ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಬೆಂಗಳೂರಿನ 42ನೇ ಎಸಿಜೆಎಂ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರಂಟ್ ಜಾರಿ ಮಾಡಿದೆ.
ಪ್ರಕರಣದ ವಿಚಾರಣೆಗೆ ಪ್ರದೀಪ್ ಈಶ್ವರ್ ಗೈರುಹಾಜರಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಕ್ರಮ ಕೈಗೊಂಡಿದೆ. 2024ರ ಜನವರಿ 1ರಂದು ಪ್ರತಾಪ್ ಸಿಂಹ ವಿರುದ್ಧ ಪ್ರದೀಪ್ ಈಶ್ವರ್ ಅವಹೇಳನಕಾರಿ ಹೇಳಿಕೆ ನೀಡಿದ್ದರು ಎಂದು ಆರೋಪಿಸಲಾಗಿದ್ದು, ಈ ಸಂಬಂಧ ಪ್ರತಾಪ್ ಸಿಂಹ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಪ್ರದೀಪ್ ಈಶ್ವರ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಆದರೆ ಅವರು ನ್ಯಾಯಾಲಯಕ್ಕೆ ಗೈರಾದ ಹಿನ್ನೆಲೆಯಲ್ಲಿ ಇದೀಗ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಲಾಗಿದೆ.
ಪ್ರದೀಪ್ ಈಶ್ವರ್ ಹಾಗೂ ಪ್ರತಾಪ್ ಸಿಂಹ ನಡುವೆ ಈ ಹಿಂದೆ ನಡೆದಿದ್ದ ವಾಕ್ಸಮರವೇ ಪ್ರಕರಣಕ್ಕೆ ಕಾರಣವಾಗಿತ್ತು. ಪ್ರತಾಪ್ ಸಿಂಹ ಅವರು ಪ್ರದೀಪ್ ಈಶ್ವರ್ ಅವರನ್ನು ‘ಮುಳ್ಳುಹಂದಿ ಮುಖದ ಕಾಮಿಡಿ ಪೀಸ್’ ಎಂದು ಟೀಕಿಸಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಪ್ರದೀಪ್ ಈಶ್ವರ್, ಪ್ರತಾಪ್ ಸಿಂಹ ಅವರ ಕುಟುಂಬ ಹಾಗೂ ಹೆಸರಿನ ಕುರಿತು ವ್ಯಂಗ್ಯಭರಿತ ಹೇಳಿಕೆ ನೀಡಿದ್ದರು. ಪ್ರತಾಪ್ ಸಿಂಹ ಅವರ ತಂದೆ-ತಾಯಿ ದೈವಭಕ್ತರಾಗಿದ್ದ ಕಾರಣ ‘ಪ್ರತಾಪ್’ ಎಂದು ಹೆಸರು ಇಟ್ಟಿರಬೇಕು; ಇಲ್ಲದಿದ್ದರೆ ‘ಕೋತಿ’ ಎಂದು ಹೆಸರಿಡುತ್ತಿದ್ದರು ಎಂದು ಹೇಳಿದ್ದರು.
ಇದನ್ನೂ ಓದಿ: ಡಿಸಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಬಿಜೆಪಿ MLC ರವಿಕುಮಾರ್ ವಿರುದ್ಧ ಜಾಮೀನು ರಹಿತ ವಾರಂಟ್
ಈ ಹೇಳಿಕೆಗಳ ಬಳಿಕ ಪ್ರತಾಪ್ ಸಿಂಹ ಅವರು ಪ್ರದೀಪ್ ಈಶ್ವರ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಶಾಸಕ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಇದೀಗ ಬಂಧನ ವಾರಂಟ್ ಜಾರಿಯಾಗಿದೆ. ವಾರಂಟ್ ಹಿನ್ನೆಲೆಯಲ್ಲಿ ಪ್ರದೀಪ್ ಈಶ್ವರ್ ಅವರು ತಕ್ಷಣ ನ್ಯಾಯಾಲಯಕ್ಕೆ ಹಾಜರಾಗಬೇಕು ಅಥವಾ ಮೇಲ್ಮನವಿ ನ್ಯಾಯಾಲಯದ ಮೊರೆ ಹೋಗಿ ವಾರಂಟ್‌ಗೆ ತಡೆಯಾಜ್ಞೆ ಪಡೆಯಬೇಕಾದ ಪರಿಸ್ಥಿತಿ ಎದುರಾಗಿದೆ. ಇಲ್ಲವಾದರೆ ಅವರನ್ನು ಬಂಧಿಸುವ ಸಾಧ್ಯತೆ ಇದೆ.




