ದ್ವಿಭಾಷಾ ನೀತಿಯನ್ನು ರಾಜ್ಯದಲ್ಲಿ ಇನ್ನೂ ಜಾರಿ ಮಾಡಿಲ್ಲ. ಹಿಂದಿ ಭಾಷೆಯನ್ನು ತೃತಿಯ ಭಾಷೆಯಾಗಿ ಕಡ್ಡಾಯ ಮಾಡಬಾರದು ಎಂದು ನಿರ್ಧರಿಸಿದ್ದೇವೆ. ಇದು ಈ ವರ್ಷದಿಂದಲೇ ಜಾರಿಯಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ ತೃತೀಯ ಭಾಷೆ ಹಿಂದಿಯನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದಲ್ಲಿ ಪರಿಗಣಿಸದೆ ಇರಲು ನಿರ್ಧರಿಸಿದ್ದೇವೆ’ ಎಂದು ಸ್ಪಷ್ಟಪಡಿಸಿದ್ದಾರೆ.
ಶಿಕ್ಷಣ ಇಲಾಖೆ ತೆಗೆದುಕೊಂಡ ನಿರ್ಧಾರವನ್ನು ಖಾಸಗಿ ಸಂಸ್ಥೆಗಳು ಹಾಗೂ ಬಿಜೆಪಿ ವಿರೋಧಿಸಿರುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ, ‘ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ವಿರೋಧಿಸುವವರೂ ಇರುತ್ತಾರೆ, ಸ್ವಾಗತಿಸುವವರೂ ಇದ್ದಾರೆ. ಶೇ 100ರಷ್ಟು ಒಪ್ಪಿಗೆ ಯಾವ ವಿಷಯಕ್ಕೂ ಇರುವುದಿಲ್ಲ, ಎಲ್ಲರನ್ನೂ ಒಪ್ಪಿಸುವುದಕ್ಕೆ ಸಾಧ್ಯವಿಲ್ಲʼ ಎಂದು ಹೇಳುವುದರ ಮೂಲಕ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
‘ಹಿಂದಿ ಹೇರಿಕೆ ಎಂದೇನಿಲ್ಲ ಅಥವಾ ಆ ಭಾಷೆ ಕಲಿಯಬಾರದು ಎಂದೂ ಹೇಳಿಲ್ಲ. ಪರೀಕ್ಷೆ ಕಡ್ಡಾಯ ಆಗಬಾರದು ಎನ್ನುವ ದೃಷ್ಟಿಯಲ್ಲಿ ಈ ಕ್ರಮ ಕೈಗೊಂಡಿದ್ದೇವೆ. ನಾವು ಓದುವಾಗಲೂ ಹಿಂದಿ ಕಡ್ಡಾಯ ಇರಲಿಲ್ಲ. ಕಡ್ಡಾಯ ಇಲ್ಲದಿರುವುದರಿಂದಲೇ ನಾವು ಓದಲು, ಕಲಿಯಲು ಹೋಗಲಿಲ್ಲ’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ‘ವಿಶ್ವಗುರು’ವಿನ ನಿಜ ಬಣ್ಣ ಬಯಲು ಮಾಡಿದ ಮಧು ಕಿಶ್ವರ್: ಸುದ್ದಿ ಮಾಡದ ಮಡಿಲ ಮಾಧ್ಯಮಗಳು




