ಸಮಾಜದಲ್ಲಿ ಶಾಂತಿ, ನ್ಯಾಯ, ಸೌಹಾರ್ದತೆ ಮತ್ತು ಭ್ರಾತೃತ್ವದ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ವತಿಯಿಂದ ರಾಜ್ಯಾದ್ಯಂತ 11 ದಿನಗಳ ‘ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್ (ಸ)’ ಸೀರತ್ ಅಭಿಯಾನ ಆಯೋಜಿಸಲಾಗಿದೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಬಿಫ್ಟ್ ಸಭಾಂಗಣದಲ್ಲಿ ಇಂದು (ಆ.25) ನಡೆದ ಪತ್ರಿಕಾಗೋಷ್ಠಿಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕದ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಕುಂಞ ಅವರು ಅಭಿಯಾನದ ಕುರಿತು ಮಾಹಿತಿ ನೀಡಿದರು. ಪ್ರವಾದಿ ಮುಹಮ್ಮದ್ ಅವರ ಜೀವನದ ಸಂದೇಶ ಹಾಗೂ ಮೌಲ್ಯಗಳನ್ನು ಜನರಿಗೆ ಪರಿಚಯಿಸುವುದು, ವಿವಿಧ ಧರ್ಮಗಳು ಮತ್ತು ಸಮುದಾಯಗಳ ನಡುವೆ ಪರಸ್ಪರ ವಿಶ್ವಾಸ, ಸೌಹಾರ್ದತೆ ಹಾಗೂ ಭ್ರಾತೃತ್ವವನ್ನು ಬೆಳೆಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಖ್ಯಾತ ಲೇಖಕ ಯೋಗೇಶ್ ಮಾಸ್ಟರ್ ಮಾತನಾಡಿ, ಸುಮಾರು 1,400 ವರ್ಷಗಳ ಹಿಂದೆ ಅರೇಬಿಯಾದಲ್ಲಿ ಪ್ರವಾದಿ ಮುಹಮ್ಮದ್ ಅವರು ಆರಂಭಿಸಿದ ಪರಿವರ್ತನೆಯು ವ್ಯಕ್ತಿ ಹಾಗೂ ಸಮಾಜದ ಅಂತರಂಗ ಬದಲಾವಣೆಗೆ ಒತ್ತು ನೀಡಿತ್ತು. ಅಜ್ಞಾನ, ಅನ್ಯಾಯ, ಶೋಷಣೆ, ಭಯ ಮತ್ತು ಹಸಿವಿನಿಂದ ಮಾನವ ಸಮಾಜವನ್ನು ಮುಕ್ತಗೊಳಿಸುವ ಮೌಲ್ಯಗಳನ್ನು ಅವರು ಪ್ರತಿಪಾದಿಸಿದ್ದರು. ಇಂದಿನ ಸಮಾಜವೂ ಅಸಮಾನತೆ, ಹಿಂಸೆ, ಶೋಷಣೆ ಮತ್ತು ಸಂಘರ್ಷಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಅವರ ಜೀವನ ಮತ್ತು ಸಂದೇಶ ಪ್ರಸ್ತುತವಾಗಿವೆ ಎಂದು ಹೇಳಿದರು.


ರಾಜ್ಯ ಕಾರ್ಯದರ್ಶಿ ಯೂಸುಫ್ ಕನ್ನಿ ಮಾತನಾಡಿ, ಪ್ರವಾದಿ ಮುಹಮ್ಮದ್ ಅವರ ಸಂದೇಶದ ಪ್ರಮುಖ ಆಯಾಮ ಮಾನವ ವಿಮೋಚನೆಯಾಗಿದೆ. ಮಾನವರ ನಡುವಿನ ದಾಸ್ಯ, ಜನಾಂಗೀಯ ದುರಹಂಕಾರ ಮತ್ತು ಅಸಮಾನತೆಯನ್ನು ತೊಡೆದುಹಾಕಿ ಸಹೋದರತ್ವದ ಸಮಾಜ ನಿರ್ಮಾಣಕ್ಕೆ ಅವರು ಒತ್ತು ನೀಡಿದ್ದರು ಎಂದರು.
ರಾಜ್ಯಾಧ್ಯಕ್ಷ ಡಾ. ಮೊಹಮ್ಮದ್ ಸಾದ್ ಬೆಳಗಾಮಿ ಮಾತನಾಡಿ, ನ್ಯಾಯಯುತ ಆರ್ಥಿಕ ವ್ಯವಸ್ಥೆ, ಪ್ರಾಮಾಣಿಕ ವ್ಯಾಪಾರ, ಬಡವರು ಮತ್ತು ಹಿಂದುಳಿದವರ ಕಾಳಜಿ, ಶೋಷಣೆ ಹಾಗೂ ಭ್ರಷ್ಟಾಚಾರ ವಿರೋಧಿ ಮೌಲ್ಯಗಳನ್ನು ಪ್ರವಾದಿ ಮುಹಮ್ಮದ್ ಪ್ರತಿಪಾದಿಸಿದ್ದರು ಎಂದು ವಿವರಿಸಿದರು.
ಇದನ್ನೂ ಓದಿ: ಪ್ರತಾಪ್ ಸಿಂಹ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ; ಶಾಸಕ ಪ್ರದೀಪ್ ಈಶ್ವರ್‌ಗೆ ಜಾಮೀನು ರಹಿತ ಬಂಧನ ವಾರಂಟ್
ಎರಡು ಕೃತಿಗಳ ಬಿಡುಗಡೆ
ಅಭಿಯಾನದ ಅಂಗವಾಗಿ ಲೇಖಕ ಯೋಗೇಶ್ ಮಾಸ್ಟರ್ ಬರೆದ ‘ಮಾನವ ಮನಸ್ಸಿನ ಕೃಷಿಕ ಮನದೊಡೆಯ ಮುಹಮ್ಮದ್ (ಸ)’ ಹಾಗೂ ಎ.ಎಸ್. ಪುತ್ತಿಗೆ ಅವರ ‘ಸಮಗ್ರ ಕ್ರಾಂತಿಯ ಜ್ಯೋತಿ ಬೆಳಗಿದ ಪೈಗಂಬರ್ ಮುಹಮ್ಮದ್ (ಸ)’ ಕೃತಿಗಳನ್ನು ರಾಜ್ಯಾದ್ಯಂತ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಲಾಯಿತು.
11 ದಿನಗಳ ಅಭಿಯಾನದ ಅವಧಿಯಲ್ಲಿ ಕರ್ನಾಟಕದ ವಿವಿಧೆಡೆ ಸಂವಾದ, ಉಪನ್ಯಾಸ, ವಿಚಾರಗೋಷ್ಠಿ ಹಾಗೂ ಸಾರ್ವಜನಿಕ ಸಭೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ರಾಜ್ಯ ಕಾರ್ಯದರ್ಶಿ ಲಬೀದ್ ಶಾಫಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕದ ರಾಜ್ಯಾಧ್ಯಕ್ಷ ಡಾ. ಮೊಹಮ್ಮದ್ ಸಾದ್ ಬೆಳಗಾಮಿ, ಲೇಖಕ ಯೋಗೇಶ್ ಮಾಸ್ಟರ್, ರಾಜ್ಯ ಕಾರ್ಯದರ್ಶಿಗಳಾದ ಮೊಹಮ್ಮದ್ ಕುಂಞ, ಲಬೀದ್ ಶಾಫಿ ಹಾಗೂ ಯೂಸುಫ್ ಕನ್ನಿ ಉಪಸ್ಥಿತರಿದ್ದರು.




