ಸರ್ವಜನರ ಹಿತ, ಎಲ್ಲ ಕೆಲಸಗಳಿಗೂ ಸಮಾನ ಗೌರವ ಮತ್ತು ಶಾರೀರಿಕ ಶ್ರಮದ ಘನತೆ-ಗಾಂಧೀಜಿ ಪ್ರತಿಪಾದಿಸಿದ ಈ ಮೂರು ಮೌಲ್ಯಗಳು ಇಂದಿನ ಅಸಮಾನತೆಯ ಸಮಾಜದಲ್ಲಿ ಹೆಚ್ಚು ಪ್ರಸ್ತುತವಾಗಿವೆ. ಆದರೆ ಅವುಗಳನ್ನು ವೈಯಕ್ತಿಕ ಬದುಕು, ಸಾಮಾಜಿಕ ವ್ಯವಸ್ಥೆ ಮತ್ತು ಆರ್ಥಿಕ ನೀತಿಗಳಲ್ಲಿ ಅಳವಡಿಸಿಕೊಳ್ಳುವುದು ಸವಾಲಿನ ಸಂಗತಿಯಾಗಿದೆ.
ಮಹಾತ್ಮ ಗಾಂಧೀಜಿಯವರ ಬದುಕು ಮತ್ತು ಚಿಂತನೆಗಳ ಮೇಲೆ ಪ್ರಭಾವ ಬೀರಿದ ಅನೇಕ ಸಂಗತಿಗಳಲ್ಲಿ ಬ್ರಿಟಿಷ್ ಚಿಂತಕ ಜಾನ್ ರಸ್ಕಿನ್ ಅವರ ‘ಅನ್ ಟು ದಿ ಲಾಸ್ಟ್’ (Unto This Last) ಕೃತಿಗೆ ಮಹತ್ವದ ಸ್ಥಾನವಿದೆ. ಈ ಕೃತಿಯನ್ನು ಓದಿದ ಬಳಿಕ ಗಾಂಧೀಜಿಯವರ ಜೀವನದ ದೃಷ್ಟಿಕೋನದಲ್ಲಿ ಮಹತ್ವದ ಬದಲಾವಣೆಯಾಯಿತು. ರಸ್ಕಿನ್ ಅವರ ಚಿಂತನೆಗಳಿಂದ ಪ್ರಭಾವಿತರಾದ ಗಾಂಧೀಜಿ, ಅದರ ಸಾರವನ್ನು ಮೂರು ಪ್ರಮುಖ ತತ್ವಗಳ ರೂಪದಲ್ಲಿ ಗ್ರಹಿಸಿದ್ದರು. ಅವುಗಳೆಂದರೆ, ಎಲ್ಲರ ಹಿತದಲ್ಲಿಯೇ ವ್ಯಕ್ತಿಯ ಹಿತ ಅಡಗಿದೆ; ವಕೀಲನ ಕೆಲಸವಾಗಲಿ, ನಾಪಿತನ ಕೆಲಸವಾಗಲಿ ಎರಡಕ್ಕೂ ಸಮಾನ ಮೌಲ್ಯವಿದೆ; ಶಾರೀರಿಕ ಶ್ರಮದ ಬದುಕು ಶ್ರೇಷ್ಠವಾದದ್ದು.
ಗಾಂಧೀಜಿಯವರ ಮೊಮ್ಮಗಳು ಸುಮಿತ್ರಾ ಕುಲಕರ್ಣಿ ಅವರು ‘ಮಹಾತ್ಮ ಗಾಂಧೀ-ನನ್ನ ತಾತ’ ಕೃತಿಯಲ್ಲಿ ಈ ವಿಚಾರಗಳನ್ನು ಉಲ್ಲೇಖಿಸಿದ್ದಾರೆ. ಈ ಮೂರು ತತ್ವಗಳು ಕೇವಲ ನೈತಿಕ ಬೋಧನೆಗಳಲ್ಲ. ಅವು ಸಮಾನತೆಯ ಸಮಾಜ ನಿರ್ಮಾಣಕ್ಕೆ ಅಗತ್ಯವಾದ ಸಾಮಾಜಿಕ, ಆರ್ಥಿಕ ಮತ್ತು ಮಾನವೀಯ ಮೌಲ್ಯಗಳಾಗಿವೆ.
ಮೈಸೂರಿನ ಡಾ. ಎಚ್.ಎಂ. ಹೇಮಲತಾ ಅವರು ಈದಿನ.ಕಾಮ್ ಜೊತೆ ಮಾತನಾಡುತ್ತಾ, “ಈ ಮೂರು ಮೌಲ್ಯಗಳು ಈಗಿನ ಸಂದರ್ಭದಲ್ಲಿ ಹೆಚ್ಚು ಪ್ರಸ್ತುತ, ಅರ್ಥಪೂರ್ಣ ಮತ್ತು ಅವಶ್ಯಕವಾಗಿವೆ. ಆದರೆ, ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಸುಲಭವಲ್ಲ. ಸಂಕೀರ್ಣ ಆಯಾಮಗಳನ್ನು ಹೊಂದಿರುವ ಈ ತತ್ವಗಳನ್ನು ಮತ್ತೆ ಮತ್ತೆ ಚರ್ಚಿಸಿ, ಅರ್ಥಮಾಡಿಕೊಂಡು ಅನುಸರಿಸುವ ಅನಿವಾರ್ಯತೆಯಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ. ಅವರ ಈ ಚಿಂತನೆಯ ಹಿನ್ನೆಲೆಯಲ್ಲಿ ಗಾಂಧೀಜಿಯವರ ಮೂರು ತತ್ವಗಳ ಸಮಕಾಲೀನ ಪ್ರಸ್ತುತತೆಯನ್ನು ಪರಿಶೀಲಿಸುವುದು ಅಗತ್ಯವಾಗಿದೆ.
ಎಲ್ಲರ ಹಿತದಲ್ಲಿಯೇ ವ್ಯಕ್ತಿಯ ಹಿತ
ಗಾಂಧೀಜಿಯವರ ಮೊದಲ ತತ್ವವಾದ ‘ಎಲ್ಲರ ಹಿತದಲ್ಲಿಯೇ ವ್ಯಕ್ತಿಯ ಹಿತ ಅಡಗಿದೆ’ ಎಂಬುದು ಮಾನವ ಬದುಕಿನ ಪರಸ್ಪರ ಅವಲಂಬನೆಯನ್ನು ಸಾರುತ್ತದೆ. ವ್ಯಕ್ತಿ ಎಷ್ಟೇ ಸ್ವಾತಂತ್ರ್ಯ, ಸ್ವಾಭಿಮಾನ, ಆರ್ಥಿಕ ಸಾಮರ್ಥ್ಯ ಮತ್ತು ಹಕ್ಕುಗಳನ್ನು ಹೊಂದಿದ್ದರೂ ಸಂಪೂರ್ಣವಾಗಿ ಸ್ವತಂತ್ರವಾಗಿ ಬದುಕಲು ಸಾಧ್ಯವಿಲ್ಲ. ಮನುಷ್ಯ ಮೂಲತಃ ಸಾಮಾಜಿಕ ಜೀವಿ. ಆತನ ಪ್ರತಿಯೊಂದು ಅಗತ್ಯದ ಹಿಂದೆ ಅನೇಕ ವ್ಯಕ್ತಿಗಳ ಶ್ರಮ, ಸಹಕಾರ ಮತ್ತು ಸೇವೆ ಅಡಗಿರುತ್ತದೆ.
ಬೆಳಿಗ್ಗೆ ಎದ್ದಾಗ ಮನೆ ಬಾಗಿಲಿಗೆ ಬರುವ ದಿನಪತ್ರಿಕೆ, ಹಾಲಿನ ಪ್ಯಾಕೆಟ್, ಬೀದಿಯನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರು, ಕಸ ಸಂಗ್ರಹಿಸುವವರು, ತರಕಾರಿ ಮಾರುವವರು, ಮನೆಗೆಲಸದವರು, ಬ್ಯಾಂಕ್ ಮತ್ತು ಅಂಚೆ ಕಚೇರಿಯ ಸಿಬ್ಬಂದಿ, ಸಾರಿಗೆ ನೌಕರರು ಹೀಗೆ ನಮ್ಮ ದಿನನಿತ್ಯದ ಬದುಕು ನೂರಾರು ಜನರ ದುಡಿಮೆಯ ಮೇಲೆ ಅವಲಂಬಿತವಾಗಿದೆ. ಇವರೆಲ್ಲರ ಸೇವೆ ಸ್ಥಗಿತಗೊಂಡರೆ ನಮ್ಮ ಸುಗಮ ಜೀವನವೂ ಅಸ್ತವ್ಯಸ್ತವಾಗುತ್ತದೆ.
ನಮ್ಮ ಬಳಿ ಹಣವಿದೆ, ಆರೋಗ್ಯವಿದೆ, ಅಗತ್ಯ ಸೌಲಭ್ಯಗಳಿವೆ, ಹಾಗಾಗಿ ನಾವು ಸ್ವಾವಲಂಬಿಗಳು ಎಂಬ ಭಾವನೆ ಇರಬಹುದು. ಆದರೆ, ಹಣವಿದ್ದ ಮಾತ್ರಕ್ಕೆ ಎಲ್ಲ ಸೇವೆಗಳೂ ತಕ್ಷಣ ಲಭ್ಯವಾಗುವುದಿಲ್ಲ. ದಿನಪತ್ರಿಕೆ ತರುವ ವ್ಯಕ್ತಿ ಬರದಿದ್ದರೆ, ಕಸ ಸಂಗ್ರಹಿಸುವವರು ಕೆಲಸ ಮಾಡದಿದ್ದರೆ ಅಥವಾ ತರಕಾರಿ ಬೆಳೆದು ಮಾರುಕಟ್ಟೆಗೆ ತರುವ ರೈತರು ಇಲ್ಲದಿದ್ದರೆ ನಮ್ಮ ಬದುಕಿನ ಮೇಲೆ ಅದರ ಪರಿಣಾಮ ಉಂಟಾಗುತ್ತದೆ. ಅಂದರೆ, ನಮ್ಮ ನೆಮ್ಮದಿ ಮತ್ತು ಸಂತೋಷ ಇತರರ ಬದುಕಿನ ಸ್ಥಿತಿಗತಿಯೊಂದಿಗೂ ನೇರ ಸಂಬಂಧ ಹೊಂದಿವೆ.
ರೈತರು ಆಹಾರ ಉತ್ಪಾದಿಸಿದರೆ ಮಾತ್ರ ಸಮಾಜ ಬದುಕಲು ಸಾಧ್ಯ. ಕಾರ್ಮಿಕರು ವಸ್ತುಗಳನ್ನು ಉತ್ಪಾದಿಸಿದರೆ ಮಾತ್ರ ಅವು ನಮ್ಮ ಬಳಕೆಗೆ ದೊರೆಯುತ್ತವೆ. ಶಿಕ್ಷಕರು, ವೈದ್ಯರು, ಸಾರಿಗೆ ನೌಕರರು, ಸ್ವಚ್ಛತಾ ಸಿಬ್ಬಂದಿ ಸೇರಿದಂತೆ ವಿವಿಧ ವಲಯಗಳ ದುಡಿಮೆ ಸಮಾಜದ ಚಲನೆಗೆ ಅಗತ್ಯವಾಗಿದೆ. ಹೀಗಿರುವಾಗ, ಅವರ ಬದುಕು, ಆರೋಗ್ಯ, ಸುರಕ್ಷತೆ ಮತ್ತು ಗೌರವದ ಬಗ್ಗೆ ಕಾಳಜಿ ವಹಿಸುವುದು ಕೇವಲ ಮಾನವೀಯ ಕರ್ತವ್ಯವಲ್ಲ; ನಮ್ಮದೇ ಹಿತವನ್ನು ಕಾಪಾಡಿಕೊಳ್ಳುವ ಮಾರ್ಗವೂ ಹೌದು.
ಇಲ್ಲಿ ಗಾಂಧೀಜಿಯವರ ಚಿಂತನೆಯ ಮಹತ್ವ ಅಡಗಿದೆ. ತಮ್ಮ ಕುಟುಂಬದ ಸದಸ್ಯರಿಂದ ಹಿಡಿದು ಆಶ್ರಮದ ಸಹವರ್ತಿಗಳು ಮತ್ತು ದೇಶದ ಸಾಮಾನ್ಯ ಜನರವರೆಗೆ ಎಲ್ಲರ ಬದುಕಿನ ಬಗ್ಗೆ ಕಾಳಜಿ ವಹಿಸುತ್ತಿದ್ದ ಅವರು, ಇತರರ ಹಿತದಲ್ಲಿಯೇ ತಮ್ಮ ಹಿತವನ್ನು ಕಂಡುಕೊಳ್ಳುತ್ತಿದ್ದರು. ಇಂದಿನ ಸ್ಪರ್ಧಾತ್ಮಕ, ವ್ಯಕ್ತಿಕೇಂದ್ರಿತ ಮತ್ತು ಗ್ರಾಹಕ ಸಂಸ್ಕೃತಿಯ ಸಮಾಜದಲ್ಲಿ ಈ ಮೌಲ್ಯವನ್ನು ಪುನಃ ಅರ್ಥಮಾಡಿಕೊಳ್ಳಬೇಕಿದೆ. ವ್ಯಕ್ತಿಯ ಪ್ರಗತಿ ಸಮಾಜದ ಪ್ರಗತಿಯಿಂದ ಪ್ರತ್ಯೇಕವಾಗಿರಲು ಸಾಧ್ಯವಿಲ್ಲ ಎಂಬ ಅರಿವು ಬೆಳೆಸಿಕೊಳ್ಳಬೇಕಿದೆ.
ಎಲ್ಲ ಕೆಲಸಗಳಿಗೂ ಸಮಾನ ಗೌರವ, ಮೌಲ್ಯ
ಗಾಂಧೀಜಿಯವರ ಎರಡನೇ ತತ್ವವು ಕೆಲಸಗಳ ನಡುವಿನ ಮೇಲು-ಕೀಳು ಭಾವನೆಯನ್ನು ಪ್ರಶ್ನಿಸುತ್ತದೆ. ರಸ್ಕಿನ್ ಅವರ ಪ್ರಕಾರ ವಕೀಲನ ಕೆಲಸ ಮತ್ತು ನಾಪಿತನ ಕೆಲಸ ಎರಡೂ ಸಮಾಜಕ್ಕೆ ಅಗತ್ಯವಾದ ಸೇವೆಗಳಾಗಿರುವುದರಿಂದ ಅವುಗಳ ಘನತೆಯನ್ನು ಸಮಾನವಾಗಿ ಪರಿಗಣಿಸಬೇಕು. ಕೆಲಸದ ಸ್ವರೂಪ ಬೇರೆಯಾಗಿರಬಹುದು; ಆದರೆ, ಅದನ್ನು ಮಾಡುವ ವ್ಯಕ್ತಿಯ ಮಾನವ ಘನತೆಯಲ್ಲಿ ವ್ಯತ್ಯಾಸವಿರಬಾರದು.
ಭಾರತೀಯ ಸಮಾಜದ ಜಾತಿ ವ್ಯವಸ್ಥೆಯು ಕೆಲಸಗಳ ಮೌಲ್ಯಮಾಪನದಲ್ಲಿ ಶ್ರೇಣೀಕರಣವನ್ನು ಬೆಳೆಸಿದೆ. ಕೆಲವು ಕೆಲಸಗಳನ್ನು ಶ್ರೇಷ್ಠವೆಂದೂ, ಇನ್ನು ಕೆಲವು ಕೆಲಸಗಳನ್ನು ಕನಿಷ್ಠವೆಂದೂ ಪರಿಗಣಿಸುವ ಮನೋಭಾವ ಶತಮಾನಗಳಿಂದ ಮುಂದುವರಿದಿದೆ. ಜಾತಿ, ಧರ್ಮ, ಲಿಂಗ, ಪರಂಪರೆ ಮತ್ತು ಆರ್ಥಿಕ ಸ್ಥಾನಮಾನಗಳು ಈ ತಾರತಮ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿವೆ. ನಿರ್ದಿಷ್ಟ ಸಮುದಾಯಗಳಿಗೆ ಕೆಲವು ಕೆಲಸಗಳನ್ನು ಸೀಮಿತಗೊಳಿಸಿ, ಆ ಕೆಲಸಗಳನ್ನು ಮಾಡುವವರನ್ನೇ ಸಾಮಾಜಿಕವಾಗಿ ಕೀಳಾಗಿ ಕಾಣುವ ವ್ಯವಸ್ಥೆಯೂ ಬೆಳೆದಿದೆ.
ಬೌದ್ಧಿಕ ಕೆಲಸಗಳಿಗೆ ಹೆಚ್ಚಿನ ಗೌರವ ಮತ್ತು ವೇತನ ನೀಡುವ ಸಂದರ್ಭದಲ್ಲಿ ಶಾರೀರಿಕ ಶ್ರಮವನ್ನು ಆಧರಿಸಿದ ಕೆಲಸಗಳಿಗೆ ಕಡಿಮೆ ಮೌಲ್ಯ ನೀಡಲಾಗುತ್ತಿದೆ. ವೈದ್ಯರು, ಎಂಜಿನಿಯರ್ಗಳು, ಅಧಿಕಾರಿಗಳು, ಸಂಶೋಧಕರು ಮತ್ತು ಉನ್ನತ ಶಿಕ್ಷಣ ಕ್ಷೇತ್ರದ ಉದ್ಯೋಗಿಗಳಿಗೆ ಹೆಚ್ಚಿನ ಸಂಭಾವನೆ ದೊರೆಯುತ್ತದೆ. ಆದರೆ, ಅದೇ ಸಂಸ್ಥೆಗಳಲ್ಲಿ ಸ್ವಚ್ಛತೆ, ತೋಟಗಾರಿಕೆ, ಭದ್ರತೆ ಮತ್ತು ನಿರ್ವಹಣಾ ಕೆಲಸ ಮಾಡುವವರಿಗೆ ಕಡಿಮೆ ವೇತನ ನೀಡಲಾಗುತ್ತದೆ.
ಕೆಲಸಗಳ ಸ್ವರೂಪ, ಕೌಶಲ್ಯ, ಜವಾಬ್ದಾರಿ, ಅನುಭವ ಮತ್ತು ಸಮಯದ ಆಧಾರದ ಮೇಲೆ ಸಂಭಾವನೆಯಲ್ಲಿ ವ್ಯತ್ಯಾಸವಿರುವುದು ಸಹಜ. ಎಲ್ಲ ಕೆಲಸಗಳಿಗೂ ಒಂದೇ ವೇತನ ನೀಡಬೇಕೆಂಬುದು ಇದರ ಅರ್ಥವಲ್ಲ. ಆದರೆ ಕೆಲಸಗಳ ನಡುವೆ ಇರುವ ವೇತನದ ಅಂತರ ತಾರ್ಕಿಕವಾಗಿರಬೇಕು. ಕೆಲಸ ಮಾಡುವ ವ್ಯಕ್ತಿಗಳ ಘನತೆ, ಹಕ್ಕು ಮತ್ತು ಗೌರವದಲ್ಲಿ ಯಾವುದೇ ವ್ಯತ್ಯಾಸವಿರಬಾರದು ಎಂಬುದೇ ಈ ತತ್ವದ ಮೂಲ ಆಶಯ.
ಇಲ್ಲಿ ಮತ್ತೊಂದು ಪ್ರಮುಖ ಅಂಶವಿದೆ. ಕೆಲಸಕ್ಕೆ ಬೆಲೆ ಕಟ್ಟುವಾಗ ಅದನ್ನು ಅಳೆಯುವವರ ಸಾಮಾಜಿಕ ಮತ್ತು ಮಾನಸಿಕ ದೃಷ್ಟಿಕೋನವೂ ಮುಖ್ಯವಾಗುತ್ತದೆ. ತಮ್ಮ ಕೆಲಸಕ್ಕೆ ಹೆಚ್ಚಿನ ಮೌಲ್ಯ ನಿರೀಕ್ಷಿಸುವವರು ಬೇರೆಯವರ ಕೆಲಸಕ್ಕೆ ಕಡಿಮೆ ಬೆಲೆ ನೀಡಲು ಮುಂದಾಗುತ್ತಾರೆ. ತಮ್ಮ ಜ್ಞಾನ, ಕೌಶಲ್ಯ ಮತ್ತು ಶ್ರಮವನ್ನು ಶ್ರೇಷ್ಠವೆಂದು ಭಾವಿಸಿ, ಇತರರ ದುಡಿಮೆಗೆ ಅಷ್ಟೇ ಮಹತ್ವ ನೀಡದ ಮನೋಭಾವ ಅಸಮಾನತೆಯನ್ನು ಹೆಚ್ಚಿಸುತ್ತದೆ.
ಭಾರತದ ದುಡಿಮೆಗಾರರಲ್ಲಿ ಬಹುಪಾಲು ಜನ ಅಸಂಘಟಿತ ವಲಯದಲ್ಲಿದ್ದಾರೆ. ಕೃಷಿ ಕಾರ್ಮಿಕರು, ಗಾರ್ಮೆಂಟ್ಸ್ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಗುತ್ತಿಗೆ ಮತ್ತು ದಿನಗೂಲಿ ನೌಕರರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಲಕ್ಷಾಂತರ ಜನರ ಶ್ರಮದ ಮೇಲೆ ಸಮಾಜದ ವ್ಯವಸ್ಥೆ ನಿಂತಿದೆ. ಆದರೆ ಇವರಲ್ಲಿ ಅನೇಕರಿಗೆ ಕನಿಷ್ಠ ವೇತನ, ಉದ್ಯೋಗ ಭದ್ರತೆ, ಸಾಮಾಜಿಕ ಭದ್ರತೆ ಮತ್ತು ಆರೋಗ್ಯ ಸೌಲಭ್ಯಗಳೂ ಸಮರ್ಪಕವಾಗಿ ದೊರೆಯುತ್ತಿಲ್ಲ.
ಇದು ಕೇವಲ ಆರ್ಥಿಕ ಸಮಸ್ಯೆಯಲ್ಲ. ಶ್ರಮವನ್ನು ಗೌರವಿಸುವ ಸಾಮಾಜಿಕ ದೃಷ್ಟಿಕೋನದ ಕೊರತೆಯೂ ಹೌದು. ಕೆಲಸಗಳ ಮೌಲ್ಯಮಾಪನದಲ್ಲಿ ವೈಜ್ಞಾನಿಕತೆ ಮತ್ತು ನ್ಯಾಯಸಮ್ಮತತೆ ಇರಬೇಕು. ದುಡಿಯುವವರ ಹಕ್ಕುಗಳನ್ನು ರಕ್ಷಿಸುವ ವ್ಯವಸ್ಥೆ ರೂಪುಗೊಳ್ಳಬೇಕು. ಕೆಲಸದ ಆಧಾರದ ಮೇಲೆ ವ್ಯಕ್ತಿಯ ಸಾಮಾಜಿಕ ಸ್ಥಾನಮಾನ ನಿರ್ಧರಿಸುವ ಮನೋಭಾವ ಬದಲಾಗಬೇಕು. ಆಗ ಮಾತ್ರ ಗಾಂಧೀಜಿಯವರ ಎರಡನೇ ತತ್ವಕ್ಕೆ ನಿಜವಾದ ಅರ್ಥ ಬರುತ್ತದೆ.
ಶಾರೀರಿಕ ಶ್ರಮವೇ ಶ್ರೇಷ್ಠ
ಗಾಂಧೀಜಿಯವರ ಮೂರನೇ ತತ್ವವಾದ ‘ಶಾರೀರಿಕ ಶ್ರಮವೇ ಶ್ರೇಷ್ಠ’ ಎಂಬುದು ಅವರ ಬದುಕಿನಲ್ಲಿಯೇ ಅನುಷ್ಠಾನಗೊಂಡಿತ್ತು. ಅವರು ಕೇವಲ ಈ ತತ್ವವನ್ನು ಬೋಧಿಸಲಿಲ್ಲ; ತಮ್ಮ ದೈನಂದಿನ ಬದುಕಿನಲ್ಲಿ ಸ್ವತಃ ದುಡಿಮೆಗೆ ತೊಡಗುವ ಮೂಲಕ ಅದರ ಘನತೆಯನ್ನು ಎತ್ತಿಹಿಡಿದರು. ಆಶ್ರಮಗಳಲ್ಲಿ ಸ್ವಚ್ಛತೆ, ಅಡುಗೆ, ನೂಲುವುದು ಮತ್ತು ಇತರ ದೈಹಿಕ ಕೆಲಸಗಳನ್ನು ಸ್ವತಃ ಮಾಡುತ್ತಿದ್ದರು. ಯಾವುದೇ ಕೆಲಸವನ್ನು ಕೀಳಾಗಿ ಕಾಣಬಾರದು ಎಂಬ ಸಂದೇಶವನ್ನು ತಮ್ಮ ನಡವಳಿಕೆಯ ಮೂಲಕ ನೀಡುತ್ತಿದ್ದರು.
ಮಾನವನ ಬದುಕಿಗೆ ಅಗತ್ಯವಾದ ಬಹುತೇಕ ಮೂಲಭೂತ ಉತ್ಪಾದನೆ ಮತ್ತು ಸೇವೆಗಳ ಹಿಂದೆ ಶಾರೀರಿಕ ಶ್ರಮವಿದೆ. ಕೃಷಿ, ಮನೆ ನಿರ್ಮಾಣ, ರಸ್ತೆ ನಿರ್ಮಾಣ, ಸ್ವಚ್ಛತೆ, ನೇಯ್ಗೆ, ಗಣಿ ಕೆಲಸ, ಕಾರ್ಖಾನೆ, ಗಾರ್ಮೆಂಟ್ಸ್ ಉದ್ಯಮ, ಆಹಾರ ಉತ್ಪಾದನೆ, ರೋಗಿಗಳು ಮತ್ತು ವೃದ್ಧರ ಆರೈಕೆ ಸೇರಿದಂತೆ ಅನೇಕ ಕ್ಷೇತ್ರಗಳು ದೈಹಿಕ ದುಡಿಮೆಯನ್ನು ಅವಲಂಬಿಸಿವೆ. ದೇಶದ ಆರ್ಥಿಕತೆಯ ಚಲನೆಗೆ ಈ ಶ್ರಮದ ಕೊಡುಗೆ ಅಪಾರವಾಗಿದೆ.
ಆದರೆ, ಇಂತಹ ಕೆಲಸಗಳಲ್ಲಿ ತೊಡಗಿರುವವರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿ ಅನೇಕ ಸಂದರ್ಭಗಳಲ್ಲಿ ದುರ್ಬಲವಾಗಿಯೇ ಉಳಿದಿದೆ. ದುಡಿಯುವವರ ಸಂಖ್ಯೆ ಹೆಚ್ಚಿದ್ದರೂ ಅವರ ಆದಾಯ ಮತ್ತು ಸಂಪತ್ತಿನ ಪಾಲು ಕಡಿಮೆಯಾಗಿದೆ. ಮತ್ತೊಂದೆಡೆ, ಬೌದ್ಧಿಕ ಮತ್ತು ಸಂಘಟಿತ ವಲಯದ ಉದ್ಯೋಗಗಳಿಗೆ ದೊರೆಯುವ ಸಂಭಾವನೆ ಹಾಗೂ ಸಾಮಾಜಿಕ ಮನ್ನಣೆ ಹೆಚ್ಚಿನದಾಗಿದೆ. ಈ ಅಂತರವು ಆರ್ಥಿಕ ಅಸಮಾನತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಇಲ್ಲಿ ಮಹಿಳೆಯರ ಶ್ರಮದ ಪ್ರಶ್ನೆಯೂ ಮುಖ್ಯವಾಗುತ್ತದೆ. ಮನೆಗೆಲಸ, ಅಡುಗೆ, ಮಕ್ಕಳ ಪಾಲನೆ, ವೃದ್ಧರ ಆರೈಕೆ, ಕುಟುಂಬದ ನಿರ್ವಹಣೆ ಮುಂತಾದ ಕೆಲಸಗಳಿಗೆ ಮಹಿಳೆಯರು ತಮ್ಮ ದಿನದ ಬಹುಪಾಲು ಸಮಯವನ್ನು ಮೀಸಲಿಡುತ್ತಾರೆ. ಇವುಗಳಿಗೆ ನೇರವಾಗಿ ಹಣದ ವಿನಿಮಯ ನಡೆಯದ ಕಾರಣ ಆರ್ಥಿಕ ಉತ್ಪಾದನೆಯ ಲೆಕ್ಕಾಚಾರಗಳಲ್ಲಿ ಅವುಗಳ ಮೌಲ್ಯ ಬಹುತೇಕ ಅದೃಶ್ಯವಾಗುತ್ತದೆ. ಆದರೆ ಈ ಕೆಲಸಗಳಿಲ್ಲದೆ ಕುಟುಂಬ ಮತ್ತು ಸಮಾಜದ ದೈನಂದಿನ ಬದುಕು ನಡೆಯಲು ಸಾಧ್ಯವಿಲ್ಲ. ಮಹಿಳೆಯರ ವೇತನರಹಿತ ಆರೈಕೆ ಮತ್ತು ಗೃಹಕಾರ್ಯಕ್ಕೂ ಆರ್ಥಿಕ ಹಾಗೂ ಸಾಮಾಜಿಕ ಮೌಲ್ಯವಿದೆ ಎಂಬುದನ್ನು ಗುರುತಿಸಬೇಕಿದೆ.
ಶಾರೀರಿಕ ಶ್ರಮಕ್ಕೆ ಘನತೆ ನೀಡುವುದು ಎಂದರೆ ಕೇವಲ ದುಡಿಯುವವರನ್ನು ಹೊಗಳುವುದಲ್ಲ. ಅವರಿಗೆ ನ್ಯಾಯಯುತ ವೇತನ, ಸುರಕ್ಷಿತ ಕೆಲಸದ ವಾತಾವರಣ, ವಿಶ್ರಾಂತಿ, ಆರೋಗ್ಯ ಸೌಲಭ್ಯ, ಉದ್ಯೋಗ ಭದ್ರತೆ ಮತ್ತು ಸಾಮಾಜಿಕ ಗೌರವ ಒದಗಿಸುವುದಾಗಿದೆ. ಶ್ರಮದ ಘನತೆಯನ್ನು ಒಪ್ಪಿಕೊಂಡು, ಶ್ರಮಿಕರ ಬದುಕಿನಲ್ಲಿ ಬದಲಾವಣೆ ತರದಿದ್ದರೆ ಆ ತತ್ವ ಕೇವಲ ಭಾಷಣಕ್ಕೆ ಸೀಮಿತವಾಗುತ್ತದೆ.
ಗಾಂಧೀಜಿ ಚಿಂತನೆಗಳ ಅನುಷ್ಠಾನವೇ ಇಂದಿನ ಸವಾಲು
ಈ ಮೂರು ತತ್ವಗಳನ್ನು ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ. ಎಲ್ಲರ ಹಿತವನ್ನು ಬಯಸುವುದು, ಎಲ್ಲ ಕೆಲಸಗಳಿಗೂ ಗೌರವ ನೀಡುವುದು ಮತ್ತು ಶಾರೀರಿಕ ಶ್ರಮದ ಘನತೆಯನ್ನು ಒಪ್ಪಿಕೊಳ್ಳುವುದು ಪರಸ್ಪರ ಸಂಬಂಧ ಹೊಂದಿವೆ. ಒಂದು ತತ್ವದ ಅನುಷ್ಠಾನ ಮತ್ತೊಂದರ ಅನುಷ್ಠಾನಕ್ಕೂ ಪೂರಕವಾಗುತ್ತದೆ.
ಈ ವಿಶೇಷ ಲೇಖನ ಓದಿದ್ದೀರಾ? ಕಾಲಜ್ಞಾನ ಸಾರಿದ ಮಂಟೇದಲಿಂಗಯ್ಯ’: ನೀಲಗಾರರ ಸ್ವರವಚನಗಳಲ್ಲಿ ಅಡಗಿರುವ ಜನಪದ ತತ್ವ
ಇಂದಿನ ಜಾಗತೀಕರಣ, ತಂತ್ರಜ್ಞಾನ ಮತ್ತು ಮಾರುಕಟ್ಟೆ ಆರ್ಥಿಕತೆಯ ಸಂದರ್ಭದಲ್ಲಿ ಈ ತತ್ವಗಳನ್ನು ಹೊಸ ಆಯಾಮಗಳಲ್ಲಿ ಅರ್ಥಮಾಡಿಕೊಳ್ಳಬೇಕಿದೆ. ಸಂಪತ್ತಿನ ಕೇಂದ್ರೀಕರಣ, ಉದ್ಯೋಗದ ಅನಿಶ್ಚಿತತೆ, ಗುತ್ತಿಗೆ ಪದ್ಧತಿ, ಅಸಂಘಟಿತ ಕಾರ್ಮಿಕರ ಶೋಷಣೆ, ಜಾತಿ ಆಧಾರಿತ ವೃತ್ತಿ ತಾರತಮ್ಯ ಮತ್ತು ಮಹಿಳೆಯರ ವೇತನರಹಿತ ದುಡಿಮೆ ಇವೆಲ್ಲವೂ ಗಾಂಧೀಜಿ ಪ್ರತಿಪಾದಿಸಿದ ಮೌಲ್ಯಗಳ ಅಗತ್ಯವನ್ನು ನೆನಪಿಸುತ್ತವೆ.
ಈ ವಿಶೇಷ ಲೇಖನ ಓದಿದ್ದೀರಾ? ಹಳೇ ಮೈಸೂರು | ಕಲ್ಯಾಣದಿಂದ ಬೊಪ್ಪೇಗೌಡನಪುರದವರೆಗೆ: ಜನಪದ ಕಾವ್ಯದ ಬೆಳಕಿನಲ್ಲಿ ಮಂಟೇಸ್ವಾಮಿ
ಡಾ. ಎಚ್.ಎಂ. ಹೇಮಲತಾ ಅವರ ಅಭಿಪ್ರಾಯದಂತೆ, ಈ ತತ್ವಗಳನ್ನು ಮತ್ತೆ ಮತ್ತೆ ಚರ್ಚಿಸಿ ಅರ್ಥಮಾಡಿಕೊಳ್ಳುವುದರ ಜೊತೆಗೆ ಬದುಕಿನಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನವೂ ನಡೆಯಬೇಕು. ಶಿಕ್ಷಣ ವ್ಯವಸ್ಥೆಯಲ್ಲಿ ಶ್ರಮದ ಘನತೆಯನ್ನು ಪರಿಚಯಿಸುವುದು, ಜಾತಿ ಆಧಾರಿತ ಕೆಲಸದ ಕೀಳು-ಮೇಲು ಭಾವನೆಗಳನ್ನು ಪ್ರಶ್ನಿಸುವುದು, ಎಲ್ಲಾ ವೃತ್ತಿಗಳಿಗೂ ಗೌರವ ನೀಡುವುದು, ಮಹಿಳೆಯರ ದುಡಿಮೆಯನ್ನು ಗುರುತಿಸುವುದು ಮತ್ತು ಕಾರ್ಮಿಕರಿಗೆ ನ್ಯಾಯಯುತ ಪ್ರತಿಫಲ ಒದಗಿಸುವುದು ಈ ನಿಟ್ಟಿನಲ್ಲಿ ಅಗತ್ಯವಾದ ಕ್ರಮಗಳಾಗಿವೆ.
ಈ ವಿಶೇಷ ಲೇಖನ ಓದಿದ್ದೀರಾ? ಗಾಂಧೀಯ ‘ರಾಮ’-ಮನುವಾದಿಗಳ ‘ಶ್ರೀರಾಮ’ನಲ್ಲ
ಗಾಂಧೀಜಿಯವರ ಈ ಮೂರು ತತ್ವಗಳು ಇತಿಹಾಸದ ಪುಟಗಳಿಗೆ ಸೀಮಿತವಾದ ವಿಚಾರಗಳಲ್ಲ. ಅವು ಸಮಾನತೆ, ಮಾನವ ಘನತೆ ಮತ್ತು ಸಾಮಾಜಿಕ ನ್ಯಾಯದ ಆಧಾರದ ಮೇಲೆ ಸಮಾಜವನ್ನು ರೂಪಿಸಲು ನೆರವಾಗುವ ಚಿಂತನೆಗಳಾಗಿವೆ. ವ್ಯಕ್ತಿಯ ಸುಖ ಇತರರ ಸುಖದಿಂದ ಪ್ರತ್ಯೇಕವಲ್ಲ, ಯಾವುದೇ ಕೆಲಸವೂ ಕೀಳಲ್ಲ ಮತ್ತು ಶ್ರಮವಿಲ್ಲದೆ ಸಮಾಜದ ಅಸ್ತಿತ್ವ ಸಾಧ್ಯವಿಲ್ಲ ಎಂಬ ಸರಳ ಸತ್ಯವನ್ನು ಅವು ಮನದಟ್ಟು ಮಾಡುತ್ತವೆ.
ಈ ವಿಶೇಷ ಲೇಖನ ಓದಿದ್ದೀರಾ? ಹೊರಗೆ ‘ರಾಮ’-ಒಳಗೆ ‘ನಾಥೂರಾಮ’: ಗಾಂಧೀಜಿಯವರ ತಾತ್ವಿಕತೆಯ ಮುಂದೆ ಬಲಪಂಥೀಯ ರಾಜಕಾರಣದ ಆತಂಕ
ಸಮಾಜದಲ್ಲಿ ಪ್ರತಿಯೊಬ್ಬರ ಬದುಕಿಗೂ ಬೆಲೆ ಇರಬೇಕು; ಪ್ರತಿಯೊಂದು ಕೆಲಸಕ್ಕೂ ಗೌರವ ಸಿಗಬೇಕು; ಪ್ರತಿಯೊಬ್ಬ ದುಡಿಯುವವರಿಗೂ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಬೇಕು. ಈ ಮೌಲ್ಯಗಳು ವೈಯಕ್ತಿಕ ನಡವಳಿಕೆಯಿಂದ ಆರಂಭವಾಗಿ ಸಾಮಾಜಿಕ ವ್ಯವಸ್ಥೆ ಮತ್ತು ಸರ್ಕಾರದ ನೀತಿಗಳವರೆಗೆ ವಿಸ್ತರಿಸಿದಾಗ ಮಾತ್ರ ಗಾಂಧೀಜಿ ಕಂಡ ಸರ್ವೋದಯದ ಆಶಯ ಸಾಕಾರಗೊಳ್ಳಲು ಸಾಧ್ಯ.



