನ ದುರುಪಯೋಗವಾದರೆ ಮಕ್ಕಳ ಶಿಕ್ಷಣದ ಗುಣಮಟ್ಟ ಕುಸಿಯುತ್ತದೆ. ಕುಡಿಯುವ ನೀರು, ವಸತಿ, ಪಡಿತರ, ಉದ್ಯೋಗ ಮತ್ತು ಪಿಂಚಣಿ ಯೋಜನೆಗಳಲ್ಲಿ ಭ್ರಷ್ಟಾಚಾರ ನಡೆದರೆ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳು ತಮ್ಮ ಉದ್ದೇಶ ಕಳೆದುಕೊಳ್ಳುತ್ತವೆ.
ಇದನ್ನು ಓದಿದ್ದೀರಾ?: ಬಾಲಕ ಜಯ್ ಶಾ ಐಸಿಸಿ ಅಧ್ಯಕ್ಷ; ಭಾರತದ ಯುವಸಮೂಹ ನಿರ್ಲಕ್ಷ್ಯ
ಪ್ರಜಾಪ್ರಭುತ್ವದಲ್ಲಿ ಅಧಿಕಾರ ಎನ್ನುವುದು ಜನರು ನೀಡಿದ ಜವಾಬ್ದಾರಿ. ಅದು ಸಂಪತ್ತು ಗಳಿಸುವ ಪರವಾನಗಿ ಅಲ್ಲ. ಸರ್ಕಾರಿ ಹುದ್ದೆ ಎನ್ನುವುದು ಸಾರ್ವಜನಿಕ ಸೇವೆಯ ಅವಕಾಶವೇ ಹೊರತು ಖಾಸಗಿ ಆದಾಯದ ಮೂಲವಲ್ಲ. ರಾಜಕಾರಣ ಮತ್ತು ಅಧಿಕಾರಶಾಹಿ ಎರಡೂ ಜನರಿಗೆ ಉತ್ತರದಾಯಿಗಳಾಗದಿದ್ದರೆ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯವಿಲ್ಲ.
ಹಾಗಾಗಿ ಲಂಚ ಕೊಡುವ ಸಾಮಾನ್ಯ ನಾಗರಿಕನನ್ನು ಮಾತ್ರ ಅಪರಾಧಿ ಎಂದು ನೋಡುವುದಕ್ಕಿಂತ, ಭ್ರಷ್ಟ ವ್ಯವಸ್ಥೆಯನ್ನು ರೂಪಿಸುವ, ಪೋಷಿಸುವ ಮತ್ತು ಪೊರೆಯುವ ಅಧಿಕಾರದ ಕೇಂದ್ರಗಳನ್ನು ಪ್ರಶ್ನಿಸುವ ಧೈರ್ಯ ಮಾಡಬೇಕಿದೆ. ಕೊಳಕರನ್ನು, ಭ್ರಷ್ಟರನ್ನು ಜಾತಿ-ಧರ್ಮದ ಕಾರಣಕ್ಕೆ ಬೆಂಬಲಿಸುವುದನ್ನು ಬಿಡಬೇಕಿದೆ. ಹಾಗೆಯೇ ಮಾನವಂತರು ಮೌನ ಮುರಿದು, ಸರಿ-ತಪ್ಪುಗಳನ್ನು ತಿಳಿಸಿ ಹೇಳಬೇಕಿದೆ. ಇಲ್ಲದಿದ್ದರೆ, ಬಡವರು ಬದುಕುವುದು ಕಷ್ಟವಿದೆ. ಬಡವರು ಇಲ್ಲವಾದರೆ, ಶ್ರೀಮಂತರ ಅಸ್ತಿತ್ವವೇ ಅಳಿಸಿಹೋಗಲಿದೆ.



