SIR ಕ್ರಮದಿಂದ ಬಡವರು, ಅಲ್ಪಸಂಖ್ಯಾತರು, ರೈತರು, ಕಾರ್ಮಿಕರು ಹಾಗೂ ಹಿಂದುಳಿದ ವರ್ಗಗಳ ಮತದಾನದ ಹಕ್ಕಿಗೆ ದಕ್ಕೆ ಉಂಟಾಗುವ ಸಾಧ್ಯತೆ ಇದೆ ಎಂದು ಪ್ರಗತಿಪರ ಸಂಘಟನೆಗಳು ತೀವ್ರ ಆತಂಕ ವ್ಯಕ್ತಪಡಿಸಿದವು. ಎಸ್ಐಆರ್ ಹಿಂಪಡೆಯುವಂತೆ ಸಲ್ಲಿಸಲಾದ ಮನವಿಯಲ್ಲಿ ಚುನಾವಣಾ ಆಯೋಗದ ಕ್ರಮಗಳನ್ನು ಪ್ರಶ್ನಿಸಿರುವ ಸಂಘಟನೆಗಳು, “ಬಡಜನರ ಬಳಿ ದಾಖಲೆಗಳಿಲ್ಲವೆಂಬ ಕಾರಣಕ್ಕೆ ಅವರ ಮತದಾನದ ಹಕ್ಕನ್ನು ಕಸಿದುಕೊಳ್ಳುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ” ಎಂದು ಆರೋಪಿಸಿವೆ.
ವಿಜಯಪುರದಲ್ಲಿ ಎಸ್ಐಆರ್ ವಿರುದ್ದ ನಡೆದ ಪ್ರತಿಭಟನೆಯಲ್ಲಿ ನಡೆದ ವಿವಿಧ ಜನಪರ, ಪ್ರಗತಿಪರ ಹಾಗೂ ರಾಜಕೀಯ ಸಂಘಟನೆಗಳ ಮುಖಂಡರು ಸಕ್ರಿಯವಾಗಿ ಭಾಗವಹಿಸಿದವು. ರಾಜ್ಯದಲ್ಲಿ ಜಾರಿಗೆ ತರಲು ಮುಂದಾಗಿರುವ SIR (Special Intensive Revision) ಕ್ರಮವನ್ನು ತಕ್ಷಣ ಹಿಂಪಡೆಯಬೇಕೆಂದು ಆಗ್ರಹಿಸಿ SIR ವಿರೋಧಿ ಜಾತ್ಯತೀತ ಸಂಘಗಳು ಹಾಗೂ ಜನಪರ ಸಂಘಟನೆಗಳ ಒಕ್ಕೂಟ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಹಾಗೂ ಕರ್ನಾಟಕ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಶ್ರೀನಾಥ ಪೂಜಾರಿ, “ಚುನಾವಣಾ ಪ್ರಕ್ರಿಯೆಯನ್ನು ಪಾರದರ್ಶಕ ಹಾಗೂ ನ್ಯಾಯಸಮ್ಮತವಾಗಿ ನಡೆಸುವ ಹೆಸರಿನಲ್ಲಿ ಜಾರಿಗೊಳಿಸಲಾಗುತ್ತಿರುವ SIR ಕ್ರಮವು ಸಾಮಾನ್ಯ ಜನರ ಮತದಾನದ ಹಕ್ಕಿನ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ರಾಜ್ಯ ಸರ್ಕಾರವು ತಕ್ಷಣ ಕೇಂದ್ರ ಚುನಾವಣಾ ಆಯೋಗದ ಮೇಲೆ ಒತ್ತಡ ಹೇರಿ ಈ ಅವೈಜ್ಞಾನಿಕ ಹಾಗೂ ಜನವಿರೋಧಿ ಕ್ರಮವನ್ನು ಹಿಂಪಡೆಯುವಂತೆ ಆಗ್ರಹಿಸಬೇಕು” ಎಂದು ಹೇಳಿದರು.
ಅಹಿಂದ ಮುಖಂಡ ಎಸ್.ಎಂ. ಪಾಟೀಲ ಗಣೀಹಾರ ಮಾತನಾಡಿ, “ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳಲು ಅನಗತ್ಯ ದಾಖಲೆಗಳನ್ನು ಕಡ್ಡಾಯಗೊಳಿಸಿರುವುದು ಬಡಜನರಿಗೆ ಸಂಕಷ್ಟ ಉಂಟುಮಾಡಲಿದೆ. ವಿಶೇಷವಾಗಿ ಗ್ರಾಮೀಣ ಭಾಗದ ಜನರಿಗೆ ಜನನ ಪ್ರಮಾಣಪತ್ರ, ಭೂ ದಾಖಲೆ, ಶಿಕ್ಷಣ ದಾಖಲೆಗಳನ್ನು ಒದಗಿಸುವುದು ಕಷ್ಟಕರವಾಗಿದೆ. ಇದರಿಂದ ಸಾವಿರಾರು ಜನರು ಮತದಾನದ ಹಕ್ಕಿನಿಂದ ವಂಚಿತರಾಗುವ ಭೀತಿ ಎದುರಾಗಿದೆ” ಎಂದು ಆತಂಕ ವ್ಯಕ್ತಪಡಿಸಿದರು.
ಒಕ್ಕೂಟದ ಪ್ರಮುಖ ಆಕ್ಷೇಪಣೆಗಳು: “ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳಲು ಅನವಶ್ಯ ದಾಖಲೆಗಳನ್ನು ಕಡ್ಡಾಯಗೊಳಿಸಲಾಗಿದೆ. ಹಲವಾರು ಕುಟುಂಬಗಳ ಬಳಿ ದಾಖಲೆಗಳಿಲ್ಲದ ಕಾರಣ ಹೆಚ್ಚಿನ ಮತದಾರರು ಪಟ್ಟಿಯಿಂದ ಹೊರದಬ್ಬಲ್ಪಡುವ ಸಾಧ್ಯತೆ ಇದೆ. ಗ್ರಾಮೀಣ ಹಾಗೂ ಬಡಜನರಿಗೆ ಸರ್ಕಾರಿ ಕಚೇರಿಗಳಿಗೆ ಅಲೆದಾಟ ಹೆಚ್ಚಾಗಲಿದೆ. ಅಲ್ಪಸಂಖ್ಯಾತರು, ದಲಿತರು, ಆದಿವಾಸಿಗಳು ಹಾಗೂ ಕಾರ್ಮಿಕ ವರ್ಗದ ಜನರು ಹೆಚ್ಚಾಗಿ ತೊಂದರೆಗೆ ಒಳಗಾಗಬಹುದು. ಮತದಾನದ ಹಕ್ಕು ಕಳೆದುಕೊಳ್ಳುವ ಭೀತಿಯಿಂದ ಸಾಮಾಜಿಕ ಅಶಾಂತಿ ಉಂಟಾಗುವ ಸಾಧ್ಯತೆ ಇದೆ” ಎಂದು ಆಕ್ಷೇಪಿಸಲಾಯಿತು.
ಹೋರಾಟದ ಎಚ್ಚರಿಕೆ
ಡಿ ಎಸ್ ಎಸ್ ಜಿಲ್ಲಾ ಮುಖಂಡ ಚೆನ್ನು ಕಟ್ಟಿಮನಿ ಮಾತನಾಡಿ, “SIR ಕ್ರಮವನ್ನು ಸರ್ಕಾರ ತಕ್ಷಣ ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಹೋರಾಟ, ಪ್ರತಿಭಟನೆ ಹಾಗೂ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಒಕ್ಕೂಟ ಎಚ್ಚರಿಸಿದೆ. ಜನರ ಸಂವಿಧಾನಬದ್ಧ ಹಕ್ಕುಗಳ ರಕ್ಷಣೆಗೆ ಎಲ್ಲಾ ಜನಪರ ಸಂಘಟನೆಗಳು ಒಗ್ಗೂಡಿ ಹೋರಾಟ ಮುಂದುವರಿಸಲಿವೆ” ಎಂದರು.
ಈ ಪ್ರತಿಭಟನೆ ಹಾಗೂ ಮನವಿ ಸಲ್ಲಿಕೆ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸದಸ್ಯೆ ಆರತಿ ಶಹಾಪುರ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಮೇಜಾ ನಧಾಫ್, ಸುರೇಶ್ ಬಿಜಾಪುರ, ಎಸ್ಡಿಪಿಐ ಜಿಲ್ಲಾ ಅಧ್ಯಕ್ಷ ಅತ್ತಾ ಉಲ್ಲಾ ದ್ರಾಕ್ಷಿ, ಎಸ್ಯುಸಿಐ ಮುಖಂಡ ಬಿ. ಭಗವಾನ ರೆಡ್ಡಿ, ಸಿದ್ದಲಿಂಗ ಬಾಗೇವಾಡಿ, ಭರತಕುಮಾರ, ಶಿವಬಾಳಮ್ಮ, ಆಪ್ ಪಕ್ಷದ ಜಿಲ್ಲಾ ಅಧ್ಯಕ್ಷ ಭೋಗೇಶ ಸೊಲ್ಲಾಪುರ ಸೇರಿದಂತೆ ಕಾಂಗ್ರೆಸ್ ಹಾಗೂ ವಿವಿಧ ಸಂಘಟನೆಗಳ ಮುಖಂಡರಾದ ವಸಂತ ಹೊನಮೊಡೆ, ಚಾಂದಸಾಬ ಗಢಗಲಾವ, ಮೈಬೂಬ ಕಲಾದಗಿ, ಲಾಲಸಾಬ ಕೊರಬು, ಅಶೋಕ್ ಬಜಂತ್ರಿ, ಎಂ.ಎಂ. ಮುಲ್ಲಾ, ಗಿರೀಶ್ ಇಟ್ಟಗಿ, ಮಾರುತಿ ಬಂಡಿ, ಫಯಾಜ್ ಕಲಾದಗಿ, ದಸ್ತಗೀರ್ ಸಾಲೋಟಗಿ, ತಾಜೋದ್ದೀನ್ ಖಲೀಫಾ, ರಜಾಕ್ ಕಾಖಂಡಕಿ, ಎಜಾಜ್ ಮಕಬೀಲ್, ಮಂಜುಳಾ ಗಾಯಕವಾಡ, ಸವಿತಾ ಧನರಾಜ, ಹಮೀದಾ ಪಟೇಲ್, ಹಾಜಿ ಪಿಂಜಾರ, ದೇಸು ಚವ್ಹಾಣ ಹಾಗೂ ಭಾರತಿ ನಾವಿ ಉಪಸ್ಥಿತರಿದ್ದರು.




