‘ಮಾರಿಕೊಂಡ ಮಾಧ್ಯಮಗಳು’ ಎಂದು ನಾನು ಕರೆದಿರುವುದು ಕೇವಲ ಲೇವಡಿ ಅಥವಾ ವ್ಯಂಗ್ಯವಲ್ಲ. ಬದಲಿಗೆ ಅದು ನನ್ನ ಆಳವಾದ ನೋವು ಮತ್ತು ಆತಂಕವನ್ನು ಪ್ರತಿಫಲಿಸುತ್ತದೆ ಎಂದು ನಟ ಪ್ರಕಾಶ್ ರಾಜ್ ಹೇಳಿದ್ದಾರೆ.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಕೇಳಿಬಂದಿದ್ದ ಆರೋಪದ ಕುರಿತು ಸ್ಪಷ್ಟನೆ ನೀಡಲು ಪ್ರಕಾಶ್ ರಾಜ್ ಬುಧವಾರ ಪ್ರತಿಕಾಗೋಷ್ಠಿ ನಡೆಸಿದ್ದಾರೆ. ಈ ಪ್ರತಿಕಾಗೋಷ್ಠಿಯ ಆಹ್ವಾನ ಸಂದೇಶದಲ್ಲಿ ‘ಮಾರಿಕೊಂಡ ಮಾಧ್ಯಮಗಳಿಗೆ ವಿಶೇಷ ಆಹ್ವಾನ’ ಎಂದು ಉಲ್ಲೇಖಿಸಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಸುದ್ದಿಗೋಷ್ಠಿ ವೇಳೆ ಕೆಲವು ಪತ್ರಕರ್ತರು ‘ಮಾರಿಕೊಂಡ ಮಾಧ್ಯಮಗಳು’ ಎಂಬ ಪದ ಬಳಕೆ ಕುರಿತು ಏರು ಧ್ವನಿಯಲ್ಲಿ ಪ್ರಶ್ನಿಸಿದ್ದಾರೆ. ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಪ್ರಕಾಶ್, ‘ಏನ್ ನಿಮ್ ಪ್ರಾಬ್ಲಮ್’ ಎಂದು ನಕ್ಕಿದ್ದಾರೆ.
“ಪ್ರೆಸ್ ಕ್ಲಬ್ ಮೂಲಕ ಅಧಿಕೃತವಾಗಿ ರವಾನಿಸಲಾದ ಇನ್ವಿಟೇಶನ್‌ನಲ್ಲಿ ನಾವು ಯಾವುದೇ ಆಕ್ಷೇಪಾರ್ಹ ಪದಗಳನ್ನು ಬಳಸಿಲ್ಲ. ಅದರಲ್ಲಿ, ಮಾಧ್ಯಮದವರನ್ನು ‘ನಮ್ಮ ಬಂಧುಗಳು ಮತ್ತು ಆತ್ಮೀಯರು’ ಎಂದೇ ಸಂಬೋಧಿಸಿದ್ದೇನೆ. ಆದರೆ, ಧರ್ಮಸ್ಥಳ ಪ್ರಕರಣವನ್ನು ಮುಂದಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಉದ್ದೇಶಪೂರ್ವಕವಾಗಿ ತಮ್ಮ ತೇಜೋವಧೆ ಮಾಡುತ್ತಿರುವ ನಿರ್ದಿಷ್ಟ ಮಾಧ್ಯಮಗಳನ್ನು ಗುರಿಯಾಗಿಸಿಯೇ ನಾನು ಆ ಪೋಸ್ಟ್ ಹಂಚಿಕೊಂಡಿದ್ದೇನೆ” ಎಂದು ಸಮರ್ಥಿಸಿಕೊಂಡಿದ್ದಾರೆ.
ಆ ‘ಮಾರಿಕೊಂಡ ಮಾಧ್ಯಮಗಳು’ ಯಾರು ಎಂದು ಹೆಸರು ಬಹಿರಂಗಪಡಿಸುವಂತೆ ಪತ್ರಕರ್ತರು ಪಟ್ಟು ಹಿಡಿದಾಗ, “ನಾನು ಒಂದು ವೇಳೆ ಆ ಮಾಧ್ಯಮಗಳ ಅಥವಾ ವ್ಯಕ್ತಿಗಳ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ತಮ್ಮ ಕೆಲಸವನ್ನೇ ಕಳೆದುಕೊಳ್ಳಬೇಕಾಗುತ್ತದೆ. ಅವರ ಅಸಹಾಯಕತೆಯ ಪರಿಸ್ಥಿತಿ ನನಗೆ ಅರ್ಥವಾಗುವುದರಿಂದ ನಾನು ಹೆಸರು ಹೇಳುವುದಿಲ್ಲ” ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ.
ಈ ವರದಿ ಓದಿದ್ದೀರಾ?: ‘ನನ್ನ ಹೋರಾಟ ಸೌಜನ್ಯ ಸಾವಿನ ವಿರುದ್ಧ; ನನಗೂ 200 ಕೋಟಿ ರೂ. ಡೀಲ್‌ಗೂ ಸಂಬಂಧವಿಲ್ಲ’: ನಟ ಪ್ರಕಾಶ್ ರಾಜ್
“ಕಳೆದ ಹಲವಾರು ವರ್ಷಗಳಿಂದ ದೇಶದ ವಿವಿಧ ಭಾಷೆಗಳ ಮಾಧ್ಯಮ ರಂಗವನ್ನು ಹತ್ತಿರದಿಂದ ನೋಡಿದ್ದೇನೆ. ಪ್ರಸ್ತುತ ದಿನಗಳಲ್ಲಿ ಮಾಧ್ಯಮಗಳ ಪರಿಸ್ಥಿತಿ ಮತ್ತು ಮೌಲ್ಯಗಳು ಸಂಪೂರ್ಣವಾಗಿ ಬದಲಾಗಿವೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ಪತ್ರಿಕಾರಂಗದಲ್ಲಿ ನನಗೆ ಹಲವಾರು ಗೆಳೆಯರಿದ್ದಾರೆ. ನನ್ನ ಹಲವು ಆಪ್ತ ಗೆಳೆಯರು ದೂರವಾಣಿ ಮೂಲಕ ಮಾತನಾಡುವಾಗ, ತಮಗೆ ಸತ್ಯವನ್ನು ಬರೆಯಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಹೇಳಿಕೊಂಡಿದ್ದಾರೆ. ತಮ್ಮ ಅಸಹಾಯಕತೆಯನ್ನು ಅರ್ಥಮಾಡಿಕೊಳ್ಳಿ ಎಂದು ವಿನಂತಿಸುತ್ತಾರೆ. ಅವರ ಈ ಅನಿವಾರ್ಯತೆ ನನಗೆ ಚೆನ್ನಾಗಿ ಅರ್ಥವಾಗುತ್ತದೆ” ಎಂದಿದ್ದಾರೆ.



