“ಒಳ್ಳೆಯ ಸಿನಿಮಾ ಮಾಡಿ, ಜನರನ್ನು ಮತ್ತೆ ರಂಜಿಸಿ ಮತ್ತು ನಿಮ್ಮ ಇಮೇಜ್ ಅನ್ನು ಮತ್ತೆ ಕಟ್ಟಿಕೊಳ್ಳಿ” ಎಂದು ಸುಪ್ರೀಂ ಕೋರ್ಟ್ ಬಾಲಿವುಡ್‌ನ ಪ್ರಸಿದ್ಧ ಹಾಸ್ಯ ನಟ ರಾಜ್‌ಪಾಲ್ ಯಾದವ್ ಅವರಿಗೆ ಸಲಹೆ ನೀಡಿದೆ.
ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ಅವರನ್ನೊಳಗೊಂಡ ಪೀಠದ ಮುಂದೆ ನಟ ರಾಜ್‌ಪಾಲ್ ಯಾದವ್ ಅವರು ಖುದ್ದಾಗಿ ಹಾಜರಾಗಿದ್ದರು. ಈ ವೇಳೆ ಕೋರ್ಟ್‌ನಲ್ಲಿ ವಾದ-ಪ್ರತಿವಾದ ಹಾಗೂ ನ್ಯಾಯಮೂರ್ತಿಗಳ ನಡುವೆ ಸ್ವಾರಸ್ಯಕರ ಹಾಗೂ ಗಂಭೀರ ಮಾತುಕತೆಗಳು ನಡೆದವು.
ಇದನ್ನೂ ಓದಿ: ಚೆಕ್ ಬೌನ್ಸ್ ಪ್ರಕರಣ: ಮಾಜಿ ಶಾಸಕ ಕುಮಾರಸ್ವಾಮಿ ಅಪರಾಧಿ; ಹೈಕೋರ್ಟ್ ತೀರ್ಪು
2010ರಲ್ಲಿ ಬಿಡುಗಡೆಯಾದ ತಮ್ಮ ‘ಅತಾ ಪತಾ ಲಾಪತಾ’ (Ata Pata Laapata) ಚಿತ್ರದ ನಿರ್ಮಾಣಕ್ಕಾಗಿ ರಾಜ್‌ಪಾಲ್ ಯಾದವ್ ಅವರು ‘ಮುರಳಿ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯಿಂದ ಸಾಲ ಪಡೆದಿದ್ದರು. ಈ ಸಾಲಕ್ಕೆ ಸಂಬಂಧಿಸಿದಂತೆ ಅವರು ನೀಡಿದ್ದ ಚೆಕ್‌ಗಳು ಬೌನ್ಸ್ ಆಗಿದ್ದವು.
This video cannot be played in your browser. Open the video directly
ಕೋರ್ಟ್ ಕಲಾಪದಲ್ಲಿ ತಮ್ಮ ಕಷ್ಟ ತೋಡಿಕೊಂಡ ರಾಜ್‌ಪಾಲ್ ಯಾದವ್, “ಅತಾ ಪತಾ ಲಾಪತಾ ಚಿತ್ರದಿಂದ ನನಗೆ ಕೋಟ್ಯಂತರ ರೂಪಾಯಿ ಭಾರಿ ನಷ್ಟವಾಯಿತು. 1 ರೂಪಾಯಿಯೂ ಲಾಭ ಸಿಗಲಿಲ್ಲ” ಎಂದು ಹೇಳಿದರು. ಇದಕ್ಕೆ ತಮಾಷೆಯಾಗಿ ಹಾಗೂ ಚಾಟಿ ಬೀಸುವಂತೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಗಳು, “ನಿಮ್ಮ ಸಿನಿಮಾದ ಹೆಸರಿನಂತೆಯೇ ನಿಮ್ಮ ಹಣವೂ ಈಗ ‘ಅತಾ ಪತಾ ಲಾಪತಾ’ (ಗಾಯಬ್) ಆಗಿದೆ” ಎಂದು ಮಾರ್ಮಿಕವಾಗಿ ನುಡಿದರು.
“ನೀವು ಒಬ್ಬ ನಟ. ಕೋರ್ಟ್‌ಗೆ ಅಲೆದಾಡುವ ಬದಲು ಮತ್ತೆ ಒಳ್ಳೆಯ ಸಿನಿಮಾಗಳನ್ನು ಮಾಡಿ ಜನರನ್ನು ನಗಿಸಿ, ನಿಮ್ಮ ಹಳೆಯ ಇಮೇಜ್ ಅನ್ನು ಮರಳಿ ಪಡೆಯಿರಿ” ಎಂದೂ ನ್ಯಾಯಪೀಠ ಸಲಹೆ ನೀಡಿತು.
ವಿಚಾರಣೆ ವೇಳೆ ನಟ ರಾಜ್‌ಪಾಲ್ ಯಾದವ್ ಪರ ವಕೀಲರು ₹1.15 ಕೋಟಿ ಮೊತ್ತದ ಡಿಮ್ಯಾಂಡ್ ಡ್ರಾಫ್ಟ್ (ಡಿಡಿ) ಸಲ್ಲಿಸಿದರು ಹಾಗೂ ಬಾಕಿ ಮೊತ್ತವನ್ನು ಪಾವತಿಸಲು ಸಮಯ ಕೋರಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 13ರ ಒಳಗಾಗಿ ಒಟ್ಟು ₹2 ಕೋಟಿ ಹಣವನ್ನು ಪಾವತಿಸುವಂತೆ ಸುಪ್ರೀಂ ಕೋರ್ಟ್ ನಟನಿಗೆ ನಿರ್ದೇಶನ ನೀಡಿದೆ. ನಿಗದಿತ ಹಣ ಪಾವತಿಸಿದ ಬಳಿಕವಷ್ಟೇ ಅವರ ಮೇಲ್ಮನವಿಯನ್ನು ಮುಂದಿನ ಹಂತದಲ್ಲಿ ಪರಿಶೀಲಿಸುವುದಾಗಿ ಕೋರ್ಟ್ ಸ್ಪಷ್ಟಪಡಿಸಿದೆ.





