ಡಾ. ರಾಜ್, ನಾಯಕ ನಟನಾಗಿ ಅಭಿನಯಿಸಿದ 'ಸಂಪತ್ತಿಗೆ ಸವಾಲ್' ಸಿನೆಮಾಕ್ಕೆ ಸಾರ್ವಕಾಲಿಕ ಬೇಡಿಕೆ ಮತ್ತು ಮಹತ್ತರ ಸ್ಥಾನಮಾನ. ಆ ಕತೆಯ ಕರ್ತೃ ಪಿ.ಬಿ. ಧುತ್ತರಗಿ. ಅರವತ್ತಕ್ಕೂ ಹೆಚ್ಚು ನಾಟಕಗಳನ್ನು ಬರೆದ, ರಂಗಭೂಮಿಗೆ ಅಪೂರ್ವ ಕೊಡುಗೆ ಕೊಟ್ಟ ಅವರ ಜನ್ಮದಿನದಂದು ಒಂದು ಸ್ಮರಣೆ...
ಇವತ್ತಿಗೂ ‘ಸಂಪತ್ತಿಗೆ ಸವಾಲ್’ ನಾಟಕ ಕನ್ನಡ ರಂಗಭೂಮಿಯ ಮಹತ್ವದ ರಂಗಸಂಪತ್ತು. ಅವಿಭಜಿತ ಕುಟುಂಬ ಪ್ರೀತಿ ಮತ್ತು ಫ್ಯೂಡಲ್ ವ್ಯವಸ್ಥೆಯ ವಿರುದ್ಧ ಸಾತ್ವಿಕ ಸೆಡ್ಡು ಹೊಡೆಯುವ ಕಥಾವಸ್ತುವುಳ್ಳ ಇದು ಕಂಪನಿ ಶೈಲಿಯ ನಾಟಕ. ಅಜಮಾಸು ಅರ್ಧ ಶತಮಾನಕ್ಕೂ ಹಿಂದೆ ಗೋಕಾಕ ಬಸವಣ್ಣೆಪ್ಪನವರ ಶಾರದಾ ಸಂಗೀತ ನಾಟಕ ಮಂಡಳಿ ಅಭಿನಯಿಸುತ್ತಿದ್ದ ‘ಸಂಪತ್ತಿಗೆ ಸವಾಲ್’ ನಾಟಕವನ್ನು ವರನಟ ಡಾ. ರಾಜಕುಮಾರ ಅಂದು ಅತ್ಯಂತ ಶ್ರದ್ಧೆಯಿಂದ ವೀಕ್ಷಿಸುತ್ತಾರೆ. ಹಾಗೆ ಹೃತ್ಪೂರ್ವಕ ಪ್ರೀತಿ, ಆಸಕ್ತಿಯಿಂದ ನಾಟಕ ನೋಡಿದ ಅವರಿಗೆ ಅದು ಪ್ರಖರ ಪರಿಣಾಮ ಬೀರುತ್ತದೆ. ಅಂತೆಯೇ ಅವರು ಸದರಿ ನಾಟಕವನ್ನು ಸಿನೆಮಾ ಮಾಡುವ ದೃಢಸಂಕಲ್ಪ ಮಾಡುತ್ತಾರೆ.
ನಂತರದಲ್ಲಿ ಅವರ ಸಂಕಲ್ಪ ಸಾಕಾರಗೊಂಡು ತನ್ಮೂಲಕ ದಾಖಲೆಯ ಯಶಸ್ಸನ್ನು ಗಳಿಸುತ್ತಾರೆ. ಡಾ. ರಾಜ್, ನಾಯಕ ನಟನಾಗಿ ಅಭಿನಯಿಸಿದ ‘ಸಂಪತ್ತಿಗೆ ಸವಾಲ್’ ಸಿನೆಮಾಕ್ಕೆ ಸಾರ್ವಕಾಲಿಕ ಬೇಡಿಕೆ ಮತ್ತು ಮಹತ್ತರ ಸ್ಥಾನಮಾನ. ಅದೇ ಬಗೆಯ ಕಥಾವಸ್ತುವುಳ್ಳ ಅನೇಕ ಚಲನ ಚಿತ್ರಗಳು ಇತರೆ ಭಾಷೆಗಳಲ್ಲಿ ಬಂದಿದ್ದರೂ ಕನ್ನಡದ ಸಂಪತ್ತಿಗೆ ಸವಾಲ್ ಸಿನೆಮಾದ ಚಿತ್ರಕಶಕ್ತಿಗೆ ಗುರುತರ ಹಿರಿಮೆ. ಅದು ಕನ್ನಡ ಚಿತ್ರರಂಗದ ಯುಗಪುರುಷ ಡಾ. ರಾಜಕುಮಾರ ಅಭಿನಯದ ಸಿನೆಮಾ ಅನ್ನುವುದು ಯಶಸ್ಸಿಗೆ ಕಾರಣ ಇದ್ದೀತು.
ಅಷ್ಟುಮಾತ್ರವಲ್ಲದೆ ಅದು ಜನಸಂಸ್ಕೃತಿ ಐಡಿಯಾಲಜಿಯ ಅನನ್ಯ ಮಾದರಿಯೆಂಬ ಅಗ್ಗಳಿಕೆಯೂ ಇಲ್ಲದಿಲ್ಲ. ಅಂತೆಯೇ ಅದಕ್ಕೆ ಜನಮೆಚ್ಚುಗೆ ಪ್ರಣೀತ ಲೋಕಮೀಮಾಂಸೆಯ ಗರಿ. ಅದು ಬಹುಳಪ್ರಜ್ಞೆಯ ಪ್ರಜಾಸತ್ತಾತ್ಮಕ ಪ್ರೀತಿಯೂ ಹೌದು. ಹಾಗೊಂದು ವೇಳೆ ಉತ್ತರ ಕರ್ನಾಟಕದ ವ್ಯಾಕರಣ ಧ್ವನಿಯ ಜವಾರಿ ಸಂಭಾಷಣೆ ಬಳಕೆ ಆಗಿದ್ರೆ ಸಿನೆಮಾದ ವಿಜೃಂಭಣೆ ಮತ್ತಷ್ಟು ಬಣ್ಣಿಸಲಸದಳ. ದಾಖಲೆಯ ಮತ್ತೊಂದು ಸಂಗತಿಯೆಂದರೆ ಕನ್ನಡದ ಈ ಸಿನೆಮಾ ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲೂ ಯಶಸ್ವಿ ಚಲನಚಿತ್ರವಾಗಿ ಜನಮನ್ನಣೆಗೆ ಭಾಜನ.
ಅಂದಹಾಗೆ ಸಂಪತ್ತಿಗೆ ಸವಾಲ್ ನಾಟಕ ರಚಿಸಿದ ಕವಿಯ ಹೆಸರು ಪಿ.ಬಿ. ಧುತ್ತರಗಿ. ಪೂರ್ಣ ಹೆಸರು ಪುಂಡಲೀಕ ಬಸನಗೌಡ ಧುತ್ತರಗಿ. ವೃತ್ತಿ ರಂಗಭೂಮಿಯಲ್ಲಿ ನಾಟಕಕಾರರಿಗೆ ಕವಿಗಳೆಂದೇ ಕರೆಯುವ ವಾಡಿಕೆ. ಪಿ.ಬಿ. ಧುತ್ತರಗಿ ರಂಗಸಂಸ್ಕೃತಿಯ ಗದ್ಯಗಂಧಿ ಕವಿ. ಕನ್ನಡದ ಪ್ರಬುದ್ಧ ನಾಟಕಕಾರ. ಅವರು ಅರವತ್ನಾಲ್ಕು ನಾಟಕಗಳನ್ನು ರಚಿಸಿದ್ದಾರೆ. ‘ದಿಕ್ಕೆಟ್ಟ ದೇಶಕ್ಕೆ ದೇವರೇ ದಿಕ್ಕು’ ಇದು ಅವರ ಕೊನೆಯ ನಾಟಕ. ಅವರ ಮೊದಲ ನಾಟಕದ ಹೆಸರು ಕಲ್ಪನಾ ಪ್ರಪಂಚ. ಏಳನೇ ಈಯತ್ತೆ ಎಂಬ ಆಗಿನ ಕಾಲದ ಮುಲ್ಕಿ ಪರೀಕ್ಷೆಯನ್ನು ಸಹಿತ ಧುತ್ತರಗಿ ಪಾಸಾಗಿರಲಿಲ್ಲ. ಆದರೆ ಅವರು ಉತ್ಕೃಷ್ಟ ನಾಟಕಗಳ ರಚನೆಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಅವತ್ತಿನ ಅವಿಭಜಿತ ಬಿಜಾಪುರ ಜಿಲ್ಲೆಯ ಹುನಗುಂದ ತಾಲೂಕಿನ ಸೂಳಿಬಾವಿ (15 ಜೂನ್ 1928 ಜನನ) ಅವರ ಹುಟ್ಟೂರು. ಧುತ್ತರಗಿಯವರ ಕುಟುಂಬದ ಕಸುಬು ಕೈಮಗ್ಗದ ನೇಕಾರಿಕೆ.
ಇದನ್ನು ಓದಿದ್ದೀರಾ?: ಸತೀಶ್ ಮಾಳಿಕೊಪ್ಪ ಎಂಬ ಯಾರೂ ಅರಿಯದ ವೈಚಾರಿಕ ಸಂತ
ಆದರೆ ಅಪ್ಪ ಬಸನಗೌಡಗೆ ನೇಕಾರಿಕೆಗೆ ಬದಲು ನಾಟಕದ ಹುಚ್ಚು. ಹಂದಿಗನೂರ ಸಿದ್ರಾಮಪ್ಪನವರ ನಾಟಕ ಕಂಪನಿಯಲ್ಲಿ ನಾಯಕ ನಟನಾಗಿ ಅಭಿನಯಿಸುವ ಕಾಯಕ. ಅಂತೆಯೇ ರಂಗಮಗ್ಗದ ಗರಡಿಯಲ್ಲಿ ಅಪ್ಪನದು ಹಾಸುಎಳೆ, ಮಗನದು ಹೊಕ್ಕೆಳೆಯಂತೆ ಬಾಲಕ ಪುಂಡಲೀಕ ರಂಗನೇಯ್ಗೆಯ ಸಾಮು ತೆಗೆಯಲು ಶುರುವಾಯಿತು. ಹೀಗೆ ಬಾಲ್ಯದಲ್ಲೇ ಸುತ್ತಿಕೊಂಡ ನಾಟಕ ಕಂಪನಿಯ ಕಲರ್ಫುಲ್ ರಂಗಬಳ್ಳಿ ಒಡನಾಟ ಬದುಕಿನ ಅಂತಿಮ ಗಳಿಗೆಯವರೆಗೂ ಕಳ್ಳುಬಳ್ಳಿಯಂತೆ ನಿತಾಂತಗೊಂಡಿತ್ತು. ಎಳಮೆಯಲ್ಲೇ ಕಥೆ, ಕಾದಂಬರಿ, ರಾಮಾಯಣ, ಮಹಾಭಾರತ ಓದುವ ದಿವಿನಾದ ಹಂಬಲ. ಪಂಪನಿಂದ ಕುವೆಂಪುವರೆಗೆ ಆಸಕ್ತಿಕರ ಅಧ್ಯಯನ. ಖರೇವಂದ್ರ ಅವರು ಕಾವ್ಯವತ್ಸಲರು. ಅಷ್ಟೇ ಪ್ರಮಾಣದಲ್ಲಿ ದೇವಿ ಉಪಾಸಕ. ಪ್ರಾಯಶಃ ಶಾಕ್ತಪಂಥದ ಮೌನಾರಾಧನೆಯ ಸಂಬಂಧೀಕರಣವೇ ಅವರು ‘ದೇವಿಮಹಾತ್ಮೆ’ ಎಂಬ ಅವತಾರಶಕ್ತಿ ನಾಟಕದ ರಂಗಶಿಲ್ಪಿಯಾಗಲು ಸಾಧ್ಯವಾದುದು.

ಹರಗಿರಿಜೆ, ಮಲಮಗಳು, ತಾಯಿಕರುಳು, ಕಿತ್ತೂರು ಚೆನ್ನಮ್ಮ, ವೀರ ಸಿಂಧೂರ ಲಕ್ಷ್ಮಣ, ರಾಜಾ ವೆಂಕಟಪ್ಪ ನಾಯಕ, ಅತ್ತಿಗೆ, ಸುಖದ ಸುಪ್ಪತ್ತಿಗೆ, ಕನ್ನಡದ ಪ್ರಥಮ ಸಿನೆಮಾಸ್ಕೋಪ್ ಚಲನಚಿತ್ರ (ಸೊಸೆತಂದ ಸೌಭಾಗ್ಯ) ಎಂಬ ಹೆಗ್ಗಳಿಕೆಗೆ ಪಾತ್ರವಾದ ಮತ್ತೊಂದು ನಾಟಕ ಚಿಕ್ಕಸೊಸೆ, ಚಾರುದತ್ತ… ಹೀಗೆ ಅವರು ರಚಿಸಿದ್ದು ಸಾಲು ಸಾಲು ಸಂವೇದನಾಶೀಲ ನಾಟಕಗಳು. ಅವು ಸಾಮಾಜಿಕ, ಐತಿಹಾಸಿಕ, ಪೌರಾಣಿಕ ಎಲ್ಲ ಪ್ರಕಾರದ ರಂಗ ಕೃತಿಗಳು. ಅವರ ಕೆಲವು ನಾಟಕಗಳು ಇತರೆ ಭಾಷೆಗಳಿಗೂ ಅನುವಾದಗೊಂಡಿವೆ. ಜಗದ್ವಿಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಹಾಡಿದ ಸಂಗೊಳ್ಳಿ ರಾಯಣ್ಣ ಕನ್ನಡ ಸಿನೆಮಾದ ‘ಬೆಳ್ಳನೆ ಬೆಳಗಾಯಿತು’ ಹಾಡು ಬರೆದ ಕವಿ ಧುತ್ತರಗಿ.
ಧುತ್ತರಗಿಯವರ ನಾಟಕಗಳೆಂದರೆ ಲೋಕ ಹೃದಯಗುಣ ಬಾಹುಳ್ಯದ ದಿವ್ಯಸಂಪತ್ತು. ಅಂತೆಯೇ ಅವರನ್ನು ಹೃದ್ಭಾವದ ಕವಿ ಎಂದು ಹೆಸರಾಂತ ನಾಟಕಕಾರ ಬಸವಲಿಂಗ ಶಾಸ್ತ್ರಿ ಹೆಸರಿಸಿದ್ದಾರೆ. ರಂಗಭಾಷ್ಯಗೆ ಮನುಷ್ಯ ಸಂಬಂಧಗಳ ಭಾವಗಮ್ಯದ ಘಮಲು ಸೃಜನೆ. ಮೊಗಲಾಯಿಯ ಸೊಗಡು, ಇಂಗರೇಜಿಯ ಪರಿಮಳ. ಸಾಮಾಜಿಕ ಮತ್ತು ಚಾರಿತ್ರಿಕ ಮೌಲ್ಯಗಳ ಸಂಘರ್ಷ. ಹಾಗೆಯೇ ಸಂಘರ್ಷಗಳನ್ನು ಸುಂದರಗೊಳಿಸಿದ ಔಚಿತ್ಯದ ನಾಟಕಕಾರ. ನಿತ್ಯಬದುಕಿನ ಸತ್ಯ ಸಂಗತಿಗಳ ಮೇಲೆ ಕಲಾತ್ಮಕತೆಯ ಬೆಳಕು ಚೆಲ್ಲಿದ ಕುಟುಂಬ ವತ್ಸಲ. ಆಳದ ತಬ್ಬಲಿತನ, ಸಂಕಟಗಳ ಕ್ರಿಯಾಶೀಲತೆ ಸೇರಿದಂತೆ ನವರಸಗಳು ವಿನ್ಯಾಸಗೊಂಡು ಜಿನುಗುವ ಕಂಪು.
ನಾಟಕ ರಚನೆಗೆ ಮುನ್ನ ತಿಂಗಳು, ವರುಷಗಟ್ಟಲೆ ತನ್ನನ್ನು ಸತಾಯಿಸಿದ ಕಥಾವಸ್ತುವಿನ ಕುರಿತು ಕಾವುಕುಂತ ಪರಿಯ ಅಪಾರ ಅಧ್ಯಯನ. ಅನ್ಯರಸಾಯನ ಶಿಸ್ತುಗಳ ಮೂಲಕ ಪರಿವೀಕ್ಷಿಸುವ ರಂಗ ಪರಿಕ್ರಮ. ಅವರ ಪಾಲಿಗೆ ಅದೊಂದು ಬಗೆಯ ಪ್ರವರ್ತಿತ ಕಲೆ. ಅದೆಲ್ಲ ಅವರ ಅಂತರ್ಮುಖಿ ಕವಿಮನಸು ರೂಢಿಸಿಕೊಂಡ ಭಾವಯಾನವೇ ಆಗಿರುತ್ತಿತ್ತು. ಒಮ್ಮೊಮ್ಮೆ ಕಾಣದುದನರಸುವ ಕುತೂಹಲ. ಆ ಮೂಲಕ ವೃತ್ತಿ ರಂಗಭೂಮಿಯ ಪರಂಪರೆ, ತಾತ್ವಿಕ ಚಿಂತನೆಗಳನ್ನು ಹಾಳತವಾಗಿ ಎತ್ತಿ ಹಿಡಿದವರು ಧುತ್ತರಗಿಯವರು.
ಇದನ್ನು ಓದಿದ್ದೀರಾ?: ಎನ್.ಎಸ್. ಶಂಕರ್ ಬರೆದ ‘ರಾಮಾ’ಯಣ!
ಧುತ್ತರಗಿಯವರ ಮೊದಲ ಪತ್ನಿ ಶಾಂತಮ್ಮ, ಪತಿ ಮತ್ತು ನಾಲ್ಕು ಮಕ್ಕಳನ್ನು ಅಗಲಿ ಹೋದ ಮೇಲೆ ಆ ಕಾಲದ ಪ್ರಸಿದ್ದ ರಂಗನಟಿ ಚಿತ್ರದುರ್ಗದ ಸರೋಜಮ್ಮ ಸಂಗಾತಿಯಾಗುತ್ತಾರೆ. ಇಬ್ಬರೂ ಸೇರಿ ಎರಡು ದಶಕಗಳ ಕಾಲ ತ್ರಿಪುರ ಸುಂದರಿ ನಾಟ್ಯ ಸಂಘ ಮತ್ತು ಸಿದ್ಧಲಿಂಗೇಶ್ವರ ನಾಟ್ಯ ಸಂಘ ಎಂಬ ನಾಟಕ ಕಂಪನಿಗಳನ್ನು ಮುನ್ನಡೆಸುತ್ತಾರೆ. ಸರ್ಕಾರದ ಅತ್ಯುನ್ನತ ಗುಬ್ಬಿ ವೀರಣ್ಣ ಮತ್ತು ರಾಜ್ಯೋತ್ಸವ ಪ್ರಶಸ್ತಿಗಳು ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಧುತ್ತರಗಿಯವರ ಮುಡಿ ಅಲಂಕರಿಸಿವೆ. ಸರ್ಕಾರ ಅವರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಿದೆ.
2007 ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ದಿನದಂದು ಇತ್ತ ಸೂಳಿಬಾವಿಯಲ್ಲಿ ಧುತ್ತರಗಿ ಕವಿ ತೀರಿಹೋದರು. ಅತ್ತ ಬೆಂಗಳೂರಲ್ಲಿ ಅವತ್ತೇ ಅವರ ಪತ್ನಿ ಸರೋಜಮ್ಮ ಅವರಿಗೆ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸತ್ಕರಿಸುತ್ತಿತ್ತು. ಸುದ್ದಿ ಗೊತ್ತಾಗುತ್ತಿದ್ದಂತೆ ಸರೋಜಮ್ಮ ಸೂಳಿಬಾವಿಗೆ ಧಾವಿಸಿದರು.

ಮಲ್ಲಿಕಾರ್ಜುನ ಕಡಕೋಳ
ಸಾಹಿತಿ



