ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ನ್ಯಾಯಾಂಗ ಪ್ರಕ್ರಿಯೆಗೆ ವೇಗ ಸಿಕ್ಕಿದೆ. ಪ್ರಕರಣದ ಪ್ರಮುಖ ಸಾಕ್ಷಿಗಳ ವಿಚಾರಣೆಯನ್ನು ವಾರದಲ್ಲಿ 4 ದಿನಗಳ ಕಾಲ ‘ಪ್ರತಿನಿತ್ಯದ ಆಧಾರ’ದ ಮೇಲೆ ನಡೆಸಲು ಬೆಂಗಳೂರು ನಗರದ 59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ನಿರ್ಧರಿಸಿದೆ.
ಸುಪ್ರೀಂಕೋರ್ಟ್ ಮಾರ್ಗಸೂಚಿಯಂತೆ ತ್ವರಿತಗತಿಯಲ್ಲಿ ವಿಚಾರಣೆ ಮುಗಿಸಲು ನ್ಯಾಯಾಲಯವು ಪ್ರಾಸಿಕ್ಯೂಷನ್ ಹಾಗೂ ಆರೋಪಿಗಳ ಪರ ವಕೀಲರಿಗೆ ಸೂಚನೆ ನೀಡಿದೆ.
ಸೋಮವಾರ ಪ್ರಕರಣದ ವಿಚಾರಣೆ ಆರಂಭವಾಗುತ್ತಿದ್ದಂತೆ, ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಹಾಗೂ ಪವಿತ್ರಾಗೌಡ ಸೇರಿದಂತೆ ಏಳು ಮಂದಿ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್‌ಗೆ ಹಾಜರಾದರು. ಇನ್ನುಳಿದಂತೆ ಜಾಮೀನಿನ ಮೇಲಿರುವ 7 ಮಂದಿ ಆರೋಪಿಗಳು ಖುದ್ದಾಗಿ ನ್ಯಾಯಾಲಯಕ್ಕೆ ಬಂದಿದ್ದರು. ಗೈರಾಗಿದ್ದ ನಾಲ್ವರು ಆರೋಪಿಗಳ ಪರ ವಕೀಲರು ಸಲ್ಲಿಕೆ ಮಾಡಿದ್ದ ಗೈರುಹಾಜರಿ ವಿನಾಯ್ತಿ ಅರ್ಜಿಯನ್ನು ನ್ಯಾಯಪೀಠ ಪುರಸ್ಕರಿಸಿತು.
ವಿಚಾರಣೆ ವೇಳೆ ವಿಶೇಷ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನ ಕುಮಾರ್ ಅವರು ಸುಪ್ರೀಂಕೋರ್ಟ್ ಆದೇಶವನ್ನು ನ್ಯಾಯಾಲಯದ ಗಮನಕ್ಕೆ ತಂದರು.
“ಪ್ರಕರಣದ ಪ್ರಮುಖ 60 ಸಾಕ್ಷಿಗಳ ವಿಚಾರಣೆಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಈಗಾಗಲೇ ಪ್ರಕರಣವು 57ನೇ ಕೋರ್ಟ್‌ನಿಂದ ಈ ಕೋರ್ಟ್‌ಗೆ ವರ್ಗಾವಣೆಯಾಗಿ ಎರಡು ವಾರಗಳು ಕಳೆದಿವೆ. ಸುಪ್ರೀಂಕೋರ್ಟ್ ಆದೇಶ ಪಾಲನೆಗಾಗಿ ವಾರದಲ್ಲಿ ನಾಲ್ಕು ದಿನ ನಿರಂತರ ವಿಚಾರಣೆ ನಡೆಸಲು ಪ್ರಾಸಿಕ್ಯೂಷನ್ ಸಂಪೂರ್ಣ ಸಹಕಾರ ನೀಡಲಿದೆ” ಎಂದು ಎಸ್‌ಪಿಪಿ ತಿಳಿಸಿದ್ದಾರೆ.
ಇದಕ್ಕೆ ದರ್ಶನ್ ಹಾಗೂ ಇತರೆ ಆರೋಪಿಗಳ ಪರ ವಕೀಲರು ಸಹಮತ ವ್ಯಕ್ತಪಡಿಸಿ, ತಾವೂ ದಿನನಿತ್ಯದ ವಿಚಾರಣೆಗೆ ಸಿದ್ಧರಿರುವುದಾಗಿ ಕೋರ್ಟ್‌ಗೆ ತಿಳಿಸಿದರು.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ: ಎಲ್ಲ ಆರೋಪ ನಿರಾಕರಿಸಿದ ದರ್ಶನ್, ನ.10ಕ್ಕೆ ಸಾಕ್ಷಿದಾರರ ವಿಚಾರಣೆ
ದಿನನಿತ್ಯದ ಆಧಾರದಲ್ಲಿ ವಾರಕ್ಕೆ ನಾಲ್ಕು ದಿನ ವಿಚಾರಣೆ ನಡೆಯಲಿದೆ. ತುರ್ತು ಸಂದರ್ಭ ಎದುರಾದರೆ 5ನೇ ದಿನವೂ ವಿಚಾರಣೆ ನಡೆಸಲು ಕೋರ್ಟ್ ಸಿದ್ಧವಿದೆ. ಪ್ರಾಸಿಕ್ಯೂಷನ್ ಸಾಕ್ಷಿಯ ಮುಖ್ಯ ಪರೀಕ್ಷೆ ನಡೆಸಿದ ತಕ್ಷಣವೇ, ಆರೋಪಿಗಳ ಪರ ವಕೀಲರು ಅಂದೇ ಪಾಟಿ ಸವಾಲು ಮುಗಿಸಬೇಕು ಹಾಗೂ ವಾರಕ್ಕೆ ಕನಿಷ್ಠ ಇಬ್ಬರು ಹಾಗೂ ತಿಂಗಳಿಗೆ ಕನಿಷ್ಠ 8 ಸಾಕ್ಷಿಗಳ ವಿಚಾರಣೆಯನ್ನು ಪೂರ್ಣಗೊಳಿಸಬೇಕು ಎಂದು ಕೋರ್ಟ್ ಸೂಚಿಸಿದೆ.
ಇದೇ ಸಂದರ್ಭದಲ್ಲಿ ದರ್ಶನ್ ಪರ ವಕೀಲ ಸುನೀಲ್ ಕುಮಾರ್, ಪ್ರಾಸಿಕ್ಯೂಷನ್ ವಿಚಾರಣೆ ನಡೆಸಲು ಉದ್ದೇಶಿಸಿರುವ ಆ 60 ಪ್ರಮುಖ ಸಾಕ್ಷಿಗಳ ಪಟ್ಟಿಯನ್ನು ತಮಗೆ ನೀಡುವಂತೆ ಸರ್ಕಾರಿ ಅಭಿಯೋಜಕರಿಗೆ ನಿರ್ದೇಶಿಸಬೇಕು ಎಂದು ಕೋರ್ಟ್‌ಗೆ ಮನವಿ ಮಾಡಿದರು.
ನ್ಯಾಯಾಲಯವು ಪ್ರಾಸಿಕ್ಯೂಷನ್ ಮನವಿಯ ಮೇರೆಗೆ ಸಾಕ್ಷಿ ಸಂಖ್ಯೆ 39 ಮತ್ತು 40ಕ್ಕೆ ಸಮನ್ಸ್ ಜಾರಿಗೊಳಿಸಿ, ಮುಂದಿನ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು.




