ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಅವರ ಹೆಸರನ್ನು ಶಾಶ್ವತಗೊಳಿಸುವ ನಿಟ್ಟಿನಲ್ಲಿ ಕಾರವಾರದ ವೈದ್ಯಕೀಯ ಕಾಲೇಜು ಹಾಗೂ ಬೆಂಗಳೂರಿನ ಶಿವರಾಮ ಕಾರಂತ ಬಡಾವಣೆಯ ಪ್ರಮುಖ ರಸ್ತೆಯೊಂದಕ್ಕೆ ಅವರ ಹೆಸರನ್ನು ನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಕಟಿಸಿದ್ದಾರೆ.
ಶನಿವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಆಯೋಜಿಸಲಾಗಿದ್ದ ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಅವರ ಜನ್ಮಶತಮಾನೋತ್ಸವ ಸಮಾರಂಭವನ್ನು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರೊಂದಿಗೆ ಉದ್ಘಾಟಿಸಿ ಅವರು ಮಾತನಾಡಿದರು. “ಗ್ರಾಮೀಣ ಆಡಳಿತಕ್ಕೆ ಹೆಗಡೆಯವರು ನೀಡಿದ ಅಪಾರ ಕೊಡುಗೆಯನ್ನು ಸ್ಮರಿಸುವ ಸಲುವಾಗಿ, ಪ್ರತಿ ವರ್ಷ ಅವರ ಜನ್ಮದಿನದಂದು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಪಂಚಾಯಿತಿಗೆ ‘ರಾಮಕೃಷ್ಣ ಹೆಗಡೆ ಶ್ರೇಷ್ಠ ಪಂಚಾಯಿತಿ ಪ್ರಶಸ್ತಿ’ ಪ್ರದಾನ ಮಾಡುವ ಕಾರ್ಯಕ್ರಮ ರೂಪಿಸುವಂತೆ ಆರ್ಡಿಪಿಆರ್ ಸಚಿವರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗಿದೆ. ಈ ಮೂಲಕ ಅವರ ಪಂಚಾಯತ್ ರಾಜ್ ಪರಿಕಲ್ಪನೆಯನ್ನು ಮುಂದಿನ ಪೀಳಿಗೆಗೆ ತಲುಪಿಸಲಾಗುವುದು,” ಎಂದು ತಿಳಿಸಿದರು.
“ರಾಮಕೃಷ್ಣ ಹೆಗಡೆ ಅವರು ಕೇವಲ ಅಧಿಕಾರ ನಡೆಸಿದ ನಾಯಕರಾಗಿರಲಿಲ್ಲ; ಪಂಚಾಯಿತಿಯಿಂದ ಸಂಸತ್ತಿನವರೆಗೆ ಹೊಸ ನಾಯಕತ್ವವನ್ನು ಹುಟ್ಟುಹಾಕಿದ ಧೀಮಂತ. ಕೇವಲ ಹಿಂಬಾಲಕರನ್ನು ಸೃಷ್ಟಿಸುವುದು ಅವರ ಉದ್ದೇಶವಾಗಿರಲಿಲ್ಲ, ಬದಲಾಗಿ ನೈಜ ನಾಯಕರನ್ನು ಬೆಳೆಸುವುದೇ ಅವರ ಮೂಲತತ್ವವಾಗಿತ್ತು. ಅಧಿಕಾರವನ್ನು ಶಕ್ತಿಯ ಸಂಕೇತವಾಗಿ ನೋಡದೆ, ಜನಸೇವೆಗೆ ದೊರೆತ ಅವಕಾಶವಾಗಿ ನೋಡಬೇಕು ಎಂಬ ಸಂದೇಶ ಸಾರಿದ ಅವರ ಬದುಕು ಇಂದಿನ ರಾಜಕಾರಣಿಗಳಿಗೆ ಒಂದು ಡಿಕ್ಷನರಿಯಿದ್ದಂತೆ,” ಎಂದು ಬಣ್ಣಿಸಿದರು.
“ಕರ್ನಾಟಕದಲ್ಲಿ ಹೆಗಡೆ ಅವರು ಜಾರಿಗೆ ತಂದ ಪಂಚಾಯತ್ ರಾಜ್ ಪ್ರಯೋಗಗಳು ಇಡೀ ದೇಶಕ್ಕೆ ಮಾದರಿಯಾಗಿದ್ದವು. ನಂತರ ರಾಜೀವ್ ಗಾಂಧಿ ಸರ್ಕಾರದ ಅವಧಿಯಲ್ಲಿ ಜಾರಿಯಾದ 73 ಮತ್ತು 74ನೇ ಸಂವಿಧಾನ ತಿದ್ದುಪಡಿಗಳಿಗೆ ಹೆಗಡೆ ಅವರ ಈ ಚಿಂತನೆಗಳೇ ಪ್ರೇರಣೆಯಾದವು. ಜಾತಿ ಆಧಾರಿತ ರಾಜಕಾರಣಕ್ಕೆ ಸೀಮಿತವಾಗದೆ ಮೌಲ್ಯಾಧಾರಿತ ಹಾಗೂ ಸಾಮಾಜಿಕ ನ್ಯಾಯದ ರಾಜಕಾರಣ ಮಾಡಿದ್ದ ಅವರನ್ನು ಇಡೀ ರಾಜ್ಯದ ಜನತೆ ಒಪ್ಪಿಕೊಂಡಿದ್ದರು,” ಎಂದು ಸ್ಮರಿಸಿದರು.
“ರಾಜ್ಯದಲ್ಲಿ ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣದ ವಿಸ್ತರಣೆಗೆ ಹೆಗಡೆಯವರ ನೀತಿಗಳು ಭದ್ರ ಬುನಾದಿ ಹಾಕಿದವು. ಅವರ ಕಾಲದ ನೀತಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೆ ದಾರಿ ಮಾಡಿಕೊಟ್ಟ ಪರಿಣಾಮ, ಇಂದು ಕರ್ನಾಟಕದಲ್ಲಿ ವರ್ಷಕ್ಕೆ 13,940 ವೈದ್ಯರು ಹಾಗೂ 1.25 ಲಕ್ಷಕ್ಕೂ ಹೆಚ್ಚು ಎಂಜಿನಿಯರ್ಗಳು ರೂಪುಗೊಳ್ಳುತ್ತಿದ್ದಾರೆ. ಶಿಕ್ಷಣ ಮತ್ತು ಮಾನವ ಸಂಪನ್ಮೂಲ ಇಂದು ರಾಜ್ಯದ ಪ್ರಮುಖ ಆಸ್ತಿಯಾಗಿದೆ,” ಎಂದರು.
ಇದೇ ವೇಳೆ ಬಜೆಟ್ ಗಾತ್ರವನ್ನು ಹೋಲಿಸಿದ ಅವರು, “1982–87ರ ಅವಧಿಯಲ್ಲಿ ರಾಜ್ಯದ ಬಜೆಟ್ ಗಾತ್ರ ಕೇವಲ ₹3,687 ಕೋಟಿ ಇತ್ತು. ಆದರೆ, ಸಿದ್ದರಾಮಯ್ಯ ಸರ್ಕಾರದಲ್ಲಿ ಅದು ಅಂದಾಜು ₹4.50 ಲಕ್ಷ ಕೋಟಿಗೆ ಏರಿಕೆಯಾಗಿದೆ. ಅಂದಿನ ಸಣ್ಣ ಯೋಜನೆಗಳೇ ಇಂದು ಸಾವಿರಾರು ಕೋಟಿ ರೂಪಾಯಿಗಳ ಬೃಹತ್ ಯೋಜನೆಗಳಾಗಿ ರೂಪುಗೊಳ್ಳುತ್ತಿವೆ,” ಎಂದು ವಿವರಿಸಿದರು.
“ಅವರಿಂದ ರಾಜಕೀಯದ ಗರಡಿಯಲ್ಲಿ ಪಳಗಿದ ನಾಯಕರು ಇಂದು ವಿವಿಧ ರಾಜಕೀಯ ಪಕ್ಷಗಳಲ್ಲಿದ್ದಾರೆ. ಸಿದ್ದರಾಮಯ್ಯ, ಆರ್.ವಿ. ದೇಶಪಾಂಡೆ, ಬಸವರಾಜ ರಾಯರೆಡ್ಡಿ, ಬಿ.ಎಲ್. ಶಂಕರ್ ಸೇರಿದಂತೆ ಅನೇಕರು ಹೆಗಡೆ ಅವರ ರಾಜಕೀಯ ಶಾಲೆಯಿಂದಲೇ ಬೆಳೆದು ಬಂದವರು. ರಾಮಕೃಷ್ಣ ಹೆಗಡೆ ಅವರಿಗೆ ದೇಶದ ಪ್ರಧಾನಿಯಾಗುವ ಯೋಗ್ಯತೆ ಹಾಗೂ ಅವಕಾಶ ಎರಡೂ ಇತ್ತು, ಆದರೆ ಕೆಲವು ಕಾರಣಗಳಿಂದ ಅದು ಕೈಗೂಡಲಿಲ್ಲ,” ಎಂದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಮಾತನ್ನು ಉಲ್ಲೇಖಿಸಿದ ಮುಖ್ಯಮಂತ್ರಿಗಳು, “ಹೆಗಡೆ ಅವರಲ್ಲಿ ರಾಮನ ಆದರ್ಶ ಹಾಗೂ ಕೃಷ್ಣನ ರಾಜತಂತ್ರ ಎರಡೂ ಮೇಳೈಸಿದ್ದವು. ಸ್ವಾಮಿ ವಿವೇಕಾನಂದರು ಹೇಳಿದಂತೆ ಅಧಿಕಾರದಲ್ಲಿದ್ದಾಗಲೂ, ಗೆದ್ದಾಗಲೂ ದೊಡ್ಡ ಮನಸ್ಸು ಇರಬೇಕು ಎಂಬುದಕ್ಕೆ ಅವರು ಸಾಕ್ಷಿಯಾಗಿದ್ದರು,” ಎಂದರು.
ತಮ್ಮ ಆರಂಭಿಕ ರಾಜಕೀಯ ದಿನಗಳನ್ನು ಮೆಲುಕು ಹಾಕಿದ ಅವರು, “ಕನಕಪುರದಲ್ಲಿ ಹೆಗಡೆ ಹಾಗೂ ಪಿ.ಜಿ.ಆರ್. ಸಿಂಧ್ಯಾ ಅವರ ಪ್ರಭಾವವಿದ್ದ ಕಾಲದಲ್ಲೇ ನಾನು ರಾಜಕೀಯ ಪ್ರವೇಶಿಸಿದೆ. ಒಂದು ಚುನಾವಣೆಯಲ್ಲಿ ನಾನು ಸೋತಿದ್ದೆ, ಇಲ್ಲದಿದ್ದರೆ ಇಂದು 9ನೇ ಬಾರಿ ಶಾಸಕನಾಗಿರುತ್ತಿದ್ದೆ. ನಮ್ಮ ಸರ್ಕಾರ ಮುಂದೆಯೂ ಹೆಗಡೆಯವರ ಆದರ್ಶ, ಆಚಾರ-ವಿಚಾರ, ಮೌಲ್ಯಾಧಾರಿತ ರಾಜಕಾರಣ ಹಾಗೂ ಅಭಿವೃದ್ಧಿ ಚಿಂತನೆಗಳ ಹಾದಿಯಲ್ಲೇ ಹೆಜ್ಜೆ ಹಾಕಲಿದೆ,” ಎಂದು ಭರವಸೆ ನೀಡಿದರು.




