ನರೇಂದ್ರ ಮೋದಿ ಪ್ರಚಾರ | ಕಮಾಲ್ ಮಾಡದ ರೋಡ್ ಶೋ

Date:

ಕರ್ನಾಟಕದಾದ್ಯಂತ ತಿರುಗಾಡಿ 43 ಕಾರ್ಯಕ್ರಮಗಳಲ್ಲಿ ಭಾಗವಹಿಸಿ 19 ಜಿಲ್ಲೆಗಳಲ್ಲಿ ನರೇಂದ್ರ ಮೋದಿ ಪ್ರಚಾರ ನಡೆಸಿದರೂ ನಾಡಿನ ಜನತೆಯ ಮನ ಗೆಲ್ಲುವಲ್ಲಿ ವಿಫಲರಾಗಿದ್ದಾರೆ. ಮೋದಿ ಪ್ರಚಾರ ಮಾಡಿದ ಜಿಲ್ಲೆಗಳಲ್ಲಿ ಬಿಜೆಪಿ ಮಕಾಡೆ ಮಲಗಿದೆ.

ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ತನ್ನ ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ದಂಡನ್ನೇ ಪ್ರಚಾರಕ್ಕೆ ಕರೆಸಿತ್ತು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾರಂತಹ ಘಟಾನುಘಟಿಗಳ ಜೊತೆಗೆ ಯೋಗಿ ಆದಿತ್ಯನಾಥ್ ಸೇರಿದಂತೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು, ಸ್ಮೃತಿ ಇರಾನಿ ಅವರಂತಹ ಸಚಿವರೂ ಪ್ರಚಾರಕ್ಕೆ ರಾಜ್ಯಕ್ಕೆ ಬಂದಿದ್ದರು.

ಇವರ ನಡುವೆ ನರೇಂದ್ರ ಮೋದಿಯವರು ಬರೋಬ್ಬರಿ 43 ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಚುನಾವಣಾ ನೀತಿ ಸಂಹಿತೆ ಘೋಷಣೆಯಾಗುವ ಮೊದಲು ರಾಜ್ಯದ ಬಿಜೆಪಿ ಸರ್ಕಾರ ನರೇಂದ್ರ ಮೋದಿಯವರ ಕಾರ್ಯಕ್ರಮಗಳಿಗೆ ಕೋಟಿಗಟ್ಟಲೆ ವೆಚ್ಚ ಮಾಡಿದೆ. ಇಷ್ಟೆಲ್ಲ ಮಾಡಿ ಬಿಜೆಪಿ ಮತ್ತು ಮೋದಿ ಸಾಧಿಸಿದ್ದೇನು?

ನರೇಂದ್ರ ಮೋದಿಯವರು ಕರ್ನಾಟಕದ ಒಟ್ಟು 30 ಜಿಲ್ಲೆಗಳ ಪೈಕಿ 19 ಜಿಲ್ಲೆಗಳಲ್ಲಿ ಪ್ರಚಾರ ಮಾಡಿದ್ದಾರೆ. ಬೆಂಗಳೂರು, ಮೈಸೂರು, ಹಾಸನ, ರಾಮನಗರ, ಮಂಡ್ಯ, ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ತುಮಕೂರು, ಹಾವೇರಿ, ಬೆಳಗಾವಿ, ಬಾಗಲಕೋಟೆ, ಚಿತ್ರದುರ್ಗ, ಕೋಲಾರ, ಬೀದರ್, ಬಳ್ಳಾರಿ, ವಿಜಯನಗರ, ಕಲಬುರಗಿ ಜಿಲ್ಲೆಗಳಿಗೆ ಭೇಟಿ ನೀಡಿದ್ದಾರೆ. ಮೋದಿ ಪ್ರಚಾರ ಮಾಡಿದ ಈ ಜಿಲ್ಲೆಗಳಲ್ಲಿ ಬಿಜೆಪಿಯ ಪ್ರದರ್ಶನ ಹೇಗಿದೆ?

ಬೆಂಗಳೂರು ಜಿಲ್ಲೆಯಲ್ಲಿ ಮೋದಿಯವರ ರೋಡ್ ಶೋ ಸಾಗಿರುವ ಗಾಂಧಿ ನಗರ, ಶಾಂತಿನಗರ, ಚಾಮರಾಜಪೇಟೆ, ಸರ್ವಜ್ಞ ‌ನಗರ, ವಿಜಯ ನಗರ, ಬ್ಯಾಟರಾಯನಪುರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಮೈಸೂರಿನ ನಂಜನಗೂಡು ಕ್ಷೇತ್ರದಲ್ಲಿ ದರ್ಶನ್ ಧ್ರುವನಾರಾಯಣ್ ಅವರು ಗೆದ್ದಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಮೋದಿ ಇಬ್ಬರೂ ಅಬ್ಬರದ ಪ್ರಚಾರ ನಡೆಸಿದ್ದಾರೆ. ಮೋದಿಯವರು ಮಂಡ್ಯ ಮತ್ತು ಮದ್ದೂರು ಪ್ರದೇಶಗಳಲ್ಲಿ ರ್ಯಾಲಿ ನಡೆಸಿದ್ದರು. ಮೈಸೂರು ಚತುಷ್ಪಥ ರಸ್ತೆ ಉದ್ಘಾಟನೆಯಲ್ಲಿ ಭಾಗವಹಿಸಿ ಪರೋಕ್ಷ ಪ್ರಚಾರ ಮಾಡಿದ್ದರು. ಆದರೆ, ಮಂಡ್ಯದ ಎಲ್ಲಾ ಏಳು ಕ್ಷೇತ್ರಗಳನ್ನೂ ಬಿಜೆಪಿ ಸೋತಿದೆ. ಮಂಡ್ಯದಲ್ಲಿ ಕಾಂಗ್ರೆಸ್ ಐದು ಕ್ಷೇತ್ರ ಗೆದ್ದರೆ, ಜೆಡಿಎಸ್ ಒಂದು ಕ್ಷೇತ್ರದಲ್ಲಿ ಗೆದ್ದಿದೆ. ಮೇಲುಕೋಟೆಯಲ್ಲಿ ಸರ್ವೋದಯ ಕರ್ನಾಟಕ ಪಕ್ಷದಿಂದ ಸ್ಪರ್ಧಿಸಿದ ರೈತ ಮುಖಂಡರಾದ ದರ್ಶನ್ ಪುಟ್ಟಣ್ಣಯ್ಯ ಅವರು ಗೆದ್ದಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಎಂಟು ಕ್ಷೇತ್ರಗಳಲ್ಲಿ ಪ್ರಭಾವಿಗಳು ಸ್ಪರ್ಧಿಸಿದ್ದ ಶಿವಮೊಗ್ಗ ನಗರ, ತೀರ್ಥಹಳ್ಳಿ ಹಾಗೂ ಶಿಕಾರಿಪುರಗಳನ್ನಷ್ಟೇ ಬಿಜೆಪಿ ಗೆದ್ದಿದೆ. ಈ ಗೆಲುವಿಗೆ ಮೋದಿ ವರ್ಚಸ್ಸಿಗಿಂತ ಹೆಚ್ಚಾಗಿ ಸ್ಥಳೀಯ ನಾಯಕರ ಪ್ರಭಾವವೇ ಕಾರಣ. ವಾಸ್ತವದಲ್ಲಿ ಕ್ರಮವಾಗಿ ಸಾಗರ ಮತ್ತು ಸೊರಬದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಹರತಾಳು ಹಾಲಪ್ಪ ಮತ್ತು ಕುಮಾರ್ ಬಂಗಾರಪ್ಪ ಸೋತಿದ್ದಾರೆ. ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದರೆ ಒಂದರಲ್ಲಿ ಜೆಡಿಎಸ್ ಗೆದ್ದಿದೆ.

ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ಉತ್ತರ ಪ್ರದೇಶದ ಸಿಎಂ ಹಾಗೂ ಕಟ್ಟರ್ ಹಿಂದುತ್ವವಾದಿ ಯೋಗಿ ಆದಿತ್ಯನಾಥ್ ಬೃಹತ್ ಸಭೆ ನಡೆಸಿದ್ದರು. ಆದರೆ ಹಿಂದುತ್ವದ ಪ್ರಭಾವೀ ನಾಯಕನೆಂದೇ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಸಿ ಟಿ ರವಿ ಸೋಲು ಕಂಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಮೋದಿ ಅಬ್ಬರದ ಪ್ರಚಾರ ನಡೆಸಿದ್ದರು. ತೇರದಾಳ ಮತ್ತು ಜಮಖಂಡಿಯಲ್ಲಿ ಕ್ರಮವಾಗಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸಿದ್ದು ಸವದಿ ಮತ್ತು ಜಗದೀಶ ಗುಡಗುಂಟಿಯವರು ಗೆದ್ದಿರುವುದು ಹೊರತುಪಡಿಸಿದರೆ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಈ ಜಿಲ್ಲೆಯಲ್ಲಿ ಮುರುಗೇಶ್ ನಿರಾಣಿ ಮತ್ತು ಗೋವಿಂದ ಕಾರಜೋಳ ಅವರಂತಹ ಬಿಜೆಪಿಯ ಪ್ರಭಾವಿ ನಾಯಕರು ಸೋತಿದ್ದಾರೆ.

ಹಾವೇರಿ ಜಿಲ್ಲೆಯಲ್ಲಿ ಮೋದಿ ಅಬ್ಬರದ ಪ್ರಚಾರ ಸಭೆ ನಡೆಸಿದ್ದರು. ಅಲ್ಲದೆ, ಇದು ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆ. ಆದರೆ ಈ ಜಿಲ್ಲೆಯಲ್ಲಿ ಶಿಗ್ಗಾಂವಿಯಿಂದ ಬಸವರಾಜ ಬೊಮ್ಮಾಯಿ ಹೊರತುಪಡಿಸಿ ಇನ್ಯಾವುದೇ ಬಿಜೆಪಿ ಅಭ್ಯರ್ಥಿ ಗೆದ್ದಿಲ್ಲ. ಒಟ್ಟು ಆರು ಕ್ಷೇತ್ರಗಳಲ್ಲಿ ಐದು ಕ್ಷೇತ್ರಗಳನ್ನೂ ಕಾಂಗ್ರೆಸ್ ಗೆದ್ದುಕೊಂಡಿದೆ. ಬಿ ಸಿ‌ ಪಾಟೀಲ್ ಅವರಂತಹ ಪ್ರಭಾವಿ ನಾಯಕರು ಈ ಕ್ಷೇತ್ರದಲ್ಲಿ ಸೋತಿದ್ದಾರೆ.

ತುಮಕೂರು ಜಿಲ್ಲೆಯಲ್ಲೂ ಮೋದಿ ಪ್ರಚಾರ ಸಭೆ ಮತ್ತು ರ್ಯಾಲಿ ನಡೆಸಿದ್ದರು. ಆದರೆ, ತುಮಕೂರು ನಗರ ಮತ್ತು ಗ್ರಾಮಾಂತರ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಸೋತಿದೆ. ಈ ಜಿಲ್ಲೆಯಲ್ಲಿ ಜೆಡಿಎಸ್ 2 ಕ್ಷೇತ್ರಗಳನ್ನು ಗೆದ್ದರೆ, ಕಾಂಗ್ರೆಸ್ 7 ಕ್ಷೇತ್ರಗಳಲ್ಲಿ ಜಯಭೇರಿ ಸಾಧಿಸಿದೆ. ಜೆ ಸಿ ಮಾಧುಸ್ವಾಮಿ, ಬಿ ಸಿ ನಾಗೇಶ್ ಅವರಂತಹ ಪ್ರಭಾವೀ ನಾಯಕರು ಸೋತಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲಿ ನರೇಂದ್ರ ಮೋದಿ ಸಭೆಗಳು ಮತ್ತು ರ್ಯಾಲಿಯಲ್ಲಿ ಭಾಗವಹಿಸಿದ್ದರು. ಆದರೆ, ಬಿಜೆಪಿಯ ಪ್ರಭಾವೀ ನಾಯಕರಾದ ಶ್ರೀರಾಮುಲು ಮತ್ತು ಸೋಮಶೇಖರ ರೆಡ್ಡಿ ಜಿಲ್ಲೆಯ ಬಳ್ಳಾರಿ ಮತ್ತು ಬಳ್ಳಾರಿ ನಗರ ಕ್ಷೇತ್ರಗಳಲ್ಲಿ ಸೋತಿದ್ದಾರೆ. ಈ ಜಿಲ್ಲೆಯ ಐದೂ ಕ್ಷೇತ್ರಗಳನ್ನು ಗೆದ್ದು ಕಾಂಗ್ರೆಸ್ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.

ಬೆಳಗಾವಿ ಜಿಲ್ಲೆಯಲ್ಲೂ ಮೋದಿ ಅಬ್ಬರದ ಪ್ರಚಾರ ನಡೆಸಿದ್ದರು. ಜಿಲ್ಲೆಯ 18 ಕ್ಷೇತ್ರಗಳಲ್ಲಿ ಎಂಟನ್ನಷ್ಟೇ ಗೆದ್ದುಕೊಂಡಿದೆ. ಮೋದಿ ಪ್ರಚಾರ ಮಾಡಿದ್ದ ಕುಡಚಿ, ಬೈಲಹೊಂಗಲಗಳಲ್ಲಿ ಬಿಜೆಪಿಗೆ ಸೋಲಾಗಿದ್ದು, ಕಾಂಗ್ರೆಸ್ ಗೆದ್ದಿದೆ. ಬಿಜೆಪಿಯ ಪ್ರಮುಖ ನಾಯಕರಾದ ಪಿ ರಾಜೀವ್‌‌, ಜಗದೀಶ್ ಮೇಟಗುಡ್‌‌ ಹಾಗೂ ರಮೇಶ್ ಕತ್ತಿ ಮೊದಲಾದವರು ಸೋತಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲೂ ಅಂಕೋಲಾ ಮೊದಲಾದ ಕಡೆಯಲ್ಲಿ ಮೋದಿ ಪ್ರಚಾರ ಸಭೆ ಆಯೋಜಿಸಲಾಗಿತ್ತು. ಆದರೆ, ಉತ್ತರ ಕನ್ನಡದ ಆರು ಕ್ಷೇತ್ರಗಳಲ್ಲಿ ಒಂದಷ್ಟೇ ಬಿಜೆಪಿಗೆ ದಕ್ಕಿದೆ. ಉಳಿದ ಐದೂ ಕ್ಷೇತ್ರಗಳನ್ನು ಕಾಂಗ್ರೆಸ್ ಬಾಚಿಕೊಂಡಿದೆ. ಶಿರಸಿಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಮೊದಲಾದ ಪ್ರಮುಖರು ಸೋತಿದ್ದಾರೆ.

ದಕ್ಷಿಣ ಕನ್ನಡದ ಮೂಡಬಿದಿರೆ ಮತ್ತು ಮಂಗಳೂರಿನಲ್ಲಿ ಮೋದಿ ರ್ಯಾಲಿ ನಡೆಸಿದ್ದರು. ಉಡುಪಿ ಮತ್ತು ದಕ್ಷಿಣ ಕನ್ನಡವನ್ನು ಹಿಂದುತ್ವದ ಪ್ರಯೋಗ ಶಾಲೆ ಎಂದೇ ಕರೆಯಲಾಗುತ್ತಿದೆ. ಹೀಗಾಗಿ ಉಡುಪಿಯ ಎಲ್ಲಾ ಕ್ಷೇತ್ರಗಳು ಮತ್ತು ದಕ್ಷಿಣ ಕನ್ನಡದ ಎಂಟು ಕ್ಷೇತ್ರಗಳಲ್ಲಿ ಆರನ್ನು ಬಿಜೆಪಿ ಗೆದ್ದಿರುವುದರ ಶ್ರೇಯಸ್ಸನ್ನು ಮೋದಿ ಇಮೇಜ್ ಪ್ರತಿಫಲ ಎನ್ನುವುದು ಸಾಧ್ಯವಿಲ್ಲ.

ಕಲಬುರಗಿ ಜಿಲ್ಲೆಯಲ್ಲೂ ಮೋದಿ ಪ್ರಚಾರ ನಡೆಸಿದ್ದರು. ಚಿತ್ತಾಪುರದ ಕಾಂಗ್ರೆಸ್ ಸ್ಪರ್ಧಿ ವಿರುದ್ಧ ಮೋದಿ ಪ್ರಚಾರಕ್ಕೆ ಫಲ ಸಿಕ್ಕಿಲ್ಲ, ಪ್ರಿಯಾಂಕ್ ಖರ್ಗೆ ಗೆಲುವು ಸಾಧಿಸಿದ್ದಾರೆ. ಕಲಬುರಗಿ ಜಿಲ್ಲೆಯ ಒಂಭತ್ತು ಕ್ಷೇತ್ರಗಳಲ್ಲಿ ಮೂರು ಕ್ಷೇತ್ರಗಳನ್ನು ತೀವ್ರ ಸ್ಪರ್ಧೆಯ ನಡುವೆ ಬಿಜೆಪಿ ಗೆದ್ದಿದೆ. ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಸಾಧಿಸಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಹೊಸಪೇಟೆ ಮತ್ತು ಸಿಂಧನೂರು ಪ್ರದೇಶಗಳಲ್ಲಿ ಮೋದಿ ಅಬ್ಬರದ ಪ್ರಚಾರ ನಡೆಸಿದ್ದರು. ಆದರೆ ಜಿಲ್ಲೆಯಲ್ಲಿ ಬಿಜೆಪಿಗೆ ದಕ್ಕಿದ್ದು ಹೂಳಲ್ಕೆರೆಯ ಒಂದೇ ಸ್ಥಾನ. ಆರು ಕ್ಷೇತ್ರಗಳಲ್ಲಿ ಐದರಲ್ಲಿ ಕಾಂಗ್ರೆಸ್ ಜಯಭೇರಿ ಸಾಧಿಸಿದೆ.

ಕೋಲಾರದಲ್ಲಿ ಪ್ರಧಾನಿ ಮೋದಿ ಬಿಜೆಪಿಯ ಅಭ್ಯರ್ಥಿ ವರ್ತೂರ್ ಪ್ರಕಾಶ್ ಪರವಾಗಿ ಮತ ಯಾಚಿಸಿದ್ದರು. ಆದರೆ ಅವರನ್ನು ಗೆಲ್ಲಿಸಲು ಸಾಧ್ಯವಾಗಿಲ್ಲ. ಈ ಕ್ಷೇತ್ರದಲ್ಲಿ ಕೊತ್ತೂರು ಮಂಜುನಾಥ್ ಗೆದ್ದಿದ್ದಾರೆ. ಅಲ್ಲದೆ, ಕೋಲಾರ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಎಲ್ಲವನ್ನೂ ಬಿಜೆಪಿ ಸೋತಿದೆ. ಕಾಂಗ್ರೆಸ್ ನಾಲ್ಕು ಮತ್ತು ಜೆಡಿಎಸ್ ಎರಡು ಕ್ಷೇತ್ರಗಳನ್ನು ಗೆದ್ದಿವೆ.

ಈ ಸುದ್ದಿ ಓದಿದ್ದೀರಾ?: ಈದಿನ.ಕಾಮ್‌ ಸಮೀಕ್ಷೆ-8: ಕಾಂಗ್ರೆಸ್‌ಗೆ ಸಿಗಲಿದೆ ಸ್ಪಷ್ಟ ಬಹುಮತ; 132-140 ಸೀಟುಗಳ ನಿರೀಕ್ಷೆ

ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ನರೇಂದ್ರ ಮೋದಿಯವರು ಬಿಜೆಪಿ ಅಭ್ಯರ್ಥಿ ಸಿ ಪಿ ಯೋಗೀಶ್ವರ್ ಪರವಾಗಿ ಮತ ಯಾಚಿಸಿದ್ದರು. ಈ ಜಿಲ್ಲೆಯಲ್ಲೂ ಬಿಜೆಪಿ ಎಲ್ಲಾ ಕ್ಷೇತ್ರಗಳನ್ನು ಕಳೆದುಕೊಂಡಿದೆ. ಆದರೆ ಯೋಗೀಶ್ವರ್ ಸೋತಿದ್ದಾರೆ. ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಇಲ್ಲಿ ಗೆದ್ದಿದ್ದಾರೆ. ರಾಮನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಮೂರನ್ನು ಕಾಂಗ್ರೆಸ್ ಗೆದ್ದರೆ, ಒಂದು ಜೆಡಿಎಸ್‌ಗೆ ದಕ್ಕಿದೆ.

ಹಾಸನ ಜಿಲ್ಲೆಯಲ್ಲೂ ಬಿಜೆಪಿಯ ಅಭ್ಯರ್ಥಿಗಳ ಪರವಾಗಿ ನರೇಂದ್ರ ಮೋದಿ ಮತ ಯಾಚಿಸಿದ್ದರು. ಬೇಲೂರು ಮತ್ತು ಸಕಲೇಶಪುರಗಳಲ್ಲಿ ಬಿಜೆಪಿ ಗೆದ್ದಿದೆ. ಏಳು ಕ್ಷೇತ್ರಗಳಲ್ಲಿ ನಾಲ್ಕನ್ನು ಜೆಡಿಎಸ್ ಗೆದ್ದರೆ, ಒಂದು ಕಾಂಗ್ರೆಸ್ ಪಾಲಾಗಿದೆ. ಹೈವೋಲ್ಟೇಜ್ ಸ್ಪರ್ಧೆ ಕಂಡಿದ್ದ ಹಾಸನ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡಗೆ ಸೋತಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಮೋದಿ ಬೃಹತ್ ಸಭೆಗಳು, ಕಾರ್ಯಕ್ರಮಗಳು ಮತ್ತು ರ್ಯಾಲಿಗಳಲ್ಲಿ ಭಾಗವಹಿಸಿದ್ದಾರೆ. ಆದರೆ 11 ಕ್ಷೇತ್ರದಲ್ಲಿ ಒಂದು ಸ್ಥಾನವಷ್ಟೇ ಬಿಜೆಪಿಗೆ ದಕ್ಕಿದೆ. ಎಂಟು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದರೆ, ಎರಡು ಕ್ಷೇತ್ರಗಳಲ್ಲಿ ಜೆಡಿಎಸ್ ಗೆದ್ದಿದೆ.

ಬೀದರ್ ಜಿಲ್ಲೆಯ ಬೀದರ್ ಮತ್ತು ಹಮ್ನಾಬಾದ್ ಪ್ರದೇಶಗಳಲ್ಲಿ ಮೋದಿ ಪ್ರಚಾರ ನಡೆಸಿದ್ದರು. ಆದರೆ ಭಾಲ್ಕಿಯಲ್ಲಿ ಕಾಂಗ್ರೆಸ್‌ನಿಂದ ಈಶ್ವರ್ ಖಂಡ್ರೆ ಗೆಲುವು ಸಾಧಿಸಿದ್ದಾರೆ. ಬೀದರ್‌ನ ಆರು ಕ್ಷೇತ್ರಗಳಲ್ಲಿ ತೀವ್ರ ಸ್ಪರ್ಧೆಯ ನಡುವೆ ಮೂರನ್ನು ಬಿಜೆಪಿ ಗೆದ್ದಿದೆ. ಹುಮ್ನಾಬಾದ್ ಮತ್ತು ಬೀದರ್ ದಕ್ಷಿಣ ತೀವ್ರ ಸ್ಪರ್ಧೆಯನ್ನು ಎದುರಿಸಿತ್ತು.

ವಿಜಯಪುರ ಜಿಲ್ಲೆಯಲ್ಲೂ ಮೋದಿ ಮತಯಾಚನೆ ಮಾಡಿದ್ದರು. ಆದರೆ, ಎಂಟು ಸ್ಥಾನಗಳಲ್ಲಿ ಒಂದನ್ನಷ್ಟೇ ಗೆದ್ದಿದೆ. ಬಿಜೆಪಿಯ ಸ್ಪರ್ಧಿಗಳಾದ, ಬೆಳ್ಳುಬ್ಬಿ, ಸೋಮನಗೌಡ ಪಾಟೀಲ್ ಮೊದಲಾದವರು ಸೋತಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ಮಾತ್ರ ಗೆಲುವಿನ ನಗು ಬೀರಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಲಿಪ್‌ಸ್ಟಿಕ್‌ ಹಾಕಿದ ಮಹಿಳೆಯರು ಮುಂದೆ ಬರುತ್ತಾರೆ’; ಮಹಿಳಾ ಮೀಸಲಾತಿ ಬಗ್ಗೆ ಆರ್‌ಜೆಡಿ ನಾಯಕ ಸೆಕ್ಸಿಸ್ಟ್ ಹೇಳಿಕೆ

ಮಹಿಳಾ ಮೀಸಲಾತಿ ಮಸೂದೆಯ ಅಂಗೀಕಾರದಿಂದ ‘ಲಿಪ್‌ಸ್ಟಿಕ್‌ ಮತ್ತು ಬಾಬ್-ಕಟ್ ಹೇರ್ ಸ್ಟೈಲ್’...

ʼಗಾಂಧಿ ಗ್ರಾಮ ಪುರಸ್ಕಾರʼಕ್ಕೆ 233 ಗ್ರಾಮ ಪಂಚಾಯಿತಿ ಆಯ್ಕೆ: ಪ್ರಿಯಾಂಕ್‌ ಖರ್ಗೆ

ಅ.2ರಂದು ಸಿಎಂ ಸಿದ್ದರಾಮಯ್ಯ ಅವರಿಂದ ಪ್ರಶಸ್ತಿ ಪ್ರದಾನ 4 ಗ್ರಾಮ...

ನಿತೀಶ್ ಪ್ರಯಾಣಕ್ಕೆ ಸಂಚಾರ ತಡೆ; ಟ್ರಾಫಿಕ್‌ನಲ್ಲಿ ಸಿಲುಕಿದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮಗು

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಯಾಣಕ್ಕಾಗಿ ಪೊಲೀಸರು ರಸ್ತೆಯಲ್ಲಿ ಇತರ ವಾಹನ...

ಬೆಳಗಾವಿ | ಮೋಡ ಬಿತ್ತನೆ ಕಾರ್ಯಾಚರಣೆ ಆರಂಭ; ಯಶಸ್ವಿಯಾದರೆ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಯತ್ನ

ಬರಪೀಡಿತ ರೈತರಿಗೆ ನೆರವಾಗಲು ಬೆಳಗಾವಿ ಜಿಲ್ಲೆಯಲ್ಲಿ ಬೆಳಗಾವಿ ಶುಗರ್ಸ್ ಪ್ರೈವೇಟ್ ಲಿಮಿಟೆಡ್...