“ಕೃತಕ ಬುದ್ಧಿಮತ್ತೆ (AI) ಹಾಗೂ ಹೊಸ ತಂತ್ರಜ್ಞಾನಗಳಿಂದ ಕೌಶಲ್ಯ ಕ್ಷೇತ್ರವು ಅತಿವೇಗವಾಗಿ ಬದಲಾಗುತ್ತಿದೆ, ಮುಂದಿನ ಐದು ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ಭಾರಿ ಪಲ್ಲಟ ಕಾದಿರುವುದರಿಂದ ನಮ್ಮ ಯುವಜನರನ್ನು ಸನ್ನದ್ಧರನ್ನಾಗಿ ಮಾಡುವುದು ಸರ್ಕಾರದ ಮುಖ್ಯ ಜವಾಬ್ದಾರಿಯಾಗಿದೆ,” ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ತಿಳಿಸಿದರು. ಸಚಿವರ ಮಾತುಗಳು, ನವೆಂಬರ್ 3 ರಿಂದ 5 ರವರೆಗೆ ಬೆಂಗಳೂರಿನ ‘ದಿ ಲಲಿತ್ ಅಶೋಕ್’ ನಲ್ಲಿ ನಡೆಯಲಿರುವ ‘ಬೆಂಗಳೂರು ಕೌಶಲ್ಯ ಶೃಂಗಸಭೆ 2026’ (Bengaluru Skill Summit 2026) ಕಾರ್ಯಕ್ರಮದ ಮುಖ್ಯ ಉದ್ದೇಶಗಳನ್ನು ಸ್ಪಷ್ಟಪಡಿಸಿವೆ. ಈ ಕಾರ್ಯಕ್ರಮವು ಯುವಜನರಿಗೆ, ಶೈಕ್ಷಣಿಕ ಸಂಸ್ಥೆಗಳಿಗೆ ಹಾಗೂ ಉದ್ಯಮಗಳಿಗೆ ಒಂದು ಬೃಹತ್ ವೇದಿಕೆಯಾಗಲಿದೆ.
ಬೆಂಗಳೂರಿನ ವಿಕಾಸಸೌಧದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಸಚಿವರು, “ವರ್ಕ್‌ಫೋರ್ಸ್ 2030: ಸ್ಕೇಲ್, ಸಿಸ್ಟಮ್ಸ್, ಸಿನರ್ಜಿ” ಎಂಬ ಧೈಯವಾಕ್ಯದಡಿ ಈ ಶೃಂಗಸಭೆಯು ಮೂಡಿಬರುತ್ತಿದೆ. ಜಗತ್ತಿನ ಮುಖ್ಯ ಐಟಿ (IT) ಹಬ್ ಆಗಿರುವ ಬೆಂಗಳೂರು, ಮುಂದೆ ಜಗತ್ತಿನ ಕೌಶಲ್ಯಪೂರ್ಣ ಶ್ರಮಿಕರ ಕೇಂದ್ರವಾಗಬೇಕು ಎಂದು ಆಶಾಭಾವನೆ ವ್ಯಕ್ತಪಡಿಸಿದರು. ಯುವಜನರಿಗೆ ಸರಿಯಾದ ಮಾರ್ಗದರ್ಶನ ಹಾಗೂ ಅವಕಾಶಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ, ಉನ್ನತ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ, ಉದ್ಯಮಗಳು, ಶೈಕ್ಷಣಿಕ ಸಂಸ್ಥೆಗಳು ಹಾಗೂ ವಿದ್ಯಾರ್ಥಿಗಳಿಗೆ ಒಂದೇ ವೇದಿಕೆ ಕಲ್ಪಿಸಲು ಈ ಶೃಂಗಸಭೆಯನ್ನು ಆಯೋಜಿಸಲಾಗುತ್ತಿದೆ ಎಂದು ಅವರು ವಿವರಿಸಿದರು. ನಮ್ಮ ಯುವಜನರನ್ನು ಜಾಗತಿಕ ಮಟ್ಟದ ಉದ್ಯೋಗಗಳಿಗೆ ಸಜ್ಜುಗೊಳಿಸುವುದು ಸರ್ಕಾರದ ಮುಖ್ಯ ಗುರಿ ಎಂದು ಡಾ. ಶರಣಪ್ರಕಾಶ್ ಪಾಟೀಲ್ ತಿಳಿಸಿದರು.
ಮುಂದಿನ ಐದು ವರ್ಷಗಳಲ್ಲಿ ಕೌಶಲ್ಯ ಕ್ಷೇತ್ರದಲ್ಲಿ, ಅದರಲ್ಲೂ ವಿಶೇಷವಾಗಿ ಕೃತಕ ಬುದ್ಧಿಮತ್ತೆಯ (AI) ಪ್ರಭಾವದಿಂದ ಬೃಹತ್ ಬದಲಾವಣೆಗಳಾಗಲಿವೆ ಎಂದು ಸಚಿವರು ಎಚ್ಚರಿಸಿದರು. ಐಟಿ ಕ್ಷೇತ್ರದಲ್ಲಿ ದೇಶವನ್ನು ಮುನ್ನಡೆಸುತ್ತಿರುವ ಕರ್ನಾಟಕವು, ಭವಿಷ್ಯದಲ್ಲೂ ಆ ನಾಯಕತ್ವದ ಸ್ಥಾನವನ್ನು ಉಳಿಸಿಕೊಳ್ಳಬೇಕಾಗಿದೆ. ಈ ಕಾರಣಕ್ಕಾಗಿ ಕನಿಷ್ಠ ವೃತ್ತಿಪರ ತರಬೇತಿಯಿಂದ (Vocational training) ಹಿಡಿದು ಉನ್ನತ ಮಟ್ಟದ ಎಐ ತಂತ್ರಜ್ಞಾನದವರೆಗೆ ಯುವಜನರನ್ನು ಭವಿಷ್ಯಕ್ಕಾಗಿ ಸಿದ್ಧಪಡಿಸುವುದು ನಮ್ಮ ಇಲಾಖೆಯ ಹೆಗಲ ಮೇಲಿರುವ ಜವಾಬ್ದಾರಿಯಾಗಿದೆ. ಜಗತ್ತಿನಾದ್ಯಂತ ಬೆಂಗಳೂರಿನ ಕೌಶಲ್ಯಭರಿತ ಕಾರ್ಮಿಕರಿಗೆ ಭಾರಿ ಬೇಡಿಕೆಯಿದ್ದು, ಭವಿಷ್ಯದ ಕೌಶಲ್ಯಪೂರ್ಣ ಶ್ರಮಿಕರಿಗಾಗಿ ಇಡೀ ಜಗತ್ತು ಬೆಂಗಳೂರಿನತ್ತ ನೋಡುವಂತೆ ಮಾಡುವುದು ನಮ್ಮ ಆಶಯವಾಗಿದೆ ಎಂದು ಡಾ. ಪಾಟೀಲ್ ವಿವರಿಸಿದರು.

ಕೌಶಲ್ಯಾಭಿವೃದ್ಧಿ ಕ್ಷೇತ್ರದಲ್ಲಿ ಕರ್ನಾಟಕದ ಸಾಧನೆಗಳನ್ನು ಪ್ರಸ್ತಾಪಿಸಿದ ಕೆಎಸ್‌ಡಿಸಿ (KSDC) ಅಧ್ಯಕ್ಷೆ ಶಿವಕಾಂತಮ್ಮ (ಕಾಂತಾ) ನಾಯ್ಕ್ ಅವರು, ಈ ವರ್ಷ ಯುವಜನರಿಗೆ ಕೌಶಲ್ಯ ತರಬೇತಿ ಹಾಗೂ ಉದ್ಯಮಗಳೊಂದಿಗೆ (Industry linkage) ಜೋಡಣೆಯೇ ನಮ್ಮ ಪ್ರಮುಖ ಗುರಿ ಎಂದರು. ‘ಸ್ಕಿಲ್ ಕ್ಯಾಪಿಟಲ್ ಆಫ್ ಇಂಡಿಯಾ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕರ್ನಾಟಕ, ಇಂಡಿಯಾ ಸ್ಕಿಲ್ಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಹಾಗೆಯೇ, 48ನೇ ವರ್ಲ್ಡ್ ಸ್ಕಿಲ್ಸ್ ಸ್ಪರ್ಧೆಯಲ್ಲಿ ಶ್ರುತಿ ನಂಬಿಯಾರ್ ಅವರು ಬೆಳ್ಳಿ ಪದಕ ಗೆದ್ದಿರುವುದು ನಮಗೆ ಹೆಮ್ಮೆ ತಂದಿದೆ. ಜೊತೆಗೆ ಮುಖ್ಯಮಂತ್ರಿಗಳು ಎಐ (AI) ವಿಶ್ವವಿದ್ಯಾಲಯವನ್ನು ಘೋಷಿಸಿರುವುದು ಈ ಕ್ಷೇತ್ರದ ಪ್ರಗತಿಗೆ ಶುಭ ಸೂಚನೆಯಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ಈ ಬಾರಿಯ ಶೃಂಗಸಭೆಗೆ ಜಪಾನ್ ದೇಶವು ‘ಕಂಟ್ರಿ ಪಾರ್ಟ್ನರ್’ ಆಗಿ ಭಾಗವಹಿಸುತ್ತಿದೆ. ಬೆಂಗಳೂರು ಮತ್ತು ಜಪಾನ್ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲು ಇದು ಉತ್ತಮ ಅವಕಾಶ ಎಂದು ಜಪಾನ್ ಕಾನ್ಸುಲ್ ಜನರಲ್ ಹಿರೋಶಿ ನವಾಟಾ ಅಭಿಪ್ರಾಯಪಟ್ಟರು. ಜಪಾನ್ ಪೆವಿಲಿಯನ್ ಮೂಲಕ ತಮ್ಮ ದೇಶದ ಅನುಭವಗಳನ್ನು ಹಂಚಿಕೊಳ್ಳಲಾಗುವುದು ಹಾಗೂ ಎಐ, ರೊಬೊಟಿಕ್ಸ್ ಮತ್ತು ಸೆಮಿಕಂಡಕ್ಟರ್ಸ್ ಕ್ಷೇತ್ರದಲ್ಲಿ ಕರ್ನಾಟಕದ ಯುವಜನರನ್ನು ಜಪಾನ್ ಉದ್ಯಮಗಳೊಂದಿಗೆ ಜೋಡಿಸುವ ಕಾರ್ಯವನ್ನು ಮಾಡಲಾಗುವುದು ಎಂದು ಅವರು ತಿಳಿಸಿದರು. ಇತ್ತೀಚೆಗೆ ಜಪಾನ್ ಪ್ರಧಾನಿಯವರ ದೆಹಲಿ ಭೇಟಿಯು ಈ ರಣತಂತ್ರದ ಪಾಲುದಾರಿಕೆಯನ್ನು ಹೆಚ್ಚಿಸಿದೆ ಎಂದು ಅವರು ಸ್ಮರಿಸಿದರು.
ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳ ಉದ್ದೇಶಗಳು ಸರಿಯಾದ ರೀತಿಯಲ್ಲಿ ಜನರನ್ನು ತಲುಪುವಲ್ಲಿ ಮಾಧ್ಯಮಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಕಾರ್ಯಕ್ರಮದ ಆಯೋಜಕರಾದ ಟ್ರೆಸ್ಕಾನ್ (Trescon) ಸಂಸ್ಥೆಯ ಗ್ರೂಪ್ ಸಿಇಒ ನವೀನ್ ಭಾರದ್ವಾಜ್ ತಿಳಿಸಿದರು. ಸರ್ಕಾರ ಹಾಗೂ ಉದ್ಯಮಗಳ ನಡುವೆ ಕೊಂಡಿಯಾಗಿರುವ ಈ ಶೃಂಗಸಭೆಯು ಕೇವಲ ಬೆಂಗಳೂರಿಗೆ ಸೀಮಿತವಾಗಿಲ್ಲ, ಬದಲಾಗಿ ಇಡೀ ಭಾರತ ಹಾಗೂ ಜಗತ್ತಿನ ಕೌಶಲ್ಯ ಪರಿಸರ ವ್ಯವಸ್ಥೆಯನ್ನು (Skilling ecosystem) ಪರಿವರ್ತಿಸುವ ಗುರಿ ಹೊಂದಿದೆ. ಕಳೆದ ವರ್ಷ ನಡೆದ ಶೃಂಗಸಭೆಯಲ್ಲಿ ಭಾರತ ಮಾತ್ರವಲ್ಲದೆ ವಿವಿಧ ದೇಶಗಳ ಪ್ರತಿನಿಧಿಗಳು ಸೇರಿದಂತೆ 6,500 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು ಹಾಗೂ ಮ್ಯಾನುಫ್ಯಾಕ್ಚರಿಂಗ್, ಏವಿಯೇಷನ್ ಸೇರಿದಂತೆ 30 ಕ್ಕೂ ಹೆಚ್ಚು ವಲಯಗಳ 100 ಕ್ಕೂ ಅಧಿಕ ಭಾಷಣಕಾರರು ಪಾಲ್ಗೊಂಡಿದ್ದರು. ಕರ್ನಾಟಕವನ್ನು ಟ್ರಿಲಿಯನ್ ಡಾಲರ್ ಕೌಶಲ್ಯ ರಾಜಧಾನಿಯನ್ನಾಗಿ ಮಾಡುವ ಮೂಲಕ ನಮ್ಮ ಯುವಜನರನ್ನು ಯುರೋಪ್, ಉತ್ತರ ಅಮೆರಿಕ ಹಾಗೂ ಮಧ್ಯಪ್ರಾಚ್ಯ ದೇಶಗಳ ಜಾಗತಿಕ ಬೇಡಿಕೆಗೆ ತಕ್ಕಂತೆ ಸಿದ್ಧಪಡಿಸುವ ನಿಟ್ಟಿನಲ್ಲಿ ಈ ಶೃಂಗಸಭೆ ಮಹತ್ವದ ವೇದಿಕೆಯಾಗಿದೆ ಎಂದು ಅವರು ವಿವರಿಸಿದರು.
ಸಭೆಯಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸುಬೋಧ್ ಯಾದವ್, ಕೆಎಸ್‌ಡಿಎ ಅಧ್ಯಕ್ಷ ಡಾ. ಇ.ವಿ. ರಮಣ ರೆಡ್ಡಿ, ನಿಗಮದ ಅಧಿಕಾರಿಗಳು ಹಾಗೂ ಟ್ರೆಸ್ಕಾನ್ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಬೆಂಗಳೂರು ಶೃಂಗಸಭೆ 2026
ಈ ಬೃಹತ್ ಕಾರ್ಯಕ್ರಮದಲ್ಲಿ 6,500 ಕ್ಕೂ ಅಧಿಕ ಪ್ರತಿನಿಧಿಗಳು, 150 ಕ್ಕೂ ಹೆಚ್ಚು ಭಾಷಣಕಾರರು, 50 ಕ್ಕೂ ಹೆಚ್ಚು ಪ್ರದರ್ಶಕರು ಹಾಗೂ 100 ಕ್ಕೂ ಹೆಚ್ಚು ಪಾಲುದಾರರು ಭಾಗವಹಿಸಲಿದ್ದಾರೆ. ಶೃಂಗಸಭೆಯನ್ನು ನಾಲ್ಕು ವಿಷಯಾಧಾರಿತ ವಿಭಾಗಗಳಾಗಿ ವಿಂಗಡಿಸಲಾಗಿದೆ. ಉದಯೋನ್ಮುಖ ಕೌಶಲ್ಯಗಳು (Emerging Skills), ಎಲ್ಲರಿಗೂ ಕೌಶಲ್ಯಗಳು (Skills for All), ನವೀನತೆ (Innovation), ಹಾಗೂ ಜಾಗತಿಕ ಕೌಶಲ್ಯಗಳು (Global Skills) ಎಂಬ ನಾಲ್ಕು ಮುಖ್ಯ ಭಾಗಗಳಲ್ಲಿ ವಿಸ್ತಾರವಾದ ಚರ್ಚೆಗಳು ನಡೆಯಲಿವೆ. ಇದು ಹಸಿರು ಉದ್ಯೋಗಗಳು, ಎಐ, ಮಹಿಳೆಯರು, ಗಿಗ್ ಆರ್ಥಿಕತೆಯ ಕಾರ್ಮಿಕರು ಹಾಗೂ ಜಾಗತಿಕ ಉದ್ಯೋಗಾವಕಾಶಗಳನ್ನು ಒಳಗೊಂಡಿದೆ.

ನವೆಂಬರ್ 3 ರಂದು ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶೃಂಗಸಭೆಗೆ ಚಾಲನೆ ನೀಡಲಿದ್ದಾರೆ. ಮುಖ್ಯ ವೇದಿಕೆಯಲ್ಲಿ “ವರ್ಕ್‌ಫೋರ್ಸ್ 2030: ಕರ್ನಾಟಕದ ರೋಡ್‌ಮ್ಯಾಪ್ ಫ್ರಮ್ ಪಾಲಿಸಿ ಟು ಎಕ್ಸಿಕ್ಯೂಶನ್” ಮತ್ತು ವಿವಿಧ ರಾಜ್ಯಗಳ ಕೌಶಲ್ಯ ಕಾರ್ಯದರ್ಶಿಗಳ ಪ್ಯಾನೆಲ್ ಚರ್ಚೆಗಳು ನಡೆಯಲಿವೆ. ಚೀನಾದ ಶಾಂಘೈನಲ್ಲಿ ನಡೆದ ವರ್ಲ್ಡ್‌ಸ್ಕಿಲ್ಸ್ 2026 ರಲ್ಲಿ ಭಾಗವಹಿಸಿದ ಕರ್ನಾಟಕದ ಯುವ ವಿಜೇತರು ಕೂಡ ಈ ವೇದಿಕೆಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ, ಇದು ಭಾಗವಹಿಸುವ ಇತರೆ ಯುವಜನರಿಗೆ ಪ್ರೇರಣೆಯಾಗಲಿದೆ.
ಶೃಂಗಸಭೆಯಲ್ಲಿ ಮುಖ್ಯ ಭಾಷಣಕಾರರಾಗಿ ಮೈಂಡ್‌ಟ್ರೀ ಸಂಸ್ಥಾಪಕ ಸುಬ್ರೊತೋ ಬಾಗ್ಚಿ, ಸಿಕಾಮೋರ್ ನೆಟ್‌ವರ್ಕ್ಸ್ ಸಂಸ್ಥಾಪಕ ಡಾ. ಗುರುರಾಜ್ ದೇಶಪಾಂಡೆ, ಇಸ್ರೋ ಬಾಹ್ಯಾಕಾಶ ಯಾನಿ ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್ ಹಾಗೂ ಮಿಟ್ಟಿ ಕೆಫೆ ಸ್ಥಾಪಕಿ ಅಲೀನಾ ಆಲಂ ಸೇರಿದಂತೆ ಹಲವರು ಗಣ್ಯರು ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮಕ್ಕೂ ಮುನ್ನ ರಾಜ್ಯಾದ್ಯಂತ ಪೂರ್ವಭಾವಿ ಕಾರ್ಯಕ್ರಮಗಳನ್ನು (Precursor Events) ಆಯೋಜಿಸಲಾಗಿದ್ದು, ಮೈಸೂರಿನ ಬಿಗ್ ಟೆಕ್ ಶೋ ಮತ್ತು ಹುಬ್ಬಳ್ಳಿಯ ಎಚ್‌ಡಿಬಿ ಟೆಕ್ಸೆಲರೇಷನ್ ಕಾರ್ಯಕ್ರಮಗಳು ಮುಖ್ಯ ಘಟ್ಟಗಳಾಗಿವೆ. ಈ ಮೂಲಕ ರಾಜ್ಯಾದ್ಯಂತ ಕೌಶಲ್ಯ ಜಾಗೃತಿಯನ್ನು ಮೂಡಿಸಲು ಸರ್ಕಾರ ಮುಂದಾಗಿದೆ.
ಕಾರ್ಯಕ್ರಮದಲ್ಲಿ ಇನ್ನೋವೇಶನ್ ಸ್ಟೇಜ್ ಹಾಗೂ ಎಕ್ಸ್‌ಪೋ ಅರೆನಾ ಮುಖ್ಯ ಆಕರ್ಷಣೆಗಳಾಗಿದ್ದು, ನವೆಂಬರ್ 5 ರಂದು “ಕೌಶಲ್ಯ ಕರ್ನಾಟಕ ಅವಾರ್ಡ್ಸ್ 2026” ಪ್ರದಾನ ಸಮಾರಂಭವು ನಡೆಯಲಿದೆ. ಇದರ ಜೊತೆಗೆ, ಭಾರತದಾದ್ಯಂತದ ವ್ಯಕ್ತಿಗಳು ಭಾಗವಹಿಸಬಹುದಾದ ‘ಸ್ಕಿಲಥಾನ್ 2026’ ಸಹ ಆಯೋಜಿಸಲಾಗಿದೆ. ಶೃಂಗಸಭೆಯ ಜೊತೆಗೆ ಗ್ರೀನ್ ಸ್ಕಿಲ್ಸ್ ಹಾಗೂ ಇನ್‌ಕ್ಲೂಸಿವ್ ಸ್ಕಿಲ್ಲಿಂಗ್ ಸೇರಿದಂತೆ ವಿವಿಧ ವಿಷಯಗಳ ಮೇಲೆ ಏಕಕಾಲಿಕ ದುಂಡುಮೇಜಿನ ಚರ್ಚೆಗಳು (Roundtables) ಕೂಡ ನಡೆಯಲಿವೆ.




