ಮೆಡಿಕಲ್ ಸೀಟ್ ಕೊಡಿಸುವುದಾಗಿ ನಂಬಿಸಿ 45 ಲಕ್ಷ ರೂಪಾಯಿ ಪಡೆದು ವಂಚಿಸಿದ ಪ್ರಕರಣದಲ್ಲಿ, ದಿವಂಗತ ಮಾಜಿ ಸಚಿವ ಆರ್.ಎಲ್. ಜಾಲಪ್ಪ ಅವರ ಸೊಸೆ ನಾಗವೇಣಿ ಅವರನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ದೋಷಿ ಎಂದು ಘೋಷಿಸಿ 5 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.
ಪ್ರಕಾಶ್ ಕುಮಾರ್ ಎಂಬುವರಿಗೆ ಮೆಡಿಕಲ್ ಸೀಟ್ ಕೊಡಿಸುವುದಾಗಿ ಭರವಸೆ ನೀಡಿದ್ದ ನಾಗವೇಣಿ ಮತ್ತು ಆಕೆಯ ಪತಿ ಜೆ. ನರಸಿಂಹಸ್ವಾಮಿ (ಆರ್.ಎಲ್. ಜಾಲಪ್ಪ ಅವರ ಪುತ್ರ), ಅವರಿಂದ 45 ಲಕ್ಷ ರೂಪಾಯಿಗಳನ್ನು ಪಡೆದಿದ್ದರು. ಸೀಟ್ ಕೊಡಿಸದೆ ಹಣವನ್ನೂ ಮರಳಿಸದೆ ವಂಚಿಸಿದ ಆರೋಪದ ಮೇಲೆ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣದ ಮುಖ್ಯ ಆರೋಪಿಯಾಗಿದ್ದ ಜೆ. ನರಸಿಂಹಸ್ವಾಮಿ ವಿಚಾರಣೆ ನಡೆಯುತ್ತಿರುವಾಗಲೇ ಮೃತಪಟ್ಟಿದ್ದರಿಂದ, ಅವರ ಮೇಲಿನ ಪ್ರಕರಣವನ್ನು ಕೈಬಿಡಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಬೆಂಗಳೂರಿನ 42ನೇ ಎಸಿಎಂಎಂ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಸಂದೀಪ್ ಪಾಟೀಲ್ ಅವರು ತೀರ್ಪು ನೀಡಿದ್ದಾರೆ:
ಸೆಕ್ಷನ್ 120ಬಿ ಅಡಿಯಲ್ಲಿ 3 ವರ್ಷಗಳ ಜೈಲು ಶಿಕ್ಷೆ ಮತ್ತು 10,000 ರೂ. ದಂಡ ಹಾಗೂ ಸೆಕ್ಷನ್ 420 ಅಡಿಯಲ್ಲಿ 5 ವರ್ಷಗಳ ಜೈಲು ಶಿಕ್ಷೆ ಮತ್ತು 10,000 ರೂ. ದಂಡ. ಈ ಶಿಕ್ಷೆಗಳು ಏಕಕಾಲದಲ್ಲಿ ಜಾರಿಯಾಗಲಿದ್ದು, ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.
ಇದನ್ನೂ ಓದಿ: TMC ಬ್ಯಾಂಕ್ ಖಾತೆ ಜಪ್ತಿ; ದೇವಾಲಯದ ನಿಧಿಗೆ ಯಾವಾಗ ಮುಟ್ಟುಗೋಲು?- ಡೆರೆಕ್ ಓಬ್ರಿಯನ್ ಪ್ರಶ್ನೆ
ಕಾಂಗ್ರೆಸ್‌ನ ಹಿರಿಯ ನಾಯಕರಾಗಿದ್ದ ದಿವಂಗತ ಆರ್.ಎಲ್. ಜಾಲಪ್ಪ ಅವರು ನಾಲ್ಕು ಬಾರಿ ಲೋಕಸಭಾ ಸದಸ್ಯರಾಗಿ ಮತ್ತು ಕೇಂದ್ರ ಜವಳಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅವರು 2021ರಲ್ಲಿ ತಮ್ಮ 96ನೇ ವಯಸ್ಸಿನಲ್ಲಿ ನಿಧನರಾಗಿದ್ದರು.




