ವಚನ ಕಲ್ಯಾಣ | ಒಬ್ಬರ ಮನವ ಘಾತವ ಮಾಡಿ, ಗಂಗೆಯ ಮುಳುಗಿದಡೇನಾಗುವುದಯ್ಯಾ?

Date:

ಒಬ್ಬರ ಮನವ ನೋಯಿಸಿ, ಒಬ್ಬರ ಮನವ ಘಾತವ ಮಾಡಿ, ಗಂಗೆಯ ಮುಳುಗಿದಡೇನಾಗುವುದಯ್ಯಾ? ಚಂದ್ರನು ಗಂಗೆಯ ತಡಿಯಲ್ಲಿದ್ದಡೇನು? ಕಲಂಕ ಬಿಡದಾಯಿತ್ತಯ್ಯಾ. ಅದು ಕಾರಣ, ಮನವ ನೋಯಿಸಿದವನೆ, ಒಬ್ಬರ ಘಾತವ ಮಾಡಿದವನೆ, ಪರಮಪಾವನ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ.

- Advertisement -

12ನೇ ಶತಮಾನದ ಶರಣ ಚಳವಳಿಯಲ್ಲಿ ಬಸವಣ್ಣನವರು ಕೇವಲ ಒಬ್ಬ ವ್ಯಕ್ತಿಯಾಗಿರಲಿಲ್ಲ. ಒಂದು ವಿಚಾರಧಾರೆಯ ಶಕ್ತಿಯಾಗಿ ಸಾಮಾಜಿಕ ಚಳವಳಿ ಮುನ್ನಡೆಸಿದ ನಾಯಕರಾಗಿದ್ದರು. ಬಸವಣ್ಣನವರ ಸಮಕಾಲೀನ ಶರಣ ಸಿದ್ಧರಾಮನು ಮನುಷ್ಯನ ಅಂತರಂಗ-ಬಹಿರಂಗ ಶುದ್ಧತೆಯ ಕುರಿತು ಬಹಳ ಮಾರ್ಮಿಕವಾಗಿ ವಿಶ್ಲೇಷಿಸುತ್ತಾರೆ. ಪ್ರತಿಯೊಬ್ಬರನ್ನೂ ಪ್ರೀತಿ, ಗೌರವ, ವಿನಯದಿಂದ ಕಾಣುವ ʼಇವನಮ್ಮವʼ ತತ್ವ ಬೋಧಿಸಿದ್ದಾರೆ. ಯಾರೊಬ್ಬರ ಮನಸ್ಸಿಗೆ ನೋವುಂಟು ಮಾಡದಂತೆ ಅವರು ಮಾನವ ಜನಾಂಗಕ್ಕೆ ಸಲಹೆ ನೀಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಸಿದ್ಧರಾಮ ಮೂಲತಃ (ಇಂದಿನ ಸೋಲ್ಲಾಪುರ) ಸೊನ್ನಲಿಗೆಯವರು ಎಂದು ಹೇಳಲಾಗುತ್ತದೆ. ಕೆಲ ಸಂಶೋಧಕರು ಮಹಾರಾಷ್ಟ್ರದ ಜತ್‌ ಜಿಲ್ಲೆಯ ಸೊನ್ನಲಿಗೆ ಅಥವಾ ಸೊನಗಿ ಎಂದು ಅಭಿಪ್ರಾಯಪಡುತ್ತಾರೆ. ಸಿದ್ಧರಾಮರ ಮೊದಲ ಹೆಸರು ಧೂಳಿಮಾಕಾಳ, ನಂತರ ಸಿದ್ಧರಾಮ ಎಂಬ ಹೆಸರಿನಿಂದ ಶಿವಯೋಗಿ ಸಿದ್ಧರಾಮ ಎಂದು ಪ್ರಸಿದ್ಧರಾದರು. ಅಲ್ಲಮ, ಬಸವಣ್ಣ ಹಾಗೂ ಚನ್ನಬಸವಣ್ಣನವರ ಸಂಪರ್ಕದಿಂದ ಯೋಗಿ ಎನಿಸಿಕೊಂಡರು. ನಂತರ ಕಲ್ಯಾಣದ ಅನುಭವ ಮಂಟಪದ ವಿಚಾರಗೋಷ್ಠಿಗಳಲ್ಲಿ ಭಾಗವಹಿಸಿ ಅನುಭಾವಿ ವಚನಕಾರ, ಶ್ರೇಷ್ಠ ವಿಚಾರವಾದಿಯಾಗಿ ಯೋಗಿ ಎನಿಸಿಕೊಂಡರು.

ಸಿದ್ಧರಾಮನ ವಚನಗಳಲ್ಲಿ ಗುರು-ಲಿಂಗ-ಜಂಗಮ, ಅಂತರಂಗ ನಿವೇದನೆ ಸೇರಿದಂತೆ ಮೌಢ್ಯ, ಅಂಧಕಾರ ಹಾಗೂ ಜಾತಿಯತೆಯನ್ನು ಕಟುವಾಗಿ ಟೀಕಿಸಿರುವುದು ಕಾಣುತ್ತೇವೆ. ʼಕಪಿಲಸಿದ್ಧ ಮಲ್ಲಿಕಾರ್ಜುನಾʼ, ʼಯೋಗಿನಾಥ ʼʼಕಪಿಲಸಿದ್ಧ ಮಲ್ಲಿನಾಥ ಎಂಬಿತ್ಯಾದ ಅಂಕಿತದಲ್ಲಿ ವಚನಗಳನ್ನು ರಚಿಸಿದ್ದಾರೆ. ಸ್ವತಃ ಸಿದ್ಧರಾಮನೇ ʼಅರುವತ್ತೆಂಟು ಸಾವಿರ ವಚನಂಗಳ ಹಾಡಿ ಹಾಡಿ ಸೋತಿತೆನ್ನ ಮನ ನೋಡಯ್ಯಾʼ ಎಂದು ತನ್ನದೊಂದು ವಚನದಲ್ಲಿ ಹೇಳುತ್ತಾರೆ. ಆದರೆ, ಅವರ 1966 ವಚನಗಳು ಲಭ್ಯವಾಗಿರುವುದು ತಿಳಿದುಬರುತ್ತದೆ.

ಸಕಲ ಜೀವಾತ್ಮರಿಗೆ ಲೇಸು ಬಯಸುವ ಸಾಮಾಜಿಕ ಹೊಣೆಗಾರಿಕೆ ಹೊಂದಿದ ಸಿದ್ಧರಾಮ ಕೆರೆ-ಕಟ್ಟೆ, ಬಾವಿ, ಹೂದೋಟ ಸೇರಿದಂತೆ ಬಡವರ, ನಿರ್ಗತಿಕರ ಏಳಿಗೆಗಾಗಿ ಸಮಾಜಮುಖಿ, ಜನಹಿತ ಕಾರ್ಯಗಳನ್ನು ಕೈಗೊಂಡಿದ್ದನು. ಮೊದಲಿಗೆ ಪಾಪ-ಪುಣ್ಯ, ಸ್ವರ್ಗ-ನರಕಗಳೆಂಬ ಪಾರಂಪರಿಕ ನಂಬುಗೆಯನ್ನು ಸ್ವೀಕರಿಸುತ್ತಿದ್ದ ಸಿದ್ಧರಾಮ ಕಲ್ಯಾಣಕ್ಕೆ ಬಂದ ಬಳಿಕ ಆತನ ಚಿಂತನಕ್ರಮದಲ್ಲಿ ಬದಲಾವಣೆ ಆಗಿರುವುದು ಆತನ ವಚನಗಳಿಂದ ಕಾಣುತ್ತೇವೆ.

ಸಮಾಜದಲ್ಲಿ ಮನುಷ್ಯ-ಮನುಷ್ಯರ ನಡುವೆ ದ್ವೇಷ, ಅಸಹಿಷ್ಣುತೆ, ಜಾತಿ-ಮತದ ತಾರತಮ್ಯ, ಧರ್ಮಗಳ ನಡುವಿನ ಸಂಘರ್ಷ, ಸ್ವಾರ್ಥ ಮತ್ತು ಶೋಷಣೆ ವಿಜೃಂಭಿಸುತ್ತಿದೆ. ನಿತ್ಯದ ಬದುಕಿನಲ್ಲಿ ಮತ್ತೊಬ್ಬರನ್ನು ನೋಯಿಸುವುದು, ಸುಳ್ಳು ಆರೋಪ ಮಾಡುವುದು, ತೇಜೋವಧೆ ಮಾಡುವುದು, ಅನ್ಯಾಯ ಎಸಗುವುದು ಮನಸ್ಸಿನ ಘಾತವೇ ಆಗಿದೆ. ಒಬ್ಬರ ಮನಸ್ಸನ್ನು ನೋಯಿಸದೆ ಬದುಕುವುದೇ ಮಹಾಪೂಜೆ, ಮತ್ತೊಬ್ಬರಿಗೆ ಹೃದಯಕ್ಕೆ ಘಾತ ಮಾಡದೆ ಬದುಕುವುದು ನೈಜ ಧರ್ಮ. ಅಂತರಂಗದ ಕೊಳಕು ತೊಳೆದುಕೊಳ್ಳುವುದೇ ನಿಜವಾದ ಪಾವಿತ್ರ್ಯ ಎಂಬುದು ಸಿದ್ಧರಾಮ ಹೇಳುತ್ತಾರೆ.

ಮನುಷ್ಯನಿಗೆ ಹೊರಗಿನ ಆಚರಣೆ, ತೀರ್ಥಸ್ನಾನ, ಪೂಜೆ, ವ್ರತ, ಧಾರ್ಮಿಕ ವಿಧಿವಿಧಾನಗಳಿಗಿಂತ ಅಂತರಂಗ ಶುದ್ಧಿ ಅತ್ಯಂತ ಮುಖ್ಯ. ಗಂಗೆಯಲ್ಲಿ ಮುಳುಗಿ ಸ್ನಾನ ಮಾಡಿದರೆ ದೇಹದ ಮೇಲಿನ ಕೊಳೆ ಹೋಗಬಹುದು. ಆದರೆ ಇನ್ನೊಬ್ಬರ ಮನಸ್ಸನ್ನು ನೋಯಿಸಿ, ಅವರ ಹೃದಯಕ್ಕೆ ಘಾತ ಮಾಡಿದರೆ ಆಂತರಿಕವಾದ ಕಲ್ಮಶ ಹೋಗುವುದೇ ಎಂದು ಸಿದ್ಧರಾಮ ಪ್ರಶ್ನಿಸುತ್ತಾನೆ. ನಮ್ಮ ದೇಹ ಗಂಗೆಯ ನೀರು ಶುದ್ಧಗೊಳಿಸಬಹುದು, ಆದರೆ ಮನಸ್ಸಿನಲ್ಲಿ ನೆಲೆಯೂರಿದ ದ್ವೇಷ, ಅಹಂಕಾರ, ಕ್ರೌರ್ಯ, ಅಸೂಯೆ ಮತ್ತು ನೋವುಂಟುಮಾಡುವ ಸಮಾಜಘಾತುಕ ಪ್ರವೃತ್ತಿ ನೀರಿನಿಂದ ತೊಳೆಯಲು ಅಸಾಧ್ಯ. ಲೋಕದ ಪ್ರಜ್ಞೆ, ಕಾಳಜಿ ಹಾಗೂ ಅರಿವಿನ ವಿಸ್ತಾರ ನೆಲೆಗೊಳ್ಳಬೇಕಾಗುತ್ತದೆ ಎನ್ನುತ್ತಾರೆ.

ಹೊರನೋಟಕ್ಕೆ ಎಷ್ಟೇ ಪವಿತ್ರನಂತೆ ಕಂಡರೂ, ಮನುಷ್ಯನ ಅಂತರಂಗದಲ್ಲಿ ಕಲ್ಮಶವಿದ್ದರೆ ಆ ಬಾಹ್ಯ ಪಾವಿತ್ರ್ಯಕ್ಕೆ ಅರ್ಥವಿಲ್ಲ. ಚಂದ್ರ ಗಂಗೆಯ ದಡದಲ್ಲಿ ಬಂದ ಕುಳಿತರೂ ಆತನ ಕಲಂಕ ಹೋಗುವುದಿಲ್ಲ. ಹಾಗೇ ನಮ್ಮೊಳಗೆ ಮಾನವೀಯ ಮೌಲ್ಯ ಇರದಿದ್ದರೆ ನಾವು ಯಾವುದೇ ತೀರ್ಥಯಾತ್ರೆ, ಪೂಜೆ, ನೇಮ ಕೈಗೊಂಡರೂ, ಗಂಗೆಯಲ್ಲಿ ಮುಳುಗಿದರೂ ಅದು ವ್ಯರ್ಥಕ್ಕೆ ಸಮ. ಕರುಣೆ, ಪ್ರೀತಿ, ಸಹಾನುಭೂತಿ ಇಲ್ಲದಿರುವ ವ್ಯಕ್ತಿಯಲ್ಲಿ ಸೌಹಾರ್ದತೆ ಭಾವ ಮೂಡಲು ಅಸಾಧ್ಯ. ಬಹಿರಂಗ ಶುದ್ಧಿಗಿಂತ ಅಂತರಂಗ ಶುದ್ಧಿಗೆ ವಚನಕಾರರ ಹೆಚ್ಚು ಪ್ರಾಶಸ್ತ್ಯ ಕೊಟ್ಟಿದ್ದರು ಎಂಬುದಕ್ಕೆ ಈ ವಚನ ಸಾಕ್ಷಿ.

ʼಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲʼ ಎಂದು ಬಸವಣ್ಣ ಶ್ರೇಷ್ಠತೆಯ ಭಾವ ಅಳಿಸುತ್ತಾರೆ. ಇಲ್ಲಿ ತಮ್ಮನ್ನು ಶರಣರಿಗಿಂತ ಕಿರಿಯನೆಂದು ಭಾವಿಸುವ ವಿನಯವಿದೆ. ತಮ್ಮ ಗುರು ಕೂಡಲಸಂಗಮದೇವ ಒಬ್ಬನೇ ಎಂಬುದನ್ನು ಅವರು ಹಲವು ವಚನಗಳಲ್ಲಿ ಸ್ಪಷ್ಟಪಡಿಸಿದ್ದಾರೆ. ವಚನಕಾರರು ಬಸವಣ್ಣನವರನ್ನು ಗುರುವೆಂದು ಕಂಡದ್ದು ಕೇವಲ ವ್ಯಕ್ತಿಯ ಆರಾಧನೆಯಿಂದಲ್ಲ, ಬಸವಣ್ಣನವರ ಬದುಕು, ನುಡಿ ಮತ್ತು ತತ್ವಗಳಿಂದ, ತಮ್ಮ ಬದುಕಿಗೆ ದಾರಿ ತೋರಿಸುವ ಜ್ಞಾನವನ್ನು ಕಂಡರು. ಅನೇಕ ಶರಣರು ಬಸವಣ್ಣನವರ ವ್ಯಕ್ತಿತ್ವದ ಕುರಿತು ತಮ್ಮ ವಚನಗಳಲ್ಲಿ ವರ್ಣಿಸಿದ್ದು ಕಾಣುತ್ತೇವೆ.

ಬಸವಣ್ಣನೇ ತಾಯಿ, ಬಸವಣ್ಣನೇ ತಂದೆ, ಬಸವಣ್ಣನೇ ಪರಮಬಂಧುವೆನಗೆ. ವಸುಧೀಶ ಕಪಿಲಸಿದ್ಧಮಲ್ಲಿಕಾರ್ಜುನ, ನಿಮ್ಮ ಹೆಸರಿಟ್ಟ ಗುರು ಬಸವಣ್ಣನಯ್ಯಾ.

ಲೌಕಿಕ ಬದುಕಿನಲ್ಲಿ ತಂದೆ-ತಾಯಿ ಮೊದಲ ಗುರು. ಬದುಕಿನ ನೋವು-ನಲಿವುಗಳಲ್ಲಿ ಭಾಗಿಯಾಗುವ ಬಂಧು-ಬಳಗ ಮನುಷ್ಯನಿಗೆ ಬೆನ್ನೆಲುಬಾಗಿ ನಿಲ್ಲುತ್ತದೆ. ಬಸವಣ್ಣ ಕೂಡ ʼತಂದೆ ನೀನು, ತಾಯಿ ನೀನು, ಬಂಧು ನೀನು, ಬಳಗ ನೀನು, ನಿನ್ನಲ್ಲದೆ ಮತ್ತ್ಯಾರು ಇಲ್ಲ, ಕೂಡಲಸಂಗಮದೇವʼ ಎಂದು ಹೇಳುತ್ತಾರೆ. ಅದೇ ರೀತಿಯಲ್ಲಿ ಸಿದ್ಧರಾಮರು ʼಬಸವಣ್ಣನೇ ತಾಯಿ, ಬಸವಣ್ಣನೇ ತಂದೆ, ಬಸವಣ್ಣನೇ ಪರಮಬಂಧು ಎನಗೆʼ ಎಂದು ಬಸವಣ್ಣನವರನ್ನು ಗುರು-ಭಕ್ತ, ಬಂಧು-ಬಳಗ ಸಕಲವೂ ನೀನೇ ಎಂದು ಹೇಳಿಕೊಂಡಿದ್ದಾರೆ.

ಇದು ಬಸವಣ್ಣನವರನ್ನು ಕೇವಲ ತಂದೆ-ತಾಯಿಯ ಸ್ಥಾನಕ್ಕೆ ಹೋಲಿಸುವ ಮಾತಲ್ಲ. ಬಸವಣ್ಣನವರ ಚಿಂತನೆ ತಮ್ಮ ಬದುಕಿಗೆ ನೀಡಿದ ದಿಕ್ಕು, ಜ್ಞಾನ ಮತ್ತು ಅನುಭಾವವನ್ನು ಸಿದ್ಧರಾಮೇಶ್ವರರು ʼಭಕ್ತಿಗೆ ಭಕ್ತ ಬಸವಣ್ಣನಯ್ಯಾ, ಮುಕ್ತಿಗೆ ಯುಕ್ತ ಬಸವಣ್ಣನಯ್ಯಾ, ಮುಕ್ತಿಗೆ ಮುಕ್ತ ಬಸವಣ್ಣನಯ್ಯಾʼ ಎನ್ನುತ್ತಾರೆ. ಬಸವಣ್ಣ ಎಂಬುದು ಕೇವಲ ಒಂದು ವ್ಯಕ್ತಿನಾಮವಾಗಿ ಉಳಿಯುವುದಿಲ್ಲ. ಅದು ಭಕ್ತಿ, ಜ್ಞಾನ, ಯುಕ್ತಿ ಮತ್ತು ಮುಕ್ತಿಯ ಸಂಕೇತವಾಗಿ ರೂಪುಗೊಳ್ಳುತ್ತದೆ ಎಂಬುದಕ್ಕೆ ಸಿದ್ಧರಾಮರ ಈ ವಚನ ಉದಾಹರಣೆಯಾಗಿದೆ.

ಬಸವ ಎಂಬುದು ವ್ಯಕ್ತಿಯ ಹೆಸರಷ್ಟೇ ಅಲ್ಲ ಶರಣರ ದೃಷ್ಟಿಯಲ್ಲಿ ಬಸವ ಎಂಬುದು ಕೇವಲ 12ನೇ ಶತಮಾನದ ಒಬ್ಬ ಸಮಾಜ ಸುಧಾರಕನ ಹೆಸರು ಅಷ್ಟೇ ಅಲ್ಲದೆ, ಅದು ಜ್ಞಾನ, ಭಕ್ತಿ, ಧ್ಯಾನ ಮತ್ತು ಬೆಳಕಿನ ರೂಪಕವಾಗಿದೆ. ʼಬಸವನ ಮೂರ್ತಿಯೇ ಜ್ಞಾನಕ್ಕೆ ಮೂಲ, ಬಸವನ ಮೂರ್ತಿಯೇ ಧ್ಯಾನಕ್ಕೆ ಮೂಲ, ಬಸವ ಬಸವ ಎಂಬುದು ಭಕ್ತಿ ಕಾಣಾʼ ಎಂದು ಸಿದ್ಧರಾಮ ಹೇಳುವ ಮಾತು ಬಸವಣ್ಣನವರ ಸತ್ಯ-ಶುದ್ಧ ಹಾಗೂ ನಿಷ್ಠೆಯ ಭಕ್ತಿ, ಜ್ಞಾನಕ್ಕೆ ನೀಡಿದ ಗೌರವ ಪ್ರತೀಕವಾಗಿದೆ.

ಬಹುತೇಕರಿಗೆ ಇಂತಹ ವಚನಗಳು ಬಸವಣ್ಣನವರ ಹೊಗಳಿಕೆಯ ನುಡಿಗಳಂತೆ ಕಾಣಬಹುದು. ಆದರೆ ಅದರ ಒಳಾರ್ಥವನ್ನು ಅರ್ಥಮಾಡಿಕೊಳ್ಳಬೇಕಾದರೆ ಅಂದಿನ ಸಾಮಾಜಿಕ ಪರಿಸ್ಥಿತಿಯನ್ನು ಗಮನಿಸಬೇಕು. ಜಾತಿ-ಭೇದ, ಅಸ್ಪೃಶ್ಯತೆ, ಮೇಲು-ಕೀಳು ಮತ್ತು ಸಾಮಾಜಿಕ ಅಸಮಾನತೆಗಳಿಂದ ಕೂಡಿದ್ದ ಸಮಾಜದಲ್ಲಿ ಬಸವಣ್ಣನವರು ಕಾಯಕ, ದಾಸೋಹ, ಸಮಾನತೆ ಮತ್ತು ಮಾನವ ಘನತೆಯ ತತ್ವಗಳನ್ನು ಪ್ರತಿಪಾದಿಸಿದರು. ಅವರ ಚಿಂತನೆಯಿಂದ ಪ್ರಭಾವಿತರಾದ ಸಿದ್ಧರಾಮರು ಸೇರಿದಂತೆ ಅನೇಕ ಶರಣರು ಕಲ್ಯಾಣಕ್ಕೆ ಆಗಮಿಸಿ ಶರಣ ತತ್ವವನ್ನು ಅಪ್ಪಿಕೊಂಡರು. ತಮ್ಮ ಕಾಯಕದಲ್ಲಿಯೇ ಬದುಕಿನ ಸಾರ್ಥಕತೆ ಕಂಡುಕೊಂಡರು.

ಬಸವಣ್ಣನವರ ಸಮಕಾಲೀನ ಶರಣರು ಅವರನ್ನು ಕೇವಲ ನೆನೆಯಲಿಲ್ಲ, ಕೇವಲ ವರ್ಣಿಸಲಿಲ್ಲ, ಆರಾಧಿಸಲೂ ಇಲ್ಲ. ಅವರು ಬಸವಣ್ಣನವರ ತತ್ವವನ್ನು ತಮ್ಮ ಬದುಕಿನಲ್ಲಿ ಮೈಗೂಡಿಸಿಕೊಂಡರು. ಕಾಯಕವನ್ನು ಗೌರವಿಸಿದರು. ದಾಸೋಹವನ್ನು ಬದುಕಿನ ಭಾಗವನ್ನಾಗಿಸಿಕೊಂಡರು. ಜಾತಿ-ಭೇದವನ್ನು ತಿರಸ್ಕರಿಸಿದರು. ಅನುಭವಕ್ಕೆ ಮಹತ್ವ ನೀಡಿದರು. ತಮ್ಮ ಬದುಕಿನ ಅನುಭಾವಗಳನ್ನು ವಚನಗಳ ಮೂಲಕ ಸಮಾಜದ ಮುಂದಿಟ್ಟರು.

ಇದೇ ಕಾರಣಕ್ಕೆ ಶರಣರ ಬಸವಭಕ್ತಿ ಭಾವನಾತ್ಮಕ ಆರಾಧನೆಯಷ್ಟೇ ಆಗಿರಲಿಲ್ಲ. ಅದು ತತ್ವದ ಅನುಸರಣೆ ಆಗಿತ್ತು. ಇಂದಿನ ಸಂದರ್ಭದಲ್ಲಿ ಬಸವಣ್ಣನವರನ್ನು ಗುರುವೆಂದು, ಮಹಾತ್ಮನೆಂದು, ಕ್ರಾಂತಿಕಾರಿಯೆಂದು ಒಪ್ಪಿಕೊಳ್ಳುವವರು ಅನೇಕರು. ಆದರೆ ಬಸವಣ್ಣನವರ ತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವವರು ಎಷ್ಟು ಮಂದಿ ಎಂಬ ಪ್ರಶ್ನೆ ನಮ್ಮ ಮುಂದೆ ನಿಲ್ಲುತ್ತದೆ.

ಲಿಂಗಾಯತ ಧರ್ಮದ ತತ್ವವನ್ನು ಅರ್ಥಮಾಡಿಕೊಳ್ಳುವಾಗ ಲಿಂಗಧಾರಣೆಯೊಂದನ್ನೇ ಮಾನದಂಡವನ್ನಾಗಿ ಮಾಡಲಾಗದು. ಲಿಂಗ ಧರಿಸುವುದು ಒಂದು ಧಾರ್ಮಿಕ ಆಚರಣೆಯ ಭಾಗವಾಗಿರಬಹುದು; ಆದರೆ ಬಸವತತ್ವದ ನಿಜವಾದ ಅರ್ಥ ನಡೆ-ನುಡಿಯಲ್ಲಿ ವ್ಯಕ್ತವಾಗಬೇಕು. ತನು-ಮನ ಪರಿಶುದ್ಧತೆ, ಮಾನವೀಯತೆ, ಸಮಾನತೆಯ ಪ್ರಜ್ಞೆ, ಕಾಯಕನಿಷ್ಠೆ, ದಾಸೋಹದ ಮನೋಭಾವ ಮತ್ತು ಅಂತರಂಗದ ಶುದ್ಧತೆ, ಇವು ಬದುಕಿನಲ್ಲಿ ಕಾಣಿಸಿಕೊಂಡಾಗಲೇ ಬಸವತತ್ವದ ಅನುಸರಣೆಗೆ ಅರ್ಥ ಬರುತ್ತದೆ.

ಲಿಂಗ ಧರಿಸಿದವರೆಲ್ಲರೂ ಬಸವತತ್ವ ಅಪ್ಪಿಕೊಂಡು ಬದುಕುತ್ತಿದ್ದಾರೆ ಎಂದು ಹೇಳಲಾಗದು. ಬಸವತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಂಡವನೇ ಅದರ ನಿಜವಾದ ಅನುಯಾಯಿ. ಬಸವಣ್ಣನವರಿಗೆ ಸಲ್ಲಬೇಕಾದ ನಿಜವಾದ ಗೌರವ ಯಾವುದು? ಬಸವಣ್ಣನವರನ್ನು ವ್ಯಕ್ತಿಯಾಗಿ ಪೂಜಿಸುವುದಕ್ಕಿಂತ ಅವರ ತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ. ಇಲ್ಲಿ ಭಕ್ತಿ ಎಂದರೆ ಮೌಢ್ಯದ ಭಕ್ತಿಯಲ್ಲ. ಅದು ವಿಚಾರದ ಭಕ್ತಿ, ತತ್ವದ ಭಕ್ತಿ, ವಚನಜ್ಞಾನದ ಭಕ್ತಿ. ವೈಜ್ಞಾನಿಕ ಭಕ್ತಿ ಎನಿಸಿಕೊಳ್ಳುತ್ತದೆ.

ಸಿದ್ಧರಾಮರು ಸತಿ-ಪತಿ ಭಾವದ ವಚನಗಳು ಬಹಳ ವಿಶೇಷವಾಗಿವೆ. ಅಲ್ಲದೆ ಸಿದ್ಧರಾಮ ಹೆಣ್ಣನ್ನು ಗಂಡಿನಷ್ಟೇ ಗೌರವಿಸುವ ಮನೋಭಾವ ಹೊಂದಿರುವುದನ್ನು ಆತನ ವಚನಗಳಲ್ಲಿ ನೋಡುಬಹುದು. ಸ್ತ್ರೀಯರನ್ನು ಕೇವಲ ಹೆಣ್ಣಾಗಿ ನೋಡದೆ ಸ್ತ್ರೀಶಕ್ತಿಯನ್ನು ದೇವರಂತೆ ಕಾಣುವುದು, ಪುರುಷ ಸಮಾನವಾಗಿ ಗೌರವಿಸುವಂತೆ ʼಹೆಣ್ಣು ಹೆಣ್ಣಲ್ಲ ಹೆಣ್ಣು ರಾಕ್ಷಸಿಯಲ್ಲ ; ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧಮಲ್ಲಿಕಾರ್ಜುನ ನೋಡಾ!ʼ ಎಂದು ಹೇಳುತ್ತಾರೆ ಅಲ್ಲಮ.

ಶರಣರು ಡಾಂಭಿಕ ಭಕ್ತಿಯನ್ನು ಕಠೋರವಾಗಿ ಟೀಕಿಸಿದ್ದಾರೆ. ʼಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲʼ ಎಂದು ʼದೇಹವೇ ದೇವಾಲಯʼ ಎಂದು ಪೂಜಿಸುವಂತೆ ಸಲಹೆ ನೀಡುತ್ತಾರೆ. ʼಕೈಲಾಸ ಕೈಲಾಸವೆಂದು ಬಡಿದಾಡುವ ಅಣ್ಣಗಳಿರಾ, ಕೇಳಿರಯ್ಯಾ. ಕೈಲಾಸವೆಂಬುದೊಂದು ಭೂಮಿಯೊಳಿರುವ ಹಾಳುಬೆಟ್ಟ. ಅಲ್ಲಿರುವ ಮುನಿಗಳೆಲ್ಲ ಜೀವಗಳ್ಳರು. ಅಲ್ಲಿರ್ದ ಚಂದ್ರಶೇಖರನು ಬಹು ಎಡ್ಡ. ಇದರಾಡಂಬರವೇಕಯ್ಯಾ? ಎನ್ನುವ ಸಿದ್ಧರಾಮ ಕೈಲಾಸ ಎಂಬುದು ಒಂದು ನಿಗದಿತ ಸ್ಥಳವಲ್ಲ, ಅಲ್ಲಿರುವ ಮುನಿಗಳು ವಿಶೇಷ ತಪಸ್ಸು ಮಾಡಿದವರಲ್ಲ. ಧಾರ್ಮಿಕ ಆಚರಣೆಗಾಗಿ ಕೈಲಾಸ ಹುಡುಕುವ ಬದಲಿಗೆ ನಡೆ-ನುಡಿ ಸಿದ್ಧಾಂತ ಶುದ್ಧವಾಗಿ ಬದುಕಿದರೆ ಅದೇ ಕೈಲಾಸವಾಗುವುದು ಎಂದು ಅಲ್ಲಮ ಪ್ರತಿಪಾದಿಸುತ್ತಾರೆ.

ಸಿದ್ಧರಾಮರು ʼನಿಮ್ಮ ಹೆಸರಿಟ್ಟ ಗುರು ಬಸವಣ್ಣನಯ್ಯಾʼ ಎಂದು ಹೇಳುವಾಗ, ಬಸವಣ್ಣನವರು ತಮ್ಮ ಬದುಕಿಗೆ ನೀಡಿದ ಹೊಸ ಅರ್ಥವನ್ನು ನೆನೆಯುತ್ತಾರೆ. ದೇಶ-ವಿದೇಶಗಳಿಂದ ಕಲ್ಯಾಣಕ್ಕೆ ಆಗಮಿಸಿದ ಶರಣರಿಗೆ ಲಿಂಗದೀಕ್ಷೆ ನೀಡಿ, ಲಿಂಗಾಯತ ತತ್ವವನ್ನು ಬೋಧಿಸಿ, ಕಾಯಕದ ಮಹತ್ವವನ್ನು ತಿಳಿಸಿ, ಅವರ ವೃತ್ತಿ ಕಾಯಕದೊಂದಿಗೆ ಅವರನ್ನು ಗುರುತಿಸಿದ ಬಸವಣ್ಣನವರ ಕಾರ್ಯ ಕೇವಲ ಧಾರ್ಮಿಕ ಚಳವಳಿಯಲ್ಲ; ಅದು ಸಾಮಾಜಿಕ ಪುನರ್‌ನಿರ್ಮಾಣದ ಪ್ರಯತ್ನವೂ ಆಗಿತ್ತು.

ಇದನ್ನೂ ಓದಿ : ವಚನ ಕಲ್ಯಾಣ | ದೇಹವೆಂಬುದು ತುಂಬಿದ ಬಂಡಿ ಕಂಡಯ್ಯಾ

ಭಕ್ತನಾದಡೆ ಬಸವಣ್ಣನಂತಾಗಬೇಕು, ಜಂಗಮವಾದಡೆ ಪ್ರಭುವಿನಂತಾಗಬೇಕು. ಭೋಗಿಯಾದಡೆ ನಮ್ಮ ಗುರು ಚೆನ್ನಬಸವಣ್ಣನಂತಾಗಬೇಕು. ಯೋಗಿಯಾದಡೆ ನನ್ನಂತಾಗಬೇಕು ನೋಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.

ಸಿದ್ಧರಾಮರು ʼಬಸವಣ್ಣನೇ ತಾಯಿ, ಬಸವಣ್ಣನೇ ತಂದೆ, ಬಸವಣ್ಣನೇ ಪರಮಬಂಧುʼ ಎಂಬ ನುಡಿ ವ್ಯಕ್ತಿಯ ಮೇಲಿನ ಅಂಧಭಕ್ತಿಯ ಘೋಷಣೆಯಲ್ಲ. ಅದು ಬಸವತತ್ವ ತನ್ನ ಬದುಕಿನ ಉಸಿರಾಗಿ ಪರಿಣಮಿಸಿದಾಗ ಮೂಡುವ ಅನುಭಾವದ ಅಭಿವ್ಯಕ್ತಿ. ಬಸವಣ್ಣನವರನ್ನು ಅಷ್ಟೇ ಅಲ್ಲದೆ ಅಲ್ಲಮಪ್ರಭು, ಚೆನ್ನಬಸವಣ್ಣ ಅವರ ಗುಣಗಾನ ಮಾಡಿರುವುದು ನೋಡುತ್ತೇವೆ. ತನ್ನಂತೆ ಯೋಗಿ ಇರಬೇಕೆಂದು ಸಿದ್ಧರಾಮ ಹೇಳಿಕೊಳ್ಳುತ್ತಾನೆ. ವಚನಕಾರ ಸೊಡ್ಡಣ ಬಾಚರಸ ʼಯೋಗಿಗಳ ಯೋಗಿ ಶಿವಯೋಗಿ ಸೊಡ್ಡಳಾ, ಸಿದ್ಧರಾಮನೊಬ್ಬನೆ ಶಿವಯೋಗಿʼ ಎಂದು ಸಿದ್ಧರಾಮರ ಕುರಿತು ಅಭಿಮಾನದ ಮಾತುಗಳನ್ನಾಡಿದ್ದು ನೋಡುತ್ತೇವೆ.

ಭಾವಶುದ್ಧತೆ ಇಲ್ಲದಿದ್ದರೆ ಭಕ್ತಿ ಕೇವಲ ಡಾಂಭಿಕವಾಗುತ್ತದೆ. ಶರಣ ಚಿಂತನೆ ಈ ವಿಚಾರದಲ್ಲಿ ಅತ್ಯಂತ ಮಹತ್ವದ್ದಾಗಿದೆ. ಬಸವಾದಿ ಶರಣರು ಕಾಯಕ, ದಾಸೋಹ, ಸತ್ಯ, ಸಮಾನತೆ ಮತ್ತು ಅಂತರಂಗದ ಶುದ್ಧತೆಗೆ ಹೆಚ್ಚಿನ ಮಹತ್ವ ನೀಡಿದರು. ಬಸವಣ್ಣ ಸೇರಿದಂತೆ ಸಕಲ ಶರಣ ಸಂಕುಲವನ್ನು ನಿಜವಾಗಿ ಗೌರವಿಸಬೇಕೆಂದರೆ ಅವರ ಭಾವಚಿತ್ರಕ್ಕೆ ಹಾರ ಹಾಕುವುದಕ್ಕಿಂತ ಅವರ ವಿಚಾರಕ್ಕೆ ನಮ್ಮ ಬದುಕಿನಲ್ಲಿ ಸ್ಥಾನ ನೀಡಬೇಕು. ಅವರ ಹೆಸರನ್ನು ಜಪಿಸುವುದಕ್ಕಿಂತ ಅವರ ನಡೆ-ನುಡಿಯನ್ನು ಬದುಕಿನಲ್ಲಿ ಅನುಷ್ಠಾನಗೊಳಿಸಬೇಕು. ವಚನಕಾರರನ್ನು ಆರಾಧನೆಗೆ ಸೀಮಿತಗೊಳಿಸದೆ ಶರಣರ ವಚನ ಮಾರ್ಗದಲ್ಲಿ ಸಾಗಬೇಕಾಗಿರುವುದು ಈ ಕಾಲದ ಅವಶ್ಯಕ.

(ಆ.12ರಿಂದ ಶ್ರಾವಣ ಮಾಸ ಆರಂಭಗೊಂಡಿದೆ. ತನ್ನಿಮಿತ್ತ ಪ್ರತಿದಿನ ಬಸವಾದಿ ಶಿವಶರಣರ ವಚನ ಅನುಭಾವವನ್ನು “ವಚನ ಕಲ್ಯಾಣ” ಹೆಸರಿನಲ್ಲಿ ಸರಣಿ ಲೇಖನ ʼಈದಿನ ಡಾಟ್ ಕಾಮ್‌ʼನಲ್ಲಿ ಪ್ರಕಟವಾಗಲಿದೆ. ಓದಿ…ಓದಿಸಿ)

WhatsApp Image 2026 08 29 at 3.48.01 PM 2
WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಜಿಪಂ, ತಾಪಂ ಚುನಾವಣೆ: ಸಾಮಾಜಿಕ ಜಾಲತಾಣದಲ್ಲಿ ಆಕಾಂಕ್ಷಿಗಳ ಪ್ರಚಾರ ಜೋರು!

ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರವಾರು ಮೀಸಲಾತಿ ಪ್ರಕಟವಾಗುತ್ತಿದ್ದಂತೆ, ಬೀದರ್‌...

ಸಿಜೆಪಿ ನಾಯಕರ ಬಂಧನಕ್ಕೆ ತೀವ್ರ ಖಂಡನೆ: ತಕ್ಷಣ ರಾಂಕಾ, ಸೌರವ್ ಬಿಡುಗಡೆಗೆ ವಿಪಕ್ಷಗಳ ಆಗ್ರಹ

ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್...

ಪತಿಯನ್ನು ಕೊಂದು ಕಾಂಕ್ರೀಟ್ ಡ್ರಮ್‌ನಲ್ಲಿ ಹೂತಿಟ್ಟ ಪ್ರಕರಣ: ಪತ್ನಿ, ಪ್ರಿಯಕರನಿಗೆ ಗಲ್ಲು ಶಿಕ್ಷೆ

ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಜಪೂತ್ ಅವರನ್ನು ಬರ್ಬರವಾಗಿ ಹತ್ಯೆಗೈದು, ಮೃತದೇಹವನ್ನು...

ಜಂತರ್ ಮಂತರ್ ಧರಣಿ ಸ್ಥಳ ರದ್ದತಿ ಖಂಡಿಸಿ ಎಸ್‌ಎಫ್‌ಐ, ಡಿವೈಎಫ್‌ಐ ಪ್ರತಿಭಟನಾ ಮೆರವಣಿಗೆ: ಹಲವು ನಾಯಕರು ಪೊಲೀಸ್ ವಶಕ್ಕೆ

ದೇಶದ ರಾಜಧಾನಿ ದೆಹಲಿಯ ಐತಿಹಾಸಿಕ 'ಜಂತರ್ ಮಂತರ್' ಅನ್ನು ಪ್ರಜಾಸತ್ತಾತ್ಮಕ ಪ್ರತಿಭಟನಾ...