ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ವಿರುದ್ಧ ಎದ್ದೇಳು ಕರ್ನಾಟಕ ಸಂಘಟನೆ, ಎಸ್ಐಆರ್ ವಿರೋಧಿ ಕರ್ನಾಟಕ ವೇದಿಕೆ ಹಾಗೂ ವಿವಿಧ ಪ್ರಗತಿಪರ, ಜಾತ್ಯಾತೀತ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳ ಒಕ್ಕೂಟದ ವತಿಯಿಂದ ಬೀದರ್ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಮುಖಂಡರು, “ಎಸ್ಐಆರ್ ಪ್ರಕ್ರಿಯೆಯನ್ನು ಅಸಂವಿಧಾನಿಕ, ಅವೈಜ್ಞಾನಿಕ, ದೋಷಪೂರಿತ ಹಾಗೂ ದುರುದ್ದೇಶಪೂರಿತ ಕ್ರಮವೆಂದು ಆರೋಪಿಸಿದರು. ಮತದಾರರ ಪಟ್ಟಿಯ ಪರಿಷ್ಕರಣೆ ಹೆಸರಿನಲ್ಲಿ ಬಡವರು, ಕಾರ್ಮಿಕರು, ಗ್ರಾಮೀಣ ಜನರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ಮತದಾನದ ಹಕ್ಕುಗಳನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ” ಎಂದು ಅವರು ಆತಂಕ ವ್ಯಕ್ತಪಡಿಸಿದರು.
“ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿಯಾದ ಎಸ್ಐಆರ್ ಅನ್ನು ತಕ್ಷಣ ರದ್ದುಗೊಳಿಸಿ, ಜನಸ್ನೇಹಿ, ಸಂವಿಧಾನಬದ್ಧವಾದ ಪರಿಷ್ಕರಣಾ ವಿಧಾನವನ್ನು ಜಾರಿಗೆ ತರಬೇಕು. ‘ಲಾಜಿಕಲ್ ಡಿಸ್ಕ್ರೆಪೆನ್ಸಿ’ ಎಂಬ ಅವೈಜ್ಞಾನಿಕ ಹಾಗೂ ಅಪಾರದರ್ಶಕ ವಿಧಾನವನ್ನು ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಅಳವಡಿಸಬಾರದು” ಎಂದು ಒತ್ತಾಯಿಸಿದರು.
ಬಳಿಕ ಪ್ರತಿಭಟನಾಕಾರರು ಮೆರವಣಿಗೆಯ ಮೂಲಕ ಸಹಾಯಕ ಆಯುಕ್ತರ ಕಚೇರಿಗೆ ತೆರಳಿ ಮುಖ್ಯಮಂತ್ರಿ ಹಾಗೂ ರಾಜ್ಯ ಚುನಾವಣಾಧಿಕಾರಿಗಳ ಹೆಸರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಸಹಾಯಕ ಆಯುಕ್ತ ಪ್ರಕಾಶ್ ಕುದುರೆ ಅವರಿಗೆ ಸಲ್ಲಿಸಿದರು.

ʼಸದ್ಯ ಎಸ್ಐಆರ್ ಅನ್ನು ರಾಜ್ಯ ಸರ್ಕಾರ ಒಪ್ಪುವುದಿಲ್ಲ ಎಂದು ಘೋಷಿಸಬೇಕು, ಸ್ಪೆಲ್ಲಿಂಗ್ ಅಥವಾ ದಿನಾಂಕಗಳಂತಹ ಕ್ಷುಲ್ಲಕ ದೋಷಗಳನ್ನು ಆಧಾರವಾಗಿಸಿಕೊಂಡು ಯಾರನ್ನೂ ಮತದಾನದ ಹಕ್ಕಿನಿಂದ ವಂಚಿಸಬಾರದು, ಕರಡು ಮತದಾರರ ಪಟ್ಟಿಯನ್ನು ಸಾರ್ವಜನಿಕರಿಗೆ ಸುಲಭವಾಗಿ ಪರಿಶೀಲಿಸಬಹುದಾದ ಕಂಪ್ಯೂಟರ್ ರೀಡಬಲ್ ಮಾದರಿಯಲ್ಲಿ ಪ್ರಕಟಿಸಬೇಕು.ಚೆಕ್ ಮೇಟ್ ಪಟ್ಟಿ ತಯಾರಿಸಬೇಕುʼ ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ʼಮತದಾರರ ಪಟ್ಟಿಯನ್ನು ಅಂತಿಮಗೊಳಿಸುವ ಮೊದಲು ಗ್ರಾಮ ಪಂಚಾಯಿತಿ ಮತ್ತು ವಾರ್ಡ್ ಮಟ್ಟದಲ್ಲಿ ಕರಡು ಪಟ್ಟಿಯನ್ನು ಸಾರ್ವಜನಿಕ ಪರಿಶೀಲನೆಗೆ ಒಳಪಡಿಸಬೇಕು, ಈ ಪ್ರಕ್ರಿಯೆಗೆ ಕನಿಷ್ಠ 1 ವರ್ಷದ ಅವಧಿಯನ್ನು ನಿಗದಿಪಡಿಸಬೇಕು. ವಿವಾಹಿತ ಮಹಿಳೆಯರು, ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಅಲೆಮಾರಿಗಳು, ಆದಿವಾಸಿಗಳು, ದಲಿತರು ಮತ್ತು ಅಲ್ಪಸಂಖ್ಯಾತರು ಸೇರಿದಂತೆ ದಾಖಲೆ ಸಮಸ್ಯೆ ಎದುರಿಸುತ್ತಿರುವ ವರ್ಗಗಳಿಗೆ ವಿಶೇಷ ಸರಳ ಕ್ರಮಗಳನ್ನು ರೂಪಿಸಬೇಕು. ಪ್ರತಿ ಗ್ರಾಮ ಪಂಚಾಯಿತಿ ಮತ್ತು ವಾರ್ಡ್ ವ್ಯಾಪ್ತಿಯಲ್ಲಿ ಮತದಾರರ ನೆರವು ಕೇಂದ್ರಗಳನ್ನು ತೆರೆಯಬೇಕು, ಪರಿಶೀಲನೆಯಾದ ಮತದಾರರಿಗೆ ಸ್ಮಾರ್ಟ್ ಕಾರ್ಡ್ ನೀಡಬೇಕು ಹಾಗೂ ದಾಖಲೆಗಳಿಲ್ಲದವರಿಗೆ ವಾಸ ದೃಢೀಕರಣ ಪತ್ರಗಳನ್ನು ವಿತರಿಸುವುದು ಸೇರಿ ವಿವಿಧ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದರು.
ಎಸ್ಐಆರ್ ವಿರುದ್ದದ ನಮ್ಮ ಹೋರಾಟ ಆರಂಭವಾಗಿದೆ. ನಮ್ಮ ಈ ಮೇಲಿನ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ರಾಜ್ಯದ್ಯಂತ ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಭಾರತೀಯ ಕಾಂಗ್ರೆಸ್ ಪಕ್ಷ, ಆಮ್ ಆದ್ಮಿ ಪಕ್ಷ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ, ಆರ್ಪಿಐ, ಸಿಪಿಐ, ಕರ್ನಾಟಕ ರಾಜ್ಯ ರೈತ ಸಂಘ, ಸಂಯುಕ್ತ ಕಿಸಾನ್ ಮೋರ್ಚಾ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಜಾಗೃತ ಕರ್ನಾಟಕ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ವಿಶ್ವಕ್ರಾಂತಿ ದಿವ್ಯಪೀಠ, ಜಮಾಅತ್ ಇಸ್ಲಾಮಿ ಹಿಂದ್, ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಸಂಘ, ಅಲೆಮಾರಿ ಸಮುದಾಯ, ಕರ್ನಾಟಕ ಸೋಶಿಯಲ್ ಡೆವಲಪ್ಮೆಂಟ್ ಅಸೋಸಿಯೇಷನ್, ಅಖಿಲ ಭಾರತ ಲಿಂಗಾಯತ ಮಹಾಸಭೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು.
ಇದನ್ನೂ ಓದಿ : ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಈಶ್ವರ ಖಂಡ್ರೆಯವರಿಗೆ ಡಿಸಿಎಂ ಸ್ಥಾನ ನೀಡಿ : ಮಠಾಧೀಶರ ಒತ್ತಾಯ
ಈ ಸಂದರ್ಭದಲ್ಲಿ ಪ್ರಮುಖರಾದ ಬಸವರಾಜ ಜಾಬಶೆಟ್ಟಿ, ಮಾರುತಿ ಬೌದ್ಧೆ, ಓಂಪ್ರಕಾಶ್ ರೊಟ್ಟೆ, ಮಹೇಶ್ ಗೊರನಾಳಕರ್, ಬಾಬುರಾವ್ ಹೊನ್ನಾ, ನಿಜಾಮೋದ್ದೀನ್, ಅಮೃತರಾವ್ ಚಿಮಕೋಡೆ, ಜಗದೀಶ್ವರ ಬಿರಾದಾರ, ವಿನೋದಕುಮಾರ ಅಪ್ಪೆ, ಗೋಪಾಲ್ ಸಿಂಗ್ ಠಾಕೂರ್, ವಿನಯಕುಮಾರ್ ಮಾಳಗೆ, ಸಿದ್ದಪ್ಪ ಫುಲಾರಿ, ಹಣಮಂತ ಮಟ್ಟೆ, ಮಹ್ಮದ್ ಆಶಿಪೋದ್ದೀನ್, ರಜಿಯಾ ಬಳಬಟ್ಟಿ, ಮುಬಸೀರ್ ಸಿಂಧೆ, ಅರುಣ ಪಟೇಲ್, ವಿಶ್ವನಾಥ ಧರಣೆ, ವಿಠಲರೆಡ್ಡಿ, ಎಂ.ಡಿ.ಶಫಿ, ಅಸ್ಮಾ ಸುಲ್ತಾನಾ, ಭೀಮ್ ಸಂಗಮ, ವಿಜಯಕುಮಾರ, ಫಿರಾಸತ್ ಅಲಿ, ಮೌಲಾನಾ ಅಬ್ದುಲ್ ಗಫ್ಫಾರ್, ದುರ್ಗಪ್ಪ, ರಾಮಪ್ಪ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.




