ನಾನು ಸೌಜನ್ಯ ಅತ್ಯಾಚಾರ ಮತ್ತು ಕೊಲೆಯ ವಿರುದ್ಧ ಹೋರಾಟ ಮಾಡುತ್ತಿದ್ದೇನೆ. ಸೌಜನ್ಯಳಿಗೆ ನ್ಯಾಯ ದೊರೆಯಬೇಕೆಂದು ಹೇಳುತ್ತಿದ್ದೇನೆ. ಧರ್ಮಸ್ಥಳದ ವಿರುದ್ಧ ಯಾವ ಷಡ್ಯಂತ್ರವನ್ನೂ ಮಾಡಿಲ್ಲ. ನನಗೂ ಆಪಾದಿತ 200 ಕೋಟಿ ರೂ. ಡೀಲ್‌ಗೂ ಯಾವುದೇ ಸಂಬಂಧವಿಲ್ಲ ಎಂದು ನಟ ಪ್ರಕಾಶ್ ರಾಜ್ ಹೇಳಿದ್ದಾರೆ.
ಇತ್ತೀಚೆಗೆ, ಧರ್ಮಸ್ಥಳ ಪ್ರಕರಣದಲ್ಲಿ ಉಲ್ಟಾ ಹೊಡೆದಿರುವ ಸಾಕ್ಷಿ-ಆರೋಪಿ ಚಿನ್ನಯ್ಯ, ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ತಮಗೆ ಪ್ರಕಾಶ್ ರಾಜ್ ಕರೆ ಮಾಡಿದ್ದರು, ‘ಗಿರೀಶ್ ಮಟ್ಟಣ್ಣನವರ್ ಹೇಳಿದಂತೆ ಕೇಳು’ ಎಂದಿದ್ದರು ಎಂದು ಆರೋಪಿಸಿದ್ದರು. ಈ ಪ್ರಕರಣದಲ್ಲಿ ತಮ್ಮ ಹೆಸರನ್ನು ತಳುಕು ಹಾಕಿರುವ ಕುರಿತು ಇಂದು (ಬುಧವಾರ) ಪತ್ರಿಕಾಗೋಷ್ಠಿ ನಡೆಸಿ ಪ್ರಕಾಶ್ ರಾಜ್ ಸ್ಪಷ್ಟನೆ ನೀಡಿದ್ದಾರೆ.
“ಕೆಲವು ಮಾಧ್ಯಮಗಳು ಈ ಷಡ್ಯಂತ್ರದಲ್ಲಿ ನನ್ನ ಕೈವಾಡ ಇದೆ ಎಂದು ಅವರೇ ಸ್ವತಃ ಘೋಷಿಸಿಬಿಟ್ಟಿದ್ದಾರೆ. ಆದರೆ, ನಾನು ಇದುವರೆಗೆ ಚಿನ್ನಯ್ಯ ಅಥವಾ ಮಟ್ಟಣ್ಣನವರ್ ಸೇರಿದಂತೆ ಯಾರನ್ನೂ ಖುದ್ದಾಗಿ ಭೇಟಿ ಮಾಡಿಲ್ಲ” ಎಂದು ತಿಳಿಸಿದ್ದಾರೆ.
ಚಿನ್ನಯ್ಯ ಜೊತೆಗಿನ ಫೋನ್ ಕರೆಯ ಕುರಿತು ಸ್ಪಷ್ಟನೆ ನೀಡಿದ ಪ್ರಕಾಶ್ ರಾಜ್, “ನೀನು ನನ್ನ ಮುಂದೆ ಹೇಳಿದ ಸತ್ಯವನ್ನೇ ಎಸ್‌ಐಟಿ ಮುಂದೆ ಹೋಗಿ ಹೇಳು. ಸತ್ಯ ಹೇಳಿದರೆ ಇಡೀ ಊರೇ ನಿನ್ನನ್ನು ಕೊಂಡಾಡುತ್ತದೆ, ನಾನು ನಿನ್ನನ್ನು ತಬ್ಬಿಕೊಳ್ಳುತ್ತೇನೆ ಎಂದು ಆತನಿಗೆ ಧೈರ್ಯವನ್ನಷ್ಟೇ ಹೇಳಿದ್ದೆ. ಆದರೆ, ಧರ್ಮಸ್ಥಳಕ್ಕೆ ಅಪಪ್ರಚಾರ ಮಾಡಲು ನಾನು 200 ಕೋಟಿ ರೂ. ಡೀಲ್ ಕುದುರಿಸಿದ್ದೇನೆ ಎಂಬುದು ಕಪೋಲಕಲ್ಪಿತ. ಅಷ್ಟೊಂದು ದೊಡ್ಡ ಮೊತ್ತವನ್ನು ನಾನೆಲ್ಲಿಂದ ತರಲಿ? ವಿಷಯವನ್ನು ತಿರುಚಿ ನನ್ನನ್ನು ಧರ್ಮ ವಿರೋಧಿ ಎಂದು ಬಿಂಬಿಸಲಾಗುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ನನಗೆ ಧರ್ಮಸ್ಥಳದ ಕುರಿತು ಗೌರವವಿದೆ. ಅಂತೆಯೇ, ಅಲ್ಲಿ ನಡೆದ ಹೆಣ್ಣು ಮಕ್ಕಳ ಸಾವುಗಳ ನ್ಯಾಯಕ್ಕಾಗಿ ನಾನು ಧ್ವನಿ ಎತ್ತಿದ್ದೇನೆ. ಧರ್ಮಸ್ಥಳದಲ್ಲಿ ಮೃತಪಟ್ಟ ಹೆಣ್ಣು ಮಕ್ಕಳ ಮೇಲೆ ಯಾರಿಗೂ ಏಕೆ ಕನಿಕರ ಇಲ್ಲ? ಸೌಜನ್ಯ ಸೇರಿದಂತೆ ಅಲ್ಲಿ ಮೃತಪಟ್ಟ ಇತರ ಹೆಣ್ಣು ಮಕ್ಕಳ ಸಾವು ಹೇಗೆ ಸಂಭವಿಸಿತು ಎಂದು ನ್ಯಾಯಕ್ಕಾಗಿ ಪ್ರಶ್ನಿಸುವುದು ತಪ್ಪಾ? ನಾನು ಆ ಸಾವುಗಳ ಕುರಿತು ಪ್ರಶ್ನೆ ಮಾಡಿದ್ದೇನೆಯೇ ಹೊರತು, ಧರ್ಮಸ್ಥಳ ಕ್ಷೇತ್ರದ ವಿರುದ್ಧ ಯಾವುದೇ ಷಡ್ಯಂತ್ರ ಮಾಡಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.



