ಬೀದರ್ ನಗರದ ಮಹಾಪುರುಷರ ವೃತ್ತಗಳ ಸಮೀಪದಲ್ಲಿರುವ ವೈನ್ಶಾಪ್ಗಳು ಹಾಗೂ ಬಾರ್ ಆ್ಯಂಡ್ ರೆಸ್ಟೋರೆಂಟ್ಗಳನ್ನು ಸ್ಥಳಾಂತರಿಸಬೇಕು ಮತ್ತು ಜಿಲ್ಲಾದ್ಯಂತ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ ವಿವಿಧ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ಅಂಬೇಡ್ಕರ್ ಯುವ ಸೇನೆ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಅಂಬೇಡ್ಕರ್ ಯುವ ಸೇನೆಯ ರಾಜ್ಯಾಧ್ಯಕ್ಷ ರಾಜಕುಮಾರ ಗೂನಳ್ಳಿ ನೇತೃತ್ವದಲ್ಲಿ ನಗರದ ಅಂಬೇಡ್ಕರ್ ವೃತ್ತದಿಂದ ಆರಂಭವಾದ ಪ್ರತಿಭಟನಾ ರ್ಯಾಲಿಯು ಅಬಕಾರಿ ಇಲಾಖೆ ಕಚೇರಿವರೆಗೆ ಸಾಗಿತು. ಬಳಿಕ ಪ್ರತಿಭಟನಾಕಾರರು ಅಬಕಾರಿ ಉಪ ಆಯುಕ್ತರಿಗೆ ಮನವಿ ಸಲ್ಲಿಸಿ, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿದರು.
“ಬೀದರ್ ನಗರ ಸೇರಿದಂತೆ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಮಹಾಪುರುಷರ ವೃತ್ತಗಳು, ಸರ್ಕಾರಿ ಶಾಲಾ-ಕಾಲೇಜುಗಳು ಹಾಗೂ ದೇವಸ್ಥಾನಗಳ ಸಮೀಪ ಮದ್ಯ ಮಾರಾಟ ನಡೆಯುತ್ತಿದೆ. ಪರವಾನಗಿ ಪಡೆಯದೆ ಕಿರಾಣಿ ಅಂಗಡಿಗಳು, ಪಾನ್ಶಾಪ್ಗಳು, ಹೋಟೆಲ್ಗಳು ಹಾಗೂ ಧಾಬಾಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ” ಎಂದು ಪ್ರತಿಭಟನಾಕಾರರು ಆರೋಪಿಸಿದರು.

“ಸರ್ಕಾರದಿಂದ ಪರವಾನಗಿ ಪಡೆದ ಎಂಎಸ್ಐಎಲ್ ಮದ್ಯದಂಗಡಿಗಳಲ್ಲಿ ನಿಗದಿತ ಗರಿಷ್ಠ ಚಿಲ್ಲರೆ ಮಾರಾಟ ದರಕ್ಕಿಂತ (ಎಂಆರ್ಪಿ) ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ. ಕೆಲವು ವೈನ್ಶಾಪ್ಗಳ ಪಕ್ಕದಲ್ಲೇ ಪ್ರತ್ಯೇಕ ಕೊಠಡಿ ಅಥವಾ ಶೆಡ್ಗಳನ್ನು ನಿರ್ಮಿಸಿ, ಗ್ರಾಹಕರಿಗೆ ಕುಳಿತು ಮದ್ಯ ಸೇವಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಇಂತಹ ಚಟುವಟಿಕೆಗಳ ವಿರುದ್ಧ ಅಬಕಾರಿ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಕ್ರಮ ಮದ್ಯ ಮಾರಾಟ ತಡೆಯುವಲ್ಲಿ ಕರ್ತವ್ಯ ನಿರ್ಲಕ್ಷ್ಯ ತೋರುತ್ತಿರುವ ಅಬಕಾರಿ ಇಲಾಖೆಯ ಡಿವೈಎಸ್ಪಿ ಹಾಗೂ ರೇಂಜ್ ಇನ್ಸ್ಪೆಕ್ಟರ್ಗಳ ವಿರುದ್ಧ ತನಿಖೆ ನಡೆಸಬೇಕು. ತಪ್ಪಿತಸ್ಥರೆಂದು ಕಂಡುಬಂದಲ್ಲಿ ಅವರನ್ನು ಅಮಾನತುಗೊಳಿಸಲು ಅಬಕಾರಿ ಆಯುಕ್ತರಿಗೆ ಶಿಫಾರಸು ಮಾಡಬೇಕು. ಒಂದೇ ಸ್ಥಳದಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅಬಕಾರಿ ಸಿಬ್ಬಂದಿಯನ್ನು ಬೇರೆ ಜಿಲ್ಲೆಗಳಿಗೆ ವರ್ಗಾಯಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಮಹಾಪುರುಷರ ವೃತ್ತಗಳ ಬಳಿಯ ಮದ್ಯದಂಗಡಿಗಳನ್ನು ಸ್ಥಳಾಂತರಿಸುವುದು, ಪರವಾನಗಿ ಇಲ್ಲದೆ ನಡೆಯುತ್ತಿರುವ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ತಡೆಗಟ್ಟುವುದು, ಅಕ್ರಮ ಮಾರಾಟಗಾರರ ವಿರುದ್ಧ ಕಾನೂನು ಕ್ರಮ ಜರುಗಿಸುವುದು, ಎಂಆರ್ಪಿಗಿಂತ ಹೆಚ್ಚಿನ ದರ ವಸೂಲಿ ಮಾಡುವ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಹಾಗೂ ಅನುಮತಿ ಇಲ್ಲದ ಧಾಬಾಗಳನ್ನು ಬಂದ್ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಸಲ್ಲಿಸಿರುವ ಮನವಿಗೆ ಒಂದು ವಾರದೊಳಗೆ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಅಬಕಾರಿ ಇಲಾಖೆ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಸಂಘಟನೆಗಳ ಮುಖಂಡರು ಎಚ್ಚರಿಕೆ ನೀಡಿದರು.
ದಲಿತ ಸೇನೆಯ ರಾಜ್ಯ ಉಪಾಧ್ಯಕ್ಷ ಚಂದ್ರಕಾಂತ ಆರ್. ನಿರಾಟೆ ಸೇರಿದಂತೆ ಪ್ರಮುಖರಾದ ರಾಘವೇಂದ್ರ ಮೀನಕೇರಾ, ಸಂಜಯ ಭೋಸ್ಲೆ, ನಿತೀಶ ಉಪ್ಪೆ, ನರಸಿಂಗ್ ಸಾಮ್ರಾಟ್, ರಾಜಕುಮಾರ ಭಾವಿಕಟ್ಟಿ, ಜ್ಞಾನಿ ಕಟ್ಟಿಮನಿ, ಸ್ವರೂಪಕುಮಾರ ಶಿಂಧೆ, ಅನೀಲ ದಂಡೆ, ಪವನ ಮಿಠಾರೆ, ಅಂಬೇಡ್ಕರ್ ಬೌದ್ಧೆ, ಅಂಬೇಡ್ಕರ್ ಸಾಗರ, ಜಗನ್ನಾಥ ಹೊನ್ನಾ, ಸತೀಶ ಶಿಂಧೆ, ದಿಲೀಪ ಹಸನ್ಮುಖಿ, ರಮೇಶ ಶಿಂಧೆ, ಘಾಳೆಪ್ಪಾ ಭೋಸ್ಲೆ, ರಾಜಕುಮಾರ ಕಾಂಬಳೆ, ರವಿ ಭುಸಂಡೆ, ಲಕ್ಷ್ಮಣ ಚಕ್ರವರ್ತಿ, ವಿಶಾಲ ಹೊನ್ನಾ, ಗೌತಮ ಭೋಸ್ಲೆ, ಸಂತೋಷ ಬೌದ್ಧೆ, ನ್ಯೂಟನ್ ಕರಕರೆ, ಮಿಲಿಂದ ಜಿ., ಅಡೆಪ್ಪಾ ಗೌತಮಕರ್, ಶಿವಕುಮಾರ ಮುತ್ತಂಗೆ, ರಾಜಕುಮಾರ ಕಾಳೆಕರ್ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಇದನ್ನೂ ಓದಿ : ಬಸವಕಲ್ಯಾಣ | ಆವಿಷ್ಕಾರ, ಸಂಶೋಧನೆಗಳಿಂದಲೇ ಮಾನವ ಪ್ರಗತಿ ಸಾಧ್ಯ: ಡಾ.ರಾಮನಗೌಡ




