ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಚಲನಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಈ ಬೆನ್ನಲ್ಲೇ, ಚಿತ್ರದಲ್ಲಿ ರಾವಣನ ಪಾತ್ರ ನಿರ್ವಹಿಸಿರುವ ರಾಕಿಂಗ್ ಸ್ಟಾರ್ ಯಶ್ ಅವರ ನಟನೆಯನ್ನು ಚಿತ್ರ ವಿಮರ್ಶಕ ಕಮಾಲ್ ರಶೀದ್ ಖಾನ್ (ಕೆಆರ್‌ಕೆ) ತೀವ್ರವಾಗಿ ಟೀಕಿಸಿದ್ದಾರೆ. ‘ಯಶ್ ಒಬ್ಬ ಕಳಪೆ ನಟ ಹಾಗೂ ರಾವಣನ ಪಾತ್ರಕ್ಕೆ ಅವರ ಧ್ವನಿ ಸೂಕ್ತವಾಗಿಲ್ಲ’ ಎಂದಿದ್ದಾರೆ. ಅವರ ಟೀಕೆಗಾಗಿ ಯಶ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕೆಆರ್‌ಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಕೆಆರ್‌ಕೆ, ‘ರಾಮಾಯಣ’ ಟ್ರೇಲರ್ ವೀಕ್ಷಿಸಿದ ಬಳಿಕ ಯಶ್ ಅವರ ನಟನಾ ಶೈಲಿ ಮತ್ತು ಹಿಂದಿ ಉಚ್ಚಾರಣೆಯನ್ನು ಬಹಿರಂಗವಾಗಿ ಪ್ರಶ್ನಿಸಿದ್ದಾರೆ. “ರಾವಣನಂಥ ಗಂಭೀರ ಮತ್ತು ಪೌರಾಣಿಕ ಪಾತ್ರದಲ್ಲಿ ಯಶ್ ಅವರ ಸಂಭಾಷಣೆ ಸಾಟಿಯಾಗುತ್ತಿಲ್ಲ, ಅವರಿಗೆ ಸರಾಗವಾಗಿ ಹಿಂದಿ ಮಾತನಾಡಲು ಬರದಿದ್ದರೆ ಬೇರೊಬ್ಬರಿಂದ ಡಬ್ಬಿಂಗ್ ಮಾಡಿಸಬೇಕಿತ್ತು” ಎಂಬರ್ಥದಲ್ಲಿ ಕೆಆರ್‌ಕೆ ಪೋಸ್ಟ್ ಮಾಡಿದ್ದಾರೆ.
ಕೆಆರ್‌ಕೆ ಅವರ ಈ ಹೇಳಿಕೆ ಹೊರಬೀಳುತ್ತಿದ್ದಂತೆ ಯಶ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಕಮೆಂಟ್ ಬಾಕ್ಸ್‌ನಲ್ಲಿ ಕಮಾಲ್ ರಶೀದ್ ಖಾನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದಕ್ಷಿಣ ಭಾರತದ ನಟರಾದ ಕಾರಣ ಅವರ ಮಾತಿನಲ್ಲಿ ಪ್ರಾದೇಶಿಕ ಶೈಲಿ ಇರುವುದು ಸಹಜ ಎಂದು ಸಮರ್ಥಿಸಿಕೊಂಡ ನೆಟ್ಟಿಗರು, “ಅಭಿನಯ ಮತ್ತು ಸ್ಕ್ರೀನ್ ಪ್ರೆಸೆಂಟ್ ಭಾಷೆಗಿಂತಲೂ ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ” ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲದೆ, ಕೆಆರ್‌ಕೆ ಯಾವುದೇ ಸಿನಿಮಾಗೆ ನೆಗೆಟಿವ್ ರಿವ್ಯೂ ನೀಡಿದರೆ ಆ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಆಗುವುದು ಖಚಿತ ಎಂದು ಹಲವರು ಕಾಲೆಳೆದಿದ್ದಾರೆ.
ಇದೇ ವೇಳೆ, ಕೆಲವು ನೆಟ್ಟಿಗರು ರಾವಣನ ಪಾತ್ರಕ್ಕೆ ಹಿಂದಿ ಆವೃತ್ತಿಯಲ್ಲಿ ಮತ್ತಷ್ಟು ತೀವ್ರತೆ ತರಲು ಧ್ವನಿ ಬದಲಾಯಿಸುವ ಅಗತ್ಯವಿದೆ ಎಂದೂ ಅಭಿಪ್ರಾಯಪಟ್ಟಿದ್ದಾರೆ.
ರಾಮಾಯಣ ಸಿನಿಮಾದಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಯಶ್ ರಾವಣನಾಗಿ ನಟಿಸಿದ್ದಾರೆ. ಬಿಗ್ ಬಜೆಟ್ ಸಿನಿಮಾದ ಟ್ರೇಲರ್ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಹುಟ್ಟುಹಾಕಿದ್ದು, ಕೆಆರ್‌ಕೆ ಟೀಕೆಯ ಹೊರತಾಗಿಯೂ ಯಶ್ ಅವರ ರಾವಣನ ಅವತಾರಕ್ಕೆ ಚಿತ್ರಪ್ರೇಮಿಗಳಿಂದ ವ್ಯಾಪಕ ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ.



