ದುನಿಯಾ ವಿಜಯ್ ಅವರು ಕೇವಲ ಸಿನಿಮಾಗಳಷ್ಟೇ ಅಲ್ಲದೇ ತಮ್ಮ ಸಾಮಾಜಿಕ ಕಳಕಳಿ, ಜನಪರ ನಿಲುವುಗಳು ಮತ್ತು ವೈಚಾರಿಕ ಪ್ರಜ್ಞೆಯ ಮೂಲಕವೂ ಜನರ ಗಮನ ಸೆಳೆಯುತ್ತಿದ್ದಾರೆ. ಅವರ ಜೀವಪರ ನಿಲುವು ಮತ್ತು ಕಾಳಜಿ ಅವರನ್ನು ಕೇವಲ ನಟನಾಗಿ ಮಾತ್ರವಲ್ಲದೆ ಜವಾಬ್ದಾರಿಯುತ ನಾಗರಿಕನಾಗಿಯೂ ಗುರುತಿಸುವಂತೆ ಮಾಡಿದೆ.
ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿರುವ ನಟ ದುನಿಯಾ ವಿಜಯ್ ಅವರು ಇಂದು ಕೇವಲ ಸ್ಯಾಂಡಲ್‌ವುಡ್‌ಗೆ ಸೀಮಿತವಾದ ಕಲಾವಿದರಲ್ಲ. ತಮ್ಮ ಅಪಾರ ಪ್ರತಿಭೆ, ನಿರಂತರ ಪರಿಶ್ರಮ ಮತ್ತು ಕಲೆಯ ಮೇಲಿನ ಬದ್ಧತೆಯ ಮೂಲಕ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವ ಅಪರೂಪದ ಕಲಾವಿದರಲ್ಲಿ ಒಬ್ಬರಾಗಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ತಮಿಳಿನ ಪ್ಯಾನ್ ಇಂಡಿಯಾ ಚಿತ್ರ ‘ಸ್ಲಮ್ ಡಾಗ್’ ಚಿತ್ರದ ಟ್ರೇಲರ್‌ನಲ್ಲಿ ದುನಿಯಾ ವಿಜಯ್ ಅವರು ಪ್ರಮುಖ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದೇಶದಾದ್ಯಂತ ಸಿನಿರಸಿಕರ ಗಮನ ಸೆಳೆದಿದ್ದಾರೆ. ಈಗಾಗಲೇ ತಮ್ಮ ನೈಜ ಅಭಿನಯ, ಅದ್ಭುತ ದೇಹಭಾಷೆ ಮತ್ತು ಪಾತ್ರಕ್ಕೆ ಜೀವ ತುಂಬುವ ಸಾಮರ್ಥ್ಯದ ಮೂಲಕ ಕನ್ನಡಿಗರ ಮನಗೆದ್ದಿರುವ ವಿಜಯ್ ಅವರು, ಈ ಚಿತ್ರದ ಮೂಲಕ ಮತ್ತೊಮ್ಮೆ ತಮ್ಮ ಬಹುಮುಖ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ.
ಈ ಚಿತ್ರದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ‘ಸ್ಲಮ್ ಡಾಗ್’ ಚಿತ್ರದ ನಾಯಕ ವಿಜಯ್ ಸೇತುಪತಿಯವರು ದುನಿಯಾ ವಿಜಯ್ ಅವರ Acting, hardwork, commitment ಮತ್ತು ಕೆಲಸದ ಮೇಲಿನ ಶ್ರದ್ಧೆಯನ್ನು ಮುಕ್ತಕಂಠದಿಂದ ಹೊಗಳಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಭಾರತೀಯ ಚಿತ್ರರಂಗದ ಅತ್ಯುತ್ತಮ ನಟರಲ್ಲಿ ಒಬ್ಬರೆಂದು ಪರಿಗಣಿಸಲ್ಪಡುವ ವಿಜಯ್ ಸೇತುಪತಿ ಅವರಂತಹ ಕಲಾವಿದರಿಂದ ಬಂದಿರುವ ಈ ಮೆಚ್ಚುಗೆ, ದುನಿಯಾ ವಿಜಯ್ ಅವರ ಪ್ರತಿಭೆಗೆ ದೊರೆತ ದೊಡ್ಡ ಮಾನ್ಯತೆಯಾಗಿದೆ.
ದುನಿಯಾ ವಿಜಯ್ ಅವರ Cinema career ಶುರುವಾಗಿದ್ದು ಯಾವುದೇ ರಾಜಮಾರ್ಗದ ಮೂಲಕವಲ್ಲ. ಸಾಮಾನ್ಯ ಹಿನ್ನೆಲೆಯಿಂದ ಬಂದ ಅವರು ಪ್ರತಿಯೊಂದು ಅವಕಾಶವನ್ನು ತಮ್ಮ ಪ್ರತಿಭೆಯ ಮೂಲಕ ಸಾಧಿಸಿಕೊಂಡವರು. ಹೋರಾಟ, ನೋವು, ಅವಮಾನ ಮತ್ತು ಅನೇಕ ಸವಾಲುಗಳನ್ನು ಎದುರಿಸುತ್ತಾ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನವನ್ನು ನಿರ್ಮಿಸಿಕೊಂಡಿದ್ದಾರೆ. ಅದಕ್ಕಾಗಿಯೇ ಅವರ ಯಶಸ್ಸು ಲಕ್ಷಾಂತರ ಯುವಕರಿಗೆ ಮತ್ತು ಕಲಾವಿದರಿಗೆ ಸ್ಫೂರ್ತಿಯ ಕಥೆಯಾಗಿದೆ.
‘ಸಲಗ’ ಹಾಗೂ ‘ಭೀಮಾ’ ಚಿತ್ರಗಳ ಮೂಲಕ ಅವರು ಕೇವಲ ನಟನಾಗಿ ಮಾತ್ರವಲ್ಲದೆ, ಒಬ್ಬ ಸೃಜನಶೀಲ ನಿರ್ದೇಶಕನಾಗಿಯೂ ತಮ್ಮ ಛಾಪು ಮೂಡಿಸಿದ್ದಾರೆ. ‘ಸ್ಲಮ್’ ಎಂದು ಕರೆಯಲ್ಪಡುವ ಲೋಕದಿಂದ ಅವಕಾಶವಂಚಿತರ ಕಥೆಗಳನ್ನು, ಅದರ ಭಾಷೆಯನ್ನು ಮತ್ತು ಸಂಸ್ಕೃತಿಯನ್ನು ಹೆಕ್ಕಿ ಅದನ್ನೇ ಪ್ರಮುಖ ಪಾತ್ರವನ್ನಾಗಿಸಿ ಪ್ರೇಕ್ಷಕರಿಗೆ ತಲುಪಿಸುವ ಅವರ ಪ್ರಯತ್ನ ನಿಜಕ್ಕೂ ಶ್ಲಾಘನೀಯ.
ಈ ಲೇಖನ ಓದಿದ್ದೀರಾ?: ಸಂಪತ್ತಿಗೆ ಸವಾಲ್ ನಾಟಕದ ಕವಿ: ಧುತ್ತರಗಿ ಎಂಬ ಅಮೂಲ್ಯ ಸಂಪತ್ತು
ಇತ್ತೀಚಿನ ದಿನಗಳಲ್ಲಿ ದುನಿಯಾ ವಿಜಯ್ ಅವರು ಕೇವಲ ಸಿನಿಮಾಗಳಷ್ಟೇ ಅಲ್ಲದೇ ತಮ್ಮ ಸಾಮಾಜಿಕ ಕಳಕಳಿ, ಜನಪರ ನಿಲುವುಗಳು ಮತ್ತು ವೈಚಾರಿಕ ಪ್ರಜ್ಞೆಯ ಮೂಲಕವೂ ಜನರ ಗಮನ ಸೆಳೆಯುತ್ತಿದ್ದಾರೆ. ಸಮಾಜದ ಸಮಸ್ಯೆಗಳ ಬಗ್ಗೆ ಸ್ಪಂದಿಸುವ ಅವರ ಜೀವಪರ ನಿಲುವು ಮತ್ತು ಸಾಮಾನ್ಯ ಜನರ ಬದುಕಿನ ಬಗ್ಗೆ ಇರುವ ಕಾಳಜಿ ಅವರನ್ನು ಕೇವಲ ನಟನಾಗಿ ಮಾತ್ರವಲ್ಲದೆ ಜವಾಬ್ದಾರಿಯುತ ನಾಗರಿಕನಾಗಿಯೂ ಗುರುತಿಸುವಂತೆ ಮಾಡಿದೆ.
ಇದೇ ಕಾರಣಕ್ಕೆ ರಾಜ್ಯದ ಅನೇಕ ಚಿಂತಕರು, ಸಾಹಿತ್ಯಾಸಕ್ತರು ಮತ್ತು ಬೌದ್ಧಿಕ ವಲಯಗಳ ಮೆಚ್ಚುಗೆಯನ್ನೂ ಅವರು ಗಳಿಸುತ್ತಿದ್ದಾರೆ.
ಇಂದು ದುನಿಯಾ ವಿಜಯ್ ಅವರ ಸಾಧನೆ ಒಬ್ಬ ವ್ಯಕ್ತಿಯ ಯಶಸ್ಸಿನ ಕಥೆ ಮಾತ್ರವಲ್ಲ; ಅದು ಕನ್ನಡ ಪ್ರತಿಭೆಯ ಸಾಮರ್ಥ್ಯಕ್ಕೆ ದೊರೆಯುತ್ತಿರುವ ರಾಷ್ಟ್ರೀಯ ಮಾನ್ಯತೆಯ ಪ್ರತೀಕವಾಗಿದೆ. ಅವರ ಪ್ರತಿಭೆಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊರೆಯುತ್ತಿರುವ ಗೌರವ ಕನ್ನಡಿಗರಿಗೂ ಹೆಮ್ಮೆಯ ವಿಷಯವಾಗಿದೆ.
ಮುಂದಿನ ದಿನಗಳಲ್ಲಿ ದುನಿಯಾ ವಿಜಯ್ ಅವರ ಪ್ರತಿಭೆಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಸೂಕ್ತ ಅವಕಾಶಗಳು ದೊರೆಯಲಿ, ವಿಶ್ವದ ಸಿನಿಪ್ರೇಕ್ಷಕರು ಅವರ ಅಭಿನಯ ಕೌಶಲ್ಯವನ್ನು ಗುರುತಿಸಲಿ ಮತ್ತು ಕನ್ನಡದ ಈ ಅದ್ಭುತ ಕಲಾವಿದ ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಎತ್ತರಕ್ಕೆ ಏರಲಿ ಎಂಬುದು ಪ್ರತಿಯೊಬ್ಬ ಕನ್ನಡಿಗನ ಆಶಯವಾಗಿದೆ.



