ದಿ. ಎಚ್ ವೈ ಮೇಟಿ ಅವರ ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸಲು ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಉಮೇಶ್ ಮೇಟಿ ಅವರನ್ನು ಬೆಂಬಲಿಸಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು ಎಂದು ಮಾಜಿ ಸಚಿವ ಅಜಯಕುಮಾರ್ ಸರನಾಯಕ ಮತ ಯಾಚನೆ ಮಾಡಿದರು.
ಬಾಗಲಕೋಟೆ ತಾಲೂಕಿನ ಬೇವೂರ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪಕ್ಷದ ಉಪಚುನಾವಣಾ ಸಭೆಯಲ್ಲಿ ಅವರು ಮಾತನಾಡಿದರು.
“ಗ್ರಾಮೀಣ ಭಾಗದ ಬಡ ಜನತೆಯ ಅನುಕೂಲಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಗ್ಯಾರೆಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಹಳ್ಳಿ ಹಳ್ಳಿಗಳಲ್ಲಿ ಈ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮೇಟಿ ಅವರ ಜನಪರ ಕಾರ್ಯಗಳನ್ನು ಗಮನಿಸಿ ಗ್ರಾಮೀಣ ಜನತೆ ಮತ್ತೊಮ್ಮೆ ಕಾಂಗ್ರೆಸ್ ಅಭ್ಯರ್ಥಿಗೆ ಆಶೀರ್ವದಿಸಲಿದ್ದಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ ಮಾತನಾಡಿ, “ಎಚ್ ವೈ ಮೇಟಿ ಅವರು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಅವರ ಅವಧಿಯಲ್ಲಿ ನಿರಂತರ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ. ಅವರ ಪುತ್ರ ಉಮೇಶ್ ಮೇಟಿ ಅವರನ್ನು ಎಲ್ಲರೂ ಬೆಂಬಲಿಸಬೇಕು” ಎಂದು ಕೋರಿದರು.
ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಮಾತನಾಡಿ, “ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್ ಪ್ರಚಾರಕ್ಕೆ ಅಪಾರ ಬೆಂಬಲ ವ್ಯಕ್ತವಾಗುತ್ತಿದೆ. ನಮ್ಮ ತಂದೆ ಎಚ್ ವೈ ಮೇಟಿ ಅವರು ಚವಡಾಪುರ-ಬೈರಮಟ್ಟಿ, ಚವಡಾಪುರ-ಬೇವೂರ, ಚೌಡಾಪುರ-ಕಡಿವಾಲ ಹೀಗೆ ಅನೇಕ ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಶಾಸಕರ ಅನುದಾನದಲ್ಲಿ ವಿವಿಧ ಸಮುದಾಯ ಭವನ, ಶಾಲಾ ಕಟ್ಟಡ, ಸಾಮೂಹಿಕ ಶೌಚಾಲಯ, ಚೆಕ್ ಡ್ಯಾಂ ನಿರ್ಮಾಣಕ್ಕೆ ಆದ್ಯತೆ ನೀಡಿ ಜನರ ಸಂಕಷ್ಟಗಳಿಗೆ ಸ್ಪಂದಿಸಿದ್ದಾರೆ. ಈ ಜನಪರ ಕಾರ್ಯಗಳೇ ಕಾಂಗ್ರೆಸ್ ಗೆಲುವಿಗೆ ಶ್ರೀರಕ್ಷೆ ಆಗಲಿವೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬೋಡನಾಯಕದಿನ್ನಿ, ಬೇವಿನಮಟ್ಟಿ, ಚೌಡಾಪೂರ, ಹಳ್ಳೂರ, ಭಗವತಿ, ಮನ್ನಿಕಟ್ಟಿ, ಆಲೂರ, ಸೀತಿಮನಿ ಸ್ಟೇಷನ್ ಮತ್ತಿತರ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ಕೈಗೊಳ್ಳಲಾಯಿತು. ಬೇವೂರ ಗ್ರಾಮದಲ್ಲಿ ಮಾಜಿ ಸಚಿವ ಅಜಯಕುಮಾರ್ ಸರನಾಯಕ ಅವರ ನೇತೃತ್ವದಲ್ಲಿ ಯುವಕರು ಕಾಂಗ್ರೆಸ್ ಸೇರ್ಪಡೆಯಾದರು. ಉಮೇಶ ಮೇಟಿ, ರಾಹುಲ್ ಜಾರಕಿಹೊಳಿ ಇದ್ದರು.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಲಂಬಾಣಿ ತಾಂಡಾಗಳಲ್ಲಿ ಬಿರುಸಿನ ಪ್ರಚಾರ: ಕಾಂಗ್ರೆಸ್ಸನ್ನು ದೂರಿದ ಬಿಜೆಪಿ
ಸಂಯುಕ್ತಾ ಪಾಟೀಲ ಮಾತನಾಡಿದರು. ಶಾಸಕ ಜೆ ಟಿ ಪಾಟೀಲ, ಬಸವಪ್ರಭು ಸರನಾಡಗೌಡ, ಶ್ರೀಶೈಲ ದಳವಾಯಿ, ಬಸವಂತಪ್ಪ ಮೇಟಿ, ಎಸ್ ಎನ್ ರಾಂಪೂರ, ಬಲರಾಮ ಪವಾರ, ಪರಶುರಾಮ ಮಹಾರಾಜನವರ, ಮಂಜುಳಾ ಕಮತಗಿ, ರಮೇಶ ಕೊಳ್ಳಾರ, ನ್ಯಾಯವಾದಿ ಮಾಗನೂರ, ಶರಣಪ್ಪ ಮಾಗನೂರ, ದ್ಯಾಮಣ್ಣ ಗಾಳಿ, ಸಿದ್ದು ಕುರಿ, ಶಿವಪುತ್ರ ದೊಡ್ಡಮನಿ, ಚಂದ್ರಕಾಂತ ಗುಳೇದ, ಶರಣಪ್ಪ ಗುಳೇದ, ಕರಿಬಸಪ್ಪ ಹಳ್ಳೂರ ಇದ್ದರು.




