ತಮಿಳುನಾಡು ರಾಜಕಾರಣದಲ್ಲಿ ಸದ್ಯ ದೊಡ್ಡ ತಲ್ಲಣ ಸೃಷ್ಟಿಯಾಗಿದ್ದು, ಮಾಜಿ ಆರೋಗ್ಯ ಸಚಿವ ಹಾಗೂ ವೈರಲಿಮಲೈ ಕ್ಷೇತ್ರದ AIADMK ಶಾಸಕರಾಗಿದ್ದ ಡಾ. ಸಿ. ವಿಜಯಭಾಸ್ಕರ್ ತಮ್ಮ ಶಾಸಕ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ವಿಧಾನಸಭಾ ಸ್ಪೀಕರ್ ಜೆ.ಸಿ.ಡಿ. ಪ್ರಭಾಕರ್ ಅವರು ಈ ರಾಜೀನಾಮೆಯನ್ನು ತಕ್ಷಣವೇ ಅಂಗೀಕರಿಸಿದ್ದಾರೆ. ಪಕ್ಷದ ಒಳಗಿನ ತೀವ್ರ ಆಂತರಿಕ ಭಿನ್ನಮತ ಮತ್ತು ನಾಯಕತ್ವದ ಮೇಲಿನ ಅಸಮಾಧಾನವೇ ಈ ರಾಜೀನಾಮೆಗೆ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ.
ರಾಜೀನಾಮೆ ನೀಡುವ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ AIADMK ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ (EPS) ವಿರುದ್ಧ ವಿಜಯಭಾಸ್ಕರ್ ತೀವ್ರ ಆಕ್ರೋಶ ಹೊರಹಾಕಿದ್ದರು. ಪಕ್ಷಕ್ಕಾಗಿ ಹಗಲಿರುಳು ದುಡಿಯುವ ಕಾರ್ಯಕರ್ತರನ್ನು ಶತ್ರುಗಳಂತೆ ಕಾಣುವ ಮತ್ತು ಪ್ರಶ್ನಿಸುವುದನ್ನೇ ಅಪರಾಧ ಎಂದು ಭಾವಿಸುವ ಅಹಂಕಾರದ ನಾಯಕತ್ವ ಎಂದಿಗೂ ಗೆಲ್ಲಲು ಸಾಧ್ಯವಿಲ್ಲ ಎಂದು ಅವರು ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು. ಈ ಬೆಳವಣಿಗೆಯು AIADMK ಪಕ್ಷದೊಳಗಿನ ಬಿರುಕನ್ನು ಮತ್ತಷ್ಟು ಬಹಿರಂಗಪಡಿಸಿದೆ.
ವಿಜಯಭಾಸ್ಕರ್ ಅವರು ಪ್ರಸ್ತುತ ಮುಖ್ಯಮಂತ್ರಿ ಜೋಸೆಫ್ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವನ್ನು ಸೇರುವುದು ಬಹುತೇಕ ಖಚಿತ ಎನ್ನಲಾಗಿದೆ. ಕಳೆದ ಮೇ ತಿಂಗಳಿನಲ್ಲಿ ನಡೆದಿದ್ದ TVK ಸರ್ಕಾರದ ವಿಶ್ವಾಸಮತ ಯಾಚನೆ ವೇಳೆ, ವಿಜಯಭಾಸ್ಕರ್ ಸೇರಿದಂತೆ AIADMKಯ 25 ಬಂಡಾಯ ಶಾಸಕರು ಪಕ್ಷದ ವಿಪ್ ಉಲ್ಲಂಘಿಸಿ ವಿಜಯ್ ಸರ್ಕಾರದ ಪರವಾಗಿ ಮತ ಚಲಾಯಿಸಿದ್ದರು. ಆಗಿನಿಂದಲೇ ಇವರು ಪಕ್ಷ ಬದಲಾಯಿಸುವ ಮುನ್ಸೂಚನೆ ಸಿಕ್ಕಿತ್ತು.
ಈಗಾಗಲೇ AIADMK ತೊರೆದಿದ್ದ ನಾಲ್ಕು ಜನ ಪ್ರಮುಖ ಶಾಸಕರಾದ ಮರಗತಂ ಕುಮಾರವೇಲ್, ಎಸ್. ಜಯಕುಮಾರ್, ಪಿ. ಸತ್ಯಭಾಮಾ ಮತ್ತು ಇಸಕ್ಕಿ ಸುಬಯ್ಯ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅಧಿಕೃತವಾಗಿ TVK ಪಕ್ಷ ಸೇರಿದ್ದಾರೆ. ಇದೀಗ ವಿಜಯಭಾಸ್ಕರ್ ಅವರು ಆ ಸಾಲಿಗೆ ಸೇರುವ ಐದನೇ ಶಾಸಕರಾಗಿದ್ದು, ಮುಂಬರುವ ದಿನಗಳಲ್ಲಿ ಇನ್ನುಳಿದ ಬಂಡಾಯ ಶಾಸಕರು ಕೂಡ ರಾಜೀನಾಮೆ ನೀಡಿ ದಳಪತಿ ವಿಜಯ್ ಕೈ ಹಿಡಿಯುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ: ‘ಮಾರಿಕೊಂಡ ಮಾಧ್ಯಮ’ಗಳು ವಿವಾದ; ನಟ ಪ್ರಕಾಶ್ ರಾಜ್ ಸಮರ್ಥನೆ
ತಮಿಳುನಾಡು ವಿಧಾನಸಭಾ ಚುನಾವಣೆ ಮುಗಿದು ದಳಪತಿ ವಿಜಯ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ AIADMK ಸಂಪೂರ್ಣ ಹದಗೆಟ್ಟಿದೆ. ಜಯಲಲಿತಾ ಅವರ ನಿಧನದ ನಂತರ ಎದ್ದಿರುವ ನಾಯಕತ್ವದ ಬಿಕ್ಕಟ್ಟು ಈಗ ಪಕ್ಷವನ್ನು ಇನ್ನಷ್ಟು ದುರ್ಬಲಗೊಳಿಸುತ್ತಿದ್ದರೆ, ಮತ್ತೊಂದೆಡೆ ಮುಖ್ಯಮಂತ್ರಿ ವಿಜಯ್ ಅವರ TVK ಪಕ್ಷವು ವಿರೋಧ ಪಕ್ಷದ ಪ್ರಮುಖ ನಾಯಕರನ್ನು ತನ್ನತ್ತ ಸೆಳೆಯುವ ಮೂಲಕ ರಾಜ್ಯ ರಾಜಕಾರಣದಲ್ಲಿ ತನ್ನ ಹಿಡಿತವನ್ನು ಮತ್ತಷ್ಟು ಬಲಪಡಿಸಿಕೊಳ್ಳುತ್ತಿದೆ.




