ಬೇಲೂರು-ಸಕಲೇಶಪುರ-ಅರಕಲಗೂಡು ಕ್ಷೇತ್ರ | ತ್ರಿಕೋನ ಸ್ಪರ್ಧೆಯ ರಣಕಣಗಳು

Date:

ಬೇಲೂರು: ತ್ರಿಕೋನ ಸ್ಪರ್ಧೆ

ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಸದ್ಯಕ್ಕೆ ಜೆಡಿಎಸ್‌ನ ಹಾಲಿ ಶಾಸಕ ಕೆ.ಎಸ್.ಲಿಂಗೇಶ್, ಕಳೆದ ಚುನಾವಣೆಯಲ್ಲಿ ಅತ್ಯಲ್ಪ ಮತಗಳಿಂದ ಪರಾಜಯಗೊಂಡ ಬಿಜೆಪಿಯ ಹುಲ್ಲಳ್ಳಿ ಸುರೇಶ್ ಮತ್ತು ಕಾಂಗ್ರೆಸ್ಸಿನ ಬಿ.ಶಿವರಾಂ ಕಣದಲ್ಲಿದ್ದಾರೆ.

ಕಳೆದ ಬಾರಿಯೇ ಬೇಲೂರು ಟಿಕೆಟ್ ಗೆ ಪ್ರಯತ್ನಿಸಿ ವಿಫಲರಾಗಿದ್ದ ಗಂಡಸಿ ಶಿವರಾಂ, ಕಳೆದ ನಾಲ್ಕು ವರ್ಷಗಳಿಂದ ಕ್ಷೇತ್ರದ ಜನತೆಯ ವಿಶ್ವಾಸ ಗಳಿಸುವಲ್ಲಿ ಸಫಲರಾಗಿದ್ದಾರೆ. ಹಾಗೆಯೇ ಇದೇ ಕೊನೆಯ ಚುನಾವಣೆ ಎಂದಿರುವ ಅವರು, ಟಿಕೆಟ್ ವಂಚಿತ ರುದ್ರೇಶಗೌಡರ ಪತ್ನಿ ಕೀರ್ತನಾ, ರಾಜಶೇಖರ್, ಕೃಷ್ಣೇಗೌಡರ ಮನವೊಲಿಸಿ, ಒಮ್ಮತದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಇದು ಕಾಂಗ್ರೆಸ್ಸಿಗೆ ಗೆಲುವಿನ ಹಾದಿಯನ್ನು ಸುಗಮಗೊಳಿಸಿದೆ.

ಹಾಗೆಯೇ ಕಳೆದ ಬಾರಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಬಿಜೆಪಿ ಈ ಬಾರಿ ಕಮಲ ಅರಳಿಸಲು ಪಣ ತೊಟ್ಟಿದೆ. ಕಳೆದ ಬಾರಿ ಸೋತ ಅನುಕಂಪವನ್ನು ಈ ಬಾರಿ ಗೆಲುವನ್ನಾಗಿ ಮಾಡಿಕೊಳ್ಳಲು ಜಿಲ್ಲಾ ಬಿಜೆಪಿ ಅಧ್ಯಕ್ಷರು ಆಗಿರುವ ಹುಲ್ಲಳ್ಳಿ ಸುರೇಶ್‌ ಸಾಕಷ್ಟು ತಾಲೀಮು ನಡೆಸುತ್ತಿದ್ದಾರೆ. ಬೇಲೂರಿಗೆ ಪ್ರಧಾನಿ ಮೋದಿಯವರನ್ನು ಕರೆತಂದು, ಕಾರ್ಯಕರ್ತರಲ್ಲಿ ಹುರುಪು-ಹುಮ್ಮಸ್ಸು ಮೂಡಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇವರಿಬ್ಬರ ನಡುವೆ, ಜೆಡಿಎಸ್‌ನ ಹಾಲಿ ಶಾಸಕ ಲಿಂಗೇಶ್, ಹೇಳಿಕೊಳ್ಳುವ ಅಭಿವೃದ್ಧಿಯನ್ನೇನೂ ಮಾಡದೆ, ಮತದಾರರ ಅವಕೃಪೆಗೆ ಒಳಗಾಗಿದ್ದಾರೆ. ಬೇಲೂರು ಹೇಳಿಕೇಳಿ ಐತಿಹಾಸಿಕ ಪ್ರವಾಸಿತಾಣ. ರಾಷ್ಟ್ರೀಯ-ಅಂತಾರಾಷ್ಟ್ರೀಯ ಪ್ರವಾಸಿಗರು ನಿತ್ಯ ನೆರೆಯುವ ಜಾಗ. ಇಂತಹ ಪ್ರವಾಸಿತಾಣಗಳನ್ನು ಮೂಲಸೌಕರ್ಯಗಳ ಮೂಲಕ ಅಭಿವೃದ್ಧಿಪಡಿಸಿ, ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಬದಲು, ಕಳೆಗುಂದುವಂತೆ ಮಾಡಲಾಗಿದೆ ಎಂಬ ಆರೋಪ ಹಾಲಿಶಾಸಕರ ಮೇಲಿದೆ.

ಲಿಂಗಾಯತರು ಮತ್ತು ಪರಿಶಿಷ್ಟ ಜಾತಿ/ಪಂಗಡದವರೇ ಬಹುಸಂಖ್ಯಾತರಿರುವ ಬೇಲೂರು ಕ್ಷೇತ್ರದಲ್ಲಿ ಮುಸ್ಲಿಂ ಮತದಾರರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಮುಸ್ಲಿಮರು ಮತ್ತು ದಲಿತರು ಒಂದಾದರೆ ಕಾಂಗ್ರೆಸ್‌ಗೆ ಅನುಕೂಲವಿದೆ. ಜೆಡಿಎಸ್-ಬಿಜೆಪಿ ನಡುವಿನ ಪೈಪೋಟಿಯಾದರೆ ಬಿಜೆಪಿ ಮುನ್ನುಗ್ಗಲಿದೆ.

ಅರಕಲಗೂಡು: ಗೆಲ್ಲುವ ಕ್ಷೇತ್ರ ಕಳೆದುಕೊಂಡ ಕಾಂಗ್ರೆಸ್

ಬಿಜೆಪಿಯಲ್ಲಿದ್ದು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಎ.ಮಂಜು, ಆಶ್ಚರ್ಯಕರ ರೀತಿಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ. ಬಿಜೆಪಿಯಲ್ಲಿದ್ದು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದ ಯೋಗಾರಮೇಶ್ ಈಗ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಪೊಲೀಸ್ ಕೆಲಸ ಬಿಟ್ಟು ರಾಜಕಾರಣಕ್ಕೆ ಬಂದಿರುವ ಎಚ್.ಪಿ ಶ್ರೀಧರ್ ಗೌಡ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಮಾಜಿ ಐಎಎಸ್ ಅಧಿಕಾರಿ ರಾಮೇಗೌಡರ ಸಹೋದರ, ಕಾಂಗ್ರೆಸ್ ಟಿಕೆಟ್ ಆಕ್ಷಾಂಕ್ಷಿ ಕೃಷ್ಣೇಗೌಡ ಈಗ ಪಕ್ಷೇತರ ಅಭ್ಯರ್ಥಿಯಾಗಿ, ಕಾಂಗ್ರೆಸ್ಸಿಗೆ ತಲೆನೋವಾಗಿದ್ದಾರೆ.

ದುರದೃಷ್ಟಕರ ಸಂಗತಿ ಎಂದರೆ, ಸಜ್ಜನ ರಾಜಕಾರಣಿ ಎ.ಟಿ.ರಾಮಸ್ವಾಮಿ, ಕೋಮುವಾದಿ ಪಕ್ಷದ ಪರ ಪ್ರಚಾರ ಮಾಡುವಂತಾಗಿದೆ. ಎ.ಟಿ ರಾಮಸ್ವಾಮಿ ಈ ಬಾರಿ ಗೆಲ್ಲುವುದು ಕಷ್ಟ ಎಂದರಿತ ರೇವಣ್ಣ, ನಾಜೂಕಾಗಿ ಅವರನ್ನು ಪಕ್ಷದಿಂದ ಹೊರಹಾಕಿ, ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಬಲ್ಲಂತ ಎ.ಮಂಜುವನ್ನು ಪಕ್ಷಕ್ಕೆ ಸೇರಿಸಿಕೊಂಡು ಕಣಕ್ಕಿಳಿಸಿದ್ದಾರೆ. ಇದು ಒಂದು ರೀತಿಯಲ್ಲಿ ಚುನಾವಣಾ ಚಮತ್ಕಾರಿಕೆಯಂತೆ ಕಂಡರೂ, ಸೈದ್ಧಾಂತಿಕ ರಾಜಕಾರಣಕ್ಕೆ ತಿಲಾಂಜಲಿ ಎಂದೇ ಭಾವಿಸಬೇಕಾಗಿದೆ.

ಈ ಸುದ್ದಿ ಓದಿದ್ದೀರಾ?: ಭಾಲ್ಕಿ ಕ್ಷೇತ್ರ | ‘ಕೈ’ ಭ್ರದಕೋಟೆಯಲ್ಲಿ ‘ಕಮಲ’ ಕಮಾಲ್; ದಾಯಾದಿಗಳ ಕಾಳಗ

ಇನ್ನು ಅರಕಲಗೂಡು ಮೇಲ್ನೋಟಕ್ಕೆ ಒಕ್ಕಲಿಗರ ಭದ್ರಕೋಟೆಯಂತೆ ಕಂಡರೂ, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಒಕ್ಕಲಿಗರಿದ್ದರೂ, ಸ್ಪರ್ಧಿಸಿರುವ ನಾಲ್ವರೂ ಒಕ್ಕಲಿಗರೇ ಆಗಿರುವುದು ನಾಲ್ವರಿಗೂ ಕಷ್ಟವಾಗಲಿದೆ. ಈ ಸಮುದಾಯವನ್ನು ಹೊರತುಪಡಿಸಿ, ಕುರುಬರು ಮತ್ತು ಪರಿಶಿಷ್ಟ ಜಾತಿ/ಪಂಗಡದ ಮತದಾರರು ಹೆಚ್ಚಾಗಿದ್ದಾರೆ. ಜೊತೆಗೆ ಲಿಂಗಾಯತರು, ಮುಸ್ಲಿಮರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇವರ ಮತ ಗಳಿಸುವ ಅಭ್ಯರ್ಥಿ ಗೆಲ್ಲುವುದು ಸದ್ಯಕ್ಕೆ ಸುಲಭದ ಹಾದಿಯಾಗಿದೆ. ಈ ನಿಟ್ಟಿನಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿಯಿದೆ. ಚುನಾವಣೆಗೆ ಮುಂಚೆ ಕಾಂಗ್ರೆಸ್ ಗೆಲ್ಲುವ ಕ್ಷೇತ್ರವಾಗಿತ್ತು. ಅದು ಈಗ ಇಲ್ಲವಾಗಿದೆ.

ಸಕಲೇಶಪುರ: ಮುಸ್ಲಿಮರೇ ನಿರ್ಣಾಯಕ

ಮೂರು ಬಾರಿ ಶಾಸಕರಾಗಿ ಆಯ್ಕೆಯಾದ ಕುಮಾರಸ್ವಾಮಿ, ಒಂದು ಸಲ ಮಂತ್ರಿಯೂ ಆಗಿದ್ದಾರೆ. ಜೆಡಿಎಸ್ ಅಧ್ಯಕ್ಷರೂ ಆಗಿದ್ದರು. ಆದರೆ ಕ್ಷೇತ್ರದ ಅಭಿವೃದ್ಧಿಯತ್ತ ಗಮನ ಹರಿಸಲಿಲ್ಲ ಎಂಬ ಮಾತಿದೆ. ಕೊನೆಪಕ್ಷ ರಸ್ತೆಯಂತಹ ಮೂಲಭೂತ ಸೌಕರ್ಯವನ್ನೂ ಮಾಡಲಾಗಲಿಲ್ಲ. ಇನ್ನು ಕಾಡು ಪ್ರಾಣಿಗಳ ಉಪಟಳ, ಕಾಫಿ ಬೆಳೆ ನಷ್ಟ, ಕೃಷಿ ಕುಂಠಿತವನ್ನು ಕೇಳುವವರಿಲ್ಲ. ಹೀಗಾಗಿ ಇಲ್ಲಿಯ ಜನ ಈ ಬಾರಿ ಜೆಡಿಎಸ್ ಶಾಸಕರ ಬಗ್ಗೆ ಭಾರೀ ಬೇಸರ ವ್ಯಕ್ತಪಡಿಸುತ್ತಾರೆ.
ಕಳೆದಬಾರಿ ಜೆಡಿಎಸ್ ನಿಂದ ಎಚ್.ಕೆ.ಕುಮಾರಸ್ವಾಮಿ ಹಾಗೂ ಬಿಜೆಪಿಯಿಂದ ನಾರ್ವೇ ಸೋಮಶೇಖರ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. ಕೊನೆ ಗಳಿಗೆಯಲ್ಲಿ ಮುಸ್ಲಿಮರು ಕೈಹಿಡಿದ ಕಾರಣ ಜೆಡಿಎಸ್ ಗೆಲುವು ದಾಖಲಿಸಿತ್ತು. ಗೆದ್ದ ಕುಮಾರಸ್ವಾಮಿ ನಿದ್ರೆಗೆ ಜಾರಿದರು. ಸೋತು ಸೈಡಿಗೆ ಸರಿದ ನಾರ್ವೇ ಸೋಮಶೇಖರ್, ಇವತ್ತಿನವರೆಗೆ ಕ್ಷೇತ್ರದತ್ತ ತಲೆಹಾಕದೆ ದೂರ ಉಳಿದರು. ಈ ಬಾರಿ ಅದೇ ನಾರ್ವೇ ಸೋಮಶೇಖರ್ ಜೆಡಿಎಸ್ ಸೇರಿ, ಕುಮಾರಸ್ವಾಮಿಯವರ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ಕಾಂಗ್ರೆಸ್ಸಿನಿಂದ ಮುರಳಿಮೋಹನ್, ಬಿಜೆಪಿಯಿಂದ ಸಿಮೆಂಟ್ ಮಂಜು ಕಣದಲ್ಲಿದ್ದಾರೆ.

ಈ ಕ್ಷೇತ್ರದಲ್ಲಿ ಲಿಂಗಾಯತರು ಮತ್ತು ಕ್ರಿಶ್ಚಿಯನ್ನರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಕಣದಲ್ಲಿರುವ ಮೂವರ ಪೈಕಿ, ಕ್ಷೇತ್ರದ ಮತದಾರರ ಒಲವು ಕಾಂಗ್ರೆಸ್ ನತ್ತ ಹೆಚ್ಚಾಗಿದೆ. ಒಕ್ಕಲಿಗರು, ಮುಸ್ಲಿಮರು, ಎಸ್ಸಿಎಸ್ಟಿ ಪಂಗಡದವರು ಒಂದಾದರೆ ಮುರಳಿಮೋಹನ್ ಗೆಲುವು ನಿಶ್ಚಿತ ಎಂಬ ಮಾತಿದೆ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲೋಕಸಭಾ ಚುನಾವಣೆ | ಮತದಾನ ಮಾಡಲು ವಿಕಲಚೇತನರು, ಹಿರಿಯ ನಾಗರಿಕರಿಗೆ ಸೌಲಭ್ಯ

ರಾಜ್ಯದಲ್ಲಿ ಏಪ್ರಿಲ್ 26ರಂದು ಮೊದಲ ಹಂತದ ಲೋಕಸಭಾ ಚುನಾವಣೆ ನಡೆಯಲಿದೆ. ಈ...

ಲೋಕಸಭಾ ಚುನಾವಣೆ; ಕರ್ತವ್ಯದಲ್ಲಿರುವ ಬಹುತೇಕ ನೌಕರರಿಗೆ ಸಿಗದ ಅಂಚೆ ಮತದಾನ

ಲೋಕಸಭಾ ಚುನಾವಣೆಯ ಕರ್ತವ್ಯಕ್ಕೆ ತೆರಳುವ ಬಹುತೇಕ ಸೇವಾ ಸಿಬ್ಬಂದಿಗಳು ಈ ಬಾರಿ...

ಹಾಸನ ಪೆನ್‌ಡ್ರೈವ್‌ ಪ್ರಕರಣ: ನಾಲ್ವರು ಸಂತ್ರಸ್ತೆಯರು ಆತ್ಮಹತ್ಯೆಗೆ ಯತ್ನ

ಹಾಸನದ ಪೆನ್‌ಡ್ರೈವ್‌ ಪ್ರಕರಣ ದಿನದಿಂದ ದಿನಕ್ಕೆ ಜಿಲ್ಲಾದ್ಯಂತ ಆತಂಕ ಹೆಚ್ಚಿಸ್ತಾ ಇದೆ....

ಬೆಂಗಳೂರು | ಲೋಕಸಭಾ ಚುನಾವಣೆ : ಮಸ್ಟರಿಂಗ್ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾ ಚುನಾವಣಾಧಿಕಾರಿ

2024ರ ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆ, ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬೃಹತ್...