ಇಸ್ರೇಲ್‌ನ ಚುನಾವಣೆ ಮುಗಿದ್ದು, ಅತಂತ್ರ ಪರಿಸ್ಥಿತಿ ಇದೆ. ಹೊಸ ಸರ್ಕಾರ ರಚನೆಗೆ ಮಾಜಿ ಸೇನಾ ಮುಖ್ಯಸ್ಥ, ನ್ಯಾಷನಲ್ ಯೂನಿಟಿ ಪಕ್ಷದ ನಾಯಕ ಗಾಡಿ ಐಸೆನ್ಕೋಟ್ ಅವರನ್ನು ಅಧ್ಯಕ್ಷರು ಆಹ್ವಾನಿಸಿದ್ದಾರೆ. ಆದರೆ, ಅವರ ಪಕ್ಷವು ಅಗತ್ಯ ಬಹುಮತದಷ್ಟು ಸ್ಥಾನಗಳನ್ನು ಹೊಂದಿಲ್ಲದ ಕಾರಣ, ಸರ್ಕಾರದ ರಚನೆಗೆ ಅವರು ತಮ್ಮ ಮೂಲ ಸಿದ್ಧಾಂತಗಳೊಂದಿಗೆ ಹಲವು ರಾಜಿಗಳನ್ನು ಮಾಡಿಕೊಳ್ಳಬೇಕಾದ ಅನಿವಾರ್ಯತೆಯಿದೆ.
ನೆರೆಯ ರಾಷ್ಟ್ರಗಳ ಮೇಲೆ ನಿರಂತರ ಕ್ರೌರ್ಯ ಮೆರೆಯುತ್ತಿದ್ದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇತ್ತೀಚಿನ ಚುನಾವಣೆಯಲ್ಲಿ ಹೀನಾಯ ಸೋಲುಂಡಿದ್ದಾರೆ. ನೆತನ್ಯಾಹು ಅವರಿಗೆ ಪರ್ಯಾಯ ನಾಯಕನಾಗಿ ಮಾಜಿ ಸೇನಾ ಮುಖ್ಯಸ್ಥ, ‘ನ್ಯಾಷನಲ್ ಯೂನಿಟಿ’ ಪಕ್ಷದ ಪ್ರಮುಖ ನಾಯಕ ಗಾಡಿ ಐಸೆನ್ಕೋಟ್ ಮುಂಚೂಣಿಯಲ್ಲಿದ್ದಾರೆ. ಸರ್ಕಾರ ರಚನೆಗೂ ಐಸೆನ್ಕೋಟ್ ಅವರಿಗೆ ಇಸ್ರೇಲ್ ಅಧ್ಯಕ್ಷ ಐಸಾಕ್ ಹರ್ಜೋಕ್ ಆಹ್ವಾನ ನೀಡಿದ್ದಾರೆ. ಐಸೆನ್ಕೋಟ್ ಅವರು ಇಸ್ರೇಲ್‌ನ ಪ್ರಧಾನಿ ಪಟ್ಟಕ್ಕೇರಬೇಕಲು ಸಜ್ಜಾಗಿದ್ದಾರೆ. ಆದರೆ, ಅವರು ಪ್ರಧಾನಿಯಾಗಲು ಕೇವಲ ಜನಪ್ರಿಯತೆ ಸಾಲದು; ಬದಲಾಗಿ ಇಸ್ರೇಲ್‌ನ 120 ಸದಸ್ಯ ಬಲದ ಸಂಸತ್ತಿನಲ್ಲಿ 61 ಸ್ಥಾನಗಳ ಬಹುಮತ ಪಡೆಯಬೇಕಿದೆ. ಅದಕ್ಕಾಗಿ, ಅವರು ಹಲವು ರಾಜಕೀಯ, ಸೈದ್ಧಾಂತಿಕ ಹಾಗೂ ಧಾರ್ಮಿಕ ರಾಜಿಗಳನ್ನು ಮಾಡಿಕೊಳ್ಳಬೇಕಾಗುತ್ತದೆ.
ಇಸ್ರೇಲ್‌ನ ಸಂಸದೀಯ ಇತಿಹಾಸದಲ್ಲಿ ಯಾವುದೇ ಒಂದು ಪಕ್ಷವು ಏಕಾಂಗಿಯಾಗಿ ಬಹುಮತ ಪಡೆದ ಉದಾಹರಣೆಯಿಲ್ಲ. ಹೀಗಾಗಿ, ಸಮ್ಮಿಶ್ರ ಸರ್ಕಾರ ರಚಿಸುವಾಗ ಐಸೆನ್ಕೋಟ್ ಅವರು ತಮ್ಮ ಮಧ್ಯಮವಾದಿ ನಿಲುವುಗಳನ್ನು ಬದಿಗಿಟ್ಟು ವಿಭಿನ್ನ ಸಿದ್ಧಾಂತದ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.
ಇದನ್ನೂ ಓದಿ: ಇಸ್ರೇಲ್ ಚುನಾವಣೆ- ಅರಬ್ ಪಕ್ಷಗಳೇ ಈಗ ಕಿಂಗ್ ಮೇಕರ್
ಬಲಪಂಥೀಯ ಮತ್ತು ಮಧ್ಯಮವಾದಿ ಪಕ್ಷಗಳ ನಡುವಿನ ಸಮನ್ವಯ
ನೆತನ್ಯಾಹು ವಿರೋಧಿ ಒಕ್ಕೂಟದಲ್ಲಿ ಯೈರ್ ಲ್ಯಾಪಿಡ್ ಅವರ ‘ಯೆಶ್ ಅಟಿಡ್’ (Yesh Atid), ಅವಿಗ್ಡರ್ ಲೀಬರ್‌ಮನ್ ಅವರ ‘ಯಿಸ್ರೇಲ್ ಬೀಟೆನು’ (Yisrael Beiteinu) ಮತ್ತು ನಫ್ತಾಲಿ ಬೆನೆಟ್ ಅವರಂತಹ ಬಲಪಂಥೀಯ ನಾಯಕರ ಬೆಂಬಲ ಐಸೆನ್ಕೋಟ್ ಅವರಿಗೆ ಅತ್ಯಗತ್ಯ. ಈ ಪೈಕಿ ಲೀಬರ್‌ಮನ್ ಮತ್ತು ಬೆನೆಟ್ ಅವರು ಕಟ್ಟಾ ಬಲಪಂಥೀಯ ಹಾಗೂ ರಾಷ್ಟ್ರೀಯವಾದಿ ನಿಲುವುಗಳನ್ನು ಹೊಂದಿರುವವರು. ಇನ್ನೊಂದೆಡೆ ಲ್ಯಾಪಿಡ್ ಮತ್ತು ಡೆಮಾಕ್ರಟಿಕ್ ಪಕ್ಷದ ನಾಯಕ ಯೈರ್ ಗೋಲನ್ ಎಡ-ಮಧ್ಯಮ ನಿಲುವು ಹೊಂದಿದ್ದಾರೆ. ಅಧಿಕಾರಕ್ಕೇರಲು ಐಸೆನ್ಕೋಟ್ ಅವರು ಈ ಎರಡೂ ವಿರುದ್ಧ ದಿಕ್ಕಿನ ನಾಯಕರನ್ನು ಒಂದೇ ವೇದಿಕೆಗೆ ತರಬೇಕಾಗುತ್ತದೆ. ಇದಕ್ಕಾಗಿ ಅವರು ತಮ್ಮ ಪ್ರಮುಖ ನೀತಿಗಳಲ್ಲಿ ಮೃದು ಧೋರಣೆ ತಾಳಬೇಕಾಗುತ್ತದೆ.
ಪ್ಯಾಲೆಸ್ತೀನ್ ವಿವಾದ ಮತ್ತು ಭದ್ರತಾ ನೀತಿಗಳಲ್ಲಿ ರಾಜಿ
ಗಾಡಿ ಐಸೆನ್ಕೋಟ್ ಅವರು ದೀರ್ಘಕಾಲೀನ ಭದ್ರತಾ ದೃಷ್ಟಿಯಿಂದ ಪ್ಯಾಲೆಸ್ತೀನ್ ಜೊತೆಗಿನ ಸಂಘರ್ಷಕ್ಕೆ ರಾಜತಾಂತ್ರಿಕ ಪರಿಹಾರ ಮತ್ತು ‘ಎರಡು ರಾಷ್ಟ್ರಗಳ ಸಿದ್ಧಾಂತ’ದ (Two-state solution) ಪರವಾಗಿ ಒಲವು ಹೊಂದಿದ್ದಾರೆ ಎಂದು ಹಾರೆಟ್ಜ್ ವಿಶ್ಲೇಷಿಸಿದೆ. ಆದರೆ, ಅವರ ಸಂಭಾವ್ಯ ಮಿತ್ರಪಕ್ಷಗಳಾದ ಬಲಪಂಥೀಯ ನಾಯಕರು ಪ್ಯಾಲೆಸ್ತೀನ್ ರಾಷ್ಟ್ರ ಸ್ಥಾಪನೆಯನ್ನು ತೀವ್ರವಾಗಿ ವಿರೋಧಿಸುತ್ತಾರೆ. ಒಂದು ವೇಳೆ ಐಸೆನ್ಕೋಟ್ ಪ್ರಧಾನಿಯಾಗಬೇಕಾದರೆ, ಪ್ಯಾಲೆಸ್ತೀನ್ ಸ್ವತಂತ್ರ ರಾಷ್ಟ್ರದ ಕುರಿತಾದ ತಮ್ಮ ನಿಲುವನ್ನು ತಾತ್ಕಾಲಿಕವಾಗಿ ತಡೆಹಿಡಿಯಬೇಕಾಗುತ್ತದೆ. ಹಾಗೆಯೇ ವೆಸ್ಟ್ ಬ್ಯಾಂಕ್‌ನಲ್ಲಿ ಯಹೂದಿ ವಸಾಹತುಗಳ ವಿಸ್ತರಣೆಯ ಕುರಿತು ಬಲಪಂಥೀಯ ಮಿತ್ರರ ಒತ್ತಡಕ್ಕೆ ಮಣಿಯಬೇಕಾಗುತ್ತದೆ.
ಅಲ್ಟ್ರಾ-ಆರ್ಥೊಡಾಕ್ಸ್ ಪಕ್ಷಗಳೊಂದಿಗಿನ ಸಂಬಂಧ
ಇಸ್ರೇಲ್ ಸರ್ಕಾರ ರಚನೆಯಲ್ಲಿ ಅಲ್ಟ್ರಾ-ಆರ್ಥೊಡಾಕ್ಸ್ (ಹರೇದಿ) ಧಾರ್ಮಿಕ ಪಕ್ಷಗಳ ಪಾತ್ರ ನಿರ್ಣಾಯಕ. ಐಸೆನ್ಕೋಟ್ ಅವರು ಸೇನಾ ಮುಖ್ಯಸ್ಥರಾಗಿದ್ದಾಗಿನಿಂದಲೂ “ಎಲ್ಲರಿಗೂ ಸಮಾನ ಸೇನಾ ಸೇವೆ” ಎಂಬ ನೀತಿಯನ್ನು ಪ್ರತಿಪಾದಿಸುತ್ತಾ ಬಂದಿದ್ದಾರೆ. ಅಂದರೆ, ಧಾರ್ಮಿಕ ಅಧ್ಯಯನದಲ್ಲಿ ತೊಡಗಿರುವ ಯುವಕರೂ ಕಡ್ಡಾಯವಾಗಿ ಸೇನೆಗೆ ಸೇರಬೇಕು ಎಂಬುದು ಅವರ ವಾದ. ಆದರೆ, ಸರ್ಕಾರ ರಚನೆಗೆ ಹರೇದಿ ಪಕ್ಷಗಳ ಬೆಂಬಲ ಬೇಕಾದರೆ ಅಥವಾ ಅವುಗಳನ್ನು ನೆತನ್ಯಾಹು ಬಣದಿಂದ ದೂರವಿಡಬೇಕಾದರೆ, ಸೇನಾ ಭರ್ತಿ ಕಾನೂನಿನ ವಿಚಾರದಲ್ಲಿ ಐಸೆನ್ಕೋಟ್ ಅವರು ತಮ್ಮ ಕಠಿಣ ನಿಲುವನ್ನು ಸಡಿಲಗೊಳಿಸಿ, ಅವರಿಗೆ ವಿಶೇಷ ವಿನಾಯಿತಿ ನೀಡುವ ರಾಜಿಗೆ ಮುಂದಾಗಬೇಕಾಗುತ್ತದೆ.
ಇದನ್ನೂ ಓದಿ: ಇಸ್ರೇಲ್ ಪ್ರಧಾನಿ ನೆತನ್ಯಾಹು ಕಚೇರಿ, ವಾಯುಪಡೆಯ ಕಮಾಂಡರ್ ಮೇಲೆ ಇರಾನ್ ಕ್ಷಿಪಣಿ ದಾಳಿ
ಅರಬ್ ಪಕ್ಷಗಳ ಬೆಂಬಲ ಮತ್ತು ರಾಜಕೀಯ ಅಪಾಯ
ಬಹುಮತಕ್ಕೆ ಕೆಲವು ಸ್ಥಾನಗಳು ಕಡಿಮೆಯಾದರೆ, 2021ರಲ್ಲಿ ಬೆನೆಟ್-ಲ್ಯಾಪಿಡ್ ಸರ್ಕಾರ ಮಾಡಿದಂತೆ ಇಸ್ರೇಲ್‌ನ ಅರಬ್ ಪಕ್ಷಗಳ ಬಾಹ್ಯ ಬೆಂಬಲವನ್ನು ಪಡೆಯಬೇಕಾಗಬಹುದು. ಆದರೆ, ಗಾಜಾ ಯುದ್ಧದ ನಂತರದ ಪರಿಸ್ಥಿತಿಯಲ್ಲಿ ಅರಬ್ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದನ್ನು ಐಸೆನ್ಕೋಟ್ ಅವರ ಬಲಪಂಥೀಯ ಮಿತ್ರರು ತೀವ್ರವಾಗಿ ವಿರೋಧಿಸುತ್ತಾರೆ. ಇಲ್ಲಿ ಐಸೆನ್ಕೋಟ್ ಅವರು ಬಲಪಂಥೀಯ ಮಿತ್ರರನ್ನು ಕಳೆದುಕೊಳ್ಳುವ ಅಪಾಯವನ್ನು ಎದುರಿಸಬೇಕಾಗುತ್ತದೆ ಅಥವಾ ಅರಬ್ ಸಮುದಾಯದ ಪ್ರಮುಖ ಬೇಡಿಕೆಗಳನ್ನು ಬದಿಗಿಟ್ಟು ಅವರ ಬೆಂಬಲ ಪಡೆಯುವ ಕಠಿಣ ರಾಜತಾಂತ್ರಿಕ ಕಸರತ್ತು ನಡೆಸಬೇಕಾಗುತ್ತದೆ.
ಬೆನ್ನಿ ಗ್ಯಾಂಟ್ಜ್ ಅವರೊಂದಿಗಿನ ನಾಯಕತ್ವದ ಹಂಚಿಕೆ
‘ನ್ಯಾಷನಲ್ ಯೂನಿಟಿ’ ಪಕ್ಷದ ಪ್ರಸ್ತುತ ಮುಖ್ಯಸ್ಥ ಬೆನ್ನಿ ಗ್ಯಾಂಟ್ಜ್ (Benny Gantz) ಅವರನ್ನು ಹಿಂದಿಕ್ಕಿ ತಾವು ಪ್ರಧಾನಿ ಅಭ್ಯರ್ಥಿಯಾಗುವುದು ಐಸೆನ್ಕೋಟ್ ಅವರಿಗಿರುವ ಮೊದಲ ಆಂತರಿಕ ಸವಾಲು. ಪಕ್ಷದ ಒಳಗೆ ಒಡಕು ಮೂಡದಂತೆ ತಡೆಯಲು, ಗ್ಯಾಂಟ್ಜ್ ಅವರಿಗೆ ರಕ್ಷಣಾ ಸಚಿವಾಲಯದಂತಹ ಪ್ರಮುಖ ಖಾತೆ ನೀಡುವುದು ಅಥವಾ ‘ರೊಟೇಷನ್’ (ಆವರ್ತಕ) ಆಧಾರದ ಮೇಲೆ ಪ್ರಧಾನಿ ಹುದ್ದೆಯನ್ನು ಹಂಚಿಕೊಳ್ಳುವ ಒಪ್ಪಂದಕ್ಕೆ ಐಸೆನ್ಕೋಟ್ ಸಿದ್ಧರಾಗಬೇಕಾಗುತ್ತದೆ ಎಂಬುದು ಇಸ್ರೇಲಿ ರಾಜಕೀಯ ವಿಶ್ಲೇಷನಕಾರರ ಅಭಿಪ್ರಾಯ.
ಒಟ್ಟಾರೆಯಾಗಿ, ಗಾಡಿ ಐಸೆನ್ಕೋಟ್ ಅವರ ಪ್ರಾಮಾಣಿಕತೆ, ಸೇನಾ ಹಿನ್ನೆಲೆ ಮತ್ತು ಯುದ್ಧದ ಸಮಯದಲ್ಲಿ ತಮ್ಮ ಮಗನನ್ನು ಕಳೆದುಕೊಂಡ ತ್ಯಾಗವು ಇಸ್ರೇಲಿ ಜನತೆಯಲ್ಲಿ ಅವರ ಬಗ್ಗೆ ಅಪಾರ ಗೌರವ ಮೂಡಿಸಿದೆ. ಆದರೆ, ಇಸ್ರೇಲ್‌ನ ಕಠಿಣ ರಾಜಕೀಯ ವಾಸ್ತವದಲ್ಲಿ ಈ ಜನಪ್ರಿಯತೆಯನ್ನು ಅಧಿಕಾರವನ್ನಾಗಿ ಪರಿವರ್ತಿಸಲು ಅವರು ಹಲವು ತತ್ವಗಳೊಂದಿಗೆ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ತಮ್ಮ ಸೈದ್ಧಾಂತಿಕ ನಿಷ್ಠೆಯನ್ನು ಉಳಿಸಿಕೊಂಡು, ವಿಭಿನ್ನ ಧ್ರುವಗಳಂತಿರುವ ಮಿತ್ರಪಕ್ಷಗಳನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದರ ಮೇಲೆ ಅವರ ಪ್ರಧಾನಿ ಪಟ್ಟದ ಭವಿಷ್ಯ ನಿರ್ಧಾರವಾಗಲಿದೆ.



