ಹುಮನಾಬಾದ್ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿನ ಕೆಲ ರಾಸಾಯನಿಕ ಕಾರ್ಖಾನೆಗಳ ತ್ಯಾಜ್ಯ, ವಿಷಪೂರಿತ ನೀರು ಚರಂಡಿಗಳ ಮುಖಾಂತರ ಹಳ್ಳಕ್ಕೆ ಹರಿಸಿದ್ದರಿಂದ ಜಲಚರಗಳಿಗೆ, ಪ್ರಾಣಿ ಪಕ್ಷಿಗಳಿಗೆ ಹಾಗೂ ಸುತ್ತಲಿನ ಗ್ರಾಮಸ್ಥರಿಗೆ ಜೀವ ಕಂಟಕವಾಗಿ ಪರಿಣಮಿಸಿದೆ.
ಕೈಗಾರಿಕಾ ಪ್ರದೇಶದಲ್ಲಿನ ಕೆಲ ಕಾರ್ಖಾನೆಗಳ ಕೃತ್ಯ ಎಂದಿನಂತೆ ಮತ್ತೆ ಮುಂದುವರೆಯುತ್ತಿದೆ. ರಾತ್ರೋ ರಾತ್ರಿ ತ್ಯಾಜ್ಯದ ನೀರನ್ನು ಕೆನಾಲ್ ಮುಖಾಂತರ ನೇರವಾಗಿ ಹಳ್ಳಕ್ಕೆ ಹರಿಬಿಟ್ಟು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರುತ್ತಿವೆ. ಮಾಣಿಕ ಪ್ರಭು ಸಂಸ್ಥಾನದ ಸಮೀಪದ ಹಳ್ಳದ ನೀರು ಸಂಪೂರ್ಣ ನೀಲಿ ಬಣ್ಣಕ್ಕೆ ತಿರುಗಿದ್ದು, ಜನರ ಮೇಲೆ ದುಷ್ಪರಿಣಾಮಗಳಾಗುತ್ತಿವೆ ಎಂಬ ಆರೋಪ ಕೇಳಿ ಬಂದಿದೆ.
ಒಂದು ತಿಂಗಳ ಹಿಂದಷ್ಟೆ ಕೆಲ ಕಾರ್ಖಾನೆಗಳು ಇದೇ ರೀತಿ ವಿಷಕಾರಿ ತ್ಯಾಜ್ಯವನ್ನು ಹಳ್ಳಕ್ಕೆ ಹರಿಸಿದ್ದರು. ಹಳ್ಳದಲ್ಲಿ ವಿಷಕಾರಿ ನೀರು ಸೇರಿದ್ದರಿಂದ ಮೀನುಗಳು ಸಾವನ್ನಪ್ಪಿ ಕೊಳೆತು ದುರ್ವಾಸನೆ ಹಬ್ಬಿತು. ಅಷ್ಟೇ ಅಲ್ಲದೆ ಸುತ್ತಲಿನ ಗ್ರಾಮಗಳ ರೈತರು, ಕೂಲಿ ಕಾರ್ಮಿಕರು ಮೂಗು ಮುಚ್ಚಿಕೊಂಡು ಕೃಷಿ ಚಟುವಟಿಕೆಗಳು ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವಿಷಕಾರಿ ನೀರು ನೂರಾರು ಅಡಿಗಳಷ್ಟು ದೂರು ಹರಿದು ಕಾರಂಜಾ ಜಲಾಶಯ ಕೆನಾಲ್‌ಗಳಿಗೆ ಸೇರುತ್ತಿದೆ ಎನ್ನಲಾಗಿದೆ.
ಕೆಲ ದಿನಗಳ ಹಿಂದಷ್ಟೇ ಲೋಕಾಯುಕ್ತ ಅಧಿಕಾರಿಗಳ ತಂಡ ಕೈಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿ, ಕಾರ್ಖಾನೆ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿತ್ತು. ಯಾವುದಕ್ಕೂ ಜಗ್ಗದ ಕಾರ್ಖಾನೆ ಮಾಲೀಕರು ಮಳೆಗಾಲದಲ್ಲಿ ಮತ್ತೆ ತಮ್ಮ ಕಳ್ಳಾಟ ಶುರು ಮಾಡಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಕಾರ್ಖಾನೆಗಳು ಹೊರಸೂಸುವ ವಿಷಗಾಳಿ, ನೀರಿನಲ್ಲಿನ ರಾಸಾಯನಿಕ ಅಂಶಗಳು ಸುತ್ತಲಿನ ಗ್ರಾಮಗಳ ಜನ–ಜಾನುವಾರುಗಳು ಸಾಯಬೇಕೋ, ಬದುಕಬೇಕೋ ಎನ್ನುವಂತೆ ಆಗಿದೆ ಎಂದು ಕೈಗಾರಿಕಾ ಪ್ರದೇಶ ವ್ಯಾಪ್ತಿಯ ಗ್ರಾಮಗಳ ಜನರು ಆತಂಕ ವ್ಯಕ್ತಪಡಿಸಿದರು.
ಕಾರ್ಖಾನೆಗಳು ಉಗುಳುವ ವಿಷಕಾರಿ ತ್ಯಾಜ್ಯ, ವಿಷಾನಿಲವು ಕೈಗಾರಿಕಾ ಪ್ರದೇಶ ವ್ಯಾಪ್ತಿಯ ಗ್ರಾಮಗಳಾದ ಮೋಳಕೆರಾ, ಗಡವಂತಿ, ಮಾಣಿನಗರ, ಧೂಮನ್‌ಸೂರ ಸೇರಿದಂತೆ ಹುಮನಾಬಾದ್ ಹೊರವಲಯದ ಬಡಾವಣೆಯ ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಚರ್ಮರೋಗ, ಮಲೇರಿಯಾ, ಆನೆಕಾಲು, ಕೂದಲು ಉದುರುವಿಕೆ ಸೇರಿದಂತೆ ನಾನಾ ರೋಗಗಳ ಭೀತಿ ಕಾಡುತ್ತಿದೆ. ಅಲ್ಲದೆ ಕೃಷಿ ಬೆಳೆಗಳ ಮೇಲೆ ಪರಿಣಾಮ ಬೀರುತ್ತಿರುವುದು ಬೆಳಕಿಗೆ ಬಂದಿದೆ.
ಕೈಗಾರಿಕಾ ಪ್ರದೇಶದಲ್ಲಿನ ಕೆಲ ಕಾರ್ಖಾನೆಗಳಿಂದ ವಿಷತ್ಯಾಜ್ಯವನ್ನು ಹಳ್ಳಕ್ಕೆ ಬಿಡುತ್ತಿರುವುದರಿಂದ ಮಾಣಿಕ ನಗರ ಸಂಸ್ಥಾನದ ಪರಿಸರದಲ್ಲಿ ದುರ್ವಾಸನೆ ಹರಡಿದ್ದು, ಇಲ್ಲಿ ಬರುವ ಭಕ್ತಾದಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಈ ಬಗ್ಗೆ ಅನೇಕ ಸಲ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನೆವಾಗುತ್ತಿಲ್ಲ ಎಂದು ಮಾಣಿಕಪ್ರಭು ಸಂಸ್ಥಾನದ ಆನಂದರಾಜ ಪ್ರಭುಗಳು ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಮೂಲಕ ತಮ್ಮ ಮನದಾಳದ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ಈ ಅನೈರ್ಮಲ್ಯ ವಿರುದ್ಧ ʼಗುರುಗಂಗಾ ಉಳಿಸಿʼ ಹೋರಾಟ ನಡೆಸಲು ಎಲ್ಲರೂ ಕೈಜೋಡಿಸಬೇಕೆಂದು ಕರೆ ನೀಡಿದ್ದಾರೆ.

ಮಳೆಗಾಲ ಆರಂಭವಾಗಿರುವ ಈ ಸಂದರ್ಭದಲ್ಲಿ ನಿಯಮ ಉಲಂಘಿಸಿ ಕೆಮಿಕಲ್ ಕಂಪನಿಗಳಿಂದ ವಿಷ ತ್ಯಾಜ್ಯ ಹಳ್ಳಕ್ಕೆ ಹರಿಯುತ್ತಿರುವ ಘಟನೆಗಳು ಸಂಭವಿಸುತ್ತಿದ್ದರೂ, ಕಾರ್ಖಾನೆ ಮಾಲೀಕರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕಾದ ಸಂಬಂಧಿತ ಅಧಿಕಾರಿಗಳು, ಜನಪ್ರತಿನಿಧಿಗಳ ಜಾಣಕುರುಡು ಹಲವು ಅನುಮಾನಕ್ಕೆ ಕಾರಣವಾಗಿದೆ. ಈಗಲಾದರೂ ಜನಪ್ರತಿನಿಧಿಗಳು ಮೌನಮುರಿದು ವಿಷ ತ್ಯಾಜ್ಯ ಉಗುಳುವ ಕಾರ್ಖಾನೆಗಳ ವಿರುದ್ಧ ಕ್ರಮಕ್ಕೆ ಸೂಚಿಸಬೇಕಿದೆ ಎಂಬುದು ಜನಾಭಿಪ್ರಾಯವಾಗಿದೆ.
ʼಗುರುಗಂಗಾ ಉಳಿಸಿ’ ಹೋರಾಟಕ್ಕೆ ಕರೆ
“ಹುಮನಾಬಾದ್ ಕೈಗಾರಿಕೆ ಪ್ರದೇಶದ ಕೆಲ ರಾಸಾಯನಿಕ ಕಾರ್ಖಾನೆಗಳು ಅಕ್ರಮವಾಗಿ ಚರಂಡಿಗಳ ಮೂಲಕ ಹಳ್ಳಕ್ಕೆ ಕೆಮಿಕಲ್ ವೇಸ್ಟೇಜ್ ನೀರು ಬಿಡುತ್ತಿವೆ. ಈ ಬಗ್ಗೆ ಎರಡು ವರ್ಷಗಳ ಹಿಂದೆ ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರಿಗೆ ಲಖಿತ ಮನವಿ ಸಲ್ಲಿಸಿದ ಬಳಿಕ ನಿಲ್ಲಿಸಿದರು. ಈಚೆಗೆ ಮಳೆಯಾದ ವೇಳೆ ಮತ್ತೆ ಕಾರ್ಖಾನೆಗಳು ವಿಷ ತ್ಯಾಜ್ಯ ನೀರು ಹಳ್ಳಕ್ಕೆ ಬಿಡುತ್ತಿದ್ದಾರೆ. ಇದರಿಂದ ಮಾಣಿಕಪ್ರಭು ಸಂಸ್ಥಾನದ ಪರಿಸರ ಸಂಪೂರ್ಣ ದುರ್ವಾಸನೆ ಬೀರುತ್ತಿರುವುದು, ಅಲ್ಲದೆ ಸುತ್ತಲಿನ ಗ್ರಾಮಗಳಿಗೂ ಬದುಕಿಗೂ ಕಂಟಕವಾಗುತ್ತಿದೆ” ಎಂದು ಮಾಣಿಕಪ್ರಭು ಸಂಸ್ಥಾನದ ಆನಂದರಾಜ ಪ್ರಭುಗಳು ʼಈದಿನʼ ಜೊತೆ ಮಾತನಾಡಿ ಬೇಸರ ವ್ಯಕ್ತಪಡಿಸಿದ್ದಾರೆ.
“ಈ ಬಗ್ಗೆ ಆ.1ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. (ಇಂದು) ಆ.3ರಂದು ಸಾರ್ವಜನಿಕರ ಬೆಂಬಲದೊಂದಿಗೆ ಹುಮನಾಬಾದ್ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಗುತ್ತಿದೆ. ಅದಕ್ಕೂ ಮೀರಿ ಕಾರ್ಖಾನೆಗಳು ತ್ಯಾಜ್ಯವನ್ನು ಮತ್ತೆ ಹಳ್ಳಕ್ಕೆ ಹರಿಸಿದರೆ ಸಾರ್ವಜನಿಕರ ಸಹಕಾರದೊಂದಿಗೆ ʼಗುರುಗಂಗಾ ಉಳಿಸಿʼ ಘೋಷದೊಂದಿಗೆ ಕಾರ್ಖಾಗೆಳ ವಿರುದ್ಧ ಹೋರಾಟ ರೂಪಿಸಲಾಗುವುದು” ಎಂದು ಹೇಳಿದರು.
ʼಕೆಮಿಕಲ್ ಕಂಪನಿ ಹಟಾವೊ-ಹುಮನಾಬಾದ್ ಬಚಾವೊʼ ಎಚ್ಚರಿಕೆ
ಯುವ ಹೋರಾಟಗಾರ ಶಶಿಕಾಂತ ಡಾಂಗೆ ʼಈದಿನʼ ಜೊತೆ ಮಾತನಾಡಿ, “ಹುಮನಾಬಾದ್ ಕೈಗಾರಿಕಾ ಪ್ರದೇಶದಲ್ಲಿ 30ಕ್ಕೂ ಅಧಿಕ ಕಾರ್ಖಾನೆಗಳಿವೆ. ಅವುಗಳಲ್ಲಿ ಕೆಲ ರಾಸಾಯನಿಕ ಕಾರ್ಖಾನೆಗಳಿಂದ ವಿಷಪೂರಿತ ತ್ಯಾಜ್ಯ ನೀರು ನಾಲೆಗಳ ಮುಖಾಂತರ ಹಳ್ಳಗಳಿಗೆ ಬಿಡುಗಡೆಯಾಗುತ್ತಿದೆ. ಈ ವಿಷಕಾರಿ ನೀರು ಕುಡಿಯುವ ನೀರಿನ ಬಾವಿ, ಬೋರ್‌ವೆಲ್‌ಗಳಲ್ಲಿ ಮಿಶ್ರಣವಾಗುತ್ತಿದ್ದು, ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ಬಗ್ಗೆ ಅನೇಕ ಸಲ ಉಸ್ತುವಾರಿ ಸಚಿವ, ಸ್ಥಳೀಯ ಶಾಸಕರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ” ಎಂದು ದೂರಿದ್ದಾರೆ.
ಕಾರ್ಖಾನೆ ಮಾಲೀಕರಿಗೆ ಯಾವುದೇ ಕಾನೂನಿನ ಭಯವಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಕಾಟಾಚಾರಕ್ಕೆ ಭೇಟಿ ನೀಡಿ “ನೀ ಅತ್ಹಾಂಗ್ ಮಾಡ್, ನಾ ನಕ್ಕ್ಹಾಂಗ್ ಮಾಡ್ತಾ” ಎಂಬಂತೆ ಎಚ್ಚರಿಕೆ ನೀಡುತ್ತಾರೆ, ಬಳಿಕ ಕಾರ್ಖಾನೆ ಮಾಲೀಕರ ಜೊತೆಗೆ ಶಾಮೀಲಾಗಿ ವಾಸ್ತವಾಂಶದ ವರದಿ ಸರ್ಕಾರಕ್ಕೆ ತಲುಪಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಕಾರ್ಖಾನೆಗಳು ರಾಜಾರೋಷವಾಗಿ ವಿಷಕಾರಿ ತ್ಯಾಜ್ಯ ಹಳ್ಳದಲ್ಲಿ ಹರಿಸುತ್ತಿದ್ದಾರೆ. ಕೂಡಲೇ ವಿಷ ತ್ಯಾಜ್ಯ ಹೊರಹಾಕುವ ಕಾರ್ಖಾನೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ‘ಕೆಮಿಕಲ್ ಕಂಪನಿ ಹಟಾವೊ-ಹುಮನಾಬಾದ್ ಬಚಾವೊ’ ಆಂದೋಲನ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ : ಬೀದರ್ | ಸುಸೂತ್ರವಾಗಿ ನಡೆದ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆ; 663 ಅಭ್ಯರ್ಥಿಗಳು ಗೈರು
ಮಳೆಗಾಲದಲ್ಲಿ ವಿಷಕಾರಿ ತ್ಯಾಜ್ಯ ನೀರನ್ನು ಹಳ್ಳಗಳಿಗೆ ಹರಿಸುವ ಘಟನೆಗಳು ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ ಸಂಬಂಧಿತ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಜಿಲ್ಲಾಡಳಿತ ತಕ್ಷಣ ಸ್ಥಳ ಪರಿಶೀಲನೆ ನಡೆಸಿ ತಪ್ಪಿತಸ್ಥ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪರಿಸರ ಸಂರಕ್ಷಣೆ, ಕುಡಿಯುವ ನೀರಿನ ಮೂಲಗಳ ರಕ್ಷಣೆ ಹಾಗೂ ಸಾರ್ವಜನಿಕರ ಆರೋಗ್ಯ ಕಾಪಾಡಲು ಸರ್ಕಾರ ಶಾಶ್ವತ ಪರಿಹಾರ ಕ್ರಮಗಳನ್ನು ಜಾರಿಗೊಳಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.



