ಮೈಸೂರಿನ ಟಿ.ನರಸೀಪುರದಲ್ಲಿ ಗಣೇಶ ವಿಸರ್ಜನೆ ಶೋಭಾಯಾತ್ರೆ ವೇಳೆ ದಲಿತ ಸಮುದಾಯದ ನಾಯಕರನ್ನು ಅವಹೇಳನ ಮಾಡಿದ್ದಾರೆ ಎಂಬ ಆರೋಪ ಹಾಗೂ ಪ್ರಚೋದನಕಾರಿ ಭಾಷಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರಿಗೆ ಮಧ್ಯಂತರ ರಕ್ಷಣೆ ನೀಡಲು ಹೈಕೋರ್ಟ್ ನಿರಾಕರಿಸಿದೆ.
ಸೆಪ್ಟೆಂಬರ್ 18ರಂದು ಟಿ.ನರಸೀಪುರದಲ್ಲಿ ನಡೆದ ಗಣೇಶ ವಿಸರ್ಜನೆ ಶೋಭಾಯಾತ್ರೆಗೆ ಸಂಬಂಧಿಸಿದಂತೆ ಪ್ರತಾಪ್ ಸಿಂಹ ವಿರುದ್ಧ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ FIR ದಾಖಲಾಗಿದ್ದವು. ಒಂದು ಪ್ರಕರಣವನ್ನು ಎಸ್‌ಸಿ/ಎಸ್‌ಟಿ ದೌರ್ಜನ್ಯ ನಿಷೇಧ ಕಾಯ್ದೆಯಡಿ ಹಾಗೂ ಮತ್ತೊಂದು ಪ್ರಕರಣವನ್ನು ಪ್ರಚೋದನಕಾರಿ ಭಾಷಣದ ಆರೋಪದಡಿ ದಾಖಲಿಸಲಾಗಿತ್ತು. ಈ ಎರಡೂ ಎಫ್‌ಐಆರ್‌ಗಳನ್ನು ರದ್ದುಪಡಿಸುವಂತೆ ಕೋರಿ ಪ್ರತಾಪ್ ಸಿಂಹ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಅನಂತ್ ರಾಮನಾಥ್ ಹೆಗಡೆ ಅವರಿದ್ದ ಏಕಸದಸ್ಯ ಪೀಠದಲ್ಲಿ ಅರ್ಜಿಗಳ ವಿಚಾರಣೆ ನಡೆಯಿತು.
ಪ್ರತಾಪ್ ಸಿಂಹ ಪರ ಹಿರಿಯ ವಕೀಲ ವೆಂಕಟೇಶ್ ದಳವಾಯಿ ವಾದ ಮಂಡಿಸಿ, ಒಂದೇ ಘಟನೆಗೆ ಸಂಬಂಧಿಸಿದಂತೆ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಪ್ರಕರಣ ದಾಖಲಾದ ದಿನಾಂಕ ಮಾತ್ರ ವಿಭಿನ್ನವಾಗಿದೆ ಎಂದು ತಿಳಿಸಿದರು. ಗಣೇಶ ವಿಸರ್ಜನೆ ಮೆರವಣಿಗೆ ಮಸೀದಿ ಮುಂದೆ ಸಾಗಬಾರದು ಎಂಬ ವಿಚಾರಕ್ಕೆ ಸಂಬಂಧಿಸಿದ ಘಟನೆ ಇದಾಗಿದೆ. ಪ್ರಕರಣದಲ್ಲಿ ದಾಖಲಿಸಿರುವ ಸೆಕ್ಷನ್‌ಗಳಿಗೆ ಐದು ವರ್ಷಕ್ಕಿಂತ ಕಡಿಮೆ ಶಿಕ್ಷೆಯ ಅವಕಾಶವಿದ್ದು, ಹೀಗಾಗಿ ಮೊದಲು ತನಿಖೆ ನಡೆಸಿ ಬಳಿಕ ಎಫ್‌ಐಆರ್ ದಾಖಲಿಸಬೇಕಿತ್ತು ಎಂದು ವಾದಿಸಿದರು.
ಇದಕ್ಕೆ ಸರ್ಕಾರದ ಪರ ವಕೀಲ ಜಗದೀಶ್ ಪ್ರತಾಪ್ ಆಕ್ಷೇಪ ವ್ಯಕ್ತಪಡಿಸಿದರು. ಪ್ರತಾಪ್ ಸಿಂಹ ಅವರು ತಮ್ಮ ಭಾಷಣದಲ್ಲಿ ಒಂದು ಪದವನ್ನು ಉಲ್ಲೇಖಿಸಿ ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು. ಒಂದು ಪಕ್ಷದ ರಾಜಕೀಯ ಮುಖಂಡರು ಪ್ರತಿಭಟನೆ ನಡೆಸಿದ್ದರು. ನ್ಯಾಯಾಲಯಗಳು ಡಿಜೆ ಬಳಸದಂತೆ ಸೂಚಿಸುತ್ತಿರುವ ಹಿನ್ನೆಲೆಯಲ್ಲಿ, ಪೊಲೀಸರು ಡಿಜೆ ಬದಲು ಡೊಳ್ಳು ಕುಣಿತ ನಡೆಸುವಂತೆ ಸೂಚಿಸಿದ್ದರು. ಇಂತಹ ಸಂದರ್ಭದಲ್ಲಿ ಪೊಲೀಸರ ಸೂಚನೆ ಪಾಲಿಸುವಂತೆ ಹೇಳುವುದು ಸಮಸ್ಯೆಯೇ ಎಂದು ಪ್ರಶ್ನಿಸಿದರು.
ಕಳೆದ ಬಾರಿ ಮಂಡ್ಯದಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ವಿವಾದ ಉಂಟಾಗಿದ್ದ ಹಿನ್ನೆಲೆಯಲ್ಲಿ, ಅದೇ ರೀತಿಯ ಪರಿಸ್ಥಿತಿ ಮರುಕಳಿಸದಂತೆ ಪೊಲೀಸ್ ಅಧಿಕಾರಿ ಧನಂಜಯ್ ಎಚ್ಚರಿಕೆ ನೀಡಿದ್ದರು ಎಂದು ಸರ್ಕಾರದ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಮಂಗಳವಾರದವರೆಗೆ ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಸದಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತು. ಆದರೆ ಪ್ರತಾಪ್ ಸಿಂಹ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಮಧ್ಯಂತರ ರಕ್ಷಣೆ ನೀಡಲು ನ್ಯಾಯಪೀಠ ನಿರಾಕರಿಸಿತು. ಪ್ರಕರಣದ ಮುಂದಿನ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಲಾಯಿತು.
ಇದನ್ನೂ ಓದಿ: ಟಿ ನರಸೀಪುರದಲ್ಲಿ ಪ್ರಚೋದನಕಾರಿ ಭಾಷಣ; ಪ್ರತಾಪ್ ಸಿಂಹ ವಿರುದ್ಧ FIR ದಾಖಲು
ಇದೇ ವೇಳೆ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾಗಿರುವ ಪ್ರಕರಣದ ವಿಚಾರಣೆಯೂ ನಡೆಯಿತು. ಈ ಪ್ರಕರಣದಲ್ಲಿಯೂ ಪ್ರತಾಪ್ ಸಿಂಹ ಪರ ವಕೀಲ ವೆಂಕಟೇಶ್ ಮಧ್ಯಂತರ ತಡೆ ನೀಡುವಂತೆ ಮನವಿ ಮಾಡಿದರು.
ಆದರೆ ನ್ಯಾಯಪೀಠ, ಈ ಸಂಬಂಧ ಸುಪ್ರೀಂ ಕೋರ್ಟ್‌ನ ಆದೇಶವಿರುವುದರಿಂದ ಸದ್ಯ ಯಾವುದೇ ಮಧ್ಯಂತರ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿ, ಪ್ರಕರಣದ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು.




